Tuesday, 26th November 2024

ಹಸಿ ಮೆಣಸು ಸಿಹಿ ಮನಸು

ಡಾ.ಕೆ.ಎಸ್‌.ಚೈತ್ರಾ

ನಮ್ಮ ನೆರೆಯ ದೇಶ ಭೂತಾನ್‌ನಲ್ಲಿ ಮೆಣಸಿನ ಕಾಯಿಯೇ ಪ್ರಮುಖ ತರಕಾರಿ. ದುಡ್ಡು ಎಷ್ಟೇ ಇರಲಿ-ಬಿಡಲಿ, ಮನೆಯಲ್ಲಿ ಮೆಣಸಿನಕಾಯಿ ತುಂಬಿದ್ದರೆ ಮನುಷ್ಯ ಸಂತೃಪ್ತ ಎನ್ನುವ ಭೂತಾನಿನ ಜನರ ಮನಸ್ಸು ಮಾತ್ರ ಸಿಹಿ!

ನಮ್ಮ ನೆರೆಯ ದೇಶ ಭೂತಾನ್‌ದ ಹೆಸರು ಭೂ ಉತ್ಥಾನ ಎಂಬ ಸಂಸ್ಕೃತ ಶಬ್ದದಿಂದ ಹುಟ್ಟಿದೆ. ಆದರೆ ಸ್ಥಳೀಯರು ಕರೆಯು ವುದು ಡ್ರುಕ್ ಯುಲ್ (ಸಿಡಿಲು- ಗುಡುಗು ತರುವ ಡ್ರಾಗನ್ ನ ವಾಸಸ್ಥಾನ). ಕೈಗೆ ಸಿಗುತ್ತದೇನೋ ಎನಿಸುವ ಬಿಳಿ ಮೋಡಗಳು, ಹಚ್ಚ ಹಸಿರು ಗಿಡ ಮರ, ಸುತ್ತಲಿನ ನೀಲ ಪರ್ವತ, ಸ್ವಚ್ಛ-ಸ್ಫಟಿಕ ಝರಿಗಳಿಂದ ಕಣ್ಣು- ಮನಸ್ಸಿಗೆ ತಂಪು. ಪುಟ್ಟ ದೇಶ ವಾದರೂ ಶ್ರೀಮಂತ ಇತಿಹಾಸ, ಸಮೃದ್ಧ  ಸಂಸ್ಕೃತಿಯಿಂದ ಸಂಪದ್ಭರಿತ ರಾಷ್ಟ್ರ.

ಮೆಲು ಮಾತು, ನಗುಮುಖ, ವಿನಯಪೂರ್ಣ ನಡವಳಿಕೆ, ಶಾಂತ ಸ್ವಭಾವದಿಂದ ಇಲ್ಲಿನ ಜನರು ಪ್ರವಾಸಿಗರಿಗೂ ಅಚ್ಚುಮೆಚ್ಚು.
ಭೂತಾನಿನ ಆಹಾರ ಪದ್ಧತಿಯಲ್ಲಿ ಭಾರತ, ಚೀನಾ, ಟಿಬೆಟ್ ಮತ್ತು ನೇಪಾಳಗಳ ಪ್ರಭಾವವನ್ನು ಗುರುತಿಸಬಹುದು. ಹೀಗಿದ್ದೂ ಚೀನೀಯರಿಗಿಂತ ಕಡಿಮೆ ಎಣ್ಣೆೆ, ಭಾರತೀಯರಿಗಿಂತ ಹೆಚ್ಚು ಖಾರ ತಿನ್ನುವ, ಚಳಿ-ಎತ್ತರದ ವಾತಾವರಣಕ್ಕೆ ಸೂಕ್ತವೆನಿಸುವ ತನ್ನದೇ ಆದ ಆಹಾರ ಪದ್ಧತಿಯನ್ನು

ಭೂತಾನೀಯರು ರೂಢಿಸಿಕೊಂಡಿದ್ದಾರೆ. ನಾವು ತಿನ್ನುವ ಆಹಾರಕ್ಕೂ ನಮ್ಮ ಸ್ವಭಾವಕ್ಕೂ ಸಂಬಂಧವಿದೆಯೆ? ಇಲ್ಲ ಎನಿಸಿದ್ದು ಭೂತಾನಿಯರು ಮತ್ತು ಅವರ ಆಹಾರ ಕಂಡಾಗ! ಏಕೆಂದರೆ ಮೆಲು ಮಾತು, ಮೃದು ಮನಸ್ಸಿನ ಇಲ್ಲಿಯ ಜನರ ಆಹಾರ ನಾಲಿಗೆ
ಚುರುಗುಟ್ಟಿಸಿ ಬೆವರು ತರಿಸುವಷ್ಟು ಖಾರ! ಬೆಟ್ಟ ಗುಡ್ಡಗಳ ನಡುವೆ ಪುಟ್ಟ ಮಕ್ಕಳು-ಮಹಿಳೆಯರು ತಮ್ಮ ಬೆನ್ನ ಮೇಲೆ ದೊಡ್ಡ ದೊಡ್ಡ ಚೀಲ ಹೊತ್ತು ಹೋಗುವುದನ್ನೂ ಕಂಡು ಏನದು ಎಂದು ವಿಚಾರಿಸಿದಾಗ ಗೊತ್ತಾಗಿದ್ದು ಅವು ಹಸಿಮೆಣಸಿನಕಾಯಿ ಚೀಲ!

ದಾರಿಯ ಬದಿಗಳಲ್ಲಿ ಹಸಿರು ಬಣ್ಣದ ಪುಟ್ಟ ಗುಡ್ಡಗಳು, ಮನೆಯ ಛಾವಣಿ ಮೇಲೆ ಹಾಸಿದ ಕೆಂಪು ಹೊದಿಕೆ, ಮಾರುಕಟ್ಟೆಗಳಲ್ಲಿ
ಸಿಂಹಪಾಲು ಹೀಗೆ ಎಲ್ಲೆಲ್ಲೂ ಮೆಣಸಿನಕಾಯಿ. ನಾವು ಅಡಿಗೆಯಲ್ಲಿ ಖಾರಕ್ಕೆಂದು ಮೆಣಸು ಬಳಸುವುದಿಲ್ಲ ಎನ್ನುವ ಮಾತು ಸತ್ಯವೇ. ಏಕೆಂದರೆ ಮೆಣಸಿನಕಾಯಿಯೇ ಇಲ್ಲಿ ಮುಖ್ಯ ತರಕಾರಿ! ಆಹಾರ ತಿಂದ ಮೇಲೆ ಬೆವರು ಸುರಿಯದಿದ್ದರೆ ತಿಂದೇನು
ಪ್ರಯೋಜನ ಎನ್ನುವ ಮಟ್ಟಿಗೆ ಮೆಣಸಿನಕಾಯಿ ಭಕ್ತರು ಇಲ್ಲಿನ ಜನ. ದಿನಕ್ಕೆ ಕೇಜಿಗಟ್ಟಲೇ ಹಸಿಮೆಣ ಸು ತಿನ್ನುವ ಇವರ ಮನಸ್ಸು ಮಾತ್ರ ಸಿಹಿ!

ಎಮ್ಮದಾಸ್ತಿ
ಇದು ಬಹುಶಃ ಭೂತಾನಿನ ರಾಷ್ಟ್ರೀಯ ಖಾದ್ಯ ಇದೆಂದರೆ ತಪ್ಪಾಗಲಾರದು. ದನ ಅಥವಾ ಯಾಕ್ ನ ಹಾಲಿನಿಂದ ತಯಾರಿಸಿದ ಚೀಸ್(ದಾಸ್ತಿ) ಮತ್ತು ಹಸಿಮೆಣಸಿನಕಾಯಿ (ಹಸಿಮೆಣಸು) ಹಾಕಿ ತಯಾರಿಸುವ ಪಲ್ಯದಂಥ ಖಾದ್ಯ. ಮೊದಲು ಮನೆಯಲ್ಲೇ ಹಾಲಿನಿಂದ ಮೊಸರನ್ನು ತಯಾರಿಸುತ್ತಾರೆ. ಮೊಸರಿನ ಕೊಬ್ಬಿನಾಂಶದಿಂದ ಬೆಣ್ಣೆ ಸಿದ್ಧವಾದರೆ ಜಿಡ್ಡುರಹಿತ ಮೊಸರಿನಿಂದ ಚೀಸ್.

ಚೀಸ್ ಮಾಡುವಾಗ ಬಂದ ನೀರಿನಂಥ ದ್ರಾವಣವನ್ನು ಅನ್ನ ಮಾಡಲು ಅಥವಾ ಸೂಪ್ ತಯಾರಿಸಲು ಬಳಸುತ್ತಾರೆ. ‘ಎಮ್ಮದಾಸ್ತಿ’ ರುಚಿ ಹೆಚ್ಚಿಸಲು ಸೊಪ್ಪು, ಈರುಳ್ಳಿ, ಟೊಮಾಟೋ ಸೇರಿಸಿರುತ್ತಾರೆ. ಕೆಲವೊಮ್ಮೆ ಕೆಂಪು ಮೆಣಸನ್ನೂ ಬಳಸು ತ್ತಾರೆ. ಪ್ರವಾಸಿಗರಿಗೆ ಖಾರ ಕಡಿಮೆ ಹಾಕಿ ಮಾಡಿಕೊಟ್ಟರೂ ತಿನ್ನುವಾಗ ಬಾಯಿ-ಕಣ್ಣಲ್ಲಿ ನೀರು ಖಂಡಿತಾ! ಆಲೂಗಡ್ಡೆ ಮತ್ತು ಚೀಸ್ ಬಳಸಿ ಮಾಡಲಾಗುವ ‘ಕೆವಾದಾಸ್ತಿ’ಯಲ್ಲಿ ಖಾರ ಸ್ವಲ್ಪ ಕಡಿಮೆ.

ಅಣಬೆ: ಮಶ್ರೂಮ್ ಪ್ರಿಯರಿಗೆ ಭೂತಾನ್ ಸ್ವರ್ಗವೇ. ಇಲ್ಲಿ ಸುಮಾರು ನಾಲ್ಕು ನೂರು ಬಗೆಯ ತಿನ್ನಬಹುದಾದ ಅಣಬೆಗಳನ್ನು ಬೆಳೆಯಲಾಗುತ್ತದೆ. ಯಾವುದೇ ಖಾದ್ಯದಲ್ಲಿ ಒಂದಲ್ಲ ಒಂದು ರೀತಿಯ ಅಣಬೆ ಇರುತ್ತದೆ. ವಿವಿಧ ರೀತಿಯ ಅಣಬೆಗಳ ಪ್ರದರ್ಶನ ಮತ್ತು ಮಾರಾಟದ ವಿಶೇಷವಾದ ಜಾತ್ರೆಯೂ ನಡೆಯುತ್ತದೆ!

ಮೋಮೊ: ಹಬೆಯಲ್ಲಿ ಬೇಯಿಸಿದ ಮೋದಕ ದಂಥ ಉಂಡೆಗಳಾದ ಮೊಮೊಗಳು ಮುಲತಃ ಟಿಬೆಟಿಯನ್ನರ ತಿಂಡಿ. ಭೂತಾನಿನಲ್ಲೂ ಸಣ್ಣದಾಗಿ ಹೆಚ್ಚಿದ ಮಾಂಸ/ ಎಲೆಕೋಸು ಮತ್ತು ಚೀಸ್ ಸೇರಿಸಿ ಬೇಯಿಸಿದ ಮೊಮೊ ಎಲ್ಲೆಡೆ ಸಿಗುತ್ತವೆ.
ಸಿಹಿ ತಿನಿಸು ಖಾರ ಇಷ್ಟಪಡುವ ಭೂತಾನಿನಲ್ಲಿ ಸಾಂಪ್ರದಾಯಿಕ ಸಿಹಿ ತಿನಿಸುಗಳು ಕಡಿಮೆಯೇ!

ವಿಶೇಷ ಸಂದರ್ಭಗಳಲ್ಲಿ ‘ದೈಸೀ’ ಎಂಬ ಸಿಹಿತಿನಿಸನ್ನು ಬಿಳಿ ಅಕ್ಕಿ, ಸಕ್ಕರೆ, ಲವಂಗ, ಬೆಣ್ಣೆ ಮತ್ತು ಅರಿಶಿನದ ಪುಡಿ ಸೇರಿಸಿ ಮಾಡಲಾಗುತ್ತದೆ. ಅರಿಶಿನದಿಂದ ಹಳದಿ ಬಣ್ಣ ಬರುವುದರಿಂದ ಇದನ್ನು ಯೆಲ್ಲೊ ಸ್ವೀಟ್  ರೈಸ್ ಎಂದು ಕರೆಯುತ್ತಾರೆ. ಥಟ್ಟನೇ ನಮ್ಮ ಅನ್ನದ ಕೇಸರಿಭಾತ್‌ನಂತೆ ಕಂಡರೂ ರುಚಿ ಬೇರೆಯೇ!

ಸೂಜ: ದಿನಕ್ಕೆ ಒಂದೆರಡು ಸಾರಿಯಲ್ಲ, ಹತ್ತಿಪ್ಪತ್ತು ಬಾರಿ ಕುಡಿಯುವ ಪಾನೀಯ ಸೂಜ. ಚಹಾ ಎಲೆ, ಯಾಕ್ ಬೆಣ್ಣೆ, ನೀರು ಮತ್ತು ಉಪ್ಪನ್ನು ಹಾಕಿ ಮಾಡಿದ ಚಹಾ ಇದು. ಹಾಲು-ಸಕ್ಕರೆಯ ಸಿಹಿ ಚಹಾ ಕುಡಿದ ಬಾಯಿಗೆ ಉಪ್ಪುಪ್ಪಾದ ಸೂಜ
ರುಚಿಸುವುದು ಕಷ್ಟವೇ. ಆದರೆ ಎತ್ತರದ ಪ್ರದೇಶಗಳಲ್ಲಿ ಚಳಿಗೆ ಬೇಕಾದ ಉಷ್ಣತೆ-ಶಕ್ತಿಗೆ ಇದು ಸಹಾಯಕ.

ಬೆಣ್ಣೆ ಹಾಕಿರುವುದರಿಂದ ಚಳಿಗೆ ತುಟಿ ಒಡೆಯುವುದನ್ನು ಇದು ತಡೆಯುತ್ತದೆ. ಸ್ಥಳೀಯವಾಗಿ ಬೆಳೆದ ಅಕ್ಕಿ, ಗೋಧಿ, ಬಾರ್ಲಿ ಯಿಂದ ಮನೆಯಲ್ಲೇ ತಯಾರಿಸಲಾಗುವ ಅರಾ ಎಂಬ ವೈನ್ ಬಹಳ ಜನಪ್ರಿಯ. ಆಹಾರ ವೈವಿಧ್ಯ ಸಾಕಷ್ಟಿದ್ದರೂ ಯಾವುದೇ ಆಹಾರ ಬೇಕಿದ್ದರೂ ಪ್ರವಾಸಿಗರು ಒಂದೆರಡು ಗಂಟೆ ಮುಂಚೆಯೇ ತಿಳಿಸಬೇಕು.ಏಕೆಂದರೆ ನಮ್ಮಲ್ಲಿಯ ಹಾಗೆ ಹೋಟೆಲ್‌ಗಳಲ್ಲಿ ಊಟ, ತಿಂಡಿ ಮೊದಲೇ ಸಿದ್ಧ ಮಾಡಿಡುವ ಪದ್ಧತಿ ಅಲ್ಲಿಲ್ಲ, ಆರ್ಡರ್ ಬಂದ ಮೇಲೆ ತರಕಾರಿ ತಂದು, ಹೆಚ್ಚಿ, ಬೇಯಿಸುವ ವ್ಯವಸ್ಥೆ.

ಹಾಗಾಗಿ ಭೂತಾನಿನಲ್ಲಿ ಏನಿದ್ದರೂ ಫ್ರೆಶ್ ಆಂಡ್ ಸ್ಲೋ ಫುಡ್! ಒಟ್ಟಿಗೇ ಕುಳಿತು ಮಾತುಕತೆ ಆಡುತ್ತಾ, ಸೂಜ ಅಥವಾ ಅರಾ ಕುಡಿಯುತ್ತಾ ಆಹಾರ ಸೇವಿಸುವುದು ಭೂತಾನಿನ ಜನರ ಪದ್ಧತಿ. ದುಡ್ಡು ಎಷ್ಟೇ ಇರಲಿ-ಬಿಡಲಿ, ಮನೆಯಲ್ಲಿ ಮೆಣಸಿನಕಾಯಿ ತುಂಬಿದ್ದರೆ ಮನುಷ್ಯ ಸಂತೃಪ್ತ ಎನ್ನುವ ಭೂತಾನಿನ ಜನರ ಮನಸ್ಸು ಮಾತ್ರ ಸಿಹಿ!

ಕೆಂಪಕ್ಕಿ ಅನ್ನ
ಭೂತಾನಿನ ಪಾರೋ ಕಣಿವೆಯಲ್ಲಿ ಭತ್ತ ಮುಖ್ಯ ಬೆಳೆ. ಇಲ್ಲಿನ ಗದ್ದೆಗಳಿಗೆ ಹಿಮ ಪರ್ವತಗಳ ಝರಿಗಳಿಂದ ಖನಿಜಾಂಶವುಳ್ಳ ನೀರು ಹರಿಯುತ್ತದೆ. ಮ್ಯಾಂಗನೀಸ್ ಮತ್ತು ಫಾಸ್ಫರಸ್ ಹೆಚ್ಚಿರುವ ಈ ಅಕ್ಕಿಯ ಅನ್ನ ರುಚಿಕರ ಮತ್ತು ಪೌಷ್ಟಿಕ. ಸುಮ್ಮನೇ ನೋಡಿದಾಗ ಕೆಂಪು ಬಣ್ಣದ್ದಾಗಿ ಕಾಣುವ ಅಕ್ಕಿ, ಬೇಯಿಸಿದಾಗ ತಿಳಿ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಅನ್ನ ಮೆತ್ತಗಾಗಿ ಸ್ವಲ್ಪ ಅಂಟಾಗಿರುತ್ತದೆ.