ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯೊಂದು ಹರಿದಾಡುತ್ತಿದ್ದು, ಆ್ಯಪಲ್ ಸಂಸ್ಥೆಯು ವಿದ್ಯುತ್ ಶಕ್ತಿ ಬಳಸುವ ಆಟೊ ಮ್ಯಾಟಿಕ್ ಕಾರನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸುತ್ತದೆ ಎಂದು ತಿಳಿಯಲಾಗಿದೆ. ಇದಕ್ಕೆ ಪೂರಕವಾಗಿ ಹುಂಡೈ ಮತ್ತು
ಅದರ ಸಹ ಸಂಸ್ಥೆ ಕಿಯಾ ಕಾರ್ಪೊರೇಷನ್, ಮುಂದಿನ ದಿನಗಳಲ್ಲಿ ಸ್ವಯಂಚಾಲಿತ ವಿದ್ಯುತ್ ಕಾರುಗಳನ್ನು ತಯಾರಿಸಲು ಆ್ಯಪಲ್ ಸಂಸ್ಥೆಯ ಜತೆ ಚರ್ಚೆ ನಡೆಸಿವೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಇದರ ಸತ್ಯಾಸತ್ಯತೆಯ ಬಗ್ಗೆ ಸ್ಪಷ್ಟನೆ ನೀಡಿದ ಹುಂಡೈ, ‘ಸ್ವಯಂಚಾಲಿತ ವಿದ್ಯುತ್ ವಾಹನಗಳ ತಯಾರಿಕೆಯಲ್ಲಿ ಆ್ಯಪಲ್ ಜತೆ
ಯಾವುದೇ ಮಾತು ಕತೆ ನಡೆಸುತ್ತಿಲ್ಲ’ ಎಂದು ಹೇಳಿತು. ತಕ್ಷಣ ಹುಂಡೈ ಮತ್ತು ಕಿಯಾ ಕಾರ್ಪೊರೇಷನ್ ಷೇರುಗಳು ಕ್ರಮವಾಗಿ ಶೇ.6.6 ಮತ್ತು ಶೇ.14 ಮೌಲ್ಯ ಕಳೆದುಕೊಂಡವು.
ಜನವರಿ ತಿಂಗಳಿನಲ್ಲಿ ಈ ಕುರಿತು ಸುದ್ದಿ ಹೊರಟಿತ್ತು. ಸ್ವಯಂಚಾಲಿತ ವಿದ್ಯುತ್ ಕಾರುಗಳ ತಯಾರಿಕೆಯಲ್ಲಿ ‘ಆ್ಯಪಲ್
ಮತ್ತು ಹುಂಡೈ ಮಾತುಕತೆಯಲ್ಲಿದ್ದು, ಏನನ್ನೂ ನಿಶ್ಚಯಿಸಲಾಗಿಲ್ಲ’ ಎಂದು ಹುಂಡೈ ಹೇಳಿತ್ತು. ಆ ಕುರಿತು ಆಟೊ ವಲಯ ದಲ್ಲಿ ನಿರೀಕ್ಷೆ ಮೂಡಿದ್ದು, ಇವರು ಆ್ಯಪಲ್ ಕಾರನ್ನು ತಯಾರಿಸಬಹುದೇನೋ ಎಂಬ ಊಹಾಪೋಹ ಹರಡಿತ್ತು. ಈ ಹಿನ್ನೆಲೆಯಲ್ಲಿ ಕಿಯಾ ಸಂಸ್ಥೆಯ ಷೇರುಗಳ ಬೆಲೆ ಶೇ.40 ರಷ್ಟು ಹೆಚ್ಚಳಗೊಂಡಿತ್ತು. ಆದರೆ ಇವೆಲ್ಲವೂ ಕೇವಲ ಊಹಾಪೋಹ
ಮತ್ತು ಹುಂಡೈ ಅಥವಾ ಕಿಯಾ ಸಂಸ್ಥೆಗಳು ಆ್ಯಪಲ್ ಜತೆ ಕೈಜೋಡಿಸುವುದಿಲ್ಲ ಎಂದು ಈಗ ಸ್ಪಷ್ಟವಾಗಿದೆ.
ಇಂತಹ ನಿರೀಕ್ಷೆ ಹುಟ್ಟಲು ಇನ್ನೊಂದು ಪ್ರಬಲ ಕಾರಣವಿದೆ. ಆ್ಯಪಲ್ ಸಂಸ್ಥೆಯು ಇಂತಹ ಕಾರು ತಯಾರಿಸಲು ಯೋಚಿಸು ತ್ತಿದೆ ಎಂದು ಕಳೆದ ಡಿಸೆಂಬರ್ ನಲ್ಲೇ ರಾಯಿಟರ್ಸ್ ವರದಿ ಮಾಡಿತ್ತು. ಸ್ವಯಂಚಾಲಿತ ವಿದ್ಯುತ್ (ಬ್ಯಾಟರಿ) ಕಾರನ್ನು ಆ್ಯಪಲ್ ಸಂಸ್ಥೆಯು 2024ರ ಹೊತ್ತಿಗೆ ಮಾರುಕಟ್ಟೆಗೆ ತರಬಹುದು ಎಂದು ಆ ವರದಿಯಲ್ಲಿ ಹೇಳಲಾಗಿದೆ.
ಹುಂಡೈ ಮತ್ತು ಕಿಯಾ ಸಹಯೋಗ ಇಲ್ಲದೇ ಇದ್ದರೂ, ಆ್ಯಪಲ್ ಸಂಸ್ಥೆಯು ಆಟೊಮ್ಯಾಟಿಕ್ ವಿದ್ಯುತ್ ಚಾಲಿತ ವಾಹನವನ್ನು ಇನ್ನು ಮೂರರಿಂದ ನಾಲ್ಕು ವರ್ಷಗಳ ಒಳಗೆ ತಯಾರಿಸುವ ನಿರೀಕ್ಷೆಯಂತೂ ಇದ್ದೇ ಇದೆ.