ಟ್ಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರ ಮಾರ್ಚ್ 11ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್, ಫಸ್ಟ್ ಲುಕ್, ಟ್ರೇಲರ್ ಚಿತ್ರದ ಕ್ರೇಜ್ ಹೆಚ್ಚಿಸಿದೆ.
ಪ್ರೇಕ್ಷಕರು ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಅಂತು ಅಭಿಮಾನಿಗಳಲ್ಲಿ ಸಂತಸ ತಂದಿದ್ದು, ಚಿತ್ರವನ್ನು ಕಣ್ತಂಬಿಕೊಳ್ಳಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಚಿತ್ರದ ಡೈಲಾಗ್ಸ್ ಎಲ್ಲರ ಬಾಯಲ್ಲೂ ಗುನುಗುನಿಸುತ್ತಿವೆ.
ಅಷ್ಟೇ ಅಲ್ಲ , ‘ರಾಬರ್ಟ್’ ಹೊಸ ಟ್ರೆಂಡ್ ಸೃಷ್ಟಿಸಿದೆ. ಟೀ ಶರ್ಟ್ ಮೇಲೂ ‘ರಾಬರ್ಟ್’ ಚಿತ್ರ ಮೂಡಿದೆ. ಟ್ಯಾಟೂಗಳಲ್ಲೂ ‘ರಾಬರ್ಟ್’ ಒಡಮೂಡಿದೆ. ಇನ್ನು ಕಾರುಗಳ ಮುಂಭಾಗದಲ್ಲೂ ‘ರಾಬರ್ಟ್’ ಸ್ಟಿಕ್ಕರ್ ರಾರಾಜಿಸುತ್ತಿವೆ. ‘ರಾಬರ್ಟ್’ ಮೊದಲ ಪೋಸ್ಟರ್ ಬಿಡುಗಡೆಯಾದಾಗ ಇದು ಆ್ಯಕ್ಷನ್ ಸಿನಿಮಾವೇ ಇರಬೇಕು ಎಂದೆನ್ನಿಸಿತ್ತು. ಹಾಡುಗಳು ಬಿಡುಗಡೆಯಾದಾಗ
ಕೌಟುಂಬಿಕ ಕಥೆಯೂ ಚಿತ್ರದಲ್ಲಿದೆ ಎಂಬುದು ಮನದಟ್ಟಾಯಿತು. ಟ್ರೇಲರ್ ನಲ್ಲಿ ಆ್ಯಕ್ಷನ್ ನಲ್ಲೂ ಅಬ್ಬರಿಸುವ ದಚ್ಚು, ಸಂಟಿಮೆಂಟ್ನಲ್ಲೂ ಮಿಂಚಿದ್ದರು.
ಹಾಗಾಗಿ ಪ್ರೇಕ್ಷಕರ ಮನರಂಜನೆಗೆ ಅಗತ್ಯವಾದ ಎಲ್ಲಾ ಅಂಶಗಳು ಚಿತ್ರದ ಕಥೆಯಲ್ಲಿವೆ ಎಂಬುದು ಇದರಿಂದ ಖಚಿತವಾಗಿದೆ. ಇದರ ಜತೆಗೆ ನವಿರಾದ ಪ್ರೇಮ ಕಥೆಯೂ ಇರಬಹುದೇ ಎಂಬುದು ಚಿತ್ರ ತೆರೆಗೆ ಬಂದ ಮೇಲೆಯೇ ತಿಳಿಯುತ್ತದೆ.
ತೆಲುಗಿನಲ್ಲಿಯೂ ರಾಬರ್ಟ್ ಹವಾ ಕರೋನಾದಿಂದ ಚಿತ್ರರಂಗ ಕಂಗೆಟ್ಟಿದ್ದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾದ ದಚ್ಚು, ಮಾರ್ಚ್ 11ಕ್ಕೆ ಚಿತ್ರವನ್ನು ತೆರೆಗೆ ತರುವುದಾಗಿ ಘೋಷಿಸಿದರು. ಎಂತಹದ್ದೇ ಸಂಕಷ್ಟವಿದ್ದರೂ ಚಿತ್ರ ಮಂದಿರದಲ್ಲಿಯೇ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದರು. ಅದರಂತೆ ಈಗ ‘ರಾಬರ್ಟ್’ ಕನ್ನಡದ ಜತೆಗೆ ತೆಲುಗಿನಲ್ಲಿಯೂ ತೆರೆಗೆ ಬರಲು ಸಿದ್ಧವಾಗಿದ್ದು, ಇದಕ್ಕೆ ಅಗತ್ಯ ತಯಾರಿ ನಡೆಯುತ್ತಿವೆ.
ತೆಲುಗಿನಲ್ಲಿ ‘ರಾಬರ್ಟ್’ ತೆರೆಗೆ ಬರಲಿದೆ ಎಂದಾಗಲೇ ಟಾಲಿವುಡ್ ಮಂದಿ ಬೆಚ್ಚಿಬಿದ್ದಿದ್ದರು. ಹಾಗಾಗಿ ಅಲ್ಲಿನ ಕೆಲವರು ಚಿತ್ರ
ಬಿಡುಗಡೆಗೂ ಅವಕಾಶ ನೀಡದೆ ತಕರಾರಾರು ತೆಗಿದಿದ್ದರು. ಇದೆಲ್ಲವೂ ಈಗ ಬಗೆಹರಿದಿದ್ದು, ‘ರಾಬರ್ಟ್’ ತೆಲುಗು ಅವತರಣಿಕೆ ಮಾರ್ಚ್ 11ರಂದು ಅದ್ಧೂರಿಯಾಗಿ ತೆರೆ ಕಾಣಲಿದೆ. ದರ್ಶನ್ಗೆ ಜತೆಯಾಗಿ ಆಶಾಭಟ್ ನಟಿಸಿದ್ದಾರೆ. ತೆಲುಗಿನ ಖ್ಯಾತ ಖಳ ನಟ ಜಗಪತಿ ಬಾಬು ಈ ಚಿತ್ರದಲ್ಲಿಯೂ ಖದರ್ ಖಳನಾಗಿ ಮಿಂಚಿದ್ದಾರೆ.
ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದಾರೆ.