ರಕ್ಷಿತ ಪ್ರಭು ಪಾಂಬೂರು
ಏನನ್ನಾದರೂ ಸಾಧಿಸಬೇಕು ಎಂಬ ಆಶಯ ಮೊದಲು ಮೂಡಲಿ. ಅದನ್ನು ದಕ್ಕಿಸಿಕೊಳ್ಳುವ ದಾರಿ ಯಾವುದು ಎಂಬುದರ ಶೋಧ ಎರಡನೆಯ ಹೆಜ್ಜೆ. ತಾಳ್ಮೆಯಿಂದ ಆ ದಾರಿಯನ್ನು ಅನುಸರಿಸಿದರೆ, ಗುರಿ ಮುಟ್ಟಲು ಸಾಧ್ಯ. ಮತ್ತು ಇದು ಎಲ್ಲರಿಂದಲೂ ಸಾಧ್ಯ!
ನೀವು ಯಶಸ್ವಿ ವ್ಯಕ್ತಿಯೊಬ್ಬರ ಸಾಧನೆಯ ಮಾತುಗಳನ್ನು ಕೇಳುತ್ತೀರಿ, ಆಗ ನಿಮಗೆ ಏನು ಅನಿಸುತ್ತದೆ? ನಾನು ಇವರ ತರಹವೇ
ಸಾಧನೆ ಮಾಡಬೇಕು. ಜೀವನದಲ್ಲಿ ಗೆಲ್ಲಬೇಕು, ನನ್ನನ್ನು ಅವರ ಹಾಗೆಯೇ ಎಲ್ಲರೂ ಗುರುತಿಸಬೇಕು, ಗೌರವಿಸಬೇಕು ಇತ್ಯಾದಿ, ಇತ್ಯಾದಿ.
ಆದರೆ ಈ ಮನಸ್ಥಿತಿ ಎಷ್ಟು ಸಮಯ ನಿಮ್ಮ ಮನದಲ್ಲಿ ಇರುತ್ತದೆ? ನಿಜ ಹೇಳಿ, ರಾತ್ರಿ ಮಲಗುವ ತನಕ ಅಷ್ಟೇ… ಮರುದಿನ ಎಂದಿನಂತೆ ದಿನಚರಿ ಮುಗಿಯುತ್ತದೆ ಅಲ್ವಾ! ಅಂದರೆ ನಿಮ್ಮ ಸಾಧನೆಯ ಕನಸು? ಇನ್ನೊಬ್ಬರ ಸಾಧನೆಯ ಮೆಟ್ಟಿಲುಗಳನ್ನು
ಕೇಳುವಾಗ, ಮತ್ತೆ ನಮ್ಮ ಕನಸುಗಳ ನೆನಪು. ಬೇರೆಯವರು ಮಾತ್ರ ಯಾಕೆ ಸಾಧನೆ ಮಾಡುತ್ತಾರೆ? ಯಾಕಿದು ನನ್ನಿಂದ ಸಾಧ್ಯ ಇಲ್ಲ? ಕೆಲವು ಕ್ಷಣ ಮಾತ್ರ ಉಕ್ಕಿ ಬರುವ ಆಕ್ರೋಶ. ಸ್ವಲ್ಪ ಸಮಯ ಸರಿದಾಗ ಮತ್ತದೇ ಮಾಮೂಲಿ ಜೀವನ.
ಏನಾದರೂ ಸಾಧನೆ ಮಾಡಬೇಕು ಎಂದು ಅಂದುಕೊಂಡಾಗ ಮೊದಲು ಬರುವ ಯೋಚನೆ – ನನ್ನಿಂದ ಇದು ಸಾಧ್ಯವಾ? ಆಗುತ್ತಾ! ಹೌದು, ನಿಜವೇ… ಸಾಧನೆ ಮಾಡಬೇಕು ಎಂಬ ಭಾವನೆ ಮೊದಲು ನಿಮಗೆ ಬರಬೇಕು. ನಮ್ಮ ಸಮಾಜದಲ್ಲಿ 90% ಜನ ನೆಗೆಟಿವ್ ಆಗಿಯೇ ಇರುತ್ತಾರೆ. ಸುಮ್ನೆ ಒಂದು ಟೆಸ್ಟ್ ಮಾಡಿ ನೋಡಿ. ನಾನು ಬ್ಯುಸಿನೆಸ್ ಮಾಡ್ತೇನೆ ಅಂತ ಹೇಳಿ ನಿಮ್ಮ ಮನೆಯಲ್ಲಿ ಅಥವಾ ಫ್ರೆಂಡ್ಸ್ ಹತ್ರ. ಅವರ ಮೊದಲ ಪ್ರತಿಕ್ರಿಯೆ ಏನು ? ಒಮ್ಮೆ ಕೇಳಿ. ಅವರೆಲ್ಲರೂ ಮೊದಲು ಹೇಳುವುದೇ
‘ಬೇಡ’ ಅಂತ. ಅದು ನಿನ್ನಿಂದ ಆಗಲ್ಲ, ಸಕ್ಸಸ್ ಆಗದಿದ್ರೆ ಏನು ಮಾಡ್ತಿ?, ಇನ್ವೆಸ್ಟ್ ಯಾರು ಮಾಡ್ತಾರೆ? ಹೀಗೆ ಹಲವು ನೆಗೆಟಿವ್ ಪ್ರಶ್ನೆಗಳ ಸುರಿಮಳೆ.
ಇಷ್ಟೇ ಸಾಕು.. ಬ್ಯುಸಿನೆಸ್ ಮಾಡಲು ಹೊರಟವ ಇನ್ನೆಂದೂ ಅತ್ತ ಕಡೆ ತಿರುಗಿಯೂ ನೊಡಲ್ಲ. ಆದರೆ ಜೀವನದಲ್ಲಿ ಸಾಧನೆ ಮಾಡಿದವರ, ಯಶಸ್ಸು ಗಳಿಸಿದವರ ಆತ್ಮಕಥೆಗಳನ್ನು, ಜೀವನ ಚರಿತ್ರೆಯನ್ನು ಓದಿದರೆ ತಿಳಿಯುವುದಿಷ್ಟೆ -ಅವರಿಗೂ ಆರಂಭದಲ್ಲಿ ಸಾಕಷ್ಟು ಪ್ರತಿರೋಧ, ಅಡತಡೆ, ತೊಂದರೆ, ಹೀಯಾಳಿಕೆ, ನೆಗೆಟಿವ್ ಕಮೆಂಟ್, ನಿರುತ್ಸಾಹದ ಮಾತುಗಳು ಬಂದಿ
ದ್ದವು. ಆದರೂ, ಅವರು ಅದನ್ನು ನಿವಾರಿಸಿಕೊಂಡು, ತಮ್ಮದೇ ರೀತಿಯ ಯೋಚನೆಯಲ್ಲಿ ಮುಂದುವರಿದರು. ಅಗತ್ಯ ಎನಿಸಿದಾಗ ಅನುಭವಿಗಳ, ಸ್ನೇಹಿತರ, ಗುರುಗಳ ಮಾರ್ಗ ದರ್ಶನ ಪಡೆದರು. ಆ ಮುಂಚೆ ಯಶಸ್ಸು ಗಳಿಸಿದವರ ಕಥನಗಳನ್ನು ಮನನ ಮಾಡಿ ಕೊಂಡು ಮುಂದುವರಿದರು.
ಮೊದ ಮೊದಲಿಗೆ ಸೋಲು, ಸಣ್ಣ ಮಟ್ಟದ ವಿಫಲತೆ ಬಂದರೂ, ಮುಂದುವರಿದರು, ಸಾಧನೆಯ ದಾರಿಯನ್ನು ಕಂಡು ಕೊಂಡರು, ಯಶಸ್ಸಿನ ಹತ್ತಿರ ಸಾಗಿದರು. ನೀವೂ ಸಹ ಮುಂದುವರಿಯಬೇಕೆಂದರೆ ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ತಾಳ್ಮೆ ಬೇಕು, ಸಮಸ್ಯೆಗಳನ್ನು ನಿಧಾನವಾಗಿ ಪರಿಹರಿಸಿಕೊಳ್ಳುವ ಛಾತಿಯೂ ಬೇಕು. ಆಗ, ಒಂದಲ್ಲ ಒಂದು ದಿನ, ತುಸು ತಡವಾಗಿಯಾದರೂ ಗೆಲುವು ನಿಮ್ಮದಾದೀತು.
ಸಾಧನೆಯ ದಾರಿಗೆ ಕೆಲವು ಟಿಪ್ಸ್
*ಏನು ಸಾಧನೆ ಮಾಡಬೇಕು ಎಂಬುದನ್ನು ಸರಿಯಾಗಿ ಯೋಚಿಸಿ.
*ಯಾವ ರೀತಿ ಮುಂದುವರಿಯಬೇಕು ಎಂಬುದನ್ನು ಪ್ಲಾನ್ ಮಾಡಿ.
*ನೀವು ಸಾಧಿಸ ಬಯಸುವುದನ್ನು ಬರೆದಿಟ್ಟುಕೊಳ್ಳಿ ಮತ್ತು ದಿನಕ್ಕೊಮ್ಮೆ ಓದಿ.
*ನೀವು ಸಾಧಿಸುವ ತನಕ ತಾಳ್ಮೆಯಿರಲಿ. ಆದರೆ ಪ್ರಯತ್ನ ನಿರಂತರವಾಗಿರಲಿ, ಮೊದಲನೇ ಪ್ರಯತ್ನದಿಂದ ಹಿಂದೆ ಸರಿಯಬೇಡಿ.
*ಸಾಧನೆಯ ಹಾದಿಯಲ್ಲಿ ಬರುವ ನೆಗೆಟಿವ್ ಜನರನ್ನು ಬ್ಲಾಕ್ ಮಾಡಿಬಿಡಿ!
*ಕೆಲಸ ಮಾಡಲು ಸಮಯ ಇಲ್ಲ ಎಂದು ಅನಿಸಬಹುದು, ನಿಮಗಾಗಿ ಸಮಯ ಮಾಡಿಕೊಳ್ಳಿ.
*ಯಾವುದಾದರೂ ಒಂದು ವಿಷಯದ ಬಗ್ಗೆ ಓದುತ್ತಿರಿ, ಗೊತ್ತಾಗದಿದ್ರೆ ನೋಡಿ ಕಲಿಯಿರಿ, ಕೇಳಿ ಕಲಿಯಿರಿ.
*ಸರಿಯಾದ ಗುರುಗಳನ್ನು ಆರಿಸಿರಿ. ಅವರ ಸಲಹೆಗಳನ್ನು ಪಾಲಿಸಿ.
*ನಂಗೆ ಸಪೋರ್ಟ್ ಯಾರು ಮಾಡುದಿಲ್ಲ ಎಂದು ಕೊರಗಬೇಡಿ, ಕೆಲವೊಮ್ಮೆ ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳಿ.
*ನನ್ನಿಂದಾಗದು ಎಂಬ ಮಾತು ಬರಲೇಬಾರದು. ಸೋಲಬಹುದು ಆದರೆ ಗೆಲುವಿಲ್ಲ ಎಂದೇನಿಲ್ವಲ್ಲಾ!
*ಸೋಲು ಎಂಬುದು ನಿಮ್ಮಹಾದಿಯಲ್ಲಿ ಅಡ್ಡ ಬರುವ ಸಣ್ಣ ಕಲ್ಲು. ಅದನ್ನು ಸರಿಸಿ ಮುಂದುವರಿದು ನೋಡಿ, ಅದರಾಚೆಗೆ
ಬಣ್ಣಗಳಲ್ಲಿ ಬದುಕಿದೆ.
*ಪ್ರತಿ ದಿನ ರಾತ್ರಿ ಮಲಗುವ ಮುನ್ನ ಸ್ಫೂರ್ತಿ ತುಂಬುವ, ಮೋಟಿವೇಶನಲ್ ವಿಡಿಯೋ ನೋಡಿ. ಇಂತಹ ವಿಡಿಯೋಗಳು ಇಂದು ಸಾಕಷ್ಟು ಸಿಗುತ್ತವೆ. ಟೆಡ್ ಟಾಕ್ ಆಗಾಗ ನೋಡಿ.
*ದೊಡ್ಡ ಕನಸನ್ನು ಕಾಣಿ, ಸಣ್ಣ ಪುಟ್ಟ ಖುಷಿಗಳನ್ನು ಅನುಭವಿಸಿ.
*ಸಮಯವನ್ನು ಹಾಳು ಮಾಡಬೇಡಿ. ಮನರಂಜನೆ ಬೇಕು, ಆದರೆ ಅದಕ್ಕೆ ಮಿತಿ ಇರಲಿ. ವಾರಕ್ಕೆ ಒಂದೆರಡು ಗಂಟೆ ಮಾತ್ರ
ಮನರಂಜನೆಗೆ ಮೀಸಲಿರಲಿ.
*ವಾಟ್ಸಾಪ್, ಫೇಸ್‌ಬುಕ್‌ಗೆ ಪ್ರತಿ ದಿನ ಸಮಯ ಮಿತಿ ಹಾಕಿಕೊಳ್ಳಿ. ಉದಾಹರಣೆಗೆ ಒಟ್ಟು 30 ನಿಮಿಷ ಅಥವಾ 45 ನಿಮಿಷ
ಎಂದು ನಿಮಗೆ ನೀವೇ ನಿರ್ಣಯಿಸಿ. ಉಳಿದ ಸಮಯವನ್ನು ಉತ್ತಮವಾದುದನ್ನು ಓದಲು, ಕೆಲಸ ಮಾಡಲು ಮೀಸಲಿಡಿ.
*ಅನವಶ್ಯಕ ಗಾಸಿಪ್ ಮಾಡಬೇಡಿ, ಬೇರೊಬ್ಬರ ಕುರಿತು ಚಾಡಿಯ ರೂಪದಲ್ಲಿ ಚರ್ಚಿಸಬೇಡಿ.
*ಚಾಡಿ ಹೇಳುವವರನ್ನು ದೂರವಿಡಿ.
*ತುಂಬಾ ಆಯಾಸವಾದಾಗ, ಕೆಲವು ನಿಮಿಷ ವಿಶ್ರಾಂತಿ ಪಡೆಯಿರಿ. ಮತ್ತೆ ಕೆಲಸ ಮುಂದುವರಿಸಿ.
*ಯಶಸ್ವಿ ವ್ಯಕ್ತಿಗಳ ಜೀವನ ಚರಿತ್ರೆಯನ್ನು ತಿಂಗಳಿಗೆ ಒಂದರಂತೆ ಓದಿ. ಅದರಿಂದ ನಷ್ಟವಾಗುವುದಿಲ್ಲ.
*ಇರುವುದೊಂದೆ ಬದುಕು, ಅಂದುಕೊಂಡಂತೆ ಬದುಕಿ.
*ಬದುಕಿದ್ದರೆ ನಾಳೆಗಳು ನಮ್ಮವು ಸಾಧಿಸಲು ಹೊರಟವರಿಗೆ ನೂರೆಂಟು ವಿಘ್ನಗಳು, ಸುಮ್ಮನೆ ಕೂತವನಿಗೆ ತೊಡಕುಗಳೇ
ಬರುವುದಿಲ್ಲ! ಎಲ್ಲವನ್ನೂ ಎದುರಿಸಿದರೆ ಬದುಕು ನಮ್ಮದು, ಗೆಲುವು ನಮ್ಮದೇ.