Thursday, 28th November 2024

ಏರು ರಕ್ತದೊತ್ತಡ- ವಿವಿಧ ತಪ್ಪು ಕಲ್ಪನೆಗಳು

ವೈದ್ಯವೈವಿಧ್ಯ

ಡಾ.ಎಚ್‌.ಎಸ್‌.ಮೋಹನ್‌

ಏರು ರಕ್ತದೊತ್ತಡ ಎಲ್ಲಾ ಜನರಲ್ಲೂ ಜನಾಂಗದಲ್ಲಿಯೂ ಇರುವ ಒಂದು ಸಾಮಾನ್ಯ ಕಾಯಿಲೆ. ಅಮೆರಿಕದ ಸಿಡಿಸಿ ಸಂಸ್ಥೆಯ
ಪ್ರಕಾರ ಅಮೆರಿಕದಲ್ಲಿ ಅಲ್ಲಿನ ಜನಸಂಖ್ಯೆಯ ಶೇ.೪೫ ಜನರಲ್ಲಿ ಏರು ರಕ್ತದೊತ್ತಡ (High Blood pressure) ಕಾಯಿಲೆ ಇದೆ. ಉಳಿದ ದೇಶಗಳಲ್ಲಿ ಈ ಸಂಖ್ಯೆ ಸ್ವಲ್ಪ ಕಡಿಮೆ ಇರಬಹುದು. ಮುಖ್ಯವಾದ ವಿಚಾರ ಎಂದರೆ ಹಲವರಲ್ಲಿ ಈ ಕಾಯಿಲೆಯ ಯಾವ ಲಕ್ಷಣವೂ ಇಲ್ಲದುದರಿಂದ ಅವರಿಗೆ ತಮ್ಮಲ್ಲಿ ಏರು ರಕ್ತದೊತ್ತಡ ಕಾಯಿಲೆ ಇದೆ ಎಂಬುದೇ ಗೊತ್ತಿರುವುದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ೧.೧೩ ಬಿಲಿಯನ್ ಜನರಲ್ಲಿ ಈ ಕಾಯಿಲೆ ಇದೆ. ಆದರೆ ದೌರ್ಭಾಗ್ಯದ ಸಂಗತಿ ಎಂದರೆ ಈ ಕಾಯಿಲೆಯನ್ನು ಹಲವರು ತಪ್ಪಾಗಿ ಭಾವಿಸಿzರೆ, ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಹಾಗಾದರೆ ಮೊದಲು ನಾವು ರಕ್ತದೊತ್ತಡ ಎಂದರೆ ಏನು ಎಂಬುದರ ಬಗ್ಗೆ ಗಮನ ಹರಿಸೋಣ. ರಕ್ತನಾಳಗಳ ಹೊರಗೋಡೆ ಅಥವಾ ಹೊರಪದರಕ್ಕೆ ರಕ್ತವು ಒತ್ತಿ ಉಂಟುಮಾಡುವ ಒತ್ತಡವೇ ರಕ್ತದೊತ್ತಡ. ವಯಸ್ಕರರಲ್ಲಿ ಇದು ಸಾಮಾನ್ಯವಾಗಿ ೧೨೦/೮೦ ಇರುತ್ತದೆ.

ಸಾಮಾನ್ಯವಾಗಿ ಇದು ಆಗಾಗ ಹೆಚ್ಚು ಮತ್ತು ಕಡಿಮೆ ಆಗುತ್ತಿರುತ್ತದೆ. ಉದಾಹರಣೆಗೆ ಅವಿರತವಾದ ವ್ಯಾಯಾಮ ಮಾಡಿದಾಗ ರಕ್ತದೊತ್ತಡ ಹೆಚ್ಚುತ್ತದೆ. ಹಾಗೆಯೇ ಸುದೀರ್ಘವಾದ ಆರಾಮ ಮಾಡಿದಾಗ ರಕ್ತದೊತ್ತಡ ಕಡಿಮೆಯಾಗುತ್ತದೆ. ರಕ್ತದೊತ್ತಡವು
ಬಹಳ ಕಾಲ ಹೆಚ್ಚಾಗಿ ಉಳಿದುಕೊಂಡರೆ ಅದು ಹಲವು ಆರೋಗ್ಯ ಸಮಸ್ಯೆ ಗಳನ್ನು ಉಂಟುಮಾಡುತ್ತದೆ. ಈ ಕೆಳಗೆ ರಕ್ತದೊತ್ತಡದ ಬಗೆಗಿನ ಸಾಮಾನ್ಯ ತಪ್ಪು ಕಲ್ಪನೆಗಳನ್ನು ಚರ್ಚಿಸಲಾಗಿದೆ.

ಗಂಭೀರ ಕಾಯಿಲೆಯಲ್ಲ: ಇದು ಬಹಳ ತಪ್ಪು ಕಲ್ಪನೆ. ಇದು ತುಂಬಾ ಗಂಭೀರವಾಗಬಲ್ಲ ಕಾಯಿಲೆ. ಸರಿಯಾದ ಚಿಕಿತ್ಸೆ ಸೂಕ್ತ ಸಮಯದಲ್ಲಿ ಮಾಡದಿದ್ದಾಗ ಏರು ರಕ್ತದೊತ್ತಡ ಹಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಲ್ಲದು. ಉದಾಹರಣೆಗೆ ಹೃದಯಾಘಾತ, ಕಿಡ್ನಿಯ ಕಾಯಿಲೆಗಳು, ಹೃದಯ ವೈಫಲ್ಯ, ಆಂಜೈನಾ ರೀತಿಯ ಹೃದಯ ಬೇನೆ, ಅಂಧತ್ವ, ಲೈಂಗಿಕ ಅಸಮರ್ಥತೆ ಮತ್ತು ದೇಹದ ಹೊರಗಿನ ಭಾಗಗಳ ರಕ್ತನಾಳಗಳ ಕಾಯಿಲೆ. ಈ ಏರು ರಕ್ತದೊತ್ತಡವು ಹಲವು ರೀತಿಗಳಲ್ಲಿ ದೇಹಕ್ಕೆ ತೊಂದರೆ ಉಂಟುಮಾಡಬಲ್ಲದು. ಬಹಳ ದೀರ್ಘಕಾಲ ಶುದ್ಧ ರಕ್ತನಾಳದಲ್ಲಿ ರಕ್ತದೊತ್ತಡ ಜಾಸ್ತಿ ಇದ್ದಾಗ ರಕ್ತನಾಳಗಳ
ಹಿಗ್ಗುವಿಕೆ ಕುಗ್ಗುವಿಕೆಯ ಸಾಮರ್ಥ್ಯ ಕಡಿಮೆ ಯಾಗುತ್ತದೆ.

ಅದರ ಪರಿಣಾಮ ಎಂದರೆ ಹೃದಯಕ್ಕೆ ಬೇಕಾದ ರಕ್ತ ಮತ್ತು ಆಮ್ಲಜನಕದ ಪ್ರಮಾಣ ಕಡಿಮೆ ಯಾಗಿ ರವಾನೆಯಾಗುತ್ತದೆ. ಹಾಗಾಗಿ ಹೃದಯಕ್ಕೆ ತೀವ್ರವಾದ ತೊಂದರೆ ಉಂಟಾಗುತ್ತದೆ. ಹಾಗೆಯೇ ದೀರ್ಘಕಾಲದ ಏರುರಕ್ತದೊತ್ತಡ ಮೆದುಳಿನಲ್ಲಿನ
ಸೂಕ್ಷ್ಮ ರಕ್ತನಾಳಗಳನ್ನು ಹಾಳುಗೆಡವುತ್ತದೆ. ಅದರ ಪರಿಣಾಮ ಎಂದರೆ ಅವುಗಳಲ್ಲಿ ರಕ್ತ ಕಟ್ಟಿಕೊಳ್ಳುತ್ತದೆ ಅಥವಾ ರಕ್ತ ನಾಳಗಳು ಒಡೆದು ಹೋಗುತ್ತವೆ.

ಏರು ರಕ್ತದೊತ್ತಡ ನನ್ನ ಕುಟುಂಬದಲ್ಲಿಯೇ ಇದೆ: ಇಲ್ಲಿಯವರೆಗಿನ ಹಲವಾರು ಸಂಶೋಧನೆಗಳ ಪ್ರಕಾರ ಏರು ರಕ್ತದೊತ್ತಡಕ್ಕೆ ಜೆನೆಟಿಕ್ ತಳಹದಿ ಇದೆ. ೨೦೧೭ರಲ್ಲಿ ತಲೆಮಾರುಗಳ ಕುಟುಂಬಸ್ಥರಲ್ಲಿ ಅಧ್ಯಯನ ಕೈಗೊಳ್ಳಲಾಯಿತು. ಅದರ ಪ್ರಕಾರ ಅಜ್ಜ, ಅಜ್ಜಿಯರಲ್ಲಿ ಏರು ರಕ್ತದೊತ್ತಡ ಬೇಗ ಕಾಣಿಸಿಕೊಂಡಿದ್ದರೆ ಮೊಮ್ಮಕ್ಕಳಲ್ಲಿ ಏರು ರಕ್ತದೊತ್ತಡ
ಬರುವ ಸಾಧ್ಯತೆ ತುಂಬಾ ಜಾಸ್ತಿ. ಹಾಗೆಂದು ಜೆನೆಟಿಕ್ ರೀತ್ಯಾ ಬರುವ ಸಾಧ್ಯತೆ ಇzಗ ಸಹಿತ ಕೆಲವರಲ್ಲಿ ಈ ಕಾಯಿಲೆ ಬರದಿರುವ ಸಾಧ್ಯತೆಯೂ ಸ್ವಲ್ಪ ಇದೆ.

ಕೆಲವೊಮ್ಮೆ ಜೆನೆಟಿಕ್ ಕಾರಣಗಳಲ್ಲದೆ ಆಹಾರ ಪದ್ಧತಿ ಮತ್ತು ಜೀವನ ಶೈಲಿಯ ಕಾರಣಗಳಿಂದಲೂ ಒಬ್ಬ ವ್ಯಕ್ತಿಯಲ್ಲಿ ಏರು ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ೨೦೧೮ರಲ್ಲಿ ೨೭೭,೦೦೫ ಜನರಲ್ಲಿ ಅಧ್ಯಯನ ಕೈಗೊಂಡು ಅವರಲ್ಲಿ ಜೆನೆಟಿಕ್, ಜೀವನ ಶೈಲಿ ಮತ್ತು ಆರೋಗ್ಯ ವಿವರಗಳನ್ನು ಕಲೆ ಹಾಕಲಾಯಿತು. ಆ ಅಧ್ಯಯನದ ಪ್ರಕಾರ – ನಿರ್ದಿಷ್ಟ ಆರೋಗ್ಯವಂತ ಜೀವನ ಶೈಲಿ,
ಆರೋಗ್ಯವಂತ ಆಹಾರ ಕ್ರಮ, ಕಡಿಮೆ ಪ್ರಮಾಣದ ಆಲ್ಕೊಹಾಲ್ ಸೇವಿಸುವುದು, ಮೂತ್ರದಲ್ಲಿ ಕಡಿಮೆ ಪ್ರಮಾಣದ ಸೋಡಿಯಂ ಹೋಗುವುದು, ಬಿಎಂಐ ಕಡಿಮೆ ಇರುವುದು, ಬಹಳಷ್ಟು ಹೆಚ್ಚಿನ ದೈಹಿಕ ಪರಿಶ್ರಮ – ಇವೆ ಇದ್ದಾಗ ರಕ್ತದೊತ್ತಡ
ಕಡಿಮೆ ಇರುತ್ತದೆ. (ಜೆನೆಟಿಕ್ ರಿಸ್ಕ್ ಇದ್ದಾ ಸಹಿತ) ಈ ರೀತಿಯ ಆರೋಗ್ಯವಂತ ಜೀವನ ಶೈಲಿ ಇರುವವರಲ್ಲಿ ಹೃದಯಾಘಾತ, ಪಾರ್ಶ್ವವಾಯು – ಇವೆ ಬರುವ ಸಾಧ್ಯತೆ ತುಂಬಾ ಕಡಿಮೆ ಎಂದು ಹೇಳಲಾಗಿದೆ.

ವಯಸ್ಸಾದಂತೆ ಏರು ರಕ್ತದೊತ್ತಡ ಅನಿವಾರ್ಯ: ಇದೂ ಕೂಡ ತಪ್ಪು ಕಲ್ಪನೆ. ವಯಸ್ಸಾದ ಎಲ್ಲರಲ್ಲೂ ಏರು ರಕ್ತದೊತ್ತಡ ಬರಬೇಕೆಂಬ ನಿಯಮವಿಲ್ಲ. ಇದು ವಯಸ್ಸಾದ ಲಕ್ಷಣವಲ್ಲ. ವಯಸ್ಸಾದವರಲ್ಲಿ ಏರು ರಕ್ತದೊತ್ತಡ ಕಾಣಿಸಿಕೊಳ್ಳುವುದಾದರೂ ಮಧ್ಯ ವಯಸ್ಕರಲ್ಲಿ, ಯುವಕರಲ್ಲಿ ಸಹಿತ ಏರು ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ೧೮ – ೩೯ ವರ್ಷದವರಲ್ಲಿ ಶೇ.೭.೫ರಷ್ಟು ಜನರಲ್ಲೂ, ೪೦ – ೫೯ ವರ್ಷದವರಲ್ಲಿ ಶೇ.೩೩.೨ರಷ್ಟು ಜನರಲ್ಲಿ, ೬೦ ವರ್ಷದ ನಂತರದವರಲ್ಲಿ ಶೇ.೬೩ ಜನರಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಹೀಗೆ ವಯಸ್ಸಾದಂತೆ ಏರು ರಕ್ತದೊತ್ತಡ ಕಾಯಿಲೆ ಬರುವ ಸಾಧ್ಯತೆ ಜಾಸ್ತಿ ಇದ್ದರೂ ಜೀವನ ನಿರ್ವಹಣೆ ಕ್ರಮದಲ್ಲಿ ಸೂಕ್ತ ಬದಲಾವಣೆ ಮಾಡಿಕೊಂಡರೆ ರಕ್ತದೊತ್ತಡ ಬರುವ ಸಾಧ್ಯತೆ ಕಡಿಮೆ ಮಾಡಬಹುದು. ಅವುಗಳೆಂದರೆ – ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು, ನಿಯಮಿತವಾಗಿ ದೈಹಿಕ ವ್ಯಾಯಾಮ, ವಾಕಿಂಗ್ ಮಾಡುವುದು, ಧೂಮಪಾನ ಸಂಪೂರ್ಣ ವಾಗಿ ಮಾಡದೇ ಇರುವುದು, ಆರೋಗ್ಯವಂತ ಆಹಾರ ಸೇವಿಸುವುದು.

ಏರು ರಕ್ತದೊತ್ತಡ ನಮಗೆ ತಿಳಿಯುತ್ತದೆ: ಏರು ರಕ್ತದೊತ್ತಡ ನಾವು ರಕ್ತದೊತ್ತಡ ಮಾಪನದಿಂದ ಅಳೆದಾಗ ಮಾತ್ರ ಗೊತ್ತಾಗುತ್ತದೆ. ಎಷ್ಟೋ ಜನರಿಗೆ ರಕ್ತದೊತ್ತಡ ಹೆಚ್ಚಿದ್ದಾಗಲೂ ಯಾವ ರೋಗ ಲಕ್ಷಣವೂ ಇರುವುದಿಲ್ಲ. ಅಮೆರಿಕದಲ್ಲಿ ಒಂದು
ಅಂದಾಜಿನ ಪ್ರಕಾರ ೭೫ ಮಿಲಿಯನ್ ಜನರಲ್ಲಿ ರಕ್ತದೊತ್ತಡ ಕಾಯಿಲೆ ಇದೆ. ಅದರಲ್ಲಿ ೧೧ ಮಿಲಿಯನ್ ಜನರಿಗೆ ಈ ಕಾಯಿಲೆ ಇದೆಯೆಂದೇ ಗೊತ್ತಿಲ್ಲ. ಹಾಗಾಗಿ ಎಷ್ಟೋ ತಜ್ಞ ವೈದ್ಯರು ಈ ಕಾಯಿಲೆಯನ್ನು ಮೌನವಾಗಿ ಕೊಲ್ಲುವ ಕಾಯಿಲೆ (Silent killer) ಎನ್ನುತ್ತಾರೆ.

ಸೋಡಿಯಂ ಸೇವನೆ ಬಗ್ಗೆ ಚಿಂತೆ ಅಗತ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆಯು ಗ್ರಾಂಗಿಂತ ಕಡಿಮೆ ಕಡಿಮೆ ಪ್ರಮಾಣದ ಉಪ್ಪು ಸೇವಿಸಿದರೆ ಏರು ರಕ್ತದೊತ್ತಡ ಬರದಂತೆ ತಡೆಯಲು ಅನುಕೂಲ ಎಂದು ಅಭಿಪ್ರಾಯಪಡುತ್ತದೆ. ಈ ರೀತಿಯ ನಿರ್ದಿಷ್ಟ
ಪ್ರಮಾಣಕ್ಕೆ ಉಪ್ಪು ಸೇವನೆ ಕಡಿಮೆ ಮಾಡಿದರೆ ಜಗತ್ತಿನಾದ್ಯಂತ ಪ್ರತಿ ವರ್ಷ ೨.೫ ಮಿಲಿಯನ್ ಸಾವನ್ನು ಬರದಂತೆ ಮಾಡ ಬಹುದು ಎಂದು ಅಭಿಪ್ರಾಯ ಪಡುತ್ತದೆ. ಹಾಗೆಂದು ಆಹಾರದಲ್ಲಿ ಮೇಲೆ ಸೇವಿಸುವ ಟೇಬಲ್ ಸಾಲ್ಟ್ ಮಾತ್ರ ನಿಯಂತ್ರಿಸಿ ಪ್ರಯೋಜನವಿಲ್ಲ.

ಹಲವಾರು ರೆಡಿ ಆಹಾರಗಳಲ್ಲಿ ಬಹಳಷ್ಟು ಪ್ರಮಾಣದ ಉಪ್ಪು ಇರುತ್ತದೆ. ಎಚ್ಚರಿಕೆಯಿಂದ ಪ್ಯಾಕೆಟ್ ಮೇಲಿನ ಲೇಬಲ್ ಗಮನಿಸಬೇಕು. ಕೆಲವದರಲ್ಲಿ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಅಮೆರಿಕದ ಸಿಡಿಸಿಯ ಪ್ರಕಾರ ನಮ್ಮ ದೈನಂದಿನ ಸೋಡಿಯಂ ಅಗತ್ಯತೆಯ ಶೇ.೪೦ರಷ್ಟು ಈ ಕೆಳಗಿನ ಆಹಾರದಲ್ಲಿ ಬರುತ್ತದೆ.

೧.ಬ್ರೆಡ್, ೨. ಫಿಜ್ಜಾ, ೩.ಸ್ಯಾಂಡ್ ವಿಚಸ್, ೪.ಮಾಂಸಗಳು, ೫. ಸೂಪ್‌ಗಳು, ೬. ಚಿಪ್ಸ್ ರೀತಿಯ ಕುರುಕಲು ತಿಂಡಿಗಳು, ೭. ಕೋಳಿಯ ಆಹಾರ, ೮. ಚೀಸ್ ೯. ಮೊಟ್ಟೆ. ತುಂಬಾ ಮೇಲ್ಮಟ್ಟದ ಪ್ರೊಸೆಸ್ ಮಾಡಿದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಉಪ್ಪಿನ ಅಂಶ ಇರುತ್ತದೆ.

ಆ ಆಹಾರಗಳೆಂದರೆ – ತಂಪು ಪಾನೀಯಗಳು, ಚಾಕೊಲೇಟ್ ಚಿಪ್ಸ್, ಕ್ಯಾಂಡಿ, ಬೆಳಗ್ಗೆ ತಿಂಡಿಗೆ ಉಪಯೋಗಿಸುವ ಸಂಸ್ಕರಿಸಿದ ಸಿಹಿ ತಿಂಡಿಗಳು, ಪ್ಯಾಕ್ ಮಾಡಿದ ಸೂಪ್‌ಗಳು. ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ ೧೦೦,೦೦೦ ಜನರಲ್ಲಿ ಸರ್ವೆ ನಡೆಸಲಾಯಿತು. ಆಹಾರದಲ್ಲಿ ವಿಶೇಷ ಸಂಸ್ಕರಿಸಿದ ಆಹಾರ ಸೇವನೆಯನ್ನು ಶೇ.೧೦ ಜಾಸ್ತಿ ಮಾಡಿದರೆ ಸ್ತನ ಕ್ಯಾನ್ಸರ್ ಮತ್ತು ದೇಹದ ಇತರ ಕ್ಯಾನ್ಸರ್ ಬರುವ ಸಾಧ್ಯತೆ ಇತರರಿಗಿಂತ ಶೇ.೧೦ ಜಾಸ್ತಿ ಎನ್ನಲಾಗಿದೆ.

ಚಿಕಿತ್ಸೆ ನಂತರ ಔಷಧ ನಿಲ್ಲಿಸಬಹುದು: ತಮ್ಮ ರಕ್ತದೊತ್ತಡ ನಿಯಂತ್ರಿಸಲು ಅಗತ್ಯ ಔಷಧ ಅಥವಾ ಮಾತ್ರೆ ನಿಯಮಿತವಾಗಿ ತೆಗೆದುಕೊಳ್ಳುವವರಲ್ಲಿ ಅವರ ರಕ್ತದೊತ್ತಡ ಸಾಮಾನ್ಯದ ಹಂತಕ್ಕೆ ಬರುತ್ತದೆ. ಆದರೆ ಹೆಚ್ಚಿನವರಿಗೆ ಈ ಕಾಯಿಲೆ ಒಮ್ಮೆ ಬಂದ ನಂತರ ಜೀವನ ಪರ್ಯಂತ ಇರುವ ಕಾಯಿಲೆ. ಹಾಗಾಗಿ ನಾರ್ಮಲ್‌ಗೆ ರಕ್ತದೊತ್ತಡ ಬಂತೆಂದು ಔಷಧ ತೆಗೆದುಕೊಳ್ಳುವುದು
ನಿಲ್ಲಿಸಬಾರದು. ವೈದ್ಯರಲ್ಲಿ ಸರಿಯಾಗಿ ಸಲಹೆ ತೆಗೆದುಕೊಂಡು ಮುಂದುವರಿಯಬೇಕು.

ಅಮೆರಿಕದ ಆರೋಗ್ಯ ಸಂಸ್ಥೆಯವರು ಈ ಬಗೆಗೆ ಹೀಗೆ ನುಡಿಯುತ್ತಾರೆ – ಏರು ರಕ್ತದೊತ್ತಡ ಕಾಯಿಲೆ ಇರುವ ಹೆಚ್ಚಿನವರಿಗೆ ಜೀವನ ಪರ್ಯಂತ ಚಿಕಿತ್ಸೆಯ ಅವಶ್ಯಕತೆ ಇದೆ. ದೀರ್ಘಕಾಲ ರಕ್ತದೊತ್ತಡ ನಿರ್ದಿಷ್ಟ ಸಂಖ್ಯೆಗಿಂತ ಕಡಿಮೆ ಬಂದಾಗ ವೈದ್ಯರು ಔಷಧದ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಬಹುದು. ಹೆಚ್ಚಿನ ಸಂದರ್ಭ ಅದನ್ನು ನಿಲ್ಲಿಸುವುದಿಲ್ಲ. ಹಾಗಾಗಿ ಹೆಚ್ಚಿನವರಲ್ಲಿ ಜೀವನ ಪರ್ಯಂತ ಚಿಕಿತ್ಸೆ ಅಗತ್ಯವಿದೆ.

ಸಂಪೂರ್ಣ ಗುಣಪಡಿಸಬಹುದು: ಸದ್ಯದ ಪರಿಸ್ಥಿತಿಯಲ್ಲಿ ಏರು ರಕ್ತದೊತ್ತಡ ಕಾಯಿಲೆಗೆ ಸಂಪೂರ್ಣ ಗುಣಪಡಿಸುವ ಚಿಕಿತ್ಸೆ ಇಲ್ಲ. ಆದರೆ ಅದರ ಲಕ್ಷಣಗಳನ್ನು ಕಡಿಮೆ ಮಾಡಲು ಹಾಗೂ ಅದರಿಂದ ಆರೋಗ್ಯಕ್ಕೆ ಹಾನಿಯಾಗದಂತೆ ಮಾಡಲು ಹಲವಾರು
ಮಾರ್ಗೋಪಾಯಗಳಿವೆ. ಈ ಕೆಳಗಿನ ವಿಷಯಗಳು ಸಹಾಯ ಮಾಡುತ್ತವೆ – ಆಲ್ಕೊಹಾಲ್ ಸೇವಿಸುವ ಪ್ರಮಾಣ ತೀವ್ರವಾಗಿ ಕಡಿಮೆ ಮಾಡುವುದು,

ಆರೋಗ್ಯವಂತ ಆಹಾರ ಕ್ರಮ ಅನುಸರಿಸುವುದು, ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡುವುದು, ಮಾನಸಿಕ ಒತ್ತಡವನ್ನು ಸೂಕ್ತವಾಗಿ ನಿಭಾಯಿಸುವುದು, ಧೂಮಪಾನ ಸಂಪೂರ್ಣವಾಗಿ ನಿಲ್ಲಿಸುವುದು, ವಯಸ್ಸು ಮತ್ತು ಎತ್ತರಕ್ಕೆ ತಕ್ಕ ಹಾಗೆ ತೂಕವನ್ನು ಹೊಂದಿರುವುದು, ನಿಯಮಿತವಾಗಿ ಮಾತ್ರೆ ಅಥವಾ ಔಷಧ ಸೇವಿಸುವುದು.

ಪುರುಷರಿಗೆ ಮಾತ್ರ ವಿಪರೀತ ಏರುರಕ್ತದೊತ್ತಡ: ಏರು ರಕ್ತದೊತ್ತಡ ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದಾದರೂ ೪೫ ವರ್ಷದವರೆಗೆ ಪುರುಷರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಜಾಸ್ತಿ. ೪೫ – ೬೪ ವರ್ಷದವರಲ್ಲಿ ಪುರುಷರು ಹಾಗೂ ಮಹಿಳೆಯರು
ಇಬ್ಬರಲ್ಲೂ ಸಮ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು. ೬೪ ವರ್ಷದ ನಂತರ ಮಹಿಳೆಯರಲ್ಲಿ ಜಾಸ್ತಿ ಕಂಡು ಬರುತ್ತದೆ.

ರಕ್ತದೊತ್ತಡ ಕಡಿಮೆ ಇದ್ದರೆ ಒಳ್ಳೆಯದು: ರಕ್ತದೊತ್ತಡ ಬಹಳ ಕಡಿಮೆ ಇರುವುದು ದೇಹಕ್ಕೆ ಒಳ್ಳೆಯದಲ್ಲ. ಹೈಪೋಟೆನ್ಷನ್ ಎಂದು ಕರೆಯುವ ಇದರಲ್ಲಿ ಹಲವು ಲಕ್ಷಣಗಳು ಗೋಚರವಾಗಬಹುದು. ತಲೆ ತಿರುಗುವುದು, ಎಚ್ಚರ ತಪ್ಪುವುದು, ದೇಹದ
ಸಮತೋಲನ ತಪ್ಪುವುದು – ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ರೀತಿಯ ಲಕ್ಷಣಗಳಿಂದ ಕೆಲವೊಮ್ಮೆ ವ್ಯಕ್ತಿಯು ಎಂದರಲ್ಲಿ ಬಿದ್ದು ದೇಹಕ್ಕೆ ತೀವ್ರ ಹಾನಿ ತಂದುಕೊಳ್ಳಬಹುದು. ಇದು ಕೆಲವೊಮ್ಮೆ ಗಂಭೀರತೆಗೆ ತಿರುಗಿ ವ್ಯಕ್ತಿಯು ತೀವ್ರ ರೀತಿಯ ಶಾಕ್‌ಗೆ ಒಳಗಾಗಬಹುದು. ಈ ಶಾಕ್‌ನ್ನು ತಕ್ಷಣವೇ ಗುರುತಿಸಿ ಚಿಕಿತ್ಸೆ ಮಾಡದಿದ್ದರೆ ವ್ಯಕ್ತಿ ಮರಣ ಹೊಂದುವ ಸಾಧ್ಯತೆ ಇದೆ.  ಕೆಲವು ವ್ಯಕ್ತಿಗಳಲ್ಲಿ ಸಾಮಾನ್ಯವಾಗಿಯೇ ಅವರ ರಕ್ತದೊತ್ತಡ ಕಡಿಮೆಯಾಗಿಯೇ ನಾರ್ಮಲ್ ಆಗಿರುತ್ತದೆ. ಇದನ್ನು ವೈದ್ಯರು ಸರಿಯಾಗಿ ಗುರುತಿಸ ಬೇಕಾಗುತ್ತದೆ.

ಕೊಲೆಸ್ಟರಾಲ್ ಹೆಚ್ಚಳದಿಂದ ಏರುರಕ್ತದೊತ್ತಡ: ಈ ರೀತಿ ಯಾವಾಗಲೂ ಇರಬೇಕು ಎಂ ದೇನಿಲ್ಲ. ಹಲವರಲ್ಲಿ ಕೆಟ್ಟ ಜೀವನ ಶೈಲಿಯಿಂದಾಗಿ, ಉದಾಹರಣೆಗೆ ಕೊಬ್ಬಿನ ಅಂಶ ಜಾಸ್ತಿ ಇರುವ ಆಹಾರ ಜಾಸ್ತಿ ಸೇರಿಸುವುದು, ನಿಯಮಿತವಾದ ದೈಹಿಕ ವ್ಯಾಯಾಮ ಮಾಡದಿರುವುದು – ಇವುಗಳಿಂದ ಕೊಲೆಸ್ಟರಾಲ್ ಮಟ್ಟ ಜಾಸ್ತಿಯಾಗಬಹುದು. ಕೆಲವರಲ್ಲಿ ಏರು ರಕ್ತದೊತ್ತಡ
ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಕೊಲೆಸ್ಟ್ರಾಲ್ ಮಟ್ಟವು ಜಾಸ್ತಿ ಇzಗಲೂ ವ್ಯಕ್ತಿಗೆ ಏರುರಕ್ತದೊತ್ತಡ ಇರದಿರುವ ಸಾಧ್ಯತೆ ಇದ್ದೇ ಇದೆ.

ಶೀತ ನೆಗಡಿ ಔಷಧ ರಕ್ತದೊತ್ತಡಕ್ಕೆ ಸಂಬಂಧವಿಲ್ಲ: ಇದೊಂದು ಗಂಭೀರ ವಿಚಾರ. ಶೀತ, ನೆಗಡಿ, ಸಾಮಾನ್ಯ ಕಾಯಿಲೆಗೆ ಹಲವರು ವೈದ್ಯರ ಸಲಹೆ ಇಲ್ಲದೆ ಓವರ್ ದಿ ಕೌಂಟರ್ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಇದು ಈಗಾಗಲೇ ಏರುರಕ್ತದೊತ್ತಡ ಇರುವ ಕೆಲವರಲ್ಲಿ ರಕ್ತದೊತ್ತಡ ಇನ್ನೂ ಹೆಚ್ಚಿಸಬಹುದು.

ಹಾಗಾಗಿ ಡೀ ಕಂಜಸ್ಟಂಟ್ ಔಷಧಗಳು ಸೇರಿಲ್ಲದ ಔಷಧಗಳನ್ನು ಈ ಸಂದರ್ಭದಲ್ಲಿ ಬಳಸುವುದು ಒಳ್ಳೆಯದು. ವೈದ್ಯರ ಕ್ಲಿನಿಕ್ ಅಥವಾ ಆಫೀಸ್‌ನಲ್ಲಿ ಮಾತ್ರ ಬಿಪಿ ಹೆಚ್ಚಿರುತ್ತದೆ: ಕೆಲವರಲ್ಲಿ ವೈದ್ಯರ ಕ್ಲಿನಿಕ್ ಅಥವಾ ಆಫೀಸ್‌ಗಳಲ್ಲಿ ಮಾತ್ರ ರಕ್ತದೊತ್ತಡ ಹೆಚ್ಚು ಕಂಡು ಬರುತ್ತದೆ. ಅವರದ್ದೇ ಮನೆಯಲ್ಲಿದ್ದಾಗ ಇದು ಕಡಿಮೆ ಇರುತ್ತದೆ. ಹೌದು, ವ್ಯಕ್ತಿ ಸ್ವಲ್ಪ ನರ್ವಸ್ ಆದಾಗ ಆತನ ಬಿಪಿ ತಾತ್ಕಾಲಿಕವಾಗಿ ಏರಿರುವ ಸಾಧ್ಯತೆ ಇದೆ. ಆಗ ಮನೆಯ ಬೇರೆ ಬೇರೆ ವೇಳೆಯಲ್ಲಿ ಬಿಪಿ ರೆಕಾರ್ಡ್ ಮಾಡಿ ಅದನ್ನು ಪರಿಶೀಲಿಸುವುದು ಒಳ್ಳೆಯದು.