‘ಅಧ್ಯಕ್ಷ’ ಚಿತ್ರದ ಕಣ್ಣಿಗು… ಕಣ್ಣಿಗು… ಹಾಡು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಉಳಿದಿದೆ. ಈ ಹಾಡು ಬಿಡುಗಡೆಯಾದ ಬಳಿಕ ಯಾರದ್ದು ಈ ಮಧುರ ದನಿ ಎಂದು ಸಂಗೀತ ಪ್ರಿಯರು ಅರಸಿದರು. ಆಗ ಮುಂಚೂಣಿಗೆ ಬಂದ ಗಾಯಕಿ ಮಾನಸಾ ಹೊಳ್ಳ, ಈ ಹಾಡಿನ ಮೂಲಕ ಪ್ರಸಿದ್ಧಿ ಪಡೆದರು.
ಹಾಗಂತ ಮಾನಸಾ ಹಾಡಿದ್ದು ಇದೇ ಮೊದಲ ಹಾಡಲ್ಲ. ಇದಕ್ಕೂ ಮೊದಲೇ ಹಲವು ಗೀತೆಗಳನ್ನು ಹಾಡಿದ್ದಾರೆ. ಆದರೆ ಅವು ಅಷ್ಟು ಸದ್ದು ಮಾಡಲಿಲ್ಲ. ಹಾಗಾಗಿ ಮಾನಸ ಗಾಯಕಿಯಾಗಿ ಗುರುತಿಸಿಕೊಳ್ಳಲು ಕೊಂಚ ತಡವಾಯಿತು. ಈ ಹಾಡು ಮಾತ್ರ ವಲ್ಲ ಅತ್ಯುತ್ತಮ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ‘ಅಕ್ಷಿ’ ಚಿತ್ರದ ‘ಕಣ್ಣಿಗಾಗಿ ಕಣ್ಣುಗಳ…’ ಹಾಡಿನಲ್ಲಿಯೂ ಇವರದ್ದೇ ದನಿ ಆಲಿಸ ಬಹುದು. ಈ ಹಾಡಿಗೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿದೆ.
ಇವುಗಳ ಜತೆಗೆ ‘ಶಿವಲಿಂಗ’, ‘99’ ಹೀಗೆ ಹಲವು ಚಿತ್ರಗಳ ಹಾಡಿಗೆ ಮಾನಸಾ ಹೊಳ್ಳ ದನಿಯಾಗಿದ್ದಾರೆ. ಮಾನಸಾ ಗಾಯಕಿ ಮಾತ್ರ ವಲ್ಲ, ಸಂಗೀತ ನಿರ್ದೇಶಕಿಯಾಗಿಯೂ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ತೆರೆಗೆ ಬಂದ ‘6 ಟು 6’ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿ ಗುರುತಿಸಿಕೊಂಡ ಮಾನಸಾ, ಬಳಿಕ ಸಾಲು ಸಾಲು ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಸೈ ಎನಿಸಿಕೊಂಡರು.
ಇತ್ತೀಚೆಗೆ ತೆರೆಕಂಡ ‘ಕನಸುಗಳು ಮಾರಾಟಕ್ಕಿವೆ’ ಚಿತ್ರಕ್ಕೂ ಮಾನಸಾ ಅವರದ್ದೇ ಸಂಗೀತ ನಿರ್ದೇಶನವಿತ್ತು. ಈ ಚಿತ್ರ ಪ್ರೇಕ್ಷಕರ ಮನದಲ್ಲಿ ಉಳಿದಿಲ್ಲವಾದರೂ ಹಾಡುಗಳು ಸಿನಿಪ್ರಿಯರಿಗೆ ಮೆಚ್ಚುಗೆಯಾದವು. ಇನ್ನು ‘ಪಂಚರ್’ ಚಿತ್ರಕ್ಕೂ ಮಾನಸಾ ಅವರ ಸಂಗೀತ ನಿರ್ದೇಶನವಿದ್ದು, ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೀತೆಯೊಂದಕ್ಕೆ ದನಿ ನೀಡಿದ್ದಾರೆ. ಈ ಹಾಡಿಗೆ ಸಂಗೀತ ನೀಡಿದ್ದು ಸಂತಸ ತಂದಿದೆ ಯಂತೆ. ಸದ್ಯ ‘ಬಯಲು ಸೀಮೆ’ ಚಿತ್ರದ ಸಂಗೀತ ನಿರ್ದೇಶನದ ಸಾರಥ್ಯ ವಹಿಸಿ ಕೊಂಡಿದ್ದಾರೆ.
ಮಾನಸಾ ಕಲಾವಿದರ ಕುಟುಂಬದಿಂದ ಬಂದವರು. ತಂದೆ ಹಿರಿಯ ನಟ ಶಂಖನಾದ ಅರವಿಂದ್, ತಾಯಿ ಗಾಯಕಿ ರಮಾ ಅರವಿಂದ್. ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಮಾನಸಾ ಬಳಿಕ ನಟನೆಯತ್ತ ವಾಲಿದರು. ಬಳಿಕ ತಾಯಿಯಂತೆ ಗಾಯನದತ್ತ ಆಸಕ್ತಿ ತಾಳಿದರು. ಚಿಕ್ಕಂದಿನಲ್ಲೆ ಅಮ್ಮನೊಂದಿಗೆ ತೆರಳುತ್ತಿದ್ದ ಮಾನಸಾ ಗಾಯನ ಕಾರ್ಯಕ್ರಮದಲ್ಲಿ ಪಾಲೊಳ್ಳುತ್ತಿದ್ದರು.
ಹಾಗಾಗಿ ಸಹಜವಾಗಿಯೇ ಗಾಯನ ಇವರ ನೆಚ್ಚಿನ ಕ್ಷೇತ್ರವಾಯಿತು. ಹಿಂದೂಸ್ಥಾನಿ, ಕರ್ನಾಟಕ್, ಕ್ಲಾಸಿಕಲ್ ಸಂಗೀತ ದಲ್ಲೂ ಮಾನಸಾ ಪರಿಣಿತಿ ಹೊಂದಿದ್ದಾರೆ. ಇದರ ಜತೆಗೆ ಕೀ ಬೋರ್ಡ್ ನುಡಿಸು ವುದು ಎಂದರೆ ಇವರಿಗೆ ಅಚ್ಚು ಮೆಚ್ಚಂತೆ.