ನವದೆಹಲಿ: ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ಪರೇಡ್ ಹೆಸರಿನಲ್ಲಿ ಕೆಂಪುಕೋಟೆಗೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ ಬೆನ್ನಲ್ಲೇ ರೈತರ ಪ್ರತಿಭಟನೆಯಿಂದ ಹೊರಬರುವುದಾಗಿ ಸಮಿತಿಯೊಂದು ಘೋಷಿಸಿದೆ.
ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸುವ ಧ್ವಜಸ್ಥಂಭದ ಮೇಲೆ ಉದ್ರಿಕ್ತ ರೈತರು ಸಿಖ್ ಧ್ವಜವನ್ನು ಹಾರಿಸಿದ್ದರು. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಪ್ರತಿಭಟನೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಪ್ರತಿಭಟನೆಯಿಂದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೊರಬರುವುದಾಗಿ ಘೋಷಿಸಿದೆ.
ಸರ್ದಾರ್ ವಿಎಂ ಸಿಂಗ್ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಘ ಸಮನ್ವಯ ಸಮಿತಿಯು ಈ ಪ್ರತಿಭಟನೆಯಿಂದ ಈಗಿನಿಂದಲೇ ಹಿಂದೆ ಸರಿಯುತ್ತಿದೆ ಎಂದರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಲು ತಮ್ಮ ಪ್ರತಿಭಟನೆಯ ವಿಧಾನವನ್ನು ತೀವ್ರಗೊಳಿ ಸಲು ರೈತರು ಗಣರಾಜ್ಯೋತ್ಸವ ದಿನ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದರು. ಆದರೆ ಅವಧಿಗೆ ಮುನ್ನವೇ ರ್ಯಾಲಿ ಆರಂಭಿಸಿ ಪೊಲೀಸ್ ಬ್ಯಾರಿಕೇಡ್ ಮುಗಿದು ರಾಜಧಾನಿಯೊಳಗೆ ನುಗ್ಗಿದ್ದರಿಂದ ಪೊಲೀಸರು ಜಲಫಿರಂಗಿ, ಲಾಠಿಚಾರ್ಜ್ ನಡೆಸಿ ರಣರಂಗ ವಾಗಿ ಮಾರ್ಪಟ್ಟಿತು.
ಘಟನೆಗೆ ಸಂಬಂಧಪಟ್ಟಂತೆ 22 ಎಫ್‌ಐಆರ್ ಗಳನ್ನು ದಾಖಲಿಸಿದ್ದು 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.