ಮಹಾದೇವ ಬಸರಕೋಡ
ಪ್ರಾಮಾಣಿಕತೆಯನ್ನು ತಳಪಾಯವನ್ನಾಗಿಸಿಕೊಂಡು, ಈ ಬದುಕನ್ನು ಕಟ್ಟಲು ಪ್ರಯತ್ನಿಸಬೇಕು. ಆಗಲೇ ಬದುಕಿ ನಲ್ಲಿ ನೆಮ್ಮದಿ, ಆತ್ಮವಿಶ್ವಾಸ ಬೆಳೆಯಲು ಸಾಧ್ಯ.
ಬದುಕು ಸಮೃದ್ಧಗೊಳ್ಳಲು ಸುಂದರವಾಗಿ ರೂಪಗೊಳ್ಳಲು ನಾವು ದೈನಂದಿನ ಆಚಾರ ವಿಚಾರಗಳಲ್ಲಿ ಹಲವಾರು ಆದರ್ಶ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಅಂತಹ ಅಪರೂಪದ ಮೌಲ್ಯಗಳಲ್ಲಿ ಪ್ರಾಮಾಣಿಕತೆ ಅತ್ಯಂತ ಮಹತ್ತರ. ಪ್ರಾಮಾಣಿಕತೆ ಎನ್ನುವುದು ಒಂದು ಆದರ್ಶವಾಗಿದ್ದು ಅದು ನಂಬಿಕೆಗೆ ಅರ್ಹವಾದದ್ದು.
ಬದುಕಿನ ಬಹುತೇಕ ಸಂದರ್ಭಗಳಲ್ಲಿ ನಾವೆಲ್ಲ ಪ್ರಾಮಾಣಿಕರಾಗಿರಬೇಕೆಂದು ಬಯಸುತ್ತೇವೆ ಯಾದರೂ ಪ್ರಸಿದ್ಧಿಗಾಗಿ,
ಯಶಸ್ಸಿಗಾಗಿ ನಮ್ಮ ಲಾಭಕ್ಕಾಗಿ ಅದನ್ನು ಪಾಲಿಸುವಲ್ಲಿ ವಿಫಲರಾಗುವ ಸಾಧ್ಯತೆ ಹೆಚ್ಚು. ನಮ್ಮ ಪ್ರಯತ್ನಗಳಲ್ಲಿ ಪ್ರಾಮಾ
ಣಿಕತೆ ಇದ್ದಾಗ ಮಾತ್ರ ಬದುಕು ಸಮೃದ್ಧಗೊಳ್ಳಬಲ್ಲದು. ಯಶಸ್ಸಿನ ದಡ ಸೇರಬಲ್ಲದು ಎಂಬುದು ಮಾತ್ರ ಸತ್ಯಸಂಗತಿಯಾಗಿದೆ.
ಮಕ್ಕಳಿಲ್ಲದ ಒಬ್ಬ ರಾಜ ತನ್ನ ಮುಪ್ಪಿನ ಸಂದರ್ಭದಲ್ಲಿ ಪದತ್ಯಾಗ ಮಾಡಿ ಒಬ್ಬ ಯೋಗ್ಯ, ಸಮರ್ಥ, ಪ್ರಾಮಾಣಿಕ
ಯುವಕನನ್ನು ತನ್ನ ರಾಜ್ಯಕ್ಕೆ ಯುವರಾಜನನ್ನು ಆಯ್ಕೆ ಮಾಡಲು ನಿರ್ಧರಿಸಿ ಡಂಗುರ ಸಾರಿದ. ರಾಜನಾಗಲು ಬುಸುವ ಯುವಕರೆಲ್ಲ ನಿಗದಿ ಪಡಿಸಿದ ದಿದಂದು ಆಸ್ಥಾನಕ್ಕೆ ಬರುವಂತೆ ತಿಳಿಸಿದ. ಬಹಳಷ್ಟು ಯುವಕರು ಅತ್ಯಂತ ಉತ್ಸಾಹ ಮತ್ತು ಸಡಗರದಿಂದ ಆಸ್ಥಾನಕ್ಕೆ ಆಗಮಿಸಿದರು. ಅವರನ್ನೆಲ್ಲ ಉದ್ದೇಶಿಸಿ ‘ನೀವು ರಾಜನಾಗಲು ಬಯಸಿ ಬಂದಿರುವುಕ್ಕೆ ಸ್ವಾಗತ. ನಾನು ನಿಮಗೆ ಒಂದು ಸಣ್ಣ ಸ್ಪರ್ಧೆಯೊಂದನ್ನು ಏರ್ಪಡಿಸುತ್ತೇನೆ.
ಅದರಲ್ಲಿ ಯಾರು ಉತ್ತಮ ಸಾಧನೆಯನ್ನು ತೋರುತ್ತಿರೋ ಅವರನ್ನು ರಾಜನನ್ನಾಗಿ ಮಾಡುವೆ’ ಎಂದು ಹೇಳಿದ. ತನ್ನ ಸೇವಕರನ್ನು ಕರೆದು ಅವರಿಗೆಲ್ಲ ಮೊದಲೇ ಸಿದ್ದಪಡಿಸಿ ಪೊಟ್ಟಣಗಳನ್ನು ಕೊಟ್ಟು ಇದರಲ್ಲಿ ಕೆಲವು ಹೂವಿನ ಬೀಜಗಳಿವೆ. ಒಂದು ತಿಂಗಳ ಕಾಲಾವಧಿಯಲ್ಲಿ ಯಾರು ಇವುಗಳನ್ನು ನೆಟ್ಟು ನೀರೆರೆದು ಪೋಷಿಸಿ ಚೆನ್ನಾಗಿ ಬೆಳೆಸುವಿರೋ, ಯಾರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ ಅವರಿಗೆ ರಾಜನಾಗುವ ಸುಯೋಗವಿದೆ ಎಂದು ಹೇಳಿ ಅವರನ್ನು ಒಂದು ತಿಂಗಳ ನಂತರ ಮತ್ತೆ ಬರುವಂತೆ ತಿಳಿಸಿ ಬಿಳ್ಕೊಟ್ಟ.
ಯುವಕರೆಲ್ಲ ತಮ್ಮ ತಮ್ಮ ಊರಿಗೆ ತೆರಳಿ ಫಲವತ್ತಾದ ಮಣ್ಣು, ಮರಳು ಸಂಗ್ರಹಿಸಿ ದೊಡ್ಡದಾದ ಹೂದಾನಿಗಳಲ್ಲಿ ನೆಟ್ಟು
ಪೋಷಿಸತೊಡಗಿದರು. ಎಳೆ ಬಿಸಿಲಿನಲ್ಲಿ ಅವುಗಳನ್ನು ಇಟ್ಟು ಅವಶ್ಯಕತೆ ಇರುವಷ್ಟು ಗೊಬ್ಬರ, ನೀರು ಹಾಕಿ ತುಂಬಾ ಶ್ರದ್ಧೆೆ ಯಿಂದ ನೋಡಿಕೊಳ್ಳತೊಡಗಿದರು. ಎಲ್ಲರ ಗಿಡಗಳು ಸುಂದರವಾದ ಹೂಗಳನ್ನು ಬಿಟ್ಟು ನಳನಳಿಸತೊಡಗಿದವು. ಒಬ್ಬ ಯುವಕನ ಬೀಜಗಳು ಮಾತ್ರ ಮೊಳಕೆಯೊಡೆಯಲೇ ಇಲ್ಲ. ಅವನು ಅದೆಷ್ಟೇ ಶ್ರದ್ಧೆ, ಶ್ರಮ, ಪ್ರೀತಿ ತಾಳ್ಮೆಯಿಂದ ಪ್ರಯತ್ನಿಸಿದರೂ ಯಾವುದೇ ಯಾವುದೇ ಸಸಿ ಬೆಳವಣಿಗೆಯಾಗಲೇ ಇಲ್ಲ.
ಅವನು ತನ್ನ ತಂದೆಯೊಂದಿಗೆ ತನ್ನ ಪರಿಸ್ಥಿತಿಯನ್ನು ತಿಳಿಸಿದ. ಅವನ ತಂದೆ ಅವನನ್ನು ಕುರಿತು ‘ನೀನು ನಿನ್ನ ಕೈಲಾದ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವೆ. ಅದನ್ನೆ ಮುಂದುವರೆಸು. ಚಿಂತಿಸದೆ ತಿಂಗಳು ಮುಗಿಯುವವರೆಗೆ ಆರೈಕೆ ಯನ್ನು ಮಾಡುತ್ತಿರು. ಉಳಿದದ್ದೆಲ್ಲ ದೇವರ ನಿರ್ಧಾರಕ್ಕೆ ಬಿಡು’ ಎಂದು ಸಮಾಧಾನ ಹೇಳಿದ.
ಒಂದು ತಿಂಗಳು ಕಳೆದ ನಂತರ ಎಲ್ಲರೂ ಆಸ್ಥಾನಕ್ಕೆ ತಾವು ಬೆಳೆಸಿದ ಹೂವಿನ ಗಿಡಗಳೊಂದಿಗೆ ಬಂದರು. ಯುವಕನ ಹೊರತಾಗಿ ಎಲ್ಲರ ಗಿಡಗಳು ತುಂಬಾ ಸುಂದರವಾದ ಹೂಗಳನ್ನು ಹೊತ್ತು ನಳನಳಿಸುತ್ತಿದ್ದವು. ಇವನನ್ನು ನೋಡಿ ಕೆಲವರು ಅಪಹಾಸ್ಯ
ಮಾಡಿದರು. ರಾಜ ಎಲ್ಲರ ಗಿಡಗಳನ್ನು ನೋಡಿ ಸಂತಸಪಟ್ಟ. ಈ ಯುವಕನ್ನು ನೋಡಿ ‘ಎಲ್ಲರೂ ಅದೆಷ್ಟು ಚೆನ್ನಾಗಿ ಗಿಡಗಳನ್ನು
ಬೆಳೆಸಿದ್ದಾರೆ. ನಿನಗೇನಾಯಿತು?’ ಎಂದು ಪ್ರಶ್ನಿಸಿದ.
ಯುವಕ ವಿನಯ ದಿಂದ ‘ಕ್ಷಮಿಸಿ ಮಹಾಪ್ರಭು ನಾನು ಶ್ರದ್ಧೆ, ಪ್ರಾಮಾಣಿಕತೆಯಿಂದಲೇ ಪ್ರಯತ್ನಪಟ್ಟಿರುವೆ. ಆದರೆ ತಾವು
ಕೊಟ್ಟ ಬೀಜಗಳು ಮೊಳಕೆಯೊಡೆಯಲೇ ಇಲ್ಲ.’ ಎಂದು ಹೇಳಿದೆ. ರಾಜ ಶಾಂತಚಿತ್ತನಾಗಿ ಆಲಿಸಿ ‘ನೀನೇ ನನ್ನ ಪರೀಕ್ಷೆಯಲ್ಲಿ ಗೆದ್ದದ್ದು. ನೀನೇ ನನ್ನ ರಾಜ್ಯದ ಮುಂದಿನ ಮಹಾರಾಜ’ ಎಂದಾಗ ಯುವಕನಿಗೆ ತುಂಬಾ ಆಶ್ಚರ್ಯವಾಯಿತು. ಉಳಿದರೆಲ್ಲ ‘ಅದು ಹೇಗೆ ಸಾಧ್ಯ? ಅವನು ಗಿಡಗಳನ್ನು ಬೆಳೆಸುವಲ್ಲಿ ವಿಫಲನಾಗಿದ್ದಾನೆ’ ಎಂದರು.
ಮಹಾರಾಜ ‘ನಾನು ನಿಮಗೆಲ್ಲ ಬೆಂದ ಬೀಜಗಳನ್ನು ನೀಡಿದ್ದೆ. ಅವು ಹೇಗೆ ಮೊಳಕೆಯೊಡೆಯಲು ಸಾಧ್ಯ? ನೀವೆಲ್ಲ ಬೇರೆ ಬೀಜಗಳನ್ನು ತಂದು ಬೆಳೆಸಿದ್ದೀರಿ. ಅವನು ಮಾತ್ರ ಪ್ರಾಮಾಣಿಕತೆಯಿಂದ ನಾನು ಹೇಳಿದ ಕೆಲಸ ಮಾಡಿದ್ದಾನೆ. ಅವನು ರಾಜನಾಗಲು ಸಮರ್ಥ’ಎಂದು ಅವನಿಗೆ ಪಟ್ಟಾಭಿಷೇಕ ಮಾಡಿದ. ಇದು ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಜಯ. ನಮ್ಮಲ್ಲಿ ಪ್ರಾಮಾಣಿಕತೆ ಇರದೇ ಇದ್ದರೆ ಈ ಜೀವನವು ಅಪೂರ್ಣವೇ ಸರಿ. ಅವರಿವರನ್ನು ವಂಚಿಸಿ ಲಾಭ ಪಡೆಯಲು ಪ್ರಯತ್ನಿಸುವುದು
ಸೋಲಿಗೆ ಕಾರಣವಾಗುವುದಲ್ಲದೆ ನಮಗೆ ಕಳಂಕವನ್ನು ತರಬಲ್ಲದು.
ಸತ್ಯದ ಒಡನಾಟ ಮತ್ತೆ ಸಕ್ಕರೆ ತುಪ್ಪ ಸತ್ಯವಿಲ್ಲದವರ ಒಡನಾಟ ಬೇಲಿಯ ಒತ್ತಿಯಂತಿಹುದು ಸರ್ವಜ್ಞ ಎಂದು ಸರ್ವಜ್ಞ ಹೇಳುವಂತೆ ಪ್ರಾಮಾಣಿಕತೆ ಮತ್ತು ಪ್ರಾಮಾಣಿಕ ಪ್ರಯತ್ನವನ್ನು ಯಾವಾಗಲೂ ಯಶಸ್ಸು, ನೆಮ್ಮದಿ, ಸಂತಸ ಸಮೃದ್ಧಿ
ಹಿಂಬಾಲಿಸುತ್ತವೆ. ನಾವು ನಮ್ಮ ನೆಡೆ ನುಡಿಗಳಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು. ನಮ್ಮವರ ಜತೆ ನಂಬಿಕೆಯ ಸೇತುವೆಯನ್ನು ನಿರ್ಮಿಸಿಬೇಕು. ನಾವು ಇತರರೊಂದಿಗೆ ಮಾತ್ರವಲ್ಲದೆ ನಮ್ಮೊಂದಿಗೂ ಕೂಡ ಪ್ರಾಮಾಣಿಕರಾಗಿರಬೇಕಾದ ಪಣ ತೊಡಬೇಕು. ನಾವು ನೀಡಿದ ಭರವಸೆಗಳನ್ನು ಪೂರ್ಣಗೊಳಿಸುವ ಪ್ರಯತ್ನ ಮಾಡಬೇಕು.
ಅದು ನಮ್ಮ ಬದುಕನ್ನು ಮತ್ತಷ್ಟು ಎತ್ತರಕ್ಕೇರಿಸಬಲ್ಲದು, ಘನತೆಯನ್ನು ಹೆಚ್ಚಿಸಬಲ್ಲದು. ಸಾರ್ಥಕತೆಯ ಅನುಭವ ನೀಡ ಬಲ್ಲದು.