Thursday, 28th November 2024

ಕಾಣೆಯಾಗಲಿದೆ ಹೆಡ್‌ ಫೋನ್‌ ಜಾಕ್‌

ಟೆಕ್‌ ಫ್ಯೂಚರ್‌

ವಸಂತ ಗ ಭಟ್‌

ಸ್ಮಾರ್ಟ್‌ಫೋನ್‌ಗಳ ಅವಿಭಾಜ್ಯ ಅಂಗ ಎನಿಸಿದ್ದ ಹೆಡ್‌ಫೋನ್ ಜಾಕ್ ಕ್ರಮೇಣ ಕಣ್ಮರೆಯಾಗುತ್ತಿದೆ! ಏಕೆ?

ಹಳೆಯ ಕಾಲದ ದೂರವಾಣಿ ಸಂಪರ್ಕದಲ್ಲಿ, ಒಂದು ಕರೆಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸಲು ತಂತಿ
ಯನ್ನು ಬಳಸುತ್ತಿದ್ದರು. ಆಪರೇಟರ್ ಸಿಬ್ಬಂದಿಯು, ನಿಗದಿತ ಜಾಗಕ್ಕೆೆ ತಂತಿಯನ್ನು ಚುಚ್ಚುವ ಮೂಲಕ ದೂರವಾಣಿ ಕರೆ ಆರಂಭವಾಗುವಂತೆ ನೋಡಿಕೊಳ್ಳುತ್ತಿದ್ದರು.

ಇದೇ ತಂತಿಯ ಮುಂದುವರೆದ ಭಾಗ ಮೊಬೈಲ್‌ನಲ್ಲಿ ಬಳಕೆಯಾಗುವ ಹೆಡ್‌ಫೋನ್ ಜಾಕ್. ಅಂದು ಸ್ವಿಚ್ ಬೋರ್ಡ್‌ಗೆ
ಚುಚ್ಚುತ್ತಿದ್ದ ಆ ತಂತಿಯನ್ನು ಇಂದು ಮೊಬೈಲ್‌ನ ಹೆಡ್ ಫೋನ್ ಜಾಕ್‌ಗೆ ಚುಚ್ಚಿ ಹಾಡನ್ನು ಕೇಳುತ್ತಿದ್ದೇವೆ. 1970 ರಲ್ಲಿ
ಬಿಡುಗಡೆಯಾದ ‘ಸೋನಿ ವಾಕ್ ಮೇಟ್’ ಮೊದಲ ಹೆಡ್ ಫೋನ್ ಜಾಕ್ ಹೊಂದಿದ ಸಂಚಾರಿ ಉಪಕರಣ.

ನಂತರ ಆ್ಯಪಲ್ ಐಪೋಡ್ ಬಿಡುಗಡೆ ಮಾಡಿದ್ದು ಅದರಲ್ಲೂ ಸಹ ಹೆಡ್ ಫೋನ್ ಜಾಕ್ ಬಳಕೆಯಾಗುತ್ತಿದ್ದು ಎಲ್ಲರಿಗೂ
ಗೊತ್ತಿರುವ ವಿಚಾರ. 2017 ರಲ್ಲಿ ಆ್ಯಪಲ್ ಬಿಡುಗಡೆ ಮಾಡಿದ ಐಫೋನ್ 7 ಮೊಬೈಲ್‌ನಲ್ಲಿ 3.5 ಎಂಎಂ ನ ಹೆಡ್ ಫೋನ್ ಜಾಕ್ ಅನ್ನು ತೆಗೆದು ಹಾಕಿತು ಮತ್ತು ಕಿವಿಯಲ್ಲೇ ಕುಳಿತುಕೊಳ್ಳುವ ಏರ್ ಪೊಡ್‌ಸ್‌ ಹೆಡ್‌ಫೋನ್‌ಅನ್ನು ಬಿಡುಗಡೆ ಮಾಡಿತು. ಇದರಲ್ಲಿ ಬ್ಲೂಟೂತ್ ಬಳಸಲಾಗಿತ್ತು. ಅಂದು ಆ್ಯಪಲ್‌ನ ಈ ನಡೆಯನ್ನು ಟೀಕಿಸಿದ್ದ ಸ್ಯಾಮ್ಸಂಗ್ 2019ರ ನಂತರ ತನ್ನ ದುಬಾರಿ ಮೊಬೈಲ್‌ನಲ್ಲೂ ಹೆಡ್‌ಫೋನ್ ಜಾಕ್ ಅನ್ನು ನೀಡುತ್ತಿಲ್ಲ.

ಏಕೆ ಹಂತ ಹಂತವಾಗಿ ಎಲ್ಲ ದುಬಾರಿ ಮೊಬೈಲ್‌ಗಳು ಹೆಡ್‌ಫೋನ್ ಜಾಕ್‌ಅನ್ನು ತಮ್ಮ ಮೊಬೈಲ್ ನಿಂದ ತೆಗೆದು ಹಾಕುತ್ತಿವೆ?
ಇತ್ತೀಚಿನವರೆಗೂ ಸ್ಮಾರ್ಟ್ ಫೋನ್ ಜತೆ ಹೆಡ್‌ಫೋನ್ ಅನ್ನು ಉಚಿತವಾಗಿ ನೀಡುತ್ತಿದ್ದರು. 2000 ರದ ಆರಂಭದ ದಶಕದ ಮೊಬೈಲ್ ಗಳಲ್ಲಿ ಬಳಕೆಯಾಗುತ್ತಿದ್ದ ಉಪಕರಣಗಳು ಗಾತ್ರದಲ್ಲಿ ದೊಡ್ಡದಾಗಿದ್ದ ಕಾರಣ, ಹಾಡು ಕೇಳಲು ಅವಶ್ಯಕವಾದ ಸ್ಪೀಕರ್‌ಅನ್ನು ಅಳವಡಿಸುವುದು ಕಷ್ಟಕರವಾಗಿತ್ತು. ಆದ ಕಾರಣ ಮೊಬೈಲ್ ಜತೆ ಹೆಡ್‌ಫೋನ್ ಅನ್ನು ನೀಡಿ ಅವುಗಳನ್ನು ಮೊಬೈಲ್ ಗೆ ಸಿಕ್ಕಿಸಲು 3.5 ಎಂಎಂ ಹೆಡ್‌ಫೋನ್ ಜಾಕ್‌ಅನ್ನು ನೀಡಲಾರಂಭಿಸಿದವು. ನಂತರದ ದಿನಗಳಲ್ಲಿ ಮೊಬೈಲ್‌ನಲ್ಲಿ ಬಳಕೆಯಾಗುತ್ತಿದ್ದ ಉಪಕರಣಗಳ ಗಾತ್ರ ಗಣನೀಯವಾಗಿ ಕಡಿಮೆಯಾಗಿ ಮೊಬೈಲ್‌ನಲ್ಲೇ ಸ್ಪೀಕರ್‌ಗಳನ್ನು ಜೋಡಿಸಿದ ಕಾರಣ, ಹಾಡುಗಳನ್ನು ಹೆಡ್ ಫೋನ್ ಇಲ್ಲದೆಯೂ ಕೇಳುವಂತಾದರೂ, ಅವುಗಳ ಗುಣಮಟ್ಟ ಉತ್ಕೃಷ್ಟವಾಗಿರಲಿಲ್ಲ.

ಅದಕ್ಕೋಸ್ಕರ ಹೆಡ್ ಫೋನ್‌ಅನ್ನು ನೀಡುವ ಪರಿ ಪಾಠವನ್ನು ಬೆಳೆಸಿಕೊಂಡರು. 2005 ರ ಸಮಯದಲ್ಲಿ ಬ್ಲೂಟೂತ್ ತಂತ್ರ ಜ್ಞಾನ ಮುನ್ನೆಲೆಗೆ ಬಂದ ಸಮಯ. ನಿಧಾನವಾಗಿ ಬ್ಲೂಟೂತ್ ಆಧಾರಿತ ಹೆಡ್ ಫೋನ್‌ಗಳು ಬಂದವು. ಆದರೆ ಆಗಿನ್ನೂ ಮೊಬೈಲ್‌ನ ಬ್ಯಾಟರಿ ಸಾಮರ್ಥ್ಯ ಹೆಚ್ಚಾಗಿ ಇರದ ಕಾರಣ ಬ್ಲೂಟೂತ್ ಅನ್ನು ಹಾಡು ಕೇಳುವಾಗೆಲ್ಲ ಆನ್ ಮಾಡಿ ಇಡುವು ದರಿಂದ ಬ್ಯಾಟರಿ ಹೆಚ್ಚು ಕಾಲ ಉಳಿಯುತ್ತಿರಲಿಲ್ಲ. ಆದ್ದರಿಂದ ಮಾರುಕಟ್ಟೆಯಲ್ಲಿ ಎಷ್ಟೇ ಬ್ಲೂಟೂತ್ ಕೇಂದ್ರಿತ ಹೆಡ್
ಫೋನ್‌ಗಳಿದ್ದರೂ ಮೊಬೈಲ್ ಉತ್ಪಾದಕರು ಹೆಡ್‌ಫೋನ್ ಜಾಕ್‌ಅನ್ನು ಮೊಬೈಲ್‌ನಲ್ಲಿ ನೀಡುವುದನ್ನು ನಿಲ್ಲಿಸಿರಲಿಲ್ಲ.

ಆ್ಯಪಲ್ ಐಫೋನ್ 7
2017 ರಲ್ಲಿ ಆ್ಯಪಲ್ ಐಫೋನ್ 7 ನಲ್ಲಿ ಹೆಡ್‌ಫೋನ್ ಜಾಕ್ ಅನ್ನು ತೆಗೆಯುವುದಾಗಿ ಘೋಷಿಸಿತು. ಅದಕ್ಕೆ ಕೊಟ್ಟ ಕಾರಣ
ಬ್ಲೂಟೂತ್ ತಂತ್ರಜ್ಞಾನ ಮುಂದುವರೆದಿದ್ದು ಯಾವುದೇ ತಂತಿಯ ಅವಶ್ಯಕತೆಯಿಲ್ಲದೆ ಉತ್ತಮ ಗುಣಮಟ್ಟದಲ್ಲಿ ಹಾಡು ಗಳನ್ನು ಕೇಳಬಹುದು ಎಂದು. ಆ್ಯಪಲ್ ಮೊಬೈಲ್ ಗಳನ್ನು ಇನ್ನಷ್ಟು ತೆಳುವಾಗಿಸಿ ಕಡಿಮೆ ತೂಕವಾಗಿಸಲು ಹೆಡ್ ಫೋನ್ ಜಾಕ್ ಅನ್ನು ತೆಗೆಯುವುದು ಅನಿವಾರ್ಯ.

ಅದೇ ವರ್ಷ ಆ್ಯಪಲ್ ಏರ್ ಫೋಡ್ ಎನ್ನುವ ದುಬಾರಿ ಹೆಡ್ ಫೋನ್‌ಅನ್ನು ಬಿಡುಗಡೆ ಮಾಡಿತು ಮತ್ತು ಉಚಿತವಾಗಿ
ಹೆಡ್‌ಫೋನ್ ಅನ್ನು ಮೊಬೈಲ್ ಜತೆ ನೀಡುವ ಪದ್ಧತಿಗೆ ತಿಲಾಂಜಲಿ ಇಟ್ಟಿತು. ಅದರ ಜತೆ, ಆ್ಯಪಲ್ ಇತರ ಯಾವುದಾದರೂ ಸಂಸ್ಥೆ ತನ್ನ ಛಾರ್ಜಿಂಗ್ ಪೋರ್ಟ್ (ಆ್ಯಪಲ್ ಅದನ್ನು ಲೈಟನಿಂಗ್ ಪೋರ್ಟ್ ಎಂದು ಕರೆಯುತ್ತದೆ) ಅನ್ನು ಬಳಸಿಕೊಂಡು ಹಾಡು ಕೇಳುವ ಹೆಡ್ ಫೋನ್‌ಅನ್ನು ತಯಾರಿಸ ಬೇಕೆಂದರೆ ಆ್ಯಪಲ್ ಸಂಸ್ಥೆಗೆ ಹಣ ನೀಡಬೇಕು.

ಏಕೆಂದರೆ ಆ್ಯಪಲ್ ತನ್ನ ಲೈಟನಿಂಗ್ ಪೋರ್ಟ್ ಮೇಲೆ ಪೇಟೆಂಟ್ ಹೊಂದಿದೆ. ದುಬಾರಿ ಬೆಲೆಯ ಹೆಡ್ ಫೋನ್ ಉತ್ಪಾದಿಸುವ ಬೋಶ್, ಸ್ಕಲ್ ಕ್ಯಾಂಡಿ ತರಹದ ಸಂಸ್ಥೆಗಳನ್ನು ಬಿಟ್ಟರೆ ಇತರೆ ಯಾವುದೇ ಸಂಸ್ಥೆಗಳೂ ಆ್ಯಪಲ್ ಗೆ ಹಣ ನೀಡಿ ಹೆಡ್‌ಫೋನ್‌ಅನ್ನು ಉತ್ಪಾದಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಸಧ್ಯದ ಪರಿಸ್ಥಿತಿ ಹೇಗಿದೆಯೆಂದರೆ ಒಂದೋ ನೀವು ಏರ್ ಫೋಡ್ ಖರೀದಿ ಆ್ಯಪಲ್ ಮೊಬೈಲ್‌ನಲ್ಲಿ ಹಾಡು ಕೇಳಬೇಕು, ಇಲ್ಲವೇ ದುಬಾರಿ ಬೆಲೆಯ ಇತರ ಸಂಸ್ಥೆಗಳ ಹೆಡ್‌ಫೋನ್ ಬಳಸಬೇಕು.

ಅಲ್ಲಿಗೆ ಆ್ಯಪಲ್ ತನ್ನ ಗುರಿಯನ್ನು ಮುಟ್ಟಿಯಾಗಿತ್ತು. ಇನ್ನು ಮುಂದೆ ಆ್ಯಪಲ್ ಮೊಬೈಲ್‌ನಲ್ಲಿ ಯಾವುದೇ ಹೆಡ್‌ಫೋನ್ ಮೂಲಕ ಹಾಡು ಕೇಳಿದರು ನೀವು ನೇರವಾಗಿ ಅಥವಾ ಪರೋಕ್ಷವಾಗಿ ಆ್ಯಪಲ್ ಸಂಸ್ಥೆಗೆ ಹಣ ನೀಡಿರುತ್ತಿರುತ್ತೀರಿ. ಇದರ ಮುಂದುವರಿದದ ಭಾಗ ಎನ್ನುವಂತೆ ಕಳೆದ ವರ್ಷ ಆ್ಯಪಲ್ ತನ್ನ ಮೊಬೈಲ್‌ನಲ್ಲಿ ಚಾರ್ಜರ್ ಸಹ ಉಚಿತವಾಗಿ ನೀಡುವುದಿಲ್ಲ ಎಂದು ಹೇಳಿದೆ. ಕಾರಣ ಮತ್ತೆ ಅದೇ ವಾತಾವರಣ ರಕ್ಷಣೆ, ಪ್ರತಿ ವರ್ಷ ಆ್ಯಪಲ್ ಮೊಬೈಲ್ ಅನ್ನು ಖರೀದಿಸುವವರಿಗೆ ಹೊಸ ಚಾರ್ಜರ್‌ನ ಅವಶ್ಯಕತೆ ಇರುವುದಿಲ್ಲ, ಹಾಗಾಗಿ ನಾವು ಚಾರ್ಜರ್‌ನ್ನು ಉಚಿತವಾಗಿ ನೀಡುವುದಿಲ್ಲವೆಂದು.

ಆ್ಯಪಲ್‌ನ ಹೆಡ್‌ಫೋನ್ ಜಾಕ್ ಇಲ್ಲದ ಮೊಬೈಲ್‌ಅನ್ನು ವಿರೋಧಿಸಿದ್ದ ಸ್ಯಾಮ್ಸಂಗ್ ಸಹ 2019 ರಿಂದ ತನ್ನ ದುಬಾರಿ ಬೆಲೆಯ ಮೊಬೈಲ್‌ಗಳಲ್ಲಿ ಹೆಡ್ ಫೋನ್ ಜಾಕ್‌ಅನ್ನು ತೆಗೆದಿದೆ. ಕಾರಣ ಮೊಬೈಲ್‌ನ ಬ್ಯಾಟರಿಗೆ ಹೆಚ್ಚಿನ ಸ್ಥಳಾವಕಾಶ ನೀಡುವು ದಕ್ಕೋಸ್ಕರ. ಒನ್ ಪ್ಲಸ್, ಒಪ್ಪೋ ಮತ್ತು ಇತರ ಮೊಬೈಲ್ ತಯಾರಕರು ಸಹ ಇದೇ ಹಾದಿ ಹಿಡಿದಿದ್ದಾರೆ. ಯಾರು ಒಪ್ಪಲಿ ಬಿಡಲಿ ಮೊಬೈಲ್ ಮಾರುಕಟ್ಟೆಯನ್ನು ಆ್ಯಪಲ್ ನಿಯಂತ್ರಿಸುತ್ತದೆ, ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಆ್ಯಪಲ್ ಏನೇ ಮಾಡಿದರೂ, ಅದರ ವಿರೋಧಿಗಳು ಸಹ ಒಪ್ಪಲೇ ಬೇಕಾಗುತ್ತದೆ.

ಲ್ಯಾಪ್ ಟಾಪ್‌ನಿಂದ ಫ್ಲಾಪಿ ಡ್ರೈವ್, ಸಿಡಿ ಡ್ರೈವ್ ತನಕ, ಕೊನೆಗೆ ಯೂಎಸ್ಬಿ ಪೋರ್ಟ್‌ಅನ್ನು ತಂದ ಹಿರಿಮೆ ಆ್ಯಪಲ್‌ಗೆ
ಸಲ್ಲುತ್ತದೆ. ಅದಾಗಲೇ ವೈರ್‌ಲೆಸ್ ಛಾರ್ಜಿಂಗ್ ಕ್ಷೇತ್ರದಲ್ಲೂ ಭರವಸೆ ಮುಡಿಸಿರುವ ಆ್ಯಪಲ್ ಮುಂದಿನ ಐದು ವರ್ಷಗಳಲ್ಲಿ ಯಾವುದೇ ಪೋರ್ಟ್ ಹೊಂದಿರದ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುವುದರಲ್ಲಿ ಸಂಶಯವಿಲ್ಲ.