Monday, 25th November 2024

ಕೋಟೆಗಳುಳಿಯಲಿ ಪ್ರವಾಸ ಮೆರೆಯಲಿ !

ಮಾಲತಿ ಪಟ್ಟಣಶೆಟ್ಟಿ

ನಮ್ಮ ದೇಶದಲ್ಲಿ ಅಕ್ಷರಶಃ ಸಾವಿರಾರು ಕೋಟೆಗಳಿವೆ, ನಿಸರ್ಗ ರಮಣೀಯ ತಾಣಗಳಿವೆ, ಜಲಪಾತಗಳಿವೆ, ಗುಹೆಗಳಿವೆ, ಪ್ರಾಕೃತಿಕ ವಿಸ್ಮಯಗಳಿವೆ, ವಾಸ್ತುವಿನ್ಯಾಸದ ಅದ್ಭುತಗಳಿವೆ. ಆದರೆ ಅವುಗಳಿಗೆ ಸೂಕ್ತ ರಕ್ಷಣೆ ಕೊಟ್ಟು, ಪ್ರವಾಸಿಗರನ್ನು ಆಕರ್ಷಿಸುವ ಕೆಲಸವನ್ನು ಮಾಡಲಾಗಿದೆಯೆ? ಈ ಪ್ರಶ್ನೆಗೆ ‘‘ಹೌದು’’ ಎಂದು ಗಟ್ಟಿದನಿಯಲ್ಲಿ ಉತ್ತರಿಸುವುದು ಕಷ್ಟ. ಸ್ಥಳೀಯರ ಒಳಗೊಳ್ಳುವಿಕೆಯೊಂದಿಗೆ, ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕೆಂದು ಹಿರಿಯ ಸಾಹಿತಿ ಯೊಬ್ಬರು ತಮ್ಮ ಸಲಹೆಗಳನ್ನು ಇಲ್ಲಿ ನೀಡಿದ್ದಾರೆ.

ಕೆಲ ದಿನದ ಹಿಂದೆ ಪತ್ರಿಕೆಯಲ್ಲಿ ಓದಿದ್ದೆ. ಆಂಧ್ರದ ವಿಶಾಖಪಟ್ಟಣ ಜಿಲ್ಲೆಯ ಕಟಕಿ ಜಲಪಾತಕ್ಕೆ ಭೆಟ್ಟಿಕೊಟ್ಟ ಪ್ರವಾಸಿಗರು
ಸಲ್ಲಿಸಿದ ಶುಲ್ಕದ ಹಣವನ್ನು ಸರಕಾರವು ಅಲ್ಲಿಯ ಬುಡಕಟ್ಟು ಜನರಿಗೆ ಮುಟ್ಟುವಂತೆ ಕಾಯಿದೆ ಮಾಡಿದ್ದಾರೆ.

ಆಗ ತಕ್ಷಣ ನೆನಪಾದದ್ದು ನಾನು ಸಂದರ್ಶಿಸಿದ ಅಮೇರಿಕೆಯ ಗ್ರ್ಯಾಂಡ್ ಕೆನಿಯನ್‌ನಲ್ಲಿಯ ಪ್ರವಾಸಿಗರಿಂದ ದೊರೆತ ಪ್ರವೇಶ ಶುಲ್ಕದ ಬಗ್ಗೆ. ಈ ಪ್ರವೇಶ ಶುಲ್ಕವು ಅಲ್ಲಿ ವಾಸವಾಗಿದ್ದ ಬುಡಕಟ್ಟು ಜನರ ಕೈ ಸೇರುತ್ತಿರುವುದು ಸರ್ಕಾರವು ಜಾರಿಯಲ್ಲಿ ತಂದ
ಶಿಸ್ತುಬದ್ಧವಾದ ಕ್ರಮದಿಂದಾಗಿ. ಇದು ಯಾರಾದರೂ ಮೆಚ್ಚಿಕೊಳ್ಳುವಂಥ ಕ್ರಮವೇ.

ವಿಶಾಖಪಟ್ಟಣದ ಉದಾಹರಣೆ ಭಾರತದಲ್ಲಿ ತುಸು ಅಪರೂಪವೇ. ನಮ್ಮ ದೇಶದ ಹೆಚ್ಚಿನ ಪ್ರವಾಸಿ ತಾಣಗಳಲ್ಲಿ ಅವ್ಯವಸ್ಥೆ ರಾರಾಜಿಸುತ್ತಿದೆ. ಆ ತಾಣ ಗಳಲ್ಲಿರುವ ಸ್ಮಾರಕಗಳು ದುರವಸ್ಥೆಯಲ್ಲಿವೆ, ಸರಿಯಾದ ರಸ್ತೆಗಳಿಲ್ಲ, ಕುಡಿಯುವ ನೀರಿನ ಹಾಗೂ ಶೌಚಾಲಯಗಳ ವ್ಯವಸ್ಥೆ ಇಲ್ಲ. ತರತರದ ಪ್ಯಾನ್ಸಿ ವಸ್ತುಗಳು, ಪ್ಲಾಸ್ಟಿಕ್ ಸಾಮಾನುಗಳನ್ನು ಮಾರುವ 8-10 ಅಂಗಡಿಗಳನ್ನು ಬಿಟ್ಟರೆ ಅಲ್ಲಿ ಏನೇನೂ ಇರುವುದಿಲ್ಲ. ಇಂಥ ಪ್ರೇಕ್ಷಣೀಯ ಸ್ಥಳಗಳು, ನಮ್ಮ ಹಿರಿಯರು ನಮಗೊಪ್ಪಿಸಿದ ಅಮೂಲ್ಯ ಬಳುವಳಿ ಯಂತಿವೆ.

ಈಗ ಇವೆಲ್ಲ ನಿರ್ಲಕ್ಷದ ಬೆಂಕಿಯಲ್ಲಿ ಸುಡುತ್ತ ವಿನಾಶದಚಂಚಿನಲ್ಲಿವೆ. ನೋಡುಗರ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ ಯಾದರೂ ನಾವ್ಯಾರೂ ಈ ಕುರಿತು ಪ್ರವಾಸೋದ್ಯಮ ಇಲಾಖೆಗೆ ಅರಿಕೆ ಮಾಡಿಕೊಂಡಿಲ್ಲ! ಪ್ರವಾಸೀ ತಾಣಗಳಲ್ಲಿ ಏನೋ ಒಂದಿಷ್ಟು ವ್ಯಾಪಾರ ನಡೆಸಿ ಹೇಗೋ ಉಪಜೀವಿಕೆಯನ್ನು ಸ್ಥಳೀಯರು ಮಾಡಿಕೊಳ್ಳುತ್ತಾರೆ. ಈ ಸ್ಥಳೀಯರೂ ಸರಕಾರಕ್ಕೆ ಆಕ್ಷೇಪದ ಕಾಗದ ಬರೆದಿಲ್ಲ. ಪ್ರವಾಸಿಗರೂ ಸುಮ್ಮನೆ, ಪ್ರವಾಸೀ ತಾಣದ ಊರವರೂ ಸುಮ್ಮನೆ, ಪ್ರವಾಸಿ ಇಲಾಖೆಯೂ ಸುಮ್ಮನೆ ಕುಳಿತಿವೆ!

ಸರಕಾರಕ್ಕೆ ಈ ಯಾವ ಮೌನಗಳ ಈಟಿ ಚುಚ್ಚುವುದು ಸಾಧ್ಯವಾಗಿಲ್ಲ. ಈ ಕುರಿತು ಸಾಕಷ್ಟು ಯೋಚಿಸಿ, ವಿಷಾದಗಳೊಂದಿಗೆ ಭಾರತದ ಪ್ರವಾಸಿ ತಾಣಗಳನ್ನು ರಕ್ಷಿಸಿಕೊಳ್ಳುವ ಕುರಿತಾಗಿ, ಹೀಗೆ ಮಾಡಿದರೆ ಹೇಗೆ ಎಂಬ ನನ್ನ ಮನೋಗತವನ್ನು ನಾನಿಲ್ಲಿ ತಿಳಿಸಪಡಿಸಲು ಬಯಸುತ್ತೇನೆ.

1) ಐತಿಹಾಸಿಕವೇ ಇರಲಿ, ಧಾರ್ಮಿಕವೇ ಇರಲಿ, ಸಂಸ್ಕೃತಿಯದೇ ಇರಲಿ, ನೈಸರ್ಗಿಕ ತಾಣವೇ ಆಗಿರಲಿ, ಅದರ ಸುತ್ತಲೂ ಒಂದು ಕಾನೂನು ಸಮ್ಮತ ವೃತ್ತವನ್ನು ನಿಗದಿಪಡಿಸಬೇಕು. ಆ ಪ್ರದೇಶದ ಪ್ರವೇಶ ದ್ವಾರದಲ್ಲಿ ಒಂದು ನ್ಯಾಯಬದ್ಧವಾದ ಶುಲ್ಕವನ್ನು ಪಡೆಯುವಂಥ ಕಚೇರಿ ಇರಬೇಕು. ಹೀಗೆ ಪಡೆದ ಶುಲ್ಕದಲ್ಲಿ ಅರ್ಧ ಪಾಲನ್ನು ಪ್ರವಾಸಿ ತಾಣದ ಜೀರ್ಣೋದ್ಧಾರಕ್ಕಾಗಿ
ಮೀಸಲಿಡಬೇಕು. ಸಂದರ್ಶಿಸಲು ಬರುವವರಿಗಾಗಿ ಹೊಸ ದಾರಿ, ನಿರ್ಮಲೀಕರಣ ಮತ್ತು ಆ ತಾಣದ ಸುತ್ತಲೂ ಸುಂದರವಾದ ತೋಟ ರಚಿಸಬೇಕು. ಪ್ರೇಕ್ಷಣೀಯ ತಾಣದ ಆವರಣದಲ್ಲಿ ನೀರು, ಶೌಚಾಲಯ, ಉಪಾಹಾರ ಗೃಹ, ವಿಶ್ರಾಂತಿಧಾಮಗಳನ್ನು ರಚಿಸಬೇಕು. ಪ್ರೇಕ್ಷಣೀಯ ಸ್ಥಳದ ಆವರಣದಲ್ಲಿ ಸಾಲಾಗಿ ಪ್ರಾದೇಶಿಕ ಗ್ರಾಮೀಣರ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು
ಮಾರಾಟಕ್ಕಾಗಿ ವ್ಯವಸ್ಥೆ ಮಾಡಬೇಕು.

ಆಯಾ ಪ್ರೇಕ್ಷಣೀಯ ತಾಣಗಳ ಇತಿಹಾಸದ ಮಾಹಿತಿ ಕುರಿತ ಪುಸ್ತಕ ಭಂಡಾರ ಮತ್ತು ಪ್ರವಾಸಿಗರ ಸಮಸ್ಯೆಗಳನ್ನು ಪರಿಗಣಿಸಿ
ನಿವಾರಿಸುವ ಅಧಿಕಾರಿಗಳಿಗಾಗಿ ಆಫೀಸು ಇರಬೇಕು.

2) ಸರಕಾರ ನಡೆಸುವಂಥ ಪ್ರವಾಸಿಗರ ವಿಶ್ರಾಂತಿ ಧಾಮಗಳು, ಅವರಿಗಾಗಿ ವಾಹನಗಳ ವ್ಯವಸ್ಥೆ ಮತ್ತು ಒಂದು ಚಿಕ್ಕದಾದರೂ ಸರಕಾರಿ ಆಸ್ಪತ್ರೆಯ ಕಟ್ಟಡ ಇರಬೇಕು.

3) ಪ್ರವಾಸಿ ತಾಣಗಳ ಆವರಣದಲ್ಲೇ ಸ್ಥಳೀಯ ಗ್ರಾಮೀಣರ ವ್ಯಾಪಾರಕ್ಕಾಗಿ ಸರಕಾರವು ಸುವ್ಯವಸ್ಥಿತವಾದ ಸೌಲಭ್ಯಗಳಿರುವ ಅಂಗಡಿಗಳನ್ನು ಕಟ್ಟಿಸಬೇಕು.

ಪ್ರವಾಸಿಗರು ಕೊಳ್ಳಬಯಸುವ ಯಾವುದೇ ಗ್ರಾಮಿಣ ಉತ್ಪನ್ನಗಳ ಮಾರಾಟಕ್ಕಾಗಿ ವ್ಯವಸ್ಥೆ ಇರಬೇಕು ಮತ್ತು ಗ್ರಾಮೀಣರು ಪ್ರವಾಸಿಗಳಿಂದ ಪಡೆಯುವ ಮೂರನೇ ಒಂದು ಪಾಲಿನ ಹಣದಿಂದ ಆಯಾ ಗ್ರಾಮ ಸುಧಾರಣೆಯ ಕೆಲಸಕ್ಕೆ ಮೀಸಲಿಡಬೇಕು.
ನಮ್ಮ ನಾಡಿನಲ್ಲಿ ನೂರಾರು ಪ್ರವಾಸಿತಾಣಗಳಿವೆ.

ಎಷ್ಟೋ ಕೋಟೆ ಕೊತ್ತಲಗಳು, ಭಾರತೀಯ ಸಾಂಸ್ಕೃತಿಕ, ನೈಸರ್ಗಿಕ ತಾಣಗಳು ಸರಕಾರದ ಅಲಕ್ಷ್ಯದಿಂದಾಗಿ ಮತ್ತು ಸ್ಥಳೀಯರ ಬೇಜವಾಬ್ದಾರಿಯಿಂದಾಗಿ, ದೇಶದ ಇತಿಹಾಸಕಾರರ ನಿರ್ಲಕ್ಷ್ಯದಿಂದಾಗಿ ಪಾಳು ಬಿದ್ದಿವೆ. ಇವುಗಳನ್ನು ಗುರುತಿಸಿ ಸುಧಾರಿತ ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸುವ ತುರ್ತು ಅಗತ್ಯವಿದೆ.

ಇನ್ನಾದರೂ ಜನತೆ ಎಚ್ಚೆತ್ತುಕೊಳ್ಳಲಿ, ಪ್ರವಾಸಿ ಇಲಾಖೆಯು ಆಲಸ್ಯವನ್ನು ಕೊಡವಿ ಕ್ರಿಯಾಶೀಲವಾಗಲಿ, ಸರಕಾರದ ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಲಿ, ಪ್ರವಾಸಿ ತಾಣಗಳನ್ನು ರಕ್ಷಿಸಲಿ, ಅಭಿವೃದ್ಧಿ ಪಡಿಸಲಿ, ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳಸಲಿ ಮತ್ತು ಪ್ರವಾಸಿಗರಿಗೆ ಸೂಕ್ತವಾಗಿ ತೋರಿಸುವಂತೆ ಮಾಡಲಿ.