ಫಿರೋಜ ಡಿ. ಮೊಮೀನ್
ಹುಡುಗ ಕಾಯುತ್ತಲೇ ಇದ್ದಾನೆ, ಹುಡುಗಿಯ ಸಂದೇಶಕ್ಕಾಗಿ. ಪ್ರೇಮಿಗಳ ದಿನದಂದಾದರೂ ಬಂದೀತೆ ಒಂದು ಸುಂದರ ಸಂದೇಶ, ಒಂದು ಮಧುರ ತಂಗಾಳಿ!
ಪ್ರೀತಿಸಿದ ಈ ಹೃದಯಕೆ ಮಾತುಗಳು ಮೌನವಾಗುತ್ತವೆ. ಪರಿಶುದ್ಧ ಪ್ರೀತಿಗೆ ಮನಸಾಕ್ಷಿಯೇ ವಿಘ್ನವಾಗುತ್ತವೆ. ಹೃದಯದ ಮಾತು ಗಳನ್ನು ಬಚ್ಚಿಡುವ ಮೂಲಕ ಅಂತರಂಗದ ಅಭಿಲಾಷೆಯನು ವ್ಯಕ್ತಪಡಿಸು.
ಹೇಳೆ ಗೆಳತಿ ನಿನ್ನಂತರಂಗದ ತಲ್ಲಣವ…? ಈ ಪ್ರೀತಿ ಒಂಥರಾ ಸುನಾಮಿ ಇದ್ದಂತೆ. ಯಾವಾಗ ಬಂದು ಅಪ್ಪಳಿಸುತ್ತದೆಯೋ ಗೊತ್ತಿಲ್ಲ. ಆದರೆ ಆ ಹುಡುಗ ಬೇರೊಬ್ಬರ ಪ್ರೀತಿಯ ಪೋಷಕನಾಗಿದ್ದ. ಆದರೆ ತನ್ನ ಪ್ರೀತಿಯೆಂಬ ಬಿಸಿಲ ಕುದುರೆ ಏರಿ ನಡೆದ ಮೊದಲ ಹೆಜ್ಜೆ ಗುರುತು ಆ ನದಿ ತಟದಲ್ಲಿನ ಹುಡುಗಿಯ ಸನಿಹಕೆ. ಮೊದಲ ಹೆಜ್ಜೆಯಾಗಿ ಕೈ ಸನ್ನೆಯಿಂದ ಮನಸುಗಳ ಸಮ್ಮಿ ಲನ ಆರಂಭ.
ಯಾವಾಗ ಪ್ರೀತಿಯ ಸಸಿಯೊಡೆಯಿತು ಅನ್ನೋ ಅರಿವೇ ಇರಲಿಲ್ಲ. ಈ ಪ್ರೀತಿ ಹುಟ್ಟೋದು ಗೊತ್ತಾಗೋದಿಲ್ಲ ಅನ್ನೋ ಹಾಗೇ
ಆ ಹುಡುಗಿಯ ಮೊದಲ ಪ್ರೀತಿ ಮೊದಲ ಕ್ರಷ್ ಸಂದೇಶ ರವಾನೆಯಾಯಿತು. ಅಷ್ಟೊತ್ತಿಗಾಗಲೇ ಈ ಮನಸ್ಸಿನ ತುಡಿತ ತನಗೇ
ಗೊತ್ತಿಲ್ಲದ ಹಾಗೇ ಆ ಹುಡುಗಿಯ ಪ್ರೀತಿಯ ಜಗೆ ಸಮ್ಮಿಲನಗೊಂಡಿತ್ತು. ನದಿಯ ತಟದಿಂದ ಪ್ರೇಮ ಸಂದೇಶಗಳು ಮನಸ್ಸಿನಲ್ಲಿ
ಪ್ರೇಮಾಂಕುರ ಸೃಷ್ಟಿ ಮಾಡಿತ್ತು.
ಆದರೆ ಕೆಲ ದಿನಗಳ ಕಾಲ ಎಸ್‌ಎಂಎಸ್ ಇಲ್ಲ. ಪೋನ್ ಕಾಲ್ ಸಹ ಮಾಡದೇ ಮೌನವಾಗಿಯೇ ಉಳಿದುಬಿಟ್ಟಳು. ಪ್ರೀತಿಯ
ನೆನಪುಗಳಿಗೆ ಸೂರ್ಯನ ಪ್ರಖರತೆಯಷ್ಟು ಶಕ್ತಿ ಇರುತ್ತದೆ ಅಂದ್ಕೊಂಡು ಒಲ್ಲದ ಮನಸ್ಸನಿಂದ, ಸಮಾಧಾನದಿಂದ ಇದ್ದ
ಹುಡುಗ. ಪ್ರೀತಿಯ ಸೆಳೆತ ಸುನಾಮಿಯನ್ನೂ ಮೀರಬಲ್ಲದಲ್ಲವೇ. ಕೆಲ ದಿನಗಳ ಬಳಿಕ ಮತ್ತೆ ಪ್ರೇಮ ಸಂದೇಶಗಳು ನವೋಲ್ಲಾಸ ಪಡೆದುಕೊಂಡವು.
ನಕ್ಷತ್ರದಂತಹ ಕಣ್ಣುಗಳು, ಮುತ್ತಿನಂತಹ ಹಲ್ಲುಗಳ ಸಾಲುಗಳಾವವೂ ಆಶ್ಚರ್ಯವೆಸಲಿಲ್ಲ. ಹುಡುಗಿಯ ಸರಳತೆಯೇ ಹುಡುಗನ ಕಣ್ಣಂಚಿನಲಿ ಬೆಳಕು ಮೂಡಿಸಿತು. ಆದರೇನು ಮಾಡುವುದು? ಜೀವನವೆಂದರೆ ಏರಿಳಿತಗಳ ಬಂಡಿ. ಪ್ರೀತಿಯೂ ಅಷ್ಟೆ. ಅದೇನೋ ಮುನಿಸು, ಅದೇನೋ ಅಸಮಧಾನ, ಅದೇನೋ ಕೋಪ, ಅದೇನೋ ಬೇಸರ, ಅದೇನೋ ದುಗುಡ ದುಮ್ಮಾನ.
ಒಂದು ದಿನ ಏಕಾಏಕಿ ಹುಡುಗನ ನಂಬರ ಬ್ಲಾಕ್ ಮಾಡಿದಳು. ಆ ದಿನ ಹುಡುಗನ ಬದುಕಿನ ಕಠೋರ ದಿನವಾಗಿತ್ತು. ಅದೆಷ್ಟೋ ದಿನಗಳ ತನಕ ಸದ್ದೇ ಇಲ್ಲ. ಹುಡುಗನ ಮನ ಕುದ್ದು ಹೋಯಿತು.
ಪ್ರೀತಿ ಸುಳ್ಳಾಯಿತೆ?
ಹಾಗಾದರೆ ಹುಡುಗನ ಪ್ರೀತಿ ಸುಳ್ಳಾಯಿತೇ… ಹುಡುಗ ನಿಜಕ್ಕೂ ಸರಳ. ತಾನಾಯಿತು, ತನ್ನ ಕೆಲಸ ಆಯ್ತು ಅಂತ ಇದ್ದವ. ಆದರೆ
ಜೀವನದಲ್ಲಿ ಆದ ಮೊದಲ ಸುಮಧುರ ಘಳಿಗೆ ಇದೇನಾ ಅಂದುಕೊಂಡು, ಪ್ರೀತಿಗೊಂದು ಹೊಸ ಆಶಾಕಿರಣದ ಬೆಳಕಿದೆ
ಅಂದ್ಕೊಂಡಿದ್ದ. ಆದ್ರೆ ಹೀಗಾಯ್ತಲ್ಲಾ. ಅಂತ ಒಲ್ಲದ ಮನಸ್ಸಿನಿಂದ ಕೋಪದಲ್ಲಿಯೇ ಕೆಲ ದಿನಗಳನ್ನು ಕಳೆದ.
ಆ ದಿನ…ಮಧುರ ಕ್ಷಣ.. ಮರುಭೂಮಿಯಲ್ಲಿ ಝಮ್ ಝಮ್ ಪಾನಿ (ನೀರು), ಕಲ್ಲಿನಲಿ ಹೂವು ಅರಳಿದಂತಹ ಅನುಭವ
ಆಯಿತು. ಹುಡುಗನ ಮುಂದೆ ಹುಡುಗಿ ಪ್ರತ್ಯಕ್ಷಳಾದಳು. ಪ್ರೀತಿ ಸುಳ್ಳಲ್ಲ, ಇದು ಚಿರಂತನ ಎಂಬಂತೆ ಮತ್ತೆ ಚಿಗುರೊಡೆಯಿತು. ಅವಳೊಂದಿಗೆ ಪರಸ್ಪರ ಮಾತನಾಡಲು ಆಗದಿದ್ದರೂ ಸಹ ಮನಸ್ಸುಗಳು ಬೆರೆತಿದ್ದವು, ಕೈ ಸನ್ನೆಗಳು ತಮ್ಮ ಪ್ರೇಮ ವೇದನೆ ಗಳನ್ನು ಹೇಳಿಕೊಂಡವು. ಹುಡುಗಿ ತನ್ನೂರಿಗೆ ತೆರಳುವ ಮುನ್ನ ಕಣ್ಸನ್ನೆಯಿಂದಲೇ ಸಂದೇಶ ನೀಡಿದಳು, ಹುಡುಗನನ್ನು ಅಲ್ಲೇ ಬಿಟ್ಟು ಹೋದಳು.
ಮತ್ತೆ ಬಂದ ಸಂದೇಶ
ಹುಡುಗಿ ತನ್ನ ಊರಿಗೆ ತಲುಪಿದ ಬಳಿಕ ಮೇಸೆಜ್ ಹಾಕಿದಳು. ಅದನ್ನು ಕಂಡ ಹುಡುಗನ ಪ್ರೀತಿ ಮತ್ತೊಮ್ಮೆ ಹಸಿರಾಯಿತು. ಇದಾದ ಕೆಲ ದಿನಗಳವರೆಗೂ ಪ್ರೇಮಾಂಕುರದ ಮನೋಭಿಲಾಷೆ ವ್ಯಕ್ತಪಡಿಸಿದಳು. ಆದರೆ ಕೆಲ ದಿನಗಳಿಂದ ಮನಸ್ಸಿನಲ್ಲಿ ಏನೋ ಕೊರಗು, ದುಗುಡು ಇಟ್ಟುಕೊಂಡು, ಮಾತನಾಡುತ್ತಿದ್ದಳು. ಇದೀಗ ಕೆಲ ದಿನಗಳಿಂದ ಮಾತನಾಡದೇ, ಮೌನವಾಗಿದ್ದಾಳೆ. ಆ ಮೌನದ ಹಿಂದಿನ ಮಾತುಗಳನ್ನು ತಿಳಿಯಲಾರದೇ, ಹುಡುಗ ನಿತ್ಯ ಒಲ್ಲದ ಮನಸ್ಸಿನ ದಿನ ಕಳೆಯುತ್ತಿದ್ದಾನೆ.
ಮನುಷ್ಯನ ದುಖಃ, ಅಸಹನೆ, ನಿರಾಸೆ, ವಿಕಾರ, ಆತ್ಮನಿಂದೆ, ಲೌಕಿಕ ಸಂಕಟ, ಇವೆಲ್ಲವುಗಳಿಂದ ಬಿಡುಗಡೆ ಮಾಡಬಲ್ಲಂತಹ
ಅದ್ಭುತ ಚೈತನ್ಯವೇ ಪ್ರೀತಿ..! ಎಷ್ಟು ಬೊಗಸೆ ಕುಡಿದರೂ ಸಾಲದು. ಇದೊಂದು ವಿಷಯದಲ್ಲಿ ಮನುಷ್ಯ ನಿರಂತರ ದಾಹಿ. ಒಂದೇ ಒಂದು ಹಿಡಿ ಪ್ರೀತಿ ದೊರೆತ ಮನುಷ್ಯ, ತನ್ನ ಭವಿಷ್ಯದ ಬದುಕಿನ ಯಾವ ಹೋರಾಟದಲ್ಲೂ ಕೈ ಸೋತು ಮಲಗಲಾರ.
ಹುಡುಗ ಈಗ ರಾತ್ರಿಯ ಬೆಳದಿಂಗಳನ್ನು ನೋಡುತ್ತಾ ಕುಳಿತಿದ್ದಾನೆ, ಪ್ರೇಮಿಗಳ ದಿನಕ್ಕಾಗಿ ಕಾಯುತ್ತಿದ್ದಾನೆ. ತಂಗಾಳಿ ಬೀಸಿದೆ,
ಹಕ್ಕಿ ಉಲಿದಿದೆ, ಹಂಸ ಹಾರುತ್ತಿದೆ.
ಹಂಸದೊಂದಿಗೆ ಹೇಳಿಕಳಿಸಿದ ಹುಡುಗ – ಈ ಮಧುರ ಪ್ರೀತಿಗಂಟಿಕೊಂಡಾಗ, ನನ್ನಲಿ ಏನೋ ಒಂದು ಶಕ್ತಿ ಹುಟ್ಟಿಕೊಂಡಿತು.
ಪ್ರೀತಿ ಎಂಬುದು ಆಕರ್ಷಣೆಯ ಅಮಲು. ನಶೆ ಇಳಿದ ಮೇಲೆ ಪ್ರೀತಿಯ ನಿಜವಾದ ಬಣ್ಣ ಬಯಲಾಗುತ್ತದೆ. ಆದರೆ ನನ್ನ ಪ್ರೀತಿ ಪರಿಶುದ್ಧ. ಹೇ ಹುಡುಗಿ, ನೀನೇಕೆ ಮೌನವಾಗಿ ಕೈಸನ್ನೆಯಲ್ಲೇ ಪ್ರೀತಿಯನ್ನು ವಿವರಿಸಿದೆ? ನನ್ನ ಬಳಿ ಸಾರಲು ನಿನಗೇನು ತೊಡಕಿದೆ? ನಿನ್ನ ಅಂತರಂಗದಲ್ಲಿನ ತಲ್ಲಣವ ಬಗೆಹರಿಸುವ ಶಕ್ತಿ ನಮ್ಮ ಪ್ರೀತಿಗಿದೆ. ಹೇಳು ನಿನ್ನಂತರಂಗದ ತಲ್ಲಣವ….