ಅಜಯ್
ದಾಸರ ನೆನೆಯಲು ಶುಭದಿನವು
ಇಂದು ಪುರಂದರ ದಾಸರ ಆರಾಧನೆ. ಕರ್ನಾಟಕ ಸಂಗೀತ ಪಿತಾಮಹ ಮತ್ತು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕರ್ನಾಟಕ ಸಂಗೀತ ಪರಂಪರೆಗೆ ಬುನಾದಿ ಹಾಕಿಕೊಟ್ಟ, ಸ್ವತಃ ಕೀರ್ತನಕಾರರೂ ಆಗಿದ್ದ ಪುರಂದರದಾಸರು, ಈ ಜಗತ್ತಿಗೆ ಕರ್ನಾಟಕ ನೀಡಿದ ದಾಸರತ್ನ.
ದಕ್ಷಿಣ ಭಾರತದಾದ್ಯಂತ ಇಂದಿಗೂ ‘ಕರ್ನಾಟಕ ಸಂಗೀತ’ವೆಂದೇ ಪರಿಚಿತಗೊಂಡಿರುವ ಸಂಗೀತ ಪ್ರಕಾರಕ್ಕೆ ಪುರಂದರ ದಾಸರ ಕೊಡುಗೆ ಅಪಾರ. ಕರ್ನಾಟಕ ರಾಜ್ಯವೆಂದೇ ಕರೆಯಲ್ಪಡುತ್ತಿದ್ದ ವಿಜಯನಗರ ಸಾಮ್ರಾಜ್ಯದಲ್ಲಿ ಪುರಂದರ ದಾಸರು ಅಧ್ಯಾತ್ಮ ಸೇವೆ ಮಾಡುತ್ತಾ, ಕೀರ್ತನೆಗಳನ್ನು ರಚಿಸುತ್ತಾ, ಸಂಗೀತ ಪರಂಪರೆಯನ್ನು ಬೆಳೆಸಿದರು ಎಂಬ ವಿಚಾರ ವಿಸ್ಮಯ ಹುಟ್ಟಿಸು ವಂತಹದ್ದು.
ಕರ್ನಾಟಕ ಸಂಗೀತ ಕಲಿಯುವ ವಿದ್ಯಾರ್ಥಿಗಳೆಲ್ಲರೂ, ಭಾಷೆಯ ಭೇದವಿಲ್ಲದೆ, ಪುರಂದರ ದಾಸರ ಗೀತೆ ಮತ್ತು ಸ್ವರಜತಿಗಳಿಂದ ತಮ್ಮ ಪಾಠವನ್ನು ಆರಂಭಿಸುವ ಪದ್ಧತಿ ಇಂದಿಗೂ ಉಳಿದುಕೊಂಡಿರುವುದ ಸಹ ಪುಟ್ಟ ವಿಸ್ಮಯವನ್ನು ಹುಟ್ಟಿಸುತ್ತದೆ. ದಾಸ ಸಾಹಿತ್ಯ ಪ್ರಚಾರ ಮಾಧ್ಯಮ – ಶ್ರೀನಿವಾಸ ಉತ್ಸವ ಬಳಗದಿಂದ ಪುರಂದರ ದಾಸರ ಏಕಶಿಲಾ ವಿಗ್ರಹವನ್ನು ಬಸವನಗುಡಿಯ ನ್ಯಾಷನಲ್ ಕಾಲೇಜು ಎದುರಿನ ಉತ್ತರಾದಿಮಠದ ಲಕ್ಷ್ಮೀನರಸಿಂಹ ದೇವ ಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಪುರಂದರ ದಾಸರ ಪ್ರತಿಮೆಯ ಪ್ರತಿಷ್ಠಾಪನೆಯ ಮೊದಲನೆ ವರ್ಷದ ಸಂಭ್ರಮದಲ್ಲಿ ಇಂದು ಪುರಂದರದಾಸರ ಆರಾಧನಾ ಮಹೋತ್ಸವವನ್ನು ಗಾನ-ಜ್ಞಾನ ಯಜ್ಞದೊಂದಿಗೆ ಆಚರಿಸಲಾಗುವುದು. ಬೆಳಿಗ್ಗೆೆ 8.30 ರಿಂದ ಪುರಂದರದಾಸರ ನವರತ್ನ ಮಾಲಿಕೆ ಕೃತಿಗಳ ಗೋಷ್ಠಿ ಗಾಯನದೊಂದಿಗೆ ಪುರಂದರ ದಾಸರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕದೊಂದಿಗೆ ಆರಂಭ ಗೊಳ್ಳುವುದು.
ನಾಡಿನ ಹಿರಿಯ ಸಂಗೀತ ಕಲಾವಿದರು ಮತ್ತು ವಿದ್ವಾಂಸರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ವಿಶೇಷ. ಸಂಜೆ 4.00 ರಿಂದ ಗುರು ಗುಹ ಸಂಗೀತ ಮಹಾವಿದ್ಯಾಲಯ, ಅನುಗ್ರಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪುರಂದರ ದಾಸರ ಆರಾಧನೆ
****
ಹಂಪೆಯಲ್ಲಿ ತುಂಗಭದ್ರಾ ನದಿ ದಡದಲ್ಲಿರುವ ಪುರಂದರ ಮಂಟಪ ಇಂದಿನ ದಿನವೇ ಶುಭದಿನವು ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ ಇಂದಿನ ಯೋಗ ಶುಭಯೋಗ ಇಂದಿನ ಕರಣ ಶುಭ ಕರಣ ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!
– ಪುರಂದರ ದಾಸರು
ವಿದ್ವಾನ್ ಜೆ.ಎಸ್. ಶ್ರೀಕಂಠಭಟ್ ನೇತೃತ್ವದಲ್ಲಿ ಪುರಂದರದಾಸರ ನವರತ್ನಮಾಲಿಕ ಕೃತಿಗಳ ಗೋಷ್ಠಿ ಗಾಯನ. ನಂತರ ಸಭಾ
ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕ ಗಾನಕಲಾ ಭೂಷಣ ವಿದ್ವಾನ್ ಆರ್.ಕೆ. ಪದ್ಮನಾಭ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಪುರಂದರ ದಾಸರ ಆರಾಧನೆಯ ಈ ಸಂದರ್ಭದಲ್ಲಿ ನಾಡಿನಾದ್ಯಂತ ಇಂದು ಅವರು ರಚಿಸಿದ ಕೀರ್ತನೆಗಳನ್ನು ಹಾಡುವ
ಮೂಲಕ ಆ ದಾಸಶ್ರೇಷ್ಠರನ್ನು ನೆನಪಿಸಿಕೊಳ್ಳುತ್ತಿರುವುದು ವಿಶೇಷ.
ಪುರಂದರ ದಾಸರ ಜೀವನ
ಜನನ : ಕ್ರಿಶ 1484
ಸ್ಥಳ : ತೀರ್ಥಹಳ್ಳಿ ಸನಿಹದ ಕ್ಷೇಮಪುರ / ಪುರಂದರಗಡ
ತಂದೆ : ವರದಪ್ಪ ನಾಯಕ
ತಾಯಿ : ಲೀಲಾವತಿ ಬಾಯಿ
ಪೂರ್ವಶ್ರಮದ ಹೆಸರು: ಶ್ರೀನಿವಾಸ ನಾಯಕ
ವೃತ್ತಿ : ಚಿನ್ನ, ಬೆಳ್ಳಿ, ವಜ್ರದ ವ್ಯಾಪಾರಿ
ಅಡ್ಡಹೆಸರು : ನವಕೋಟಿ ನಾರಾಯಣ
ದೇಹಾಂತ್ಯ : ಕ್ರಿ.ಶ.1565, ಪುಷ್ಯ ಮಾಸದ ಅಮಾವಾಸ್ಯೆ
ರಾಜಾಶ್ರಯ : ಹಂಪೆಯ ಅರಸರು
ಗುರು : ವ್ಯಾಸರಾಜ ತೀರ್ಥರು
***
ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!
– ಪುರಂದರ ದಾಸರು
ಅಲ್ಲಿದೆ ನಮ್ಮ ಮನೆ, ಇಲ್ಲಿರುವುದು ಸುಮ್ಮನೆ!
ಕದಬಾಗಿಲಿರಿಸಿದ ಕಳ್ಳ ಮನೆ ಇದು
ಮುದದಿಂದಲೋಡ್ಯಾಡೋ ಸುಳ್ಳು ಮನೆ
ಇದಿರಾಗಿ ವೈಕುಂಠವಾಸಮಾಡುವಂತ
ಪದುಮನಾಭನ ದಿವ್ಯ ಬದುಕುಮನೆ ॥
ಮಾಳಿಗೆ ಮನೆಯೆಂದು ನೆಚ್ಚಿಕೆಡಲುಬೇಡ
ಕೇಳಯ್ಯ ಹರಿಕಥೆಶ್ರವಣಂಗಳ
ನಾಳೆ ಯಮದೂತರು ಬಂದೆಳೆದೊಯ್ವಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ ॥
ಮಡದಿ ಮಕ್ಕಳು ಎಂಬ ಹಂಬಲ ನಿನಗೇಕೋ
ಕಡುಗೊಬ್ಬುತನದಿ ನಡೆಯದಿರು
ಒಡೆಯ ಶ್ರೀ ಪುರಂದರ ವಿಠಲನ ಚರಣವ
ದೃಢಭಕ್ತಿಯಲಿ ನೀ ನೆನೆಸಿಕೊ ಮನುಜ ॥