Saturday, 23rd November 2024

ಬಾಟ್ಲಾಹೌಸ್ ಎನ್’ಕೌಂಟರ್ ಪ್ರಕರಣ: ಆರಿಜ್‌ ಖಾನ್‌ ದೋಷಿ

ನವದೆಹಲಿ: ಬಾಟ್ಲಾ ಹೌಸ್ ಎನ್ ಕೌಂಟರ್(2008) ಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿ ಸಿದ್ದು, ಆರೋಪಿ ಆರಿಜ್‌ ಖಾನ್‌ ನನ್ನು ದೋಷಿ ಎಂದು ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅರಿಜ್ ಖಾನ್ʼನನ್ನ 2018ರ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ದಶಕದ ನಂತರ ದೆಹಲಿ ಪೊಲೀಸರ ವಿಶೇಷ ಘಟಕ ಖಾನ್ʼನನ್ನ ಬಂಧಿಸಿತ್ತು. ನ್ಯಾಯಾಲಯದಿಂದ ತೀರ್ಪು ಹೊರ ಬಿದ್ದಿದ್ದು, ಆರಿಜ್ ಖಾನ್ ದೋಷಿ ಎಂದಿದೆ. ಶಿಕ್ಷೆಯ ಪ್ರಮಾಣವನ್ನ ಮಾ.10ರಂದು ಪ್ರಕಟಿಸಲಿದೆ. ಸಾಕೇತ್ ಕೋರ್ಟ್ ನ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಸಂದೀಪ್ ಯಾದವ್ ಈ ತೀರ್ಪು ನೀಡಿದ್ದಾರೆ.

2018ರ ಫೆಬ್ರವರಿಯಲ್ಲಿ ಬಂಧನಕ್ಕೊಳಗಾಗಿದ್ದ ಅಜೀಜ್ ಖಾನ್, ಬಾಟ್ಲಾ ಹೌಸ್ ಎನ್ ಕೌಂಟರ್ ವೇಳೆ ಸ್ಥಳದಲ್ಲಿ ಹಾಜರಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಖಾನ್ ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿ ಯನ್ ಮುಜಾಹಿದ್ದೀನ್ ಜತೆ ನಂಟು ಹೊಂದಿದ್ದ ಎನ್ನಲಾಗಿದೆ.

2008ರ ಸೆಪ್ಟೆಂಬರ್ ನಲ್ಲಿ ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಒಂದು ವಾರದ ಬಳಿಕ ಈ ಕಾರ್ಯಾಚರಣೆ ನಡೆದಿತ್ತು. ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಂತೆ 2013ರಲ್ಲಿ ಐಎಂ ಭಯೋತ್ಪಾದಕ ಶಹಜಾದ್ ಅಹ್ಮದ್ ಗೆ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ತೀರ್ಪಿನ ವಿರುದ್ಧ ಅವರು ಸಲ್ಲಿಸಿರುವ ಮೇಲ್ಮನವಿ ಹೈಕೋರ್ಟ್ ನಲ್ಲಿ ಬಾಕಿ ಇದೆ.