Monday, 25th November 2024

ಸಖಿಯರಿಗೆಂದೇ ನಿರ್ಮಿಸಲಾದ ಉದ್ಯಾನ -ಸಹೇಲಿಯೋಂ ಕೀ ಬಾರಿ

ಮಂಜುನಾಥ್‌ ಡಿ.ಎಸ್‌.

ರಾಣಿಯರಿಗೆಂದೇ ನೀರಿನ ಕಾರಂಜಿಯನ್ನು ನಿರ್ಮಿಸುವುದು ರಾಜರ ಹವ್ಯಾಸ. ಆದರೆ ಇಲ್ಲಿ, ಮದುವೆಯಾಗಿ ಬರುವ ವಧುವಿನ ಸಖಿಯರಿಗಾಗಿ ನಿರ್ಮಿಸಿದ ನೀರಿನ ಕಾರಂಜಿಗಳು ಸುಂದರವಾಗಿವೆ, ಐತಿಹಾಸಿಕ ಎನಿಸಿವೆ. ಇಲ್ಲಿರುವ 2,000ಕ್ಕೂ ಹೆಚ್ಚಿನ ಕಾರಂಜಿಗಳಿಂದ ನೀರನ್ನು ಚಿಮ್ಮಿಸಲು ಯಾವುದೇ ಯಂತ್ರದ ಉಪಯೋಗವಾಗಿಲ್ಲ ಎಂಬುದು ವಿಶೇಷ.

ಸಹೇಲಿಯೋಂ ಕೀ ಬಾರಿ ಉದಯಪುರದ ಪ್ರಮುಖ ಉದ್ಯಾನ ಹಾಗು ಜನಪ್ರಿಯ ಪ್ರವಾಸಿ ತಾಣ. ಎರಡನೇ ಮಹಾರಾಣಾ ಸಂಗ್ರಾಮ್ ಸಿಂಘ್ ಸುಮಾ ಮೂರು ಶತಮಾನಗಳ ಹಿಂದೆ (1710ರಿಂದ 1734ರ ಅವಧಿಯಲ್ಲಿ) ರೂಪಿಸಿದ ಈ ಉದ್ಯಾ ನವನ ಇಂದಿಗೂ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ.

ನೀರಿನ ಪಂಪುಗಳು ಲಭ್ಯವಿಲ್ಲದ ಅಂದಿನ ಕಾಲಘಟ್ಟದಲ್ಲಿ ಗುರುತ್ವಾಕರ್ಷಣ ತತ್ತ್ವವನ್ನಾಧರಿಸಿ ನೀರು ಚಿಮ್ಮಿಸುವಂತೆ ನಿರ್ಮಿಸಿದ ಎರಡು ಸಾವಿರಕ್ಕೂ ಹೆಚ್ಚಿನ ಕಾರಂಜಿಗಳನ್ನು ಹೊಂದಿರುವ ಈ ಉದ್ಯಾನ ಅನನ್ಯವೆನಿಸಿದೆ. ಉದ್ಯಾನವನದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ, 90 ಅಡಿ ಎತ್ತರದಲ್ಲಿರುವ ಫತೇ ಸಾಗರ್ ಸರೋವರದಿಂದ ಈ ಕಾರಂಜಿಗಳಿಗೆ ನೀರು ಸರಬರಾಜಾಗುತ್ತದೆ. ಈ ಉದ್ದೇಶಕ್ಕಾಗಿಯೇ ವಿಶೇಷವಾಗಿ ತಾಮ್ರದ ನಳಿಕೆ ಗಳನ್ನು ಅಳವಡಿಸಲಾಗಿದೆ.

ಐದು ಕಾರಂಜಿಗಳು
ಇಲ್ಲಿನ ಐದು ಕಾರಂಜಿಗಳು ಪ್ರವಾಸಿಗರ ಮನೆ ಸೆಳೆಯುವ ದೃಷ್ಟಿಯಲ್ಲಿ ಪ್ರಮುಖವೆನಿಸಿಕೊಂಡಿವೆ. ಮೊದಲನೆಯದು ಸ್ವಾಗತ ಕಾರಂಜಿ. ರಾಜಕುಟುಂಬದ ಸ್ತ್ರೀಯರು ಉದ್ಯಾನವನಕ್ಕೆ ಆಗಮಿಸಿದಾಗ, ಈ ಕಾರಂಜಿಯು ಕಮಾನಿನಾಕಾರದಲ್ಲಿ ನೀರು ಚಿಮ್ಮಿಸಿ ಅವರನ್ನು ಸ್ವಾಗತಿಸುತ್ತಿತ್ತಂತೆ. ಎರಡನೆಯದು ಸಾವನ್ ಭಾದೋ ಚಿಲುಮೆ.

ವೃತ್ತಾಕಾರದ ಕೊಳದ ಮಧ್ಯದಲ್ಲಿ ಮೂರು ಮಜಲಿನ ವರ್ಣಮಯ ಕಾರಂಜಿಯಿದೆ. ಕೆಳ ಹಂತದಲ್ಲಿ ನಾಲ್ಕು ಶ್ವೇತವರ್ಣದ
ಪಕ್ಷಿಗಳ ಪ್ರತಿಮೆಗಳಿವೆ. ಶೃಂಗದಲ್ಲಿ ರೆಕ್ಕೆ ಹರಡಿಕೊಂಡು ಕೊಕ್ಕನ್ನು ಮೇಲಕ್ಕೆತ್ತಿ ಆಗಸದತ್ತ ಮುಖಮಾಡಿ ನಿಂತ ಪಕ್ಷಿಯೊಂದರ ಶಿಲ್ಪವಿದೆ. ಕಾರಂಜಿಯಿಂದ ಕೆಲ ಅಡಿಗಳ ದೂರದಲ್ಲಿ ಸುತ್ತಲೂ ಬೆಳೆಸಿರುವ ಹಸಿರು ಗಿಡ-ಮರಗಳ ಮೇಲೆ ಬೀಳುವ ನೀರಿನ ಶಬ್ದ ಮಳೆಯ ಅನುಭವವನ್ನು ನೀಡುವುದರಿಂದ ಈ ಹೆಸರು ಬಂದಿದೆ.

ನಂತರದ್ದು ಎಲಿಫೆಂಟ್ ಫೌಂಟನ್. ಕಮಲ್ ತಲಾಯಿ ಅರ್ಥಾತ್ ತಾವರೆ ಕೊಳದ ನಾಲ್ಕು ಬದಿಗಳಲ್ಲಿ ಅಮೃತಶಿಲೆಯ ಆನೆಗಳಿವೆ. ಪ್ರತಿ ಗಜವೂ ಏಕಶಿಲೆ ಯಲ್ಲಿ ಕೆತ್ತಲ್ಪಟ್ಟಿದ್ದು ಹಗ್ಗ, ಘಂಟೆ, ಸರಪಳಿ, ಇತ್ಯಾದಿಗಳಿಂದ ಅಲಂಕೃತ ಗೊಂಡಿದೆ. ಪ್ರತಿಯೊಂದು ಆನೆಯ ಸೊಂಡಿಲಿನಿಂದ ನೀರು ಹೊರಚಿಮ್ಮು ವಂತೆ ವಿನ್ಯಾಸಗೊಳಿಸಲಾಗಿದೆ. ನಿಜವಾದ ಆನೆ ಸಹ ಸೊಂಡಿಲಿ ನಿಂದ ನೀರನ್ನು ಚಿಮ್ಮಿಸುವಲ್ಲಿ ಪ್ರವೀಣ. ಅದೇ ರೀತಿಯಲ್ಲಿ ಈ ಆನೆಗಳು ನೀರನ್ನು ಹಾರಿಸುವ ದೃಶ್ಯ ಮನಮೋಹಕ. ಕೊಳದ ನಡುವಿನಲ್ಲಿನ ಅಲಂಕಾರಿಕ ರಚನೆಯ ಪೀಠದಲ್ಲಿ ನಾಲ್ಕು ಸಿಂಹಗಳನ್ನು ನಿರ್ಮಿಸಲಾಗಿದೆ.

ಇವು ಕುಳಿತ ಭಂಗಿಯಲ್ಲಿದ್ದು ಗಾಂಭೀರ್ಯ ಭಾವವನ್ನು ಪ್ರದರ್ಶಿಸುವಂತಿವೆ. ಕೊಳದ ಸುತ್ತಲೂ ನೂರಾರು ನೀರಿನ ಕಾರಂಜಿ ಗಳಿವೆ. ಇವುಗಳಿಂದ ನೀರು ಚಿಮ್ಮುವಾಗ ಹೊರಹೊಮ್ಮುವ ನಿನಾದ ಮೈಮರೆಸುತ್ತದೆ.

ಹೋಳಿ ಹಬ್ಬದ ಕಾರಂಜಿ
ನಾಲ್ಕನೆಯದು ರಾಸಲೀಲ ಕಾರಂಜಿ. ಹೋಳಿ ಹಬ್ಬದ ಸಂದರ್ಭದಲ್ಲಿ ಈ ಚಿಲುಮೆಯ ಬಳಿ ಜಾನಪದ ನರ್ತನ ಕಾರ್ಯಕ್ರಮ ಜರುಗುತ್ತಿತ್ತಂತೆ. ಹೋಳಿಯ ಸಂದರ್ಭಕ್ಕೆ ಅನುಗುಣವಾಗಿ ಬಣ್ಣ ನೀರಿನ ಬಳಕೆಯನ್ನು ಸಹ ಮಾಡಲಾಗುತ್ತಿತ್ತು. ಐದನೆಯದು ಹಾಗು ಅತ್ಯಂತ ಆಕರ್ಷಕವಾದದ್ದು ಬಿನ್ ಬಾದಲ್ ಬರ್ಸಾತ್ ಚಿಲುಮೆ.

ಚೌಕಾಕಾರದ ಕಲ್ಯಾಣಿಯ ನಡುವಿನಲ್ಲಿ ಬಿಳಿ ಅಮೃತಶಿಲೆಯ ದೊಡ್ಡ ಮಂಟಪವಿದೆ. ನಾಲ್ಕೂ ಮೂಲೆಗಳಲ್ಲಿ ಕಪ್ಪು ಶಿಲೆಯ ಚಿಕ್ಕ ಮಂಟಪಗಳಿವೆ. ಇವು ಕಮಾನು ಕಂಬಗಳು ಹಾಗು ಗುಮ್ಮಟಾಕಾರದ ಚಾವಣಿ ಹೊಂದಿವೆ. ಮಧ್ಯದಲ್ಲಿರುವ ಮಂಟಪದ ಚಾವಣಿಯಿಂದ ಹರಿದು ಬರುವ ಜಲಶಾಖೆಗಳು ವರ್ಷಧಾರೆಯನ್ನು ನೆನಪಿಸುತ್ತವೆ.

ತಾವು ವಿವಾಹವಾಗಲಿರುವ ವಧುವಿನ ಸಖಿಯರಾಗಿ ಆಗಮಿಸಿದ್ದ ನಲವತ್ತೆಂಟು ಯುವತಿಯರು ಆನಂದದಿಂದ ಸಮಯ ಕಳೆಯಲು ಅನುಕೂಲವಾಗಲೆಂದು ಈ ಅಮೋಘ ಉದ್ಯಾನವನ್ನು ಅರಸರೇ ಸ್ವತಃ ವಿನ್ಯಾಸಗೊಳಿಸಿ, ರಾಣಿಗೆ ಉಡುಗೊರೆಯಾಗಿ ನೀಡಿದರು ಎಂದು ಪ್ರತೀತಿ. ಆದ್ದರಿಂದಲೇ ಈ ಕಾರಂಜಿಗಳಿಗೆ ಇಂತಹ ಹೆಸರನ್ನು ಇಡಲಾಗಿದೆ. ಈ ಉದ್ಯಾನದ ಅಂದವನ್ನು ಹೆಚ್ಚಿಸಲು ಮಹಾರಾಣ ಭೋಪಾಲ್ ಸಿಂಘ್ 1889ರಲ್ಲಿ ಬಿನ್ ಬಾದಲ್ ಬರ್ಸಾತ್ ಕಾರಂಜಿಯನ್ನು ಸ್ಥಾಪಿಸಿದರು. ಇದನ್ನು ಸುಂದರವಾಗಿ ಕಾಣಿಸಲು ಅಗತ್ಯ ಎನಿಸುವ ಹಲವು ದುಬಾರಿ ಪರಿಕರಗಳನ್ನು ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡಿದ್ದರು.

ಚೆಲುವಿನ ಕಾರಂಜಿಗಳ ಜತೆಯಲ್ಲೇ, ಈ ಪ್ರದೇಶದ ಹಸಿರಿನ ವನಸಿರಿಯೂ ಸೇರಿ ಪ್ರವಾಸಿಗರ ಮನಸೂರೆಗೊಳ್ಳುವ ಈ ಉದ್ಯಾ ನವನ ಗತಕಾಲದ ವೈಭವದ ಭವ್ಯತೆಯ ಚಿತ್ರಣ ನೀಡುತ್ತದೆ. ದೀಪಾಲಂಕಾರ ಮಾಡಿಕೊಳ್ಳದ ಇಲ್ಲಿನ ಚಿಲುಮೆಗಳು ತಮ್ಮ ಸಹಜತೆಯನ್ನು ಕಾಪಿಟ್ಟುಕೊಂಡು ಬಂದಿವೆ. ಭಾರತದ ಚರಿತ್ರೆಯ ಕಿರು ಪರಿಚಯ ನೀಡುವ ವಸ್ತುಸಂಗ್ರಹಾಲಯವೂ
ಈ ವನದ ಆವರಣದಲ್ಲಿ ಸೇರ್ಪಡೆಯಾಗಿದೆ. ರಾಜಾಸ್ಥಾನದ ಈ ಸುಂದರ ವಿಹಾರತಾಣವನ್ನು ಬೆಳಗಿನ ಒಂಬತ್ತರಿಂದ ಸಂಜೆ ಏಳರವರೆಗೆ ವೀಕ್ಷಿಸಬಹುದು.