Monday, 25th November 2024

ಆ ಘಟ್ಟ ಈ ಘಟ್ಟ ನೋಡಿರೀ ಕರಿಘಟ್ಟ

ಡಾ.ಉಮಾಮಹೇಶ್ವರಿ ಎನ್‌.

ಈ ಬೆಟ್ಟವನ್ನೇರಿದರೆ ಸುತ್ತಲೂ ಹಸಿರಿನಿಂದ ತುಂಬಿದ ಗದ್ದೆಗಳನ್ನು ಕಾಣಬಹುದು, ನದಿಯ ಅಂಕುಡೊಂಕು 
ಒಯ್ಯಾರದ ನೋಟವನ್ನೂ ನೋಡಬಹುದು.

ಆ ಬೆಟ್ಟದ ತುದಿ ಏರಿದರೆ, ಸುತ್ತಲಿನ ನಿಸರ್ಗದ ನೋಟ ಸುಂದರ. ಹಾಗೆ ನೋಡಹೋದರೆ, ಬೆಟ್ಟ ತುಂಬಾ ಎತ್ತರವಿಲ್ಲ. ಆದರೆ ಮೇಲಿನಿಂದ ಕಾಣುವ ನೋಟದಲ್ಲಿ ಮುದವಿದೆ, ಸೊಗಸಿದೆ. ಕಾವೇರಿ ನದಿಯ ಪಾತ್ರವು ಉದಕ್ಕೂ, ಅಂಕುಡೊಂಕಾಗಿ ಹರಿದು ಹೋಗಿರುವುದು ಒಂದೆಡೆ ಕಂಡರೆ, ಇಕ್ಕೆಲಗಳಲ್ಲೂ ಹಸಿರಿನ ಸಿರಿ ತುಂಬಿರುವ ಬತ್ತದ ಗದ್ದೆಗಳ ಮೋಹಕ ನೋಟ. ಅನತಿ
ದೂರದಲ್ಲಿ ನದಿಗಳ ಕವಲುಗಳು ಕೂಡುವ ‘ಸಂಗಮ’ದ ನೋಟ ಮನತಣಿಸಿದರೆ, ದೂರದ ಬಯಲು ಮತ್ತು ಮೋಡಗಳ ಆಟ
ಅಲ್ಲೊೊಂದು ಪ್ರಕೃತಿ ದೃಶ್ಯವನ್ನೇ ತೆರೆದಿಟ್ಟಿದೆ.

ನಾವಿದ್ದದ್ದು ಕರಿಘಟ್ಟದ ತುದಿಯಲ್ಲಿ. ಒಂದು ದಿನದ ವಿಹಾರಕ್ಕೆ, ಪ್ರಕೃತಿಯ ಒಡನಾಟಕ್ಕೆ ಹೇಳಿ ಮಾಡಿಸಿದ ತಾಣ ಇದು.
ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಬ ದೇವಸ್ಥಾನದ ಆವರಣದಲ್ಲಿ ನಿಂತು ಲೋಕಪಾವನಿ ನದಿಯಾಚೆ ನೋಡಿದರೆ
ಕಾಣಿಸುವ ಬೆಟ್ಟವೇ ಕರಿಘಟ್ಟ. ದೇವಸ್ಥಾನದ ಸಮೀಪದಲ್ಲಿರುವ ಸೇತುವೆಯನ್ನು ಹಾದು ಬೆಟ್ಟದ ಬುಡ ತಲುಪಬಹುದು. ಬೆಂಗಳೂರು- ಮೈಸೂರು ರಸ್ತೆಯಲ್ಲಿ ಶ್ರೀರಂಗ ಪಟ್ಟಣದ ಮೊದಲೇ ಬರುವ ಎಡತಿರುವನ್ನು ತೆಗೆದುಕೊಂಡೂ ಇಲ್ಲಿ ತಲುಪ ಬಹುದು.

ಇದರ ತುದಿಯಲ್ಲಿರುವ ಪುರಾತನ ವೆಂಕಟರಮಣ ದೇವಾಲಯ ತನ್ನದೇ ಪ್ರಾಮುಖ್ಯತೆಯನ್ನು ಹೊಂದಿದ್ದು ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ. ಅಲ್ಲಿನ ದೇವರು ‘ಕರಿಗಿರಿ ವಾಸ’ ಎಂದೇ ಹೆಸರಾಗಿ, ಸ್ಥಳೀಯರ ಪ್ರೀತಿಗೆ ಪಾತ್ರನಾಗಿದ್ದಾನೆ. ಮುಖ್ಯ ಮೂರ್ತಿಯ ಪ್ರತಿಷ್ಠಾಪನೆಯನ್ನು ಭೃಗು ಮಹರ್ಷಿಯೇ ಕೈಗೊಂಡರೆಂಬ ನಂಬಿಕೆ ಸ್ಥಳೀಯರಲ್ಲಿದೆ.

ಬೆಟ್ಟದ ಮೇಲಕ್ಕೆ ಹತ್ತಲು ಉತ್ತಮ ಸ್ಥಿತಿಯಲ್ಲಿರುವ 450 ಮೆಟ್ಟಲುಗಳಿವೆ. ಮೆಟ್ಟಲುಗಳನ್ನು ಹತ್ತಲಾಗದಿದ್ದರೆ ದೇವಸ್ಥಾನದ ಎದುರಿನ ತನಕ ವಾಹನಗಳನ್ನು ಕೊಂಡೊಯ್ಯಲು ಗುಣಮಟ್ಟದ ರಸ್ತೆಯೂ ಇದೆ. ಮೆಟ್ಟಿಲುಗಳನ್ನು ಹತ್ತುವಾಗ ದಾರಿಗಡ್ಡಲಾಗಿ ಹಾದುಹೋಗುವ ನೀರಿನ ಕಾಲುವೆಯ ನೋಟ ಮೋಹಕ. ಕಾಲುವೆಗೆ ಇಳಿಯಲು ಸುಂದರವಾದ ಪಾವಟಿಗೆಗಳನ್ನೂ
ಮಾಡಿದ್ದಾರೆ. ಆ ಸರಹದ್ದಿನಲ್ಲಿ ಬೆಳೆದಿರುವ ಬೃಹತ್ ಮರಗಳು ಮನಸೆಳೆಯುತ್ತವೆ.

ದೇವಸ್ಥಾನದ ಎದುರುಗಡೆಯೇ ಒಂದು ನಿಸರ್ಗಧಾಮವಿದೆ. ದರ್ಬೆ ಹುಲ್ಲಿನ ಹುಲ್ಲುಗಾವಲು ಈ ಬೆಟ್ಟದೆಲ್ಲೆಡೆ ಬೆಳೆಯುವುದು ದರ್ಬೆ ಹುಲ್ಲು. ವರಾಹಾವತಾರದ ವಿಷ್ಣು ಮೈಕೊಡವಿದಾಗ ಇಲ್ಲಿ ಬಿದ್ದ ಕೂದಲಿನಿಂದ ಈ ಪ್ರಭೇದದ ದರ್ಬೆ ಬೆಳೆಯಿತೆಂಬುದು
ಇಲ್ಲಿಗೆ ಸಂಬಂಧ ಪಟ್ಟ ಪುರಾತನ ಕತೆಗಳಲ್ಲೊಂದು. ನದಿಯಲ್ಲಿ ಸ್ನಾನ ಮಾಡುತ್ತಿದ್ದ ನಾಲ್ವರು ಹುಡುಗಿಯರನ್ನು ಮದವೇರಿದ
ಆನೆ(ಕರಿ)ಯೊಂದು ತುಳಿದು ಕೊಂದು ಹಾಕಿತು. ದುಃಖತಪ್ತನಾದ ಮುನಿಯೊಬ್ಬ ಅವರನ್ನು ಬದುಕಿಸಲು ಇಲ್ಲಿ ಕುಳಿತು ವಿಷ್ಣು
ವನ್ನು ಕುರಿತು ತಪಸ್ಸು ಮಾಡಿ ಸಫಲನಾಗುತ್ತಾನೆ.

ಸೀತಾಪಹರಣವಾದಾಗ ಸುಗ್ರೀವನು ತಿರುಪತಿಯಿಂದ ನೀಲಾಂಚಲ ಬೆಟ್ಟವನ್ನು ಸಮುದ್ರಕ್ಕೆ ಸೇತುವೆಯಾಗಿ ಉಪಯೋಗಿಸಲು ಕೊಂಡೊಯ್ಯುತ್ತಿರುವಾಗ ಸ್ಥಳೀಯ ವಿಷ್ಣುಭಕ್ತ ಮುನಿಗಳು ಬೇಡವೆನ್ನುತ್ತಾರೆ. ಹಾಗಾಗಿ ಬೆಟ್ಟವನ್ನು ಅಲ್ಲೇ ಬಿಟ್ಟು ಮುಂದು ವರಿಯುತ್ತಾನೆ ಸುಗ್ರೀವ. ಇಲ್ಲಿ ಆರೋಗ್ಯಪೂರಕವಾದ ಗಿಡಮೂಲಿಕೆಗಳು ಬೆಳೆಯುತ್ತವೆಂದು ನಂಬಿಕೆ. ಹುಣಸೆ ಮತ್ತು ನೆಲ್ಲಿ ಮರಗಳೂ ಸಾಕಷ್ಟು ಸಂಖ್ಯೆಯಲ್ಲಿ ಈ ಬೆಟ್ಟದಲ್ಲಿವೆ. ಇತ್ತೀಚಿಗೆ ಉತ್ಸಾಹಿಯೋರ್ವರು ತಂಡ ಕಟ್ಟಿಕೊಂಡು, ಹಲವಾರು ಗಿಡಗಳನ್ನು ನೆಟ್ಟು ಪ್ಲಾಸ್ಟಿಕ್ ನೀರಿನ ಬಾಟಲುಗಳನ್ನು ಉಪಯೋಗಿಸಿ ಹನಿನೀರಾವರಿ ಕೈಗೊಂಡು ಅರಣ್ಯೀಕರಣದ ಯತ್ನ ಗಳು ನಡೆಯುತ್ತಿರುವುದು ಪ್ರಶಂಸನೀಯ.

ಬೆಟ್ಟದ ಒಂದು ಮಗ್ಗುಲಲ್ಲಿ ಅವರು ಬೆಳೆಸಿದ ಹಲವು ಗಿಡ ಮರಗಳು ಕಣ್ಣಿಗೆ ಹಸಿರನ್ನು ತುಂಬುತ್ತವೆ. ಇಲ್ಲಿನ ವೆಂಕಟೇಶನಿಗೆ ಬೈರಾಗಿ ವೆಂಕಟರಮಣ ಎಂಬ ಹೆಸರೂ ಇದೆ. ಅಲಂಕಾರ ಪೂರ್ಣವಾದಾಗ ವಿಗ್ರಹ ಬೈರಾಗಿಯಂತೆ ಕಾಣುತ್ತದೆ ಎನ್ನುತ್ತಾರೆ. ಗರ್ಭಗುಡಿಯ ಬಲಬದಿಗೆ ಯೋಗ ಶ್ರೀನಿವಾಸ ಹಾಗೂ ಎಡಬದಿಗೆ ಭೋಗ ಶ್ರೀನಿವಾಸನ ಮೂರ್ತಿಗಳಿವೆ. ದೇವಸ್ಥಾನದ ಎದುರಿಗೆ
ಕಲ್ಲಿನಲ್ಲಿ ಕೆತ್ತಿರುವ ಸಾಕಷ್ಟು ದೊಡ್ಡದಾದ ಗರುಡನ ಮೂರ್ತಿ ಇದೆ. ಮುಂಭಾಗದಲ್ಲಿ ಗರುಡಗಂಬವಿದೆ. ಮುಖ್ಯ ದೇವಸ್ಥಾನದ
ಬಲಭಾಗದಲ್ಲಿ ಪದ್ಮಾವತಿ ದೇವಿ ಇದ್ದರೆ ಎಡಭಾಗದಲ್ಲಿ ಯಾಗ ಮಂಟಪ ಹಾಗೂ ಪುಟ್ಟದಾದ ರಾಮ, ಲಕ್ಷ್ಮಣ, ಸೀತೆಯರ
ವಿಗ್ರಹಗಳಿವೆ. ದೇವಸ್ಥಾನದ ಪ್ರಾಕಾರದ ಹೊರಗೆ ಸುತ್ತಲೂ 360 ಡಿಗ್ರಿ ಸುಂದರ ನೋಟ ಲಭ್ಯ.

ಮೇಲಿನಿಂದ ಲೋಕಪಾವನಿ ಮತ್ತು ಕಾವೇರಿನದಿಗಳ ಸಂಗಮ ಸ್ಪಷ್ಟವಾಗಿ ಗೋಚರಿಸುತ್ತದೆ. ದೂರದಲ್ಲಿ ನಿಮಿಷಾಂಬ
ದೇವಾಲಯವೂ ಕಾಣಿಸುತ್ತದೆ. ದೇವಸ್ಥಾನದ ಹೊರಗೆ ಪಾಳುಬಿದ್ದಿರುವ ಪುರಾತನ ಶೈಲಿಯ ಎರಡು ಮಂಟಪಗಳೂ ಇವೆ.

ಶ್ರೀರಂಗಪಟ್ಟಣದಿಂದ ಬಸ್ಸು, ಆಟೋಗಳನ್ನು ಹಿಡಿದು ತಲುಪಬಹುದು. ಸ್ವಂತ ವಾಹನದಲ್ಲೂ ಬರಬಹುದು.