ಸ್ಯಾಂಡಲ್ ವುಡ್ ಅಂಗಳದಲ್ಲಿ ನವ ಪ್ರತಿಭೆಗಳ ತಂಡವೇ ಇದೆ. ಕಲಾ ಸೇವೆಯಲ್ಲಿ ಆಸ್ಥೆ ಹೊಂದಿರುವ ಹೊಸಬರು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆ ಪ್ರಯತ್ನದ ಫಲವಾಗಿ ವಿಭಿನ್ನ ಸಿನಿಮಾಗಳು ಮೂಡಿಬರುತ್ತಿವೆ. ಆ ಸಾಲಿಗೆ ಸಾಲ್ಟ್ ಚಿತ್ರ ಕೂಡ ಸೇರ್ಪಡೆಯಾಗಿದೆ.
ಸಾಲ್ಟ್ ಶೀರ್ಷಿಕೆ ಕೇಳಿದಾಕ್ಷಣ ಅಚ್ಚರಿಯಾಗಬಹುದು. ಇದು ಉಪ್ಪಿನ ಕಥೆಯೇ ಎಂದು ಅನ್ನಿಸಬಹುದು. ಖಂಡಿತಾ ಅಲ್ಲ. ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವಂತೆ ಹದವಾದ ಕಾಮಿಡಿ ಬೆರೆಸಿ , ಚಿತ್ರಕಥೆ ಹೆಣೆದು ಚಿತ್ರವನ್ನು ತೆರೆಗೆ ತಂದಿದ್ದಾರೆ ನಿರ್ದೇಶಕರು. ಸಾಲ್ಟ್ ಎಂಬುದನ್ನು ಆಂಗ್ಲ ಭಾಷೆಯಲ್ಲಿ ಬರೆದಾಗ ಗೋಚರಿಸುವ ನಾಲ್ಕು ಪದಗಳಂತೆ, ನಾಲ್ಕು ಪಾತ್ರಗಳ
ಸುತ್ತ ಚಿತ್ರದ ಕಥೆ ಸಾಗುತ್ತದೆ. ಸತ್ಯ, ಅಕುಲ್ ಶೆಟ್ಟಿ, ಲೋಕಿ, ತ್ರಿನೇತ್ರಾ, ಈ ನಾಲ್ವರು ಪಾತ್ರಧಾರಿಗಳ ಕುರಿತಂತೆ ತೆರೆಯಲ್ಲಿ ಕಥೆ ಸಾಗುತ್ತದೆ.
ಯುವಕರ ಹುಚ್ಚು ಪ್ರೀತಿ
ಸತ್ಯ, ಅಕುಲ್ ಶೆಟ್ಟಿ, ಲೋಕಿ, ತ್ರಿನೇತ್ರಾ ಈ ನಾಲ್ವರು ಮಧ್ಯಮ ವರ್ಗದ ಹುಡುಗರು. ಹುಡುಗಾಟದ ವಯಸ್ಸಿನಲ್ಲಿ ಹಲವು ಆಸೆಗಳು ಸಹಜವಾಗಿಯೇ ಈ ನಾಲ್ವರನ್ನು ಆವರಿಸಿರುತ್ತವೆ. ಅಂತೆಯೇ ಜೀವನದಲ್ಲಿ ಒಂದಾದರೂ ಸಿನಿಮಾವನ್ನು ನಿರ್ಮಿಸ ಬೇಕು, ನಿರ್ದೇಶಿಸಬೇಕು, ನಟಿಸಬೇಕು ಎಂಬ ಹಂಬಲ ಬಹುವಾಗಿರುತ್ತದೆ. ಈ ದಾರಿಯಲ್ಲೇ ಸಾಗುತ್ತಿರುತ್ತಾರೆ. ಆದರೆ ಸಿನಿಮಾ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಸುಲಭದಲ್ಲಿ ಕೈಗೆಟುಕುವ ಸರಕೂ ಅಲ್ಲ. ಆದರೂ ನಾಲ್ವರಿಗೂ ಸಿನಿಮಾದ ಮೇಲಿನ ಹುಚ್ಚು ಪ್ರೀತಿ ಕಡಿಮೆ ಆಗಿರುವುದೇ ಇಲ್ಲ. ಅಂದುಕೊಂಡದನ್ನು ಸಾಧಿಸಲೇ ಬೇಕು ಎಂಬ ಹಠದಿಂದ ಮುಂದೆ ಸಾಗು ತ್ತಲೇ ಇರುತ್ತಾರೆ.
ಹಾಸ್ಯದ ಮಜಲು
ಹಠದಿಂದ ಸಾಗಿದ ನಾಯಕರ ಕನಸು, ನನಸಾಗುತ್ತದೆಯೇ ಇದಕ್ಕಾಗಿ ಇವರೆಲ್ಲರೂ ಪಡುವ ಪಾಡೇನು, ತಮ್ಮ ಗುರಿಯತ್ತ ಸಾಗುವ ಹಾದಿಯಲ್ಲಿ ಯಾವೆಲ್ಲಾ ಸಮಸ್ಯೆಗಳಿಗೆ ಸಿಲುಕಿ ಪಡಬಾರದ ಪಾಡು ಪಡುತ್ತಾರೆ ಎಂಬುದನ್ನು ತೆರೆಯ ಮೇಲೆಯೇ ನೋಡ ಬೇಕಂತೆ. ಅದನ್ನು ಕಂಪ್ಲೀಟ್ ಕಾಮಿಡಿಯ ಮೂಲಕ, ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಕರೋನಾ ಕಾಲದಲ್ಲಿ ಕಂಗೆಟ್ಟಿದ್ದ ಪ್ರೇಕ್ಷಕರಿಗೆ ಸಾಲ್ಟ್ ಮನರಂಜನೆ ನೀಡುವ ಜತೆಗೆ , ಹಾಸ್ಯದ ರುಚಿಯನ್ನು ಉಣಬಡಿಸುತ್ತದೆ.
ಸತೀಶ್ ಮಳವಳ್ಳಿ, ಚೆಂದು ಛತ್ರಪತಿ, ಭಾಣಸವಾಡಿ ಚೇತನ್, ಭರತ್ ನಂದ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಾಮಿಡಿ ಜತೆ ಕಿಡ್ನಾಪ್ ಕಥೆ ಸಾಲ್ಟ್ , ಕಾಮಿಡಿಗೆ ಮಾತ್ರ ಸೀಮಿತವಾಗಿಲ್ಲ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ರೋಚಕ ಕಥೆ ಚಿತ್ರ ದಲ್ಲಿದೆ. ಸಿನಿಮಾ ಮಾಡುವ ಹುಮ್ಮಸ್ಸಿನಲ್ಲಿ ನಾಲ್ವರು ಹುಡುಗರು, ನಾಯಕಿಯನ್ನೇ ಕಿಡ್ನಾಪ್ ಮಾಡುತ್ತಾರೆ. ಅದು ಯಾಕೆ?
ಹೇಗೆ ? ಅದರಿಂದ ಎದುರಾಗುವ ಸಂಕಷ್ಟಗಳೇನು ಎಂಬ ಸಸ್ಪೆನ್ಸ್ ಚಿತ್ರದಲ್ಲಿದೆ. ಸ್ವೀಟಿಯ ಹಿಂದೆ ತೆರಳಿದ ಹುಡುಗರ ಕಥೆ ಏನು ಎಂಬುದು ತೆರೆಯ ಮೇಲೆ ಮಜನಾತ್ಮಕವಾಗಿ ಸಾಗುತ್ತದೆ. ನವ ನಟಿ ವಿಜಯಶ್ರೀ ಕಲಬುರ್ಗಿ ಸ್ವೀಟಿಯ ಪಾತ್ರದಲ್ಲಿ ಬಣ್ಣ ಹಚ್ಚಿ ದ್ದಾರೆ.
ಮನಸ್ಸಿನಲ್ಲಿ ಮೂಡಿದ ಸ್ಟೋರಿ
ಈ ಹಿಂದೆ ಡಯಾನ ಹೌಸ್ ಎಂಬ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಭರತ್, ಸಾಲ್ಟ್ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರೇಕ್ಷಕರಿಗೆ ಹೊಸತನವನ್ನು ಕಟ್ಟಿಕೊಡಬೇಕು ಎಂಬ ಆಸೆ ನನಗಿತ್ತು. ಅದಕ್ಕಾಗಿ ಕಥೆ ಹೆಣೆದೆ ಪ್ರೇಕ್ಷಕರಿಗೆ, ಹೊಸತನ್ನು ಕಟ್ಟಿಕೊಡುವ ಪತ್ರಯತ್ನ ಚಿತ್ರದ ಮೂಲಕ ಮಾಡಿದ್ದೇನೆ, ಸಿನಿಪ್ರಿಯರು ಚಿತ್ರವನ್ನು ಮೆಚ್ಚುತ್ತಾರೆ ಎಂಬ ನಂಬಿಕೆ ನನಗಿದೆ ಎನ್ನತ್ತಾರೆ ಭರತ್. ಬಲರಾಜವಾಡಿ ಹಾಗೂ ಸೂರ್ಯೋದಯ ಖಳರಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಾಘವೇಂದ್ರ ಕಾಮತ್ ಅವರ ಸಾಹಿತ್ಯದಲ್ಲಿ ಮೂಡಿಬಂದಿವೆ. ವಿನಯ್ ಕುಮಾರ್
ಸಂಕಲನ ಚಿತ್ರಕ್ಕಿದೆ. ಬೆಂಗಳೂರಿನ ಸುತ್ತಮುತ್ತ ಸುಮಾರು ಮುವತ್ತೈೈದು ದಿನಗಳ ಕಾಲ ಚಿತ್ರೀಕರಣ ನಡೆದಿದೆ.