ನೀನೇ ಬೇಕು ಅಂತ ಹುಡುಕಿ ಹುಡುಕಿ ಬಂದವಳಿಗೆ ಇಗೋ ನಿಂಗೆ ಅಂತ ಬಯಸಿದ್ದು ಅದಾಗಿ ಅದೇ ಬಂದು ನಿಂತರೆ ಹೇಗಾಗಬೇಡ! ಅಂತೂ ಇಂತೂ ಖುಷಿ ಖುಷಿ ದಿನಗಳ ಒಡತಿ ನಾನು. ನಾನು ನನ್ನವನು ಅಷ್ಟೇ ನನ್ನ ಪ್ರಪಂಚ.
ಅಪರ್ಣಾ.ಎ.ಎಸ್. ಬೆಂಗಳೂರು
ಬರಡು ಭೂಮಿಯಾಗಿದ್ದ ಮನದಲ್ಲೀಗ ನಲ್ಮೆೆಯ ಪ್ರೇಮದ ಮಳೆಯ ಸಿಂಚನ! ಎರಡೇ ಸಾಲಾದರೂ ಮನದಲ್ಲಿ ಹೊಸ ಭಾವನೆ, ಕನಸು ಬಿತ್ತಿ, ಇಲ್ಲಿವರೆಗೂ ಕಾಣದ ಕನಸಿನ ಹೊಸ ಲೋಕಕೆ ಎಳೆದೊಯ್ದು ನನ್ನವನು, ನನ್ನವನ ಪ್ರಂಪಂಚ ಮಾತ್ರ ಎಂಬ ಭಾವನೆಯನ್ನು ಮೂಡಿಸಿದ್ದು ಈ ಎರಡು ಸಾಲು. ಈ ಸಾಲುಗಳು ಅವ ನನಗೆ ಬರೆದ ಮೊದಲ ಪ್ರೇಮ ಪತ್ರ!
ಎಲ್ಲರಂತೆ ಇವ ಅಲ್ಲ. ಏನೋ ಹೊಸತು. ನವನವೀನ ಇವನು ಎಂಬಂತೆ ಭಾಸವಾಗಿದ್ದು ಈ ಸಾಲುಗಳಿಂದಲೇ. ಎಲ್ಲರಂತೆ ನನಗೆ ಲವ್ ಅಟ್ ಫಸ್ಟ್ ಸೈಟ್ ಆಗಿರಲಿಲ್ಲ. ಇವ ಬಸ್ ಸ್ಟಾಪ್‌ನಲ್ಲಿ ಕಂಡಿರಲಿಲ್ಲ. ಇನ್ಯಾರದೋ ಮದುವೆ ಊಟ ಬಡಿಸುವಾಗ ಕ್ಷಣ ಮಾತ್ರದ ಢಿಕ್ಕಿಯಲ್ಲೂ ಪರಿಚಿತನಾಗಲಿಲ್ಲ. ಯಾರದೋ ಕರೆ ನನಗೆ ಬಂದು ಮಾತನಾಡಿ ಪರಿಚಯ? ಊಹೂಂ ಅದೂ ಅಲ್ಲ. ಇದೊಂಥರಾ ಬೇರೆ ರೀತಿ. ನಮ್ಮ ಪರಿಚಯ ಆಕಸ್ಮಿಕವೂ ಅಲ್ಲ, ಉದ್ದೇಶ ಪೂರ್ವಕವೂ ಅಲ್ಲ.
ಮರೆಯಲಾಗದ ಮುಖ
ಅದೊಂದು ದಿನ ಯಾವುದೋ ಲೇಖನದ ಹುಚ್ಚಿಗೆ ಬಿದ್ದು ದಿನಪೂರ್ತಿ ಹುಡುಕಿದ್ದೆ. ಎಲ್ಲೆಲ್ಲೋ ಹೇಗೇಗೋ ಎಷ್ಟು ಹುಡುಕಿ ದರೂ ಸಿಗದ ಆ ಪೇಪರ್ ಗಳ ಸುರುಳಿಯೊಳಗೆ ಅಚಾನಕ್ ಆಗಿ ಕಂಡಿದ್ದ ಬರಹ 5,000 ಉಪನ್ಯಾಸಕರ ಹುದ್ದೆ ಖಾಲಿ ಖಾಲಿ.
ಮೊದಲೇ ನನ್ನಣ್ಣ ಉಪನ್ಯಾಸಕ. ನಂಗೂ ಉಪನ್ಯಾಸಕ ಅಂತ ಕಂಡರೆ ಸಾಕು, ಏನು ಎತ್ತ ಅಂತ ಜಾಲಾಡುವ ಖಯಾಲಿ. ಹಾಗೆ ಹುಡುಕಿದಾಗ ಕಂಡಿದ್ದು ಬರಹದ ಹೆಡ್ಡಿಂಗ್ ಹಾಗೂ ಬರೆದವರ ಹೆಸರು ಅಷ್ಟೇ… ಕುತೂಹಲ ತಡೆಯದೇ ಈ ಬರಹ ಅಣ್ಣನಿ ಗೇನಾದ್ರು ಹೆಲ್ಪ್ ಆಗಬಹುದೇನೋ ಅಂತ ಬರೆದವರ ಹೆಸರು ಹಿಡಿದು ಫೇಸ್ಬುಕ್‌ನಲ್ಲಿ ಹುಡುಕಿದವಳಿಗೆ ಕಂಡದ್ದು ಒಂದು ಮುಖ, ಹತ್ತಾರು ಭಾವನೆಗಳು!
ತನ್ನದೇ ಕುಟುಂಬ. ಆಗೇನು ಅನಿಸದಿದ್ದರೂ ಆ ಮುಖ ಮರೆಯುವುದು ಕಷ್ಟ ಅನ್ನಿಸುವ ಹಂತದವರೆಗೆ ಇಷ್ಟ ಅನಿಸಿತು.
ಅನಿಸಿಕೆಗಳೆಲ್ಲ ನಿಜ ಆಗಲ್ಲ ಅನ್ನೋ ಗೆಳತಿಯ ಮಾತು. ಅಲ್ಲಿಗೆ ಬಿಟ್ಟರೂ ಒಳಗೇ ಏನೋ ತಲ್ಲಣ. ಡಿಗ್ರಿ ಮುಗಿಸಿ ಪಿಜಿ ಸೇರಿದೆ. ಅಲ್ಲಿಯ ಒದ್ದಾಟ, ಕಿತ್ತಾಟ ಖುಷಿ ದುಃಖದ ಕ್ಷಣದ ಮಧ್ಯದಲ್ಲಿ ಅವನ ನೆನಪು ಮರೆತರೂ, ಮರೆಯದಂತೆ ಆಗಾಗ ಇಣುಕಿ
ಹೋಗುತ್ತಿತ್ತು.
ಯಾವ ಕಾಲೇಜಿನಲ್ಲಿ ಮೀಡಿಯಾ ಪ್ರೋಗ್ರಾಮ್ ಇದೆ, ಅಂತಂದಾಗ ಹೇಗೋ ಮಾಡಿ ಅವಕಾಶ ಗಿಟ್ಟಿಸಿ, ಹೋಗಿ ಅಲ್ಲಿ ಹುಡುಕಿ ದರೂ ಫೇಸ್ ಬುಕ್‌ನಲ್ಲಿ ಕಂಡ ಮುಖ ಕಾಣಲೇ ಇಲ್ಲ. ಕಳೆದು ಹೋಗಿಯೇ ಬಿಟ್ಟಿದ್ದೇ ನಿನ್ನಲ್ಲೇ. ನನಗದರ ಅರಿವೂ ಇರಲಿಲ್ಲ. ಇದ್ದರೂ ಆಗದಕ್ಕೊಂದು ಹೆಸರಿಡಬೇಕು ಅನಿಸಿರಲಿಲ್ಲ.
ಛೇ ಇದೇನು ಹೀಗೆ ಅನ್ನಿಸಿದರೂ ಅಂತಹ ಬೇಜಾರು ಇರಲಿಲ್ಲ. ಆಗೀಗ ನಿನ್ನ ಹುಡುಕಾಟ, ಗೆಳೆಯರ ಒಡನಾಟದೊಂದಿಗೆ ಕಾಲೇಜು ಮುಗಿಯುವ ಹಂತಕ್ಕೆ ಬಂದಿತ್ತು. ಪಿಜಿ ಕೊನೆಯ ದಿನಗಳು. ಇಂಟರ್ನ್‌ಶಿಪ್‌ಗೆ ಬೆಂಗಳೂರಿಗೆ ಬಂದಾಯಿತು. ಒಂದಷ್ಟು ವಾರಗಳ ಬಳಿಕ ಸಿಕ್ಕಿದು ಹೊರಗೆ ಸುತ್ತುವ ಕೆಲಸ. ಆಗ ಒಂದು ಬಾರಿ ಮಿಂಚಿ ಮರೆಯಾಗಿತ್ತು ಮತ್ತದೇ ಮುಖ. ಕನಸಿನ ಹುಡುಗ
ಕಣ್ಣೆದುರು ಸಿಕ್ಕು ಮರೆಯಾದಾಗ ಮತ್ತೆ ಕಲ್ಪನೆ ಅಂತಂದುಕೊಂಡರೂ, ಅದುವೇ ನಿಜ ಎಂದು ಆಗ ತಿಳಿದಿರಲಿಲ್ಲ.
ಫೋನ್ ನಂಬರ್ ಸಿಕ್ಕಿದಾಗ
ಹೀಗೆ ದಿನ ಕಳೆದಿತ್ತು. ಎಲ್ಲಾ ಮರೆತು ಹೋಯಿತು ಅನ್ನುವಾಗ ಮತ್ತೆ ಅದ್ಯಾರದೋ ಮುಖಾಂತರ ಅವನದೇ ನಂಬರ್ ಕೈ ಸೇರಿತ್ತು. ಅಲ್ಲಿಯವರೆಗೂ ಬರಹಗಳನ್ನು ಓದಿದವಳಿಗೆ ಧ್ವನಿ ಕೇಳುವ ಭಾಗ್ಯ. ಮಾತಾಡುವ ಅಂದುಕೊಂಡರೂ ಮಾತು ಬಾರದ ಮೂಕಿಯಂತಾಗಿದ್ದವಳಿಗೆ ಜಾಬ್ ಅನ್ನೋದು ಆ ಕ್ಷಣಕ್ಕೆ ಸಿಕ್ಕ ಹುಲುಕಡ್ಡಿ. ಅಬ್ಬೊ ಅವನೇ ಇವನಾ? ಇವನಲ್ಲವಾದ್ರೆ ಏನು ಮಾಡೋದು. ಇಲ್ಲಿಯವರೆಗೂ ಬರೀ ಫೋಟೋ ಖುಷಿಯಾಗಿತ್ತು.
ಇನ್ನಿಲ್ಲಿ ಜಾಬ್ ಆದ್ರೆ ನನ್ನೆದುರೇ ಇರುವ ಇವನ ಮುಖ ನೋಡಿ ಬಾಕಿ ಆದ್ರೆ. ಥು, ಹೇಳಿ ಕೇಳಿ ನಾನು ನನ್ನಿಷ್ಟದ್ದು ಸಿಕ್ಕರೆ ಮೈ ಮರೆಯೋ ಪ್ರಾಣಿ. ಇನ್ನು ಇಷ್ಟ ಪಟ್ಟವ ಎದುರೇ ಇರಬೇಕಾದರೆ ಸುಮ್ನಿರೋಕಾಗತ್ತಾ ನೀವೇ ಹೇಳಿ? ಅಂತೂ ಮಾತಾಡಿದ್ದ. ಏನು ಮಾತನಾಡಿದೆ ಅಂದರೆ ಒಂದೂ ಗೊತ್ತಿಲ್ಲ. ಅವನೇನು ಕೇಳಿದನೋ, ನಾನೇನು ಹೇಳಿದೆನೋ, ಅವನು ‘ಬನ್ನಿ ನೋಡುವಾ
ಮಾತಾಡುವಾ ಅಂದಿದ್ದಷ್ಟೇ…’ ಕೈಗೆ ದೂದ್ ಪೇಡ ಸಿಕ್ಕಷ್ಟೇ ಖುಷಿಯಾಯ್ತು.
ನನ್ನ ಕನಸು ನನ್ನ ನನಸು
ಹೂ, ಕೆಲಸವೂ ಸಿಕ್ತು. ಆಫೀಸಿನಲ್ಲಿ ಅವನ ಪಕ್ಕದ ಸೀಟು! ನಿನ್ನ ಮುದ್ದು ಮುಖಕ್ಕೆ, ಮುಗ್ಧ ಮಗುವಿನಂತಹ ಮನಸಿಗೆ, ಮತ್ತೆ ಮತ್ತೆ ಬಿದ್ದು ಹೋಗುತ್ತಿದ್ದೆ. ನಿನ್ನ ಒಂದು ಮುಗುಳು ನಗೆಗಾಗಿ ದಿನ ರಾತ್ರಿ ಕಾತರಿಸಿ ಕಾಯುತ್ತಿದ್ದೆ. ಇದಾದ ಕೇಲವೇ ದಿನದಲ್ಲಿ ಪ್ರೇಮ ನಿವೇದನೆ ಮಾಡಿದಾಗ ಹಿಂದೆ-ಮುಂದೆ ನೋಡುವುದಕ್ಕೆ ಕಾರಣಗಳೇ ಇರಲಿಲ್ಲ. ನೀನೇ ಬೇಕು ಅಂತ ಹುಡುಕಿ ಹುಡುಕಿ
ಬಂದವಳಿಗೆ ಇಗೋ ನಿಂಗೆ ಅಂತ ಬಯಸಿದ್ದು ಅದಾಗದೇ ಬಂದು ನಿಂತರೆ ಹೇಗಾಗಬೇಡ! ಅಂತೂ ಇಂತೂ ಖುಷಿ ಖುಷಿ ದಿನಗಳ ಒಡತಿ ನಾನು.
ನಾನು ನನ್ನವನು ಅಷ್ಟೇ ನನ್ನ ಪ್ರಪಂಚ. ಅಪರಂಜಿಯಂತವನು ನನ್ನವನು. ಮೊಗೆದು ಮೊಗೆದು ಕೊಟ್ಟಷ್ಟು ಮುಗಿಯದ ಪ್ರೀತಿಯ ಒರತೆ ಅವನು. ಅಷ್ಟು ಕೇರಿಂಗ್, ಅಷ್ಟು ಶೇರಿಂಗ್. ನಾನೊಂದು ಬಾರಿ ಅತ್ತರೆ ಹತ್ತು ಬಾರಿ ನೋಯುವ ಮನಸಿನವನು. ಅಪರಂಜಿ ಚಿನ್ನ ನನ್ನವನು. ಅಷ್ಟು ಮುದ್ದು. ಹೇಳಿದಷ್ಟು ಮುಗಿಯದು. ಒಟ್ಟಿಗೇ ಕಳೆದ ಸಮಯ ಕಿಂಚಿತ್ತಾದರು ಅದರೊಳಗೆ ದೊರೆತ ಪ್ರೀತಿ ಮಾತ್ರ ಹಿರಿದು.
ಇವನೊಂದಿಗೆ ಜೀವನಪೂರ್ತಿ ಕಳೆಯಬೇಕು. ದಿನ ದಿನವೂ ಹೊಸ ಹೊಸತಾಗಿ ಪ್ರೀತಿಸಬೇಕು. ನಾನು ಮತ್ತು ನನ್ನವನು ಮಾತ್ರ ನನ್ನ ಕನಸು ನನ್ನ ನನಸು. ಬೇರಾರಿಗೂ ಅಲ್ಲಿ ಜಾಗವಿಲ್ಲ. ಹ್ಮ್, ಇನ್ನು ಸ್ವಲ್ಪವೇ ಕಾಲ. ಮತ್ತೆ ಇಷ್ಟು ದಿನಗಳ ಕನಸು
ನನಸಾಗುವ ಸಮಯ. ಮನೆಯವರ ಒಪ್ಪಿಗೆಯೊಂದಿಗೆ ಮನಸುಗಳೆರಡೂ ಅಪರಂಜಿಯಾಗುವ ಸಮಯ.
ಅಪರಂಜಿ ಚಿನ್ನವು… ನನ್ನ ಮನದ ಹುಡುಗನು!
-ಪನ್ನಾ