Monday, 25th November 2024

ರೈಕ್ಸ್ ಮ್ಯೂಸಿಯಂ

ಡಾ.ಉಮಾಮಹೇಶ್ವರಿ ಎನ್‌.

ಈ ಮ್ಯೂಸಿಯಂನಲ್ಲಿರುವ ಕಲಾಕೃತಿಗಳನ್ನು ನೋಡುವ ಅನುಭವ ವಿನೂತನ. ದ ನೈಟ್ ವಾಚ್ ಎಂಬ ಪ್ರಖ್ಯಾತ ಕಲಾಕೃತಿಯ ಪ್ರದರ್ಶನಕ್ಕಾಗಿ ಒಂದು ಕೊಠಡಿಯನ್ನೇ ಇಲ್ಲಿ ಮೀಸಲಿಡಲಾಗಿದೆ.

ನೆದರ್ಲೆಂಡ್ಸ್‌‌ನ ಆಮ್ ಸ್ಟರ್ ಡಾಮ್ ನಲ್ಲಿ ಕಲೆ ಮತ್ತು ಇತಿಹಾಸಗಳನ್ನು ಬಿಂಬಿಸುವ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ನೋಡುವ ಅನುಭವ ತುಸು ವಿಶಿಷ್ಟ. ಬಹು ಅಪರೂಪದ ಕಲಾಕೃತಿಗಳನ್ನು ಹೊಂದಿರುವ ಈ ಮ್ಯೂಸಿಯಂ ಪ್ರವಾಸಿಗರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವುದರಲ್ಲಿ ಅಚ್ಚರಿಯಿಲ್ಲ. ಪ್ರಮುಖವಾದ ಮ್ಯೂಸಿಯಂ ಚೌಕದಲ್ಲಿರುವ ಇದು ತನ್ನದೇ ಆದ ವೈಶಿಷ್ಟ್ಯ ಹೊಂದಿದೆ.

ಪ್ಯಾರಿಸ್ ನ ಲೂವ್‌ರ್‌ ಮ್ಯೂಸಿಯಂನ ರೀತಿಯಲ್ಲೇ ಅಪೂರ್ವ ಸಂಗ್ರಹವಿರುವ ಮ್ಯೂಸಿಯಂ ಒಂದನ್ನು ನೆದರ್ಲೆಂಡ್ಸ್ ‌ ದೇಶ ದಲ್ಲೂ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಆರಂಭವಾದ ಈ ಮ್ಯೂಸಿಯಂ ಅದರಂತೆಯೇ ವೈಶಿಷ್ಟ್ಯ ಪೂರ್ಣವಾಗಿದೆ. ನವೆಂಬರ್ 1798ರಲ್ಲಿ ಹೇಗ್ ನಗರದಲ್ಲಿ ಆರಂಭ ವಾದ ಈ ಮ್ಯೂಸಿಯಂ 1808 ರಲ್ಲಿ ಆಮ್ ಸ್ಟರ್ ಡಾಮ್ ಗೆ ಸ್ಥಳಾಂತರ ಗೊಂಡಿತು.

ಒಂದೆರಡು ಸ್ಥಳಗಳ ಬದಲಾವಣೆಯಾದ ನಂತರ 1885 ರಲ್ಲಿ ಪಿಯರೆ ಕ್ಯುಪರ್ಸ್ ವಿನ್ಯಾಸಗೊಳಿಸಿದ ಸುಂದರ ಸೌಧಕ್ಕೆ ಶಾಶ್ವತವಾಗಿ ಸ್ಥಳಾಂತರ ಗೊಂಡಿತು. ಹತ್ತು ವರ್ಷಗಳ ಪುನರ್ನಿರ್ಮಾಣದ 2013ರಲ್ಲಿ ನಂತರ ಮತ್ತೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಯಿತು. ದೇಶದ ಅತಿದೊಡ್ಡ ಕಲಾಕೃತಿಗಳ ಸಂಗ್ರಹ ಇರುವ ಈ ಮ್ಯೂಸಿಯಂಗೆ ಭೇಟಿ ನೀಡುವ ವೀಕ್ಷಕರ ಸಂಖ್ಯೆಯೂ ಅತಿ ಹೆಚ್ಚು. ಇದರ ಒಟ್ಟು ಸಂಗ್ರಹ ಕ್ರಿ. ಶ. 1200-2000ದ ಕಾಲಕ್ಕೆ ಸೇರಿದ ಒಂದು ಮಿಲಿಯ ಅಪೂರ್ವ ಕೃತಿಗಳು. ರೆಂಬ್ರಾಂಟ್, ಫ್ರಾನ್ಸ್‌ ಹಾಲ್ ಮತ್ತು ಯೊಹಾನ್ನೆಸ್ ವೆರ್ ಮಿಯರ್‌ರ ಹಲವು ಕಲಾಕೃತಿಗಳು ಇಲ್ಲಿ ಪ್ರದರ್ಶಿತವಾಗಿವೆ.

ಮೂಲಕಟ್ಟಡದ ನೈಋತ್ಯ ಭಾಗದಲ್ಲಿ 1890 ರಲ್ಲಿ ಇನ್ನೊಂದು ಕಟ್ಟಡವನ್ನೂ ಕಟ್ಟಲಾಯಿತು. ಈ ಕಟ್ಟಡವನ್ನು ಕಟ್ಟುವಾಗ, ಹಳೆಯ ಬೇರೆ ಕಟ್ಟಡಗಳ ಭಾಗಗಳನ್ನು ಉಪಯೋಗಿಸಿದ್ದರಿಂದ ನೆದರ್ಲೆಂಡ್‌ಸ್‌‌ನ ಕಟ್ಟಡ ವಿನ್ಯಾಸಗಳ ಇತಿಹಾಸವನ್ನು ಇದು ಸಾರುತ್ತದೆ. ‘ಫ್ರಾಗ್ಮೆಂಟ್ ಬಿಲ್ಡಿಂಗ್’ ಎಂಬ ಅನ್ವರ್ಥನಾಮವೂ ಇದಕ್ಕಿದೆ. ದಕ್ಷಿಣ ಭಾಗ ಅಥವಾ ಫಿಲಿಫ್ಸ್‌ ಭಾಗವೆಂದೂ ಇದಕ್ಕೆ ಹೆಸರಿದೆ.

ಈ ಮ್ಯೂಸಿಯಂನ ಕಟ್ಟಡ ನೆದರ್ಲೆಂಡ್ಸ್ ದೇಶದ ರಾಷ್ಟ್ರೀಯ ಪಾರಂಪರಿಕ ತಾಣವೆಂದು ಪರಿಗಣಿಸಲ್ಪಟ್ಟಿದೆ. ಹೊರಗಿನಿಂದ ಅತಿ ಸುಂದರವಾಗಿ ಕಾಣುವ ಈ ಸೌಧದ ಒಳ ಭಾಗವೂ ಅಷ್ಟೇ ಆಕರ್ಷಕ. ಎತ್ತರವಾದ ಛಾವಣಿಗಳ ವಿನ್ಯಾಸ ಐತಿಹಾಸಿಕ ಚರ್ಚ್‌ಗಳ ಒಳವಿನ್ಯಾಸವನ್ನು ಹೋಲುತ್ತದೆ. ದೈತ್ಯಾಕಾರದ ಗಾಜಿನ ಕಿಟಕಿಗಳಲ್ಲಿನ ಗೋಥಿಕ್ ಶೈಲಿಯ ಕಲಾಕೃತಿಗಳ ನಿರ್ಮಾಪಕ ಡಿಕ್ಸನ್ ಎಂಬ ಕಲೆಗಾರ. ಈ ಮ್ಯೂಸಿಯಂಗೆ 2013 ರಲ್ಲಿ ಏಷಿಯನ್ ವಿಭಾಗ ಸೇರ್ಪಡೆಯಾಯಿತು. ‘ಡಚ್ ಸುವರ್ಣ ಯುಗ’ದ ( ಈ ಶಬ್ದವನ್ನು ಇತ್ತೀಚೆಗೆ ಅಧಿಕೃತವಾಗಿ ಕೈ ಬಿಡಲಾಗಿದೆ) ಪ್ರಖ್ಯಾತ ಚಿತ್ರಕಾರರ 2,000 ಕ್ಕೂ ಹೆಚ್ಚು ಕೃತಿಗಳನ್ನು ಪ್ರದರ್ಶಿಸಲಾಗಿದೆ.

2012ರಿಂದ ಮ್ಯೂಸಿಯಂನ ಜಾಲತಾಣದಲ್ಲಿ ಇಲ್ಲಿನ ಸಂಗ್ರಹದ 1,50,000 ವಸ್ತುಗಳ ಚಿತ್ರಗಳನ್ನು ದೊರೆಯುವಂತೆ ಮಾಡಿದ್ದಾರೆ. ವರ್ಷಕ್ಕೆ ನಲವತ್ತು ಸಾವಿರ ವಸ್ತುಗಳ ಚಿತ್ರಗಳನ್ನು ಜಾಲತಾಣದ ಸಂಗ್ರಹಕ್ಕೆ ಸೇರ್ಪಡಿಸುವ ಗುರಿ ಹೊಂದಿದ್ದು, ಎಲ್ಲಾ ಕಲಾಕೃತಿಗಳೂ ಚಿತ್ರರೂಪದಲ್ಲಿ ಲಭ್ಯವಾಗಲಿವೆ. ವಾನ್ ಗೋಹ್ ಕಲಾಕೃತಿಗಳು ಇನ್ನೊಬ್ಬ ಪ್ರಸಿದ್ಧ ಚಿತ್ರಕಾರ ವಾನ್ ಗೋಹ್ ನ ಕೆಲವು ಚಿತ್ರಗಳು ಇಲ್ಲಿ ಪ್ರದರ್ಶಿತವಾಗಿವೆ. ಈತನ ಚಿತ್ರಗಳನ್ನು ನೋಡುವುದೆಂದರೆ ಕಲಾರಾಧಕರಿಗೆ ಬಹು ಇಷ್ಟ. ಈ
ಮ್ಯೂಸಿಯಂ ಪಕ್ಕದಲ್ಲೇ ವಾನ್ ಗೋಹ್‌ನ ಕಲಾಕೃತಿಗಳ ಕುರಿತಾದ ಪ್ರತ್ಯೇಕ ಮ್ಯೂಸಿಯಂ ಸಹ ಇದೆ.

ಇಲ್ಲಿನ ಏಷ್ಯನ್ ವಿಭಾಗದಲ್ಲಿ ಶಿವಾಜಿಯ ಐತಿಹಾಸಿಕ ಚಿತ್ರವೂ ಇದೆ. ಪುರಾತನ ಕಾಲದ ವೈಭವೋಪೇತ ಪಿಂಗಾಣಿಯ ವಸ್ತು ಗಳು, ಹಿಟ್ಲರನ ಕಾಲದ ಚದುರಂಗದ ಹಲಗೆ ಹಾಗೂ ಯುದ್ಧೋಪಕರಣಗಳನ್ನು ಹೋಲುವ ಚದುರಂಗದ ದಾಳಗಳು, ಟುಲಿಪ್ ಹೂಗಳ ವಿನ್ಯಾಸವಿರುವ ಕಲಾಕೃತಿಗಳು ವೀಕ್ಷಣೆಗೆ ಲಭ್ಯ.

ಎಲ್ಲಕ್ಕಿಂತ ಮೇಲಿನ ಅಂತಸ್ತಿನಲ್ಲಿ ಗಾಜಿನ ವಸ್ತುಗಳ ತಯಾರಿಯಾಗಿಯೇ ಒಂದು ಕಿರುಚಿತ್ರವನ್ನು ಕಾಲಕಾಲಕ್ಕೆ ಪ್ರದರ್ಶಿಸುತ್ತಾರೆ. ಈ ಮ್ಯೂಸಿಯಂನ ಪ್ರವೇಶ ಶುಲ್ಕ 20 ಯೂರೋ. ಆಮ್ಸ್ಟರ್ ಡಾಮ್ ಪ್ರವಾಸದ ಕಾರ್ಡ್ ಪಡೆದಿ ದ್ದರೆ ಪ್ರವೇಶ ಉಚಿತ. ಎಲ್ಲಾ ವಿಭಾಗಗಳನ್ನು ಕೂಲಂಕಷವಾಗಿ ನೋಡಲು ಹಲವು ಗಂಟೆಗಳ ಸಮಯಾವಕಾಶ ಬೇಕು. ಶ್ರವಣಸಾಧನದ ಸೌಲಭ್ಯ ಬಳಸ ಬಹುದು. ಅಥವಾ ಮ್ಯೂಸಿಯಂನ ಆ್ಯಪ್‌ನ್ನು ಮೊಬೈಲಲ್ಲಿ ಅಳವಡಿಸಿ ಕೊಂಡು, ಶ್ರವಣ ಸಾಧನದಿಂದ ಎಲ್ಲಾ ಪ್ರಮುಖ ಕಲಾಕೃತಿಗಳ ವಿವರಗಳನ್ನು ತಿಳಿಯಬಹುದು. ಕಲೆಯ ಕುರಿತು ಆಸಕ್ತಿ ಹೊಂದಿರುವವರಿಗೆ ಒಂದು ಅಪರೂಪದ ಅನುಭವ ನಿಡಬಲ್ಲದು ಈ ಬೃಹತ್ ಮ್ಯೂಸಿಯಂ.

ದ ನೈಟ್ ವಾಚ್
ಡಚ್ ಕಲಾರಾಧಕರ ಮನಗೆದ್ದ ರೆಂಬ್ರಾಂಟ್‌ನ ಪ್ರಖ್ಯಾತ ‘ದ ನೈಟ್ ವಾಚ್’ ಚಿತ್ರದ ಮೂಲಪ್ರತಿ ಇರುವುದು ಇಲ್ಲೇ. ಲೂವ್ರ‍್ ‌ ಮ್ಯೂಸಿಯಂನಲ್ಲಿರುವ ‘ಮೋನಾಲೀಸಾ’ ಚಿತ್ರ ಎಷ್ಟು ಪ್ರಖ್ಯಾತವೋ, ಹಾಗೆಯೇ ರೈಕ್ಸ್‌ ಮ್ಯೂಸಿಯಂನಲ್ಲಿ ಇದೊಂದು ಅಪೂರ್ವ ಕಲಾಕೃತಿ ಎನಿಸಿದೆ. ಈ ಅಪರೂಪದ ಕಲಾಕೃತಿಗಾಗಿಯೇ ಒಂದು ವಿಶಾಲ ಕೊಠಡಿಯನ್ನು ಮೀಸಲಿಟ್ಟಿದ್ದಾರೆ. ಚಿತ್ರದ ಸಂರಕ್ಷಣಾ ಕೆಲಸವು ನಡೆಯುತ್ತಿರುವಾಗ, ಅದೇ ಕೊಠಡಿಯ ಇನ್ನೊಂದು ಗೋಡೆಯಲ್ಲಿ ಅದರ ಪ್ರತಿಕೃತಿ ವೀಕ್ಷಣೆಗೆ ಅವಕಾಶ ಮಾಡಿ ಕೊಟ್ಟಿದ್ದಾರೆ.

1642 ರಲ್ಲಿ ಪೂರ್ತಿಗೊಂಡ ಈ ಚಿತ್ರ ಕ್ಯಾನ್ವಾಸ್ ಮೇಲಿನ ತೈಲ ವರ್ಣಚಿತ್ರ. ಇದು ಸುಮಾರು 4.37 ಮೀಟರ್ ಉದ್ದ, 3.63 ಮೀಟರ್ ಅಗಲವಿದೆ. ಪ್ರದರ್ಶನಗೊಂಡಿರುವ ಇಡೀ ಗೋಡೆಯನ್ನು ಆಕ್ರಮಿಸಿಕೊಂಡಿದೆ. ಕ್ಯಾಪ್ಟನ್ ಫ್ರಾನ್ಸ್‌ ಬಾನ್ರಿಂಕ್ ಕಾಕ್
ಮತ್ತು ಆತನ ಸಹಚರ ವಿಲ್ಲೆಮ್ ವಾನ್ ರೂಟೆನ್ ಬುರ್ಖ್ ಚಿತ್ರದ ಕೇಂದ್ರಭಾಗದಲ್ಲಿ ಪ್ರಮುಖವಾಗಿ ಕಾಣಿಸುತ್ತಾರೆ.

ಚಿತ್ರದ ಎಡಭಾಗದಲ್ಲಿ ಮಹಿಳೆಯೊಬ್ಬಳ ಮುಖ ಪ್ರಮುಖವಾಗಿ ಗೋಚರಿಸುತ್ತದೆ. ಕೃತಿಯಲ್ಲಿ ಚಿತ್ರಿಸಿರುವ ಮನುಷ್ಯರು
ನಿಜಗಾತ್ರದಲ್ಲಿ ಇರುವುದು ವಿಶೇಷ. ಇದರಲ್ಲಿ ಚಿತ್ರಿಸಿರುವ ನೆರಳು ಬೆಳಕಿನಾಟ ನೈಸರ್ಗಿಕವಾಗಿ ಮೂಡಿಬಂದಿದೆ. ಸ್ತಬ್ಧಚಿತ್ರವಾದ ಇದರಲ್ಲಿನ ಪಾತ್ರಗಳು ಚಲನೆಯಲ್ಲಿರುವಂತೆ ಭ್ರಮೆಯು ಸೃಷ್ಟಿಯಾಗಿದೆ.