Thursday, 28th November 2024

ಸಿಹಿ ಸಿಹಿ ಪ್ರೀತಿ

ಸಾವಿತ್ರಿ ಶ್ಯಾನುಭಾಗ್ ಕುಂದಾಪುರ

ನೀ ನೀಡುವ ಬಿಸಿ ಬಿಸಿ ಚಹಾ ನಿಜಕ್ಕೂ ಸವಿ ಸವಿ ಸಿಹಿ ಸಿಹಿ ನೀ ಕೊಡುವ ಬಿಸಿ ಮುತ್ತಿನಂತೆ!

ಪ್ರೀತಿಯ ನನ್ನವನೇ,
ಮದುವೆಯ ವಾರ್ಷಿಕೋತ್ಸವ ಬಂದಿದೆ.
ಮೊನ್ನೆ ಮೊನ್ನೆ ನಾವು ಸಿಹಿ ಮಾಡಿ ತಿಂದಂತಿದೆ, ವರುಷ ಕಳೆದದ್ದೇ ತಿಳಿಯಲಿಲ್ಲ. ಕರೋನಾ ನೆಪದಲ್ಲಿ ಮನೆಯಿಂದ
ಕೆಲಸ ಮಾಡುತ್ತಾ, ಹೊರಗಡೆ ಕಾಲಿಡಲೇ ಇಲ್ಲ. ಇನ್ನು ನಮ್ಮಿಷ್ಟದ ಪಾನಿಪೂರಿ ತಿನ್ನುವ ಮಾತೆಲ್ಲಿ. ನಿನಗಾಗಿ ಮನೆಯಲ್ಲೇ ನೀ ಕಚೇರಿ ಕೆಲಸ ಮಾಡುವಾಗ ಅನಿರೀಕ್ಷಿತವಾಗಿ ಪಾನಿಪೂರಿ ತಯಾರಿಸುವ ಆಲೋಚನೆಯಿದೆ! ಆದರೇನು ಮಾಡುವುದು!

ಅದಕ್ಕೆ ನಿನ್ನ ಸಹಾಯ ಬೇಕು! ನಿನ್ನ ಸಹಾಯವಿಲ್ಲದೇ ಪಾನಿಗೆ ಉಪ್ಪು ಹಾಕಲು ನನಗೆ ಬಂದೀತೆ? ಒಂದು ದಿನವೂ ನನ್ನ ಪ್ರೀತಿಸುವ ವಿಷಯವ ನೀ ನನಗೆ ಹೇಳೇ ಇಲ್ಲ. ‘ಐ ಲವ್ ಯೂ’ ಎಂದರಷ್ಟೇ ಪ್ರೀತಿಯೇ? ಅಪ್ಪ, ಅಮ್ಮ ಒಂದು ದಿನವಾದರೂ ಹಾಗೇ ಹೇಳಿದ್ದು ಕೇಳಿದ್ದೇವೆಯೇ? ನೀನೇ ಹೇಳು. ‘ಕೇಕು, ಹೂಗುಚ್ಛ ನೀಡಿಲ್ಲವೇ’ ಎಂದು ಕೇಳಿದರೆ ಮೊದಮೊದಲು ಬೇಜಾರಾಗುತ್ತಿದ್ದೆ.

ಅವೆಲ್ಲ ಕೊಟ್ಟರಷ್ಟೇ ಪ್ರೀತಿಯೇ? ಸರಳ ಆಚರಣೆಯೂ ಸಂಭ್ರಮವೇ! ಪ್ರೀತಿಯಿಂದ ನೀನು ನೀಡುವ ಒಂದು ಗುಲಾಬಿಯೇ ನನಗೆ ದೊಡ್ಡ ಹೂಗೂಚ್ಛ, ನಿನಗಿಂತ ದೊಡ್ಡ ವಜ್ರದೊಡವೆ ಇದೆಯೇ ಈ ಭುವಿಯಲ್ಲಿ!

ನೀ ನೀಡಿದ ಚಹಾದ ಸವಿ
ಒಮ್ಮೊಮ್ಮೆ ತಡವಾಗಿ ನಾ ಎದ್ದರೆ, ನನಗಾಗಿ ಚಹಾ ತಯಾರಿಸಿ ನನ್ನನ್ನು ಎಬ್ಬಿಸುವ ನಿನ್ನ ಪ್ರೀತಿಯ ಪರಿಯೇ ಅದ್ಭುತ. ಬೆಳಗಿನ
ಚುಮು ಚುಮು ಚಳಿಯಲ್ಲಿ ನೀನಿತ್ತ ಹಬೆಯಾಡುವ ಚಹಾ ಕುಡಿಯುವಾಗ, ನಿನ್ನ ಬಿಸಿ ಮುತ್ತಿನ ನೆನಪಾಗುತ್ತದೆ!

ನಿನ್ನ ಪ್ರೀತಿ ತುಂಬಿದ ಬಿಸಿ ಬಿಸಿ ಚಹಾ ಅದು ನನಗೆ! ರಜಾದಿನಗಳಲ್ಲಿ ನಮ್ಮ ಮನೆಯ ಬಾಣಸಿಗ ನೀನೇ. ಮನೆಯ ಸ್ವಚ್ಚತಾ  ಆಂದೋಲನ ನಾ ಹಮ್ಮಿಕೊಂಡಾಗ ನೀ ಮಾಡುವ ಅಡುಗೆಯ ಪರಿಮಳ ಮನೆಯನ್ನು ಇನ್ನೂ ಫಳಫಳ ಹೊಳೆಯುವಂತೆ ಕೆಲಸ ಮಾಡಲು ನನಗೆ ಪ್ರೇರಣೆ ನೀಡುತ್ತದೆ. ನಡುನಡುವೆ ನನ್ನ ಬಳಿ ಅಡುಗೆಯ ರುಚಿ ತೋರಿಸಿ, ನಡುವೆ ನಿಂಬೆ ಶರಬತ್ತು ಹೀಗೆ ರಜಾದಿನದ ಮುಂಜಾನೆ ಸಾಗುವಾಗ, ಮಧ್ಯಾಹ್ನ ಊಟದ ಸವಿಯೋ ಸವಿ ಸವಿ!

ಇದುವರೆಗೂ ನಾವು ತಯಾರಿಸಿದ ಅಡುಗೆ ಪ್ರಯೋಗಗಳಿಗೆ ಕಡಿಮೆಯೇನು? ಯಾವ ಹೊಸ ರುಚಿಯ ಕಂಡರೂ ಅದನ್ನು ಪ್ರಯತ್ನಿಸುವ ಹವ್ಯಾಸಕ್ಕೊಂದು ಸಲಾಮ್. ರುಚಿಯಾಗದಿದ್ದರೆ, ಹದಗೆಟ್ಟರೆ ‘ಇನ್ನೊಮ್ಮೆ ಪ್ರಯತ್ನಿಸೋಣ’ ಎಂದು ಕಲಿತ
ಪಾಠಗಳ ನೆನಪಿಟ್ಟುಕೊಂಡು ಇನ್ನೊಮ್ಮೆ ಆ ಅಡುಗೆಯ ಮಾಡುವ ನಿನ್ನ ‘ಮರಳಿ ಯತ್ನವ ಮಾಡು’ ಪಾಠ ಎಲ್ಲರೂ
ಕಲಿಯಬೇಕಾದುದೆ!

ನಾನಂತೂ ಹೌದು. ನನಗೋ ಮೂಗಿನ ತುದಿಯಲ್ಲಿ ಕೋಪ! ಈ ಮುಂಗೋಪಿಯ ಮೂಗುತಿಯ ತಿರುಗಣೆ ನಿನ್ನ ಕೈಯ್ಯಲ್ಲೇ ಇದೆ ಗೆಳೆಯ! ಗಿಣಿಯಂತೆ ನನ್ನ ಸಮಾಧಾನ ಮಾಡಿ, ನನ್ನ ಕೋಪವ ತಣಿಸುವ ಶಕ್ತಿ ನಿನಗಷ್ಟೇ ಸಾಧ್ಯ ಇನಿಯ. ನವರಸಗಳನ್ನು ಗೆದ್ದವ ನೀನು. ದೊಡ್ಡಮ್ಮಳ ಕಾರ್ ಕೆಟ್ಟು ನಿನ್ನ ಮನೆ ಮುಂದೆ ನಿಂತಾಗ ಮಾತನಾಡುತ್ತ, ನನ್ನ ಭಾವಿ ಅತ್ತೆಯವರು ನನ್ನ ಮಗನಿಗೆ ಒಂದು ಒಳ್ಳೆಯ ಹೆಣ್ಣಿದ್ದರೆ ಹೇಳಿ ಅಂದಾಗ ನನ್ನ ಜಾತಕ ನೀಡಿದರಂತೆ.

ಅದು ಕೂಡಿ ಬಂದು ಮದುವೆ ನಿಶ್ಚಯವಾಗಿ, ಮದುವೆಯ ಕಾರ್ಯವೂ ಎರಡು ತಿಂಗಳೊಳಗೆ ನಡೆದು ನಾವು ಹೊಸಬಾಳಿನ
ಹೊಸಿಲೊಳಗೆ ಕಾಲಿಟ್ಟು ಸಂವತ್ಸರಗಳೇ ಕಳೆದವೆಂದರೆ, ಆಶ್ಚರ್ಯವೇ ಸರಿ! ಅಲ್ಲವೆ! ಈ ಬಾರಿ ಇಬ್ಬರೂ ಸೇರಿ ಗುಲಾಬ್
ಜಾಮೂನು ಮಾಡೋಣ. ಹದವಾಗಿ ಮೈದಾ ಹಿಟ್ಟು ನಾದಿ, ಸಣ್ಣ ಸಣ್ಣ ತುಂಡುಗಳ ನಡುವೆ ಸಣ್ಣ ಗೋಡಂಬಿಯ ಸೇರಿಸಿ ಎಣ್ಣೆಯಲ್ಲಿ ಕರಿಯೋಣ.

ಸಕ್ಕರೆಯ ಪಾಕಕ್ಕೆ ನೀನೇ ತಯಾರಿಸಿದ ಗುಲಾಬಿಯ ನೀರು, ಏಲಕ್ಕಿ ಬೆರೆಸಿ ಸಿಹಿ ಮಾಡೋಣ, ಬಾಯಿ ಸಿಹಿ ಮಾಡೋಣ. ಪ್ರೇಮಿಗಳ ದಿನದ ಶುಭ ಸಂದರ್ಭವೂ ಹೌದಲ್ಲವೇ, ಒಂದೆರಡು ಜಾಮೂನು ಹೆಚ್ಚಾಗಿ ಮೆಲ್ಲೋಣ. ನಾಲಗೆಯಲ್ಲಿ ಮೂಡಿದ ಜಾಮೂನಿನ ಸಿಹಿಯು ನಮ್ಮ ಪ್ರೀತಿಯ ಸಿಹಿಯನ್ನು ಇನ್ನಷ್ಟು ಹೆಚ್ಚಿಸಲಿ! ಬಾಳಿನಲ್ಲಿ ಸಿಹಿಯನ್ನೇ ತುಂಬಲಿ ಸದಾ.