Tuesday, 26th November 2024

ಮೂಲ ಸ್ಥಳಕ್ಕೆ ಮರಳಿದ ಜಲಕಂಠೇಶ್ವರ

ಮಂಜುನಾಥ್‌ ಡಿ.ಎಸ್‌

ಶತ್ರು ಸೈನಿಕರ ದಾಳಿಗೆ ಒಳಗಾದ ದೇಗುಲದ ಮೂಲ ವಿಗ್ರಹವನ್ನು ಬೇರೆಡೆ ರಕ್ಷಿಸಿ ಇಟ್ಟು, ಪುನಃ ಅದೇ ದೇಗುಲಕ್ಕೆ ತಂದು ಪ್ರತಿಷ್ಠಾಪಿಸಿದ ಅಪರೂಪದ ಉದಾಹರಣೆ ವೆಲ್ಲೂರಿನ ಈ ದೇಗುಲದಲ್ಲಿದೆ.

ಪಾಲಾರ್ ನದಿಯ ತಟದಲ್ಲಿರುವ ಕೋಟೆ ನಗರ ವೆಲ್ಲೂರು ಚರಿತ್ರೆ, ಕಲೆ, ವಿಜ್ಞಾನ ಇವುಗಳ ಸಂಗಮ. ಇಲ್ಲಿನ ದಿಲ್ಲಿ ಗೇಟ್, ವಿಕ್ಟೋರಿಯ ಜ್ಯೂಬಿಲಿ ಟವರ್, ಮತ್ತು ಕೇಂದ್ರ ಕಾರಾಗೃಹ ಬ್ರಿಟಿಷ್ ಆಳ್ವಿಕೆಯ ಭಾರತದ ಒಳನೋಟ ನೀಡುತ್ತವೆ. ಖಗೋಳ ವೀಕ್ಷಣಾಲಯ, ಸೈನ್ಸ್‌ ಪಾರ್ಕ್, ಮ್ಯೂಸಿಯಂ ಹಾಗು ಮಹಾಲಕ್ಷ್ಮಿ (ಲಕ್ಷ್ಮೀ ನಾರಾಯಣಿ) ಸ್ವರ್ಣ ಮಂದಿರ ವೆಲ್ಲೂರಿನ ಇತರ ಪ್ರೇಕ್ಷಣೀಯ ಸ್ಥಳಗಳು.

ಹದಿನಾರನೆಯ ಶತಮಾನದಲ್ಲಿ ನಿರ್ಮಾಣಗೊಂಡು ಹಲವು ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾದ ವೆಲ್ಲೂರು ಕೋಟೆ ಇಂದಿಗೂ ಸಾಕಷ್ಟು ಸುಸ್ಥಿತಿ ಯಲ್ಲಿದೆ. ಈ ಕೋಟೆಯಲ್ಲಿ ಚರ್ಚ್, ಮಸೀದಿ, ಹಾಗು ಜಲಕಂಠೇಶ್ವರ ಮಂದಿರ ಇವೆ. ಇವುಗಳಲ್ಲಿ ಜಲಕಂಠೇ ಶ್ವರ ಮಂದಿರ ವಿಶೇಷವಾಗಿ ಗಮನ ಸೆಳೆಯುತ್ತದೆ. 8,000 ಅಡಿ ಸುತ್ತಳತೆ ಹೊಂದಿರುವ ಪುಷ್ಕರಿ ಣಿಯ  ನಡುವಿ ನಲ್ಲಿರುವ ಈ ಶಿವಾಲಯ ವಿಜಯನಗರ ಕಾಲದ ವಾಸ್ತುಶಿಲ್ಪದ ಉತ್ಕೃಷ್ಟ ಉದಾಹರಣೆಯಾಗಿದೆ.

ದೇಗುಲದ ಗೋಪುರವು ನೂರು ಅಡಿಗಳಿಗೂ ಅಧಿಕ ಎತ್ತರವಿದ್ದು ಸೊಗಸಾದ ಶಿಲ್ಪಗಳನ್ನೊೊಳಗೊಂಡಿದೆ. ಮಂದಿರದ ಮಹಾದ್ವಾರದ ಮರದ ಬಾಗಿಲುಗಳು ಬೃಹದಾಕಾರದ್ದಾಗಿವೆ. ನವಿರಾದ ಕೆತ್ತನೆಗಳಿಂದ ಕೂಡಿದ ಕಲ್ಲುಕಂಬಗಳು, ಏಕಶಿಲಾ ವಿಗ್ರಹಗಳು, ಶಿಲ್ಪ ಕಲಾಕೃತಿಗಳು ಬೆರಗು ಮೂಡಿಸುವಂತಿವೆ. ಇಲ್ಲಿನ ಶಿಲಾಸ್ತಂಬಗಳ ನೋಟ, ವಾಸ್ತು ಶೈಲಿಯ ಮಾಟ ಬಹು
ಸುಂದರ. ನಾಲ್ಕು ನೂರು ವರ್ಷಗಳ ಹಿಂದೆ ನಿರ್ಮಿಸಿದ ಈ ವಾಸ್ತುವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಚಿನ್ನದ ಹಲ್ಲಿ
ನಂದಿಯ ಮೂರ್ತಿಯ ಹಿಂದೆ ಮೃತ್ತಿಕೆಯ ದೀಪವಿದೆ. ಕಂಚಿಯ ವರದರಾಜಸ್ವಾಮಿ ದೇವಾಲಯದಲ್ಲಿರುವಂತೆ ಇಲ್ಲಿಯೂ ಬೆಳ್ಳಿ ಮತ್ತು ಚಿನ್ನದ ರೇಕುಗಳನ್ನು ಹೊದಿಸಿದ ಹಲ್ಲಿಗಳಿವೆ. ಇವುಗಳೊಡನೆ ರಜತ ಹಾಗು ಕನಕದ ಹಾಳೆಗಳಿಂದ ಆವೃತವಾದ
ಸರ್ಪಗಳೂ ಇವೆ. ಇವುಗಳ ಸ್ಪರ್ಶದಿಂದ ಸರ್ಪ ದೋಷ ನಿವಾರಣೆಯಾಗುವುದೆಂದು ನಂಬಲಾಗಿದೆ.

ಆಲಯದ ಆವರಣದಲ್ಲಿ ವಿಶಾಲವಾದ ಕಲ್ಯಾಣ ಮಂಟಪವೂ ಇದೆ. ಮಂಟಪದ ಶಿಲಾಸ್ತಂಭಗಳಲ್ಲಿ ಅಸಂಖ್ಯಾತ ಕಲಾತ್ಮಕ ಕೆತ್ತನೆಗಳಿವೆ. ಹೊರ ಭಾಗದ ಕಂಬಗಳಲ್ಲಿ ಆನೆ, ಕುದುರೆ, ಸಿಂಹ, ಮುಂತಾದ ಪ್ರಾಣಿಗಳ ಶಿಲ್ಪಗಳಿದ್ದು ಇವು ಚಾವಣಿಯ ಹೊರೆ
ಯನ್ನು ಹೊತ್ತಿರುವಂತೆ ಭಾಸವಾಗುತ್ತದೆ. ಕಾಲ ಭೈರವ, ನಂದಿವಾಹನರಾದ ಶಿವ ಪಾರ್ವತಿ, ನರಸಿಂಹ, ಮಹಿಷಾಸುರ ಮರ್ದಿನಿ, ರಾಮಭಕ್ತ ಹನುಮ, ಮುಂತಾದ ಶಿಲಾಭಿತ್ತಿಗಳು ಉಲ್ಲೇಖಾರ್ಹ. ಸಾಲಂಕೃತ ಪೀಠವು ಗಮನ ಸೆಳೆಯುತ್ತದೆ. ಗಂಗಾ ಗೌರಿ ತೀರ್ಥ ಎಂದು ಕರೆಯಲ್ಪಡುವ ಪುರಾತನ ಬಾವಿಯ ನೀರಿನಿಂದ ದೇವರಿಗೆ ಅಭಿಷೇಕ ಮಾಡುವುದು ರೂಢಿಗತವಾಗಿದೆ.

ಹಿನ್ನೆಲೆ
ಚಿನ್ನ ಬೊಮ್ಮಿ ನಾಯಕ ಎಂದೂ ಕರೆಯಲ್ಪಡುವ ವೇಲೂರಿ ಬೊಮ್ಮಿ ನೃಪತಿ ಕ್ರಿ.ಶ. 1566ರ ಸುಮಾರಿನಲ್ಲಿ ಜಲಕಂಠೇಶ್ವರ ಮಂದಿರ ನಿರ್ಮಿಸಿದ. ಐತಿಹ್ಯದಂತೆ, ಈಗ ಗರ್ಭಗುಡಿಯಿರುವ ಸ್ಥಳದಲ್ಲಿ ದೊಡ್ಡ ಹುತ್ತ ಇತ್ತಂತೆ. ಇದು ನೀರಿನಿಂದ ಸುತ್ತುವರಿ ದಿತ್ತಂತೆ. ಕಾಲಾನುಕ್ರಮದಲ್ಲಿ ಈ ಹುತ್ತದ ಬದಿ ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಲು ಆರಂಭಿಸಿದರಂತೆ. ಚಿನ್ನ ಬೊಮ್ಮಿ ನಾಯಕನಿಗೆ ಕನಸಿನಲ್ಲಿ ದೊರೆತ ಪ್ರೇರಣೆಯಂತೆ, ಈ ದೇಗುಲ ನಿರ್ಮಾಣ ಮಾಡಲು ಮುಂದಾದನಂತೆ.

ಮರಳಿ ಬಂದ ಮೂರ್ತಿ
ಧರ್ಮವಿರೋಧಿಗಳ ಆಕ್ರಮಣದಲ್ಲಿ ದೇವಾಲಯ ಹಾಗು ಶಿಲ್ಪಗಳು ಭಗ್ನಗೊಂಡವು. ದೇವಳದಲ್ಲಿ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳು ಸ್ಥಗಿತವಾದವು. ದೇವರ ಮೂಲ ವಿಗ್ರಹವನ್ನು ಸತುವಚೇರಿಯಲ್ಲಿನ ಜಲಕಂಠ ವಿನಾಯಕರ್ ದೇವಸ್ಥಾನದಲ್ಲಿ ಸಂರಕ್ಷಿಸಿಡಲಾಯಿತು. ದೇವಿಯ ಗುಡಿಯನ್ನು ನಾಶಗೊಳಿಸಿ ಆ ಜಾಗದಲ್ಲಿ ಮತ್ತೊಂದು ಮತದ ಪ್ರಾರ್ಥನಾ ಗೃಹ
ನಿರ್ಮಿಸಲಾಯಿತು.

ನಂತರ ಸುಮಾರು 400 ವರ್ಷಗಳ ಕಾಲ ಈ ಮಂದಿರ ಶಸ್ತ್ರಾಗಾರವಾಗಿ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಯಿತು. ಕೋಟೆಯ ನಿರ್ವಹಣೆಯ ಜವಾಬ್ದಾರಿಯನ್ನು 1921ರಲ್ಲಿ ಭಾರತೀಯ ಪುರಾತತ್ತ್ವ ಇಲಾಖೆ ವಹಿಸಿಕೊಂಡಿತು. ಮುಂದಿನ ವರ್ಷಗಳಲ್ಲಿ ಮೂಲ ವಿಗ್ರಹವನ್ನು ಮತ್ತೆ ಸ್ಥಾಪಿಸುವ ಅನೇಕ ಪ್ರಯತ್ನಗಳು ವಿಫಲವಾದವು. ಕೊನೆಗೆ, ಶ್ರದ್ಧಾಳುಗಳು ಸೇರಿ ಜಲಕಂಠೇಶ್ವರ ಮೂರ್ತಿಯನ್ನು ಗುಪ್ತವಾಗಿ ತಂದು,  1981ರ ಮಾರ್ಚ್ 16ರಂದು ದೇಗುಲದಲ್ಲಿ ಪುನಃ ಪ್ರತಿಷ್ಠಾಪಿಸಿದರು.

ಜಲಕಂಠೇಶ್ವರನ ಮರುಸ್ಥಾಪನೆಯ ನಂತರ ಮೊದಲ ಕುಂಭಾಭಿಷೇಕ 1982ರಲ್ಲಿ ನೆರವೇರಿತು. 2006ಲ್ಲಿ ನಡೆದ ರಜತ ಮಹೋತ್ಸವ ಉತ್ಸವದಲ್ಲಿ ನಗರದ ಮುಖ್ಯ ಬೀದಿಗಳಲ್ಲಿ ಸಾಗಿದ ರಥ ಯಾತ್ರೆ ವಿಶೇಷವಾಗಿತ್ತು. 2011ರಲ್ಲಿ ಜರುಗಿದ ಮೂರ
ನೆಯ ಕುಂಭಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಸ್ವಾಮಿಗೆ ಸ್ವರ್ಣಲೇಪಿತ ರಥವನ್ನು ಸಮರ್ಪಿಸಲಾಯಿತು. 2013ರಲ್ಲಿ ತಮಿಳು ನಾಡು ಸರ್ಕಾರ ಮಂದಿರದ ಉಸ್ತುವಾರಿ ವಹಿಸಿಕೊಂಡಿತು. ಆದರೆ ಕಟ್ಟದ ನಿರ್ವಹಣೆಯ ಹೊಣೆ ಪುರಾತತ್ತ್ವ ಇಲಾಖೆ
ಯದಾಗಿಯೇ ಮುಂದುವರಿಯಿತು.

ಶತ್ರು ಸೈನಿಕರಿಂದ ಹಾನಿಗೊಳಗಾದ ದೇಗುಲದ ಮೂಲ ವಿಗ್ರಹವನ್ನು ರಕ್ಷಿಸಿ, ಶತಮಾನಗಳ ನಂತರ ಮೂಲ ಗರ್ಭಗುಡಿಯಲ್ಲಿ ಮತ್ತೆ ಪ್ರತಿಷ್ಠಾಪನೆಗೊಳಿಸಿದ ಅಪರೂಪದ ಉದಾಹರಣೆ ಇಲ್ಲಿದೆ.