Wednesday, 11th December 2024

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೊಂದು ಪತ್ರ

ದ್ರಾವಿಡ ಭಾಷೆಗಳಲ್ಲೇ ಅತ್ಯಂತ ಹಿರಿತನ ಹೊಂದಿರುವ, ಸುಮಾರು ೨೦೦೦ ವರುಷಗಳಷ್ಟು ಇತಿಹಾಸವಿರುವ ಕನ್ನಡ ಸಾಹಿತ್ಯವನ್ನು ಜನಪದ, ವಚನ, ದಾಸ ಸಾಹಿತ್ಯ ಹೀಗೆ ಹಲವು ಪ್ರಕಾರಗಳಾಗಿ ವಿಂಗಡಿಸಬಹುದು.

ಈ ಮಾದರಿಯಂತೆ ಗುರುತಿಸಬಹುದಾದ ಮತ್ತೊಂದು ಪ್ರಕಾರ ವೆಂದರೆ ಅದು ಯಕ್ಷಗಾನ ಸಾಹಿತ್ಯ. ಸಾಮಾನ್ಯರ ತಿಳಿವಳಿಕೆಯಲ್ಲಿ ಯಕ್ಷಗಾನ ಸಾಹಿತ್ಯವೆನ್ನುವುದು ರಂಗ ಸಾಹಿತ್ಯ. ರಂಗದ ಆಶಯಗಳನ್ನು ಪರಿಣಾಮಕಾರಿಯಾಗಿ ಕಟ್ಟುವಲ್ಲಿ ಮೂಲಧಾತು ಎನಿಸಿಕೊಂಡು ಅದಕ್ಕೆ ಬೇಕಾದ ಪಠ್ಯವನ್ನು/ನಿರ್ದೇಶನವನ್ನು ಮಾತ್ರ ಒದಗಿಸುತ್ತದೆ ಎಂಬ ಭಾವನೆಯಿದೆ. ಅದು ಸತ್ಯವಾದರೂ ಅದಕ್ಕಿಂತ ಭಿನ್ನವಾದ ನೆಲೆಯಲ್ಲಿ ಅದರ ಸಾಹಿತ್ಯವನ್ನು ಅವಲೋಕಿಸಬಹುದಾಗಿದೆ.

ಸಾಹಿತ್ಯವೆಂದರೆ ಭಾಷೆಯನ್ನು, ಭಾವನೆಗಳನ್ನು, ಸೃಜನಶೀಲತೆಯನ್ನು, ಪಾಂಡಿತ್ಯವನ್ನು ಕೊಡುವ ಪ್ರಬಲ ಮಾಧ್ಯಮ. ಈ ಲಕ್ಷಣಗಳನ್ನು ಯಕ್ಷಗಾನ ಸಾಹಿತ್ಯದಲ್ಲಿಯೂ ಗುರುತಿಸಬಹುದು. ಇಲ್ಲಿಯ ಸಾಹಿತ್ಯವು ಎರಡು ವಿಭಾಗದಲ್ಲಿ ಹರವಿಕೊಂಡಿದೆ. ಒಂದು ಯಕ್ಷಗಾನದ
ಪ್ರದರ್ಶನಕ್ಕೆ ಬೇಕಾದ ಪರಿಧಿಯನ್ನು ಕಟ್ಟಿಕೊಡುವ ಪ್ರಸಂಗ ಸಾಹಿತ್ಯವಾದರೆ, ಮತ್ತೊಂದು ಪ್ರದರ್ಶನಗಳಲ್ಲಿ ಪ್ರಸಂಗದ ಸಾಹಿತ್ಯದ ಆಶಯ ಗಳನ್ನು ಮೌಖಿಕವಾಗಿ ಸಂಭಾಷಣೆಗಳ ಮೂಲಕವಾಗಿ ಸೃಜನಾತ್ಮಕವಾಗಿ ವಿನ್ಯಾಸಗೊಳಿಸುವ ವಿಧಾನ.

ಈ ಎರಡು ಕ್ರಮಗಳು ಕೂಡ ಹಲವು ಶತಮಾನಗಳಿಂದ ಅಸ್ತಿತ್ವವನ್ನು ಹೊಂದಿರುವುದನ್ನು ಗಮನಿಸಬೇಕು. ಇದರ ಜತೆಗೆ ಅಚ್ಚ ಕನ್ನಡದಲ್ಲಿಯೇ
ಪ್ರತಿಪಾದಿಸುವುದು ಗಮನರ್ಹವಾಗಿದೆ. ಯಕ್ಷಗಾನ ಸಾಹಿತ್ಯದ ಹಿರಿಮೆ ಗರಿಮೆಗಳನ್ನು ಅವಲೋಕಿಸುವಾಗ ಮಹತ್ತರವಾದ ವಿಚಾರಗಳನ್ನು ತಿಳಿಯಬಹುದಾಗಿದೆ. ಸುಮಾರು ೭೦೦-೮೦೦ ವರುಷದ ಇತಿಹಾಸ ವಿರುವ ಯಕ್ಷಗಾನ ಸಾಹಿತ್ಯದಲ್ಲಿ ಸಾವಿರಕ್ಕೂ ಅಧಿಕ ಕವಿಗಳನ್ನು ಗುರುತಿಸಬಹುದು.

ಆರು ಸಾವಿರಕ್ಕೂ ಅಧಿಕ ಪ್ರಸಂಗಗಳು ರಚನೆಯಾಗಿ, ಸರಿಸುಮಾರು ೧೦ ಲಕ್ಷಕ್ಕೂ ಅಧಿಕ ಸಂಖ್ಯೆಯ ಪದ್ಯಗಳು ರಚನೆಯಾಗಿದೆ. ಇಷ್ಟೇಯಲ್ಲದೇ ನಲವತ್ತಕ್ಕಿಂತ ಹೆಚ್ಚು ಪಿಎಚ್ ಡಿ ಪ್ರಬಂಧಗಳು ದಾಖಲಾಗಿದೆ. ಜತೆಗೆ ಡಾ.ಶಿವರಾಮ ಕಾರಂತರು, ಶತಾವಧಾನಿ ಡಾ.ಆರ್. ಗಣೇಶ್, ಡಾ. ರಾಘವ ನಂಬಿಯಾರ್, ಡಾ. ಪ್ರಭಾಕರ ಜೋಷಿ, ಡಾ.ನಾರಾಯಣ ಶೆಟ್ಟಿ, ಡಾ.ಕಬ್ಬಿನಾಲೆ ವಸಂತ್ ಭಾರಧ್ವಜ್, ಡಾ.ಆನಂದರಾಮ ಉಪಾಧ್ಯ, ಡಾ.ಪಾದೆಕಲ್ಲು ವಿಷ್ಣು ಭಟ್, ಡಾ.ಜಿ.ಎಸ್. ಭಟ್ ಸಾಗರ ಮುಂತಾದ ವಿದ್ವಾಂಸರು ಯಕ್ಷಗಾನದ ಬಗೆಗೆ ಸಂಶೋಧನ ಗ್ರಂಥಗಳನ್ನು ರಚಿಸಿದ್ದಾರೆ.

ವಿಮರ್ಶೆಗಳು, ಚಿಂತನೆ ಗಳು, ಪತ್ರಿಕೆಗಳಲ್ಲಿ ಬರುವ ಬಿಡಿ ಲೇಖನಗಳು, ಕಲಾವಿದರ ಅಭಿನಂದನ ಗ್ರಂಥಗಳು, ಸಂಸ್ಮರಣ ಗ್ರಂಥಗಳು, ಕಲಾವಿದರ ಆತ್ಮ ಕಥೆಗಳು, ಚಿತ್ರ ಸಂಪುಟಗಳು, ನಾಲ್ಕೈದು ಯಕ್ಷಗಾನಕ್ಕಾಗಿಯೇ ಇರುವ ಪತ್ರಿಕೆಗಳು, ಹೀಗೆ ಎಲ್ಲವು ಸೇರಿ ಅಂದಾಜು ಹತ್ತು ಸಾವಿರದಷ್ಟು ಕೃತಿಗಳು ರಚನೆಯಾಗಿವೆ. ಒಂದು ಕಲಾ ಪ್ರಕಾರದ ಮೇಲೆ ಇಷ್ಟೊಂದು ಸಂಖ್ಯೆಯ ಕೃತಿಗಳಿವೆ ಎಂಬುದು ದಾಖಲೆಯೇ ಸರಿ. ಇಷ್ಟಿದ್ದರೂ ಕೂಡ ಕನ್ನಡ ಸಾಹಿತ್ಯವಲಯದಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಸೂಕ್ತ ಸ್ಥಾನವನ್ನು ನೀಡದೆ ಇರುವುದು ಸೋಜಿಗ ವೆನಿಸುತ್ತದೆ.

ಯಕ್ಷಗಾನಕ್ಕಾಗಿಯೇ ಸರಕಾರದ ಪ್ರತ್ಯೇಕ ಅಕಾಡಮಿಯೇ ಇರುವಾಗ ಯಾಕೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಮುಂದೆ ಮನ್ನಣೆಗಾಗಿ ಕೇಳುತ್ತಿದ್ದೇವೆ ಎಂಬ ಪ್ರಶ್ನೆ ಹಲವರಲ್ಲಿ ಉದ್ಭವಿಸ ಬಹುದು. ಇದಕ್ಕೆ ಉತ್ತರ ಸರಳ. ಜನ ಸಾಮಾನ್ಯರ ತಿಳಿವಳಿಕೆಯಂತೆ ಇಂದು ಯಕ್ಷಗಾನವು ಕರ್ನಾಟಕದ ನಾಲ್ಕೆ ದು ಜಿಗಳಲ್ಲಿ ತನ್ನ ಅಸ್ತಿತ್ವವನ್ನು ಶ್ರೀಮಂತವಾಗಿಯೇ ಉಳಿಸಿಕೊಂಡಿರುವುದಲ್ಲಿ ಯಾವುದೇ ಅನುಮಾನವಿಲ್ಲ. ಜತೆಗೆ ಇದರ ಸಹೋದರ ಕಲೆಗಳು
ಕರ್ನಾಟಕದಾದ್ಯಂತ ವ್ಯಾಪಿಸಿವೆ. ಆದರೆ ಯಕ್ಷಗಾನವು ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಬೆಳೆದಿಲ್ಲ ಎಂಬ ಪ್ರಶ್ನೆ ಹಲವು ದಶಕಗಳಿಂದ ಇದೆ. ಯಕ್ಷಗಾನೇತರ ವಲಯದ ಕನ್ನಡಿಗರು ಇದರ ಸಾಹಿತ್ಯ ಮತ್ತು ಸಂಗೀತವನ್ನು ಗಮನಿಸದೇ ಇರುವುದು ಪ್ರಮುಖವಾದ ಕಾರಣ.

ಆದ್ದರಿಂದ ಕನ್ನಡದ ಬಗೆಗಾಗಿ ತನ್ನದೇಯಾದ ರೀತಿಯಲ್ಲಿ ಬಳಸುತ್ತ, ಬೆಳೆಸುತ್ತ ಕನ್ನಡ ಅಸ್ಮಿತೆಯನ್ನು ಉಳಿಸುವ ಯಕ್ಷಗಾನ ಮತ್ತು ಅದರ ಸಾಹಿತ್ಯದ ಪ್ರಯತ್ನ ವನ್ನು ಇಡೀ ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಸಂಸ್ಥೆಯಾದ ಸಾಹಿತ್ಯ ಪರಿಷತ್ತು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯತೆಗಳಿವೆ.

-ಕನ್ನಡ ಹಾಗೂ ಯಕ್ಷಗಾನ ಸಾಹಿತ್ಯ ಅಭಿಮಾನಿಗಳು