ಕೊಳೆತ ಮಾಂಸದ ಡಂಪಿಂಗ್ ಯಾರ್ಡ್ ಆದ ಸ್ಥಳೀಯರ ಜಮೀನು
ಹೊಸಕೋಟೆ: ಎನ್.ಹೊಸಹಳ್ಳಿಯ ಕೆರೆಯಂಗಳದ ರಸ್ತೆ ಸೇರಿದಂತೆ ಖಾಲಿ ಇರುವ ಪ್ರದೇಶ ತ್ಯಾಜ್ಯದ ತಿಪ್ಪೆಗುಂಡಿಯಾಗಿದ್ದು,
ಅನುಪಯುಕ್ತ ವಸ್ತುಗಳಿಂದ ಹಿಡಿದು ಕೋಳಿ ಮಾಂಸದ ತ್ಯಾಜ್ಯವನ್ನು ದಾರಿ ಮಧ್ಯೆಯೇ ಬಿಸಾಡಿ ಹೋಗಿದ್ದು, ಇದರಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಎನ್.ಹೊಸಹಳ್ಳಿಯ ಪ್ರದೇಶಕ್ಕೆ ಆಂಧ್ರ ಪ್ರದೇಶ ಬೆಂಗಳೂರು ಸೇರಿದಂತೆ ನಾನಾ ನಗರಗಳಲ್ಲಿ ಸಂಗ್ರಹವಾಗುವ ಕೊಳೆತ ಮಾಂಸದ ತ್ಯಾಜ್ಯವನ್ನು ಟೆಂಪೋ ಮತ್ತು ಲಾರಿಗಳ ಮೂಲಕ ಡ್ರಮ್ಗಳಲ್ಲಿ ಶೇಖರಿಸಿ ಸರಕಾರಿ ಕೆರೆಯಂಗಳ, ಖಾಸಗಿ ಜಮೀನುಗಳಲ್ಲಿ ತಂದು ಸುರಿಯಲಾಗುತ್ತಿದೆ.
ಸ್ಥಳೀಯರ ಕುಮ್ಮಕ್ಕಿನಿಂದ ಸರಕಾರಿ ಕೆರೆಯಂಗಳ, ಕಾಲುವೆ, ಖಾಸಗಿ ಜಮೀನುಗಳಲ್ಲಿ ಕೊಳೆತ ಮಾಂಸದ ತ್ಯಾಜ್ಯ ಬಿಸಾಡು ತ್ತಿದ್ದು, ದುರ್ನಾತ ಬೀರುತ್ತಿದೆ. ಮಾಂಸದಿಂದ ಹರಿಯುತ್ತಿರುವ ರಕ್ತ, ರೆಕ್ಕೆ ಪುಕ್ಕಗಳು ಕೆರೆಗೆ ಸೇರುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಆವರಿಸಿ ಜನ ಜಾನುವಾರುಗು ಜೀವಕ್ಕೀಗ ಅಪಾಯ ಎದುರಾಗಿದೆ.
ಕೊಳೆತ ಮಾಂಸದ ದುರ್ವಾಸನೆಗೆ ಹಳ್ಳಿಗರು ವಾಸ ಮಾಡಲಾಗದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಭಾಗದ ರೇಷ್ಮೆ, ಕೃಷಿ, ಹೈನುಗಾರಿಕೆಯನ್ನು ಬದುಕಾಗಿಸಿಕೊಂಡಿರುವ ರೈತರು, ಇಲ್ಲಿನ ಪರಿಸರ ಮಲೀನವಾಗಿ ಬೆಳೆಗಳು ನೆಲ ಕಚ್ಚುತ್ತಿರುವುದು
ಒಂದೆಡೆಯಾದರೆ ಜನ ಜಾನುವಾರುಗಳು ನಾನಾ ಬಗೆಯ ರೋಗಗಳಿಗೆ ತುತ್ತಾಗಿ ಹೈನೋದ್ಯಮಕ್ಕೆ ಹಿನ್ನೆಡೆ ಉಂಟಾಗಿದೆ.
ರೇಷ್ಮೆೆ ಬೆಳೆಯುವುದರಲ್ಲಿ ಪ್ರಖ್ಯಾತಿ ಪಡೆದಿರುವ ಗ್ರಾಮದಲ್ಲೀಗ ಬೆಳೆಗಳು ರೋಗ ಬಾಧೆಗೆ ನಲುಗಿ ಕಂಟಕ ಎದುರಾಗುವಂತಹ ವಾತಾವರಣವನ್ನು ಸ್ಥಳೀಯರೇ ಸೃಷ್ಟಿಸಿ ಪರಿಸರವನ್ನು ಹಾಳು ಮಾಡುತ್ತಿದ್ದರೂ ಅಧಿಕಾರಿ ವರ್ಗ ಕಣ್ಣು ಮುಚ್ಚಿ ಕುಳಿತಿದೆ.
ಕೆಟ್ಟ ವಾಸನೆ: ಸ್ಥಳೀಯರ ಆಕ್ರೋಶ
ಕೊಳೆತ ಮಾಂಸಕ್ಕಾಗಿ ಕೊಕ್ಕರೆ, ಕಾಗೆ, ಹದ್ದು, ನಾಯಿಗಳ ಹಿಂಡು ದಾರಿಯಲ್ಲಿ ಸಂಚರಿಸುವ ಜನರಿಗೆ ಭೀತಿಯನ್ನು ಹುಟ್ಟಿಸು ತ್ತಿವೆ. ಬೀದಿ ನಾಯಿಗಳು ಒಂದಕ್ಕೊಂದು ಕಿತ್ತಾಟ ನಡೆಸಿ ದಾರಿಹೋಕರ ಮೈ ಮೇಲೆ ಎರಗಿ ಬೀಳುತ್ತಿವೆ. ಕೆಟ್ಟ ವಾಸನೆ ಜನ ವಸತಿ
ಪ್ರದೇಶದ ಮನೆಗಳಿಗೆ ಆವರಿಸಿಕೊಳ್ಳುತ್ತಿದ್ದು, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಗಂಟಲು ಕೆರೆತದಂತಹ ಖಾಯಿಲೆಗಳಿಗೆ
ತುತ್ತಾಗಿ ವೃದ್ಧರು, ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.