Sunday, 5th January 2025

ಶಿವಲಿಂಗ ಅಮರತ್ವದ ಬೋಧನೆ

ಹಿಮಾಲಯದ ಮಡಿಲಲ್ಲಿರುವ ಅಮರನಾಥ ಗುಹೆಯ ಕಥೆಯೇನು? ಶಿವನು ಅಮರತ್ವದ ರಹಸ್ಯವನ್ನು ಪಾರ್ವತಿಗೆ ವಿವರಿಸುವಾಗ ಕೈಗೊಂಡ ಮುನ್ನೆೆಚ್ಚರಿಕೆಗಳೇನು? ಇದರಲ್ಲೇ ಅಡಗಿದೆ ಅಮರನಾಥದ ರಹಸ್ಯ.

ಮಣ್ಣೆ ಮೋಹನ್

ಒಂದು ದಿನ ಪಾರ್ವತಿ-ಪರಮೇಶ್ವರು ಕೈಲಾಸದಲ್ಲಿ ಕುಳಿತು ಚದುರಂಗವಾಡುವಾಗ, ಪಾರ್ವತಿಯ ಗಮನ ಶಿವನ ಕೊರಳೊ ಳಗಿದ್ದ ಕಪಾಲಮಾಲೆಯ ಮೇಲೆ ಬೀಳುತ್ತದೆ. ಅದನ್ನು ವಿಶೇಷ ಆಸ್ಥೆಯಿಂದ ಗಮನಿಸಿದ ಪಾರ್ವತಿ ಸ್ವಾಮಿ, ‘ನೀವು ಭಿಕ್ಷೆ ಎತ್ತುವುದೇ ಕಪಾಲಪಾತ್ರೆಯಿಂದ, ಹಾಗಿದ್ದೂ ಮತ್ತೆ ಕಪಾಲಮಾಲಾ ಧಾರಣೆ ಏತಕ್ಕೆ?’ ಎನ್ನುತ್ತಾಳೆ.

ಆಗ ಶಿವನು ಮುಗುಳ್ನಗುತ್ತಾ ‘ದೇವಿ! ಈ ಕಪಾಲಮಾಲೆಯೊಳಗಿನ ಪ್ರತಿಕಪಾಲವು ನಿನ್ನ ಪೂರ್ವಜನ್ಮದ ರೂಪಗಳು. ಆ ನಿನ್ನ ಪ್ರತಿ ರೂಪದ ನೆನಪಿಗಾಗಿ ಈ ಕಪಾಲಮಾಲೆ ಧರಿಸಿರುವೆ’ ಎನ್ನುತ್ತಾನೆ. ಅಚ್ಚರಿಗೊಂಡ ಪಾರ್ವತಿಯು ತದೇಕಚಿತ್ತದಿಂದ ಆ
ಮಾಲೆಯನ್ನು ನೋಡುತ್ತಾ ‘ಹೌದು ಪ್ರಭುವೇ! ನಾನು ದಕ್ಷ ರಾಜನ ಮಗಳು ದಾಕ್ಷಾಯಣಿಯಾಗಿ, ಕಾತ್ಯಾಯಿನಿಯಾಗಿ, ಭವಾನಿ ಯಾಗಿ, ಉಮೆಯಾಗಿ, ಪರ್ವತರಾಜನ ಮಗಳು ಪಾರ್ವತಿಯಾಗಿ, ಗಿರಿಜೆಯಾಗಿ, ಅಪರ್ಣೆಯಾಗಿ, ಕಾಮಾಕ್ಷಿಯಾಗಿ, ಮೀನಾಕ್ಷಿ ಯಾಗಿ – ಹೀಗೆ ನಾನಾ ರೀತಿಯಾಗಿ ಮರುಹುಟ್ಟು, ಮರುಸಾವು ಪಡೆಯುತ್ತಿದ್ದೇನೆ.

ನೀವು ಅಮರರು. ನನಗೂ ಸಹ ನಿಮ್ಮಂತೆ ಅಮರತ್ವವನ್ನು ಕರುಣಿಸಬಾರದೆ? ಆಗ ನಾನು ಸಹ ಈ ‘ಪುನರಪಿ ಜನನಂ,
ಪುನರಪಿ ಮರಣಂ’ ಸಂಕೋಲೆಯಿಂದ ಮುಕ್ತಗೊಂಡು ಸದಾ ನಿಮ್ಮೊೊಂದಿಗೆ ಈ ಕೈಲಾಸದಲ್ಲೇ ನೆಮ್ಮದಿಯಿಂದ ನೆಲೆ
ನಿಲ್ಲಬಹುದಲ್ಲಾ?’ ಎನ್ನುತ್ತಾಳೆ. ಆಗ ಶಿವನು ‘ಆಗಲಿ ದೇವಿ, ನಿನ್ನ ಈ ಹುಟ್ಟು-ಸಾವುಗಳ ಮುಕ್ತಿಗೊಳಿಸುವ, ಎಂದೂ ಬದಲಾಗದ ತೇಜೋರೂಪವನ್ನು ನಿನಗೆ ನೀಡುವ, ಅಮರತ್ವವನ್ನು ನಿನಗೆ ಕರುಣಿಸುವ, ‘ಅಮರಕಥೆ’ಯನ್ನು ನಾನು ನಿನಗೆ ಬೋಧಿಸುತ್ತೇನೆ.

ಆನಂತರ ನೀನೂ ನನ್ನಂತೆ ಅಮರವಾಗಿ, ನಿನ್ನಾಸೆಯಂತೆ ಸದಾ ನನ್ನೊಡನೆ ಇರುವಿಯಂತೆ ಎನ್ನುತ್ತಾನೆ. ಶಿವನ ಈ ಮಾತು ಕೇಳಿ ಖುಷಿಗೊಂಡ ಪಾರ್ವತಿದೇವಿ ಆ ಅಮರ ಕಥೆ ಕೇಳಲು ಉತ್ಸುಕಳಾಗುತ್ತಾಳೆ. ಅಮರತ್ವವನ್ನು ಬೋಧಿಸಲು ಶಿವನು ಸೂಕ್ತ ಸ್ಥಳಕ್ಕಾಗಿ ಅನ್ವೇಷಿಸತೊಡಗುತ್ತಾನೆ. ಚರಾಚರ ಜೀವಿಗಳು ಬರಲು ಅಸಾಧ್ಯವಾದಂತಹ, ಜೀವಜಂತುಗಳು ಕೇಳಿಸಿಕೊಳ್ಳಲು ಸಾಧ್ಯವಾಗದಂತಹ, ಅಗೋಚರ, ಅಭೇಧ್ಯವಾದಂತಹ ಸ್ಥಳವೊಂದು ಅವರಿಗೆ ಬೇಕಾಗಿರುತ್ತದೆ. ಆಗ ಅವರಿಗೆ ಕಾಣಸಿಗುವುದೇ, ಹಿಮಾಲಯ ದುತ್ತುಂಗದ, ಗಿರಿಕಂದರಗಳ ಕಣಿವೆಗಳೊಳಗಿನ ನಿಗೂಢವಾದ ಒಂದು ಗುಹೆ. ಅದೇ ಇಂದಿನ ಅಮರನಾಥ ಗುಹೆ.

1 ನಂದಿ ಕಾವಲು
ಅಮರ ಕಥೆಯ ಮೂಲಕ ಅಮರತ್ವದ ರಹಸ್ಯವನ್ನು ಬೋಧಿಸುವ ಸಮಯದಲ್ಲಿ ಬೇರೆ ಯಾರೂ ಆ ಸ್ಥಳಕ್ಕೆ ಬಾರದಂತೆ
ತಡೆಯಲು ಅಭೇದ್ಯವಾದ ವ್ಯೂಹವೊಂದನ್ನು ಶಿವನು ರಚಿಸುತ್ತಾನೆ. ಮೊದಲಿಗೆ ಒಂದು ಸ್ಥಳದಲ್ಲಿ ನಂದಿಯನ್ನು ಕಾವಲಿ ರಿಸುತ್ತಾನೆ. ಈ ಸ್ಥಳದಿಂದ ಯಾರೂ ಒಳಬಾರದಂತೆ ತಡೆಯೆಂದು ಅವನಿಗೆ ಆದೇಶಿಸುತ್ತಾನೆ. ಆ ಸ್ಥಳವೇ ‘ಪಹಲ್ಗಾಮ್’ ಎಂದು
ಇಂದಿಗೂ ಖ್ಯಾತವಾಗಿದೆ. ಶ್ರೀಗರದಿಂದ 96 ಕಿ.ಮೀ. ದೂರದಲ್ಲಿ, ಸಮುದ್ರಮಟ್ಟದಿಂದ 7,500 ಅಡಿಗಳ ಎತ್ತರದಲ್ಲಿದೆ.

2 ಚಂದನ್ ವಾರಿಯಲ್ಲಿ ಚಂದ್ರನ ಕಾವಲು
ಅಲ್ಲಿಂದ ಗಾಯತ್ರಿಯೊಂದಿಗೆ ಮುಂದುವರೆದ ಚಂದ್ರಶೇಖರ ಇನ್ನೊಂದು ಸ್ಥಳದಲ್ಲಿ ತನ್ನ ತಲೆಯಿಂದ ಚಂದ್ರನನ್ನೇ ಕೆಳಗಿಳಿಸಿ ಕಾಯಲು ಹೇಳುತ್ತಾನೆ. ಆ ಸ್ಥಳವೇ ‘ಚಂದನ್ ವಾರಿ’. ಪಹಲ್ಗಾಮ್ ನಿಂದ 16 ಕಿ.ಮೀ. ದೂರದಲ್ಲಿ, ಸಮುದ್ರ ಮಟ್ಟದಿಂದ ಕ್ಕೆ 9,500 ಅಡಿ ಎತ್ತರದಲ್ಲಿದೆ.

3 ಶೇಷನಾಗ್‌ನಲ್ಲಿ ಸರ್ಪದ ಕಾವಲು
ಭವಾನಿಯೊಡಗೂಡಿ ಮುಂದುವರೆದ ಶಿವ, ಮತ್ತೊಂದು ಸ್ಥಳದಲ್ಲಿ ತನ್ನ ಭುಜದಲ್ಲಿದ್ದ ಸರ್ಪವನ್ನು ಕಾಯಲು ಬಿಡುತ್ತಾನೆ. ಆ ಸ್ಥಳ ‘ಶೇಷನಾಗ್ ಸರೋವರ’ ಎಂದು ವಿಖ್ಯಾತವಾಗಿದೆ. 11,730 ಅಡಿಗಳ ಎತ್ತರದಲ್ಲಿ, ಚಂದನ್ ವಾರಿಯಿಂದ 12 ಕಿ.ಮೀ. ದೂರ ದಲ್ಲಿದೆ. ಸೌಂದರ್ಯ ದೇವತೆಯ ನೆಲೆವೀಡಿನಂತಿರುವ ಈ ಸ್ಥಳ ಮಿನಿ ಕೈಲಾಸ- ಮಾನಸ ಸರೋವರದಂತೆ ಕಂಡು ಬರುತ್ತದೆ.

4 ಮಹಾಗುಣಾಸ್‌ನಲ್ಲಿ ಗಣೇಶನ ಕಾವಲು
ಹಾಗೆಯೇ ಮುಂದುವರೆದ ಮಹಾದೇವ, ಮಗದೊಂದು ಸ್ಥಳದಲ್ಲಿ ತನ್ನ ಪುತ್ರನಾದ ಗಣೇಶನನ್ನು ಕಾವಲು ನಿಲ್ಲಿಸುತ್ತಾನೆ. ಆ ಸ್ಥಳ ‘ಮಹಾಗುಣಸ್ ಪರ್ವತ’ವೆಂದು ಪ್ರಸ್ಧಿವಾಗಿದೆ. ಶೇಷನಾಗ್ ನಿಂದ 5 ಕಿ.ಮೀ. ದೂರದಲ್ಲಿ 14,500 ಅಡಿಗಳ ಎತ್ತರದಲ್ಲಿ ಈ ಸ್ಥಳ ವಿದೆ. ಇಡೀ ಅಮರನಾಥ ಯಾತ್ರೆಯ ಹಾದಿಯಲ್ಲಿ, ಈ ಸ್ಥಳವೇ ಅತ್ಯಂತ ಎತ್ತರದ ಸ್ಥಳ. ಮೈ ಕೊರೆದು ಅಲ್ಲಾಡಿಸುವಂತಹ
ಚಳಿಯ ವಾತಾವರಣ ಇಲ್ಲಿದೆ.

5 ಪಂಚಭೂತಗಳ ಕಾವಲು
ಮಹಾಶಕ್ತಿಯೊಡನೆ ಮುಂದುವರೆದ ಮಹಾಕಾಳ, ‘ಪಂಚತಾರಿಣಿ’ ಎಂಬ ಸ್ಥಳದಲ್ಲಿ ಪಂಚಭೂತಗಳನ್ನು ಕಾವಲಿಗೆ ನಿಲ್ಲಿಸು ತ್ತಾನೆ. ಮಹಾಗುಣಸ್ ಪರ್ವತದಿಂದ 6 ಕಿ.ಮೀ. ಇಳಿಜಾರಿನಲ್ಲಿ ಮುಂದುವರೆದರೆ ಸಿಗುವ ಸ್ಥಳವೇ ‘ಪಂಚತಾರಣಿ’. ಸಮುದ್ರಮಟ್ಟ ದಿಂದ 12,730 ಅಡಿಗಳ ಎತ್ತರದಲ್ಲಿದೆ. ಪಂಚಭೂತಗಳಾದ ನೆಲ, ಜಲ, ವಾಯು, ಅಗ್ನಿ, ಆಗಸಗಳು ಪಂಚನದಿಗಳ ರೂಪದಲ್ಲಿ ಹರಿದು ಈ ಸ್ಥಳದಲ್ಲಿ ಮೇಳೈಸಿರುವುದನ್ನು ಈಗಲೂ ಕಾಣಬಹುದು.

ಪಂಚತಾರಿಣಿಯಿಂದ ಸಂಗಮದ ಮಾರ್ಗದಲ್ಲಿ 6 ಕಿ. ಮೀ. ಮುಂದುವರೆದರೆ ಸಿಗುವ ಸ್ಥಳವೇ ‘ಅಮರನಾಥ ಗುಹೆ’. ಮಡದಿ ಯೊಂದಿಗೆ ಆ ಗುಹೆ ಪ್ರವೇಶಿಸುವ ಶಂಕರ, ತನ್ನ ಗಣಗಳನ್ನೆಲ್ಲಾ ಕರೆದು ಗುಹೆಯನ್ನು ಶೋಧಿಸಲು ತಿಳಿಸುತ್ತಾನೆ. ಗಣಗಳು ಕೂಗಾಡುತ್ತಾ ಗುಹೆಯನ್ನು ಶೋಧಿಸತೊಡಗುತ್ತವೆ. ಇದರಿಂದ ಬೆದರಿದ ಅಲ್ಲಿದ್ದ ಪಾರಿವಾಳಗಳೆರಡು ಹಾರಿ ಹೋಗುತ್ತವೆ.

ಅವುಗಳ ಎರಡು ಮೊಟ್ಟೆಗಳನ್ನು ಕಂಡ ಅವರು, ನಿರ್ಲಕ್ಷಿಸಿ, ಗುಹೆಯಿಂದ ಹೊರನಡೆಯುತ್ತಾರೆ. ಇದೀಗ ಅಮರತ್ವವನ್ನು
ಬೋಧಿಸುವ ವೇದಿಕೆಯು ಅಮರನಾಥ ಗುಹೆಯಲ್ಲಿ ಸಿದ್ಧಗೊಂಡಿತು. ಶಿವನು ಪಾರ್ವತಿಗೆ ಇಲ್ಲೇ ಅಮರತ್ವದ ರಹಸ್ಯವನ್ನು ಹೇಳಿದೆ ಎಂಬ ನಂಬಿಕೆ.

Leave a Reply

Your email address will not be published. Required fields are marked *