Wednesday, 27th November 2024

ಡಿಯರ್‌ ಕಣ್ಮಣಿಗೆ ಸುದೀಪ್‌ ಸಾಥ್‌

ವಿಸ್ಮಯ ಫಿಲ್ಮ್ ಬ್ಯಾನರ್‌ನಲ್ಲಿ ಸೆಟ್ಟೇರಿರುವ ‘ಡಿಯರ್ ಕಣ್ಮಣಿ’ಗೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ವೀರಾಂಜನೇಯ ಸ್ವಾಮಿ
ದೇವಸ್ಥಾನದಲ್ಲಿ ನಡೆದ ಚಿತ್ರದ ಮಹೂರ್ತ ಸಮಾರಂಭಕ್ಕೆ ಆಗಮಿಸಿದ ಸುದೀಪ್, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ,
ಪೋಸ್ಟರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

‘ಡಿಯರ್ ಕಣ್ಮಣಿ’ಯಲ್ಲಿ ‘ಬಿಗ್‌ಬಾಸ್’ ಖ್ಯಾತಿಯ ಕಿಶನ್ ಬೆಳಗಲಿ ನಾಯಕನಾಗಿ ನಟಿಸುತ್ತಿದ್ದು, ಲವ್ವರ್ ಬಾಯ್ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಕಿಶನ್ ಜತೆಗೆ ಕ್ರಿಕೆಟರ್ ಪ್ರವೀಣ್ ಕೂಡ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ನಟಿ ರೇಖಾದಾಸ್ ಪುತ್ರಿ ಸಾತ್ವಿಕಾ ಈ ಸಿನಿಮಾದ ನಾಯಕಿಯಾಗಿದ್ದಾರೆ. ‘ಡಿಯರ್ ಕಣ್ಮಣಿ’ ನವಿರಾದ ಪ್ರೇಮ ಕಥೆಯ ಚಿತ್ರವಾಗಿದೆ. ಚಿತ್ರದ ಮೂಲಕ ಯುವಜನತೆಗೆ ಒಳ್ಳೆಯ ಸಂದೇಶವನ್ನು ಹೊತ್ತು ಬರುತ್ತಿದೆ.

ವಿಸ್ಮಯ ಈ ಚಿತ್ರದ ನಿರ್ದೇಶನದ ಸಾರಥ್ಯ ವಹಿಸಿದ್ದು, ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳು ತ್ತಿದ್ದಾರೆ. ಜತೆಗೆ ಬಂಡವಾಳ ಹೂಡಿದ್ದು, ನಿರ್ಮಾಣದ ಜವಾಬ್ಧಾರಿಯನ್ನು ಹೊತ್ತಿದ್ದಾರೆ. ಸಿನಿಮಾದಲ್ಲಿ ಇಬ್ಬರು ನಾಯಕರು, ಒಬ್ಬಳೇ ನಾಯಕಿ ಇರುವುದರಿಂದ ಇದೊಂದು ತ್ರಿಕೋನ ಪ್ರೇಮಕಥೆಯ ಚಿತ್ರ ಎಂದು ಅನ್ನಿಸಬಹುದು. ಆದರೆ, ಇದು ಕೌಟುಂಬಿಕ ಕಥೆಯ ಚಿತ್ರವಾಗಿದೆ. ಒಳ್ಳೆಯ ಕಥೆ ಸಿನಿಮಾದಲ್ಲಿದ್ದು, ಮಡಿಕೇರಿ ಹಾಗೂ ಮೈಸೂರಿನಲ್ಲಿ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ ಎಂದರು ನಿರ್ದೇಶಕಿ.

ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಲವ್ವರ್ ಬಾಯ್ ಪಾತ್ರ ನನಗೆ ಹೊಂದುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಇದನ್ನು ತೆರೆಯ ಮೇಲೆ ಸಾಧ್ಯವಾಗಿಸಬೇಕಿದೆ ಎಂದರು ಕಿಶನ್. ನನಗೂ ಈ ಸಿನಿಮಾದಲ್ಲಿ ಭಿನ್ನವಾದ ಪಾತ್ರವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಲವ್ವರ್ ಬಾಯ್ ಜತೆ ರೊಮ್ಯಾನ್ಸ್ ಮಾಡುವ ದೃಶ್ಯಗಳಲ್ಲಿ ಅಭಿನಯಿ ಸಲು ಸಿದ್ಧಳಾಗಿದ್ದೇನೆ. ಇದು ಎಲ್ಲರ ಕನಸಿನ ಸಿನಿಮಾ. ನನಗೂ ಇದು ವೃತ್ತಿಜೀವನದಲ್ಲಿ ಗುರುತಿಸಿಕೊಳ್ಳಲು ಸಹಾಯ ಆಗಲಿದೆ’ ಎಂಬುದು ಸಾತ್ವಿಕಾ ಮಾತು. ಈ ಸಿನಿಮಾದಲ್ಲಿ ನನ್ನ ಪಾತ್ರ ಎಲ್ಲರಿಗೂ ಇಷ್ಟ ಆಗುತ್ತದೆ. ಇದಕ್ಕಾಗಿ ಈಗಾಗಲೇ ತಯಾರಿ ನಡೆಸಿದ್ದೇನೆ.

ಕ್ರಿಕೆಟ್ ಅಂಗಳದಿಂದ ಸಿನಿಮಾ ಹೇಗೆ ಎಂದು ಎಲ್ಲರೂ ಕೇಳುತ್ತಾರೆ. ಆದರೆ ಇವೆರಡೂ ಕ್ಷೇತ್ರದಲ್ಲೂ ನನಗೆ ಮೊದಲಿನಿಂದಲೂ
ಆಸಕ್ತಿ ಇತ್ತು. ಇದೇ ನನ್ನನ್ನು ಸಿನಿಮಾವರೆಗೂ ಕರೆದುಕೊಂಡು ಬಂದಿದೆ’ ಎನ್ನುತ್ತಾರೆ ಪ್ರವೀಣ್. ಉಳಿದಂತೆ ಹಲವು ಹಿರಿಯ ಕಲಾವಿರು ಚಿತ್ರದ ತಾರಾಗಣಲ್ಲಿದ್ದಾರೆ. ಛಾಯಾಗ್ರಹಣ ಮಧುಸೂದನ್, ಸಂಕಲನ, ರಮಿಶೆಟ್ಟಿ, ಪವನ್, ಸಾಹಿತ್ಯ ಗೌಸ್ಪೀರ್, ಜಯಂತ್ ಕಾಯ್ಕಿಣಿ, ಸಚಿನ್ ಅವರದ್ದಾಗಿದೆ.

ಕೋಟ್‌

ಪ್ರತಿಭೆಗೆ ತಕ್ಕ ವೇದಿಕೆ ಯಾರಿಗೂ ನನ್ನ ಅನುಭವ ಹೇಳಿ ಮಾರ್ಗದರ್ಶನ ಮಾಡುವ ಉದ್ದೇಶವಿಲ್ಲ. ಎಲ್ಲರೂ ಪ್ರತಿಭಾವಂತರೆ . ಅವರು ತಪ್ಪುಗಳನ್ನು ಮಾಡಲಿ, ಕಲಿತುಕೊಂಡು ಒಳ್ಳೆಯ ಸಿನಿಮಾ ಮಾಡಲಿ. ಕನ್ನಡ ಚಿತ್ರರಂಗಕ್ಕೆ ಹೊಸಬರ ಅಗತ್ಯವಿದೆ. ತಮ್ಮ ಪ್ರತಿಭೆಗೆ ಇಲ್ಲಿ ಜಾಗವಿದೆ. ಹೊಸಬರಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು.
-ಕಿಚ್ಚ ಸುದೀಪ್