Friday, 20th September 2024

ಮೊಬೈಲ್ ಬಳಕೆ ಸಕಾರಣ ಮುಖ್ಯ

ಇಂದಿನಷ್ಟು ಸಂಚಾರ ವ್ಯವಸ್ಥೆ ಸುಧಾರಿತವಲ್ಲದ ಕಾಲದಲ್ಲಿ ಜನರ ನಡುವಿನ ಸಂವಹನದ ಕಾರಣಕ್ಕಾಗಿ ಮೊಬೈಲ್ ಕಂಡುಹಿಡಿಯಲಾಯಿತು.

ಆವಿಷ್ಕಾರದ ನಂತರ ಸುಧಾರಣೆಯೊಂದಿಗೆ ೮೦ರ ದಶಕದಲ್ಲಿ ಬಳಕೆಗೆ ಬಂದ ಮೋಟೋರೋಲಾ, ೯೦ರ ದಶಕದಲ್ಲಿ ನೋಕಿಯಾ ನಂತರ ೨೦೨೦ರ ಕಾಲಮಾನದಲ್ಲಿ ಸ್ಮಾರ್ಟ್‌ಪೋನ್‌ಗಳ ಯುಗ ಆರಂಭಗೊಂಡಿತು. ಮೊಬೈಲ್ ಎಂಬುದು ಇಂದಿನ ಜೀವನ ವ್ಯವಸ್ಥೆಯಲ್ಲಿ ಜನಜೀವನದ ಒಂದು ಅಂಗವೇ ಆಗಿದೆ. ದಿನಬಳಕೆಯ ವಸ್ತುಗಳ ಸಾಲಿನಲ್ಲಿ ಪ್ರಥಮ ಪ್ರಾಶಸ್ತ್ಯ ಗಳಿಸಿಕೊಂಡಿದೆ.

ಆದರೆ ಇವುಗಳ ಬಳಕೆಯ ಬಗೆಗಿನ ವಿವರಗಳು ಆತಂಕ ಮೂಡಿಸುತ್ತವೆ. ಸಂವಹನ ಸಾಧಕವಾಗಿ ಬಳಕೆಗೆ ಬಂದ ಮೊಬೈಲ್ ಇಂದು ದುಷ್ಕೃತ್ಯಗಳಿಗೂ ಬಳಕೆಯಾಗುತ್ತಿರುವುದು ವಿಷಾದನೀಯ. ಮೊಬೈಲ್‌ನ ದುರ್ಬಳಕೆಯಿಂದ ಹನಿಟ್ರ್ಯಾಪ್ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳು ಸಂಭವಿಸುತ್ತಿದ್ದರೆ, ಅತಿಯಾದ ಬಳಕೆಯಿಂದ ಜನರು ಆರೋಗ್ಯ ಸಮಸ್ಯೆಗಳಿಗೂ ಒಳಗಾಗುತ್ತಿದ್ದರೆ.

ಒಟ್ಟಾರೆ ಸದುದ್ದೇಶದ ಕಾರಣದಿಂದಾಗಿ ಬಳಕೆಗೆ ತಂದ ಮೊಬೈಲನ್ನು ಸದುದ್ದೇಶಕ್ಕಾಗಿಯೇ ಬಳಸಬೇಕಿದೆ. ಇತ್ತೀಚೆಗೆ ಮೊಬೈಲ್ ಗೀಳಿನಿಂದಾಗಿ ಹಲವು ಸಂಸಾರಗಳು ಹಳಿ ತಪ್ಪುತ್ತಿವೆ ಎಂಬ ಅಂಶವೂ ಬಹಿರಂಗಗೊಂಡಿದೆ. ಇತ್ತೀಚೆಗೆ ಚಿಕ್ಕಮಗಳೂರಿನ ಸಾಂತ್ವನ ಕೇಂದ್ರವೊಂದರಲ್ಲಿ ಕುಟುಂಬ ಕಲಹಕ್ಕೆ ಸಂಬಂಧಿಸಿದಂತೆ ೮೦ ಪ್ರಕರಣ ದಾಖಲಾಗಿದೆ. ಪರಿಶೀಲನೆ ವೇಳೆ ಹೆಚ್ಚಿನ
ಪ್ರಕರಣಗಳಲ್ಲಿ ಕಲಹ ಸಂಭವಿಸಲು ಮೊಬೈಲ್ ಕಾರಣವಾಗಿದೆ. ಮೊಬೈಲ್ ಗೀಳಿನಿಂದಾಗಿ ದೊರೆಯುವ ಅಪರಿಚಿತರ ಸ್ನೇಹದಿಂದಾಗಿ ಅನೈತಿಕ ಸಂಬಂಧಗಳೂ ಸೃಷ್ಟಿಯಾಗುತ್ತಿವೆ. ಹಲವಾರು ಕುಟುಂಬಗಳಲ್ಲಿ ಕಲಹಗಳು ಉಂಟಾಗಲು ಈ ರೀತಿ ಮೊಬೈಲ್‌ಗಳ ದುರ್ಬಳಕೆಯೇ ಕಾರಣ ಎನ್ನಲಾಗುತ್ತದೆ.

ದೂರ ದೂರದ ಸಂಬಂಧಿಗಳ ನಡುವೆ ನಿರಂತರ ಬಾಂಧವ್ಯ ಹೊಂದಲು ಸಕಾರಣದಿಂದ ಸೃಷ್ಟಿಸಿದ ಸಂವಹನ ಸಾಧನವಾದ ಮೊಬೈಲ್ ಹೆಚ್ಚು ಕುಕೃತ್ಯಗಳಿಗೆ ಬಳಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.