ಪ್ರಶಾಂತ್ ಟಿ.ಆರ್
ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಪ್ರೇಕ್ಷಕರ ಮನಸೂರೆಗೊಂಡಿತ್ತು. ಈ ಧಾರಾವಾಹಿಯ ಮುರುಗನ ಪಾತ್ರಧಾರಿ ಮುನಿಕೃಷ್ಣ ಡಿಫರೆಂಟ್ ಗೆಟಪ್‌ನಲ್ಲಿ ಎಲ್ಲರನ್ನೂ ರಂಜಿಸಿದ್ದರು. ಕಪ್ಪು ಬಣ್ಣದ, ಬೊಳು ತಲೆಯ, ಮುಖದಲ್ಲಿ ರಟ್ಟೆೆಗಾತ್ರದ ಮೀಸೆ ಇರುವ ಮುರುಗನ ಅವತಾರ ಕಂಡು ಪ್ರೇಕ್ಷಕರು ನಕ್ಕಿದ್ದರು. ಆತನನ್ನು ನೋಡುತ್ತಿದ್ದರೆ, ಈತ ಖಳನೇ ಎಂಬುದು ಗೊತ್ತಾಗುತ್ತಿತ್ತು. ಈಗ ಅದೇ ಮುರುಗ ಹಿರಿತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಹಾಗಂತ ಖಳನಾಗಿ ಅಲ್ಲ, ನಾಯಕನಾಗಿ ರಂಜಿಲು ಬಂದಿದ್ದಾರೆ. ಕೊಡೆ ಹಿಡಿದು ಮತ್ತೆ ಮುರುಗನಾಗಿಯೇ ಬೆಳ್ಳಿತೆರೆ ಯಲ್ಲೂ ಮನಗೆಲ್ಲಲಿದ್ದಾರೆ.
ಕೊಡೆ ಮುರುಗ ಶೀರ್ಷಿಕೆಯೇ ವಿಭಿನ್ನವಾಗಿದೆ. ಅಂತೆಯೇ ಚಿತ್ರದ ಕಥೆಯಲ್ಲೂ ಕೂಡ ವಿಭಿನ್ನತೆಯ ಸ್ಪರ್ಶವಿದೆ. ಅದು ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಸ್ಪಷ್ಟವಾಗಿದೆ. ಇದು ಪಕ್ಕಾ ಕಾಮಿಡಿ ಸಿನಿಮಾ ಅನ್ನಿಸಿದರೂ ಅದರಲ್ಲಿ ಅಚ್ಚರಿ ಇಲ್ಲ. ಅಂದುಕೊಂಡಂತೆ ಇದು ಹಾಸ್ಯದ ಹೊನಲನ್ನು ಹರಿಸುವ ಚಿತ್ರವೆ, ಅದಂತೂ ದಿಟ. ಹಾಗಂತ ಕೊಡೆಮುರುಗ ಕೇವಲ
ಕಾಮಿಡಿಗೆ ಮಾತ್ರ ಸೀಮಿತವಾಗಿಲ್ಲ. ಸಮಾಜಕ್ಕೆ ಅಗತ್ಯವಾದ ಒಳ್ಳೆಯ ಸಂದೇಶವೂ ಚಿತ್ರದ ಕಥೆಯಲ್ಲಿ ಅಡಕವಾಗಿದೆ. ಅದು ಚಿತ್ರ ನೋಡಿದ ಮೇಲೆಯೇ ತಿಳಿಯುತ್ತದೆ ಎನ್ನುತ್ತಾರೆ ನಿರ್ದೇಶಕ ಸುಬ್ರಹ್ಮಣ್ಯ.
ಸಂದೇಶ ಸಾರುವ ಕಥೆ
ಕೊಡೆಮುರುಗ ಎಲ್ಲರಿಗೂ ಒಂದೊಳ್ಳೆಯ ಸಂದೇಶ ವನ್ನು ಹೊತ್ತು ಬರುತ್ತಿದೆ. ನೋಡಲು ಅಷ್ಟು ಅಂದವಾಗಿಲ್ಲದ, ಕಪ್ಪು ಮುಖದ, ಬೋಳು ತಲೆಯ ವ್ಯಕ್ತಿಯೊಬ್ಬ ತನ್ನ ಆಸೆಯಂತೆ ಸಿನಿಮಾ ಹೀರೋ ಆಗಲು ಸಾಧ್ಯವಾಗುತ್ತದೆಯೇ, ತನ್ನಾಸೆಯ ಹಾದಿ ಹಿಡಿದು ಹೊರಟವನಿಗೆ ಯಾವೆಲ್ಲಾ ಸವಾಲುಗಳು, ಸಮಸ್ಯೆಗಳು ಎದುರಾಗುತ್ತವೆ.
ಅದನ್ನೆಲ್ಲ ಆತ ಮೆಟ್ಟು ನಿಂತು ಹೇಗೆ ನಾಯಕನಾಗುತ್ತಾನೆ. ಇತರರ ಕುಹಕಕ್ಕೆ ಹೇಗೆ ಉತ್ತರ ಕೊಡುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಇಲ್ಲಿ ರೂಪಕ್ಕಿಂತ ಪ್ರತಿಭೆ ಮುಖ್ಯ. ಎಲ್ಲರಲ್ಲೂ ಪ್ರತಿಭೆ ಇದ್ದೇ ಇರುತ್ತದೆ ಅದನ್ನು ಪೋಷಿಸುವ ಕೆಲಸ ಮೊದಲು ಮಾಡಬೇಕು ಎಂಬುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಹೀಗೂ ಸಿನಿಮಾ ಮಾಡಬಹುದು
ಹೀಗೂ ಸಿನಿಮಾ ಮಾಡಬಹುದು ಎಂಬುದನ್ನು ಕೊಡೆಮುರುಗ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ ನಿರ್ದೇಶಕರು. ಕಿರುತೆರೆಯ ಖಳನನ್ನು ಹಿರಿತೆರೆಗೆ ಕರೆತಂದು ಆತನನ್ನು ನಾಯಕನಾಗಿಸುವುದು ಅಷ್ಟು ಸುಲಭವಲ್ಲ. ಅದನ್ನು ಸುಬ್ರಹ್ಮಣ್ಯ
ಸಾಧ್ಯವಾಗಿಸಿದ್ದಾರೆ. ಸಿನಿಮಾದಲ್ಲಿ ನಾಯಕ ಯಾರು ಅನ್ನುವುದಕ್ಕಿಂತ, ಕಥೆಯೇ ಮುಖ್ಯ ಎಂದುಕೊಂಡ ನಿರ್ದೇಶಕರು, ಮುರುಗನಿಗೆ ಹೊಂದುವ ಹ್ಯೂಮರಸ್ ಕಥೆ ಹೆಣೆದು ಅದನ್ನು ಅಚ್ಚುಕಟ್ಟಾಗಿ ತೆರೆಗೆ ತರುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಕಥೆ ಹುಟ್ಟಿದ್ದು ಹೇಗೆ
ಕಿರುತೆರೆಯಲ್ಲಿ ಗಾಳಿಪಟ, ರಾಧ ಕಲ್ಯಾಣ ಹೀಗೆ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಸುಬ್ರಹ್ಮಣ್ಯ, ಒಳ್ಳೆಯ ಕಥೆ ಬರೆದು ಅದನ್ನು ಚಿತ್ರ ರೂಪಕ್ಕೆ ತರಬೇಕು ಎಂದು ಅಂದುಕೊಂಡಿದ್ದಾರೆ. ಹೀಗಿರುವಾಗಲೇ ಅಗ್ನಿಸಾಕ್ಷಿಯ ಮುರುಗ ಇವರ ಕಣ್ಣಿಗೆ ಬಿದ್ದಿದ್ದಾರೆ.
ಇವರಿಗೆ ಹೊಂದುವ ಕಥೆ ಯಾಕೆ ಹೆಣೆಯಬಾರದು ಎಂದುಕೊಂಡಾಗಲೇ ಒನ್ ಲೈನ್ ಸ್ಟೋರಿ ಸಿದ್ಧವಾಗಿದೆ. ಅದನ್ನು ಮನೆಯವ ರೊಂದಿಗೆ ಚರ್ಚಿಸಿದಾಗ ಅದನ್ನು ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ಅಂದಿನಿಂದಲೇ ಕಾಮಿಡಿ ಕಥೆ ಸಿದ್ಧವಾಗಿದೆ. ಎಂದಿಗೂ ನಾಯಕನ ಕನಸು ಕಾಣದ ಮುರುಗನ ಮನದಲ್ಲಿ ಹೀರೋ ಆಗುವ ಕನಸು ಚಿಗುರೊಡೆದಿದೆ. ಅಂದೇ ಚಿತ್ರಕ್ಕಾಗಿ ಸಿದ್ಧತೆ ನಡೆಸಿ, ಕೊನೆಗೂ ಕೊಡೆಮುರುಗನಾಗಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಮುರುಗ ಹೊಸ ಮುಖ, ಹಾಗಾಗಿ ಅವರೊಂದಿಗೆ ಮತ್ತಷ್ಟು ಕಾಮಿಡಿ ನಟರನ್ನು ಹಾಕಿಕೊಂಡು ಎಲ್ಲರೂ ಮೆಚ್ಚುವಂತಹ ಚಿತ್ರವನ್ನು ತೆರೆಗೆ ತಂದಿದ್ದೇನೆ, ಪ್ರೇಕ್ಷಕರು ಖಂಡಿತ ಚಿತ್ರವನ್ನು ಮೆಚ್ಚುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ನಿರ್ದೇಶಕರು.
ಕುರಿಯ ಕಾಮಿಡಿ ಕಮಾಲ್
ಇಲ್ಲಿ ಕೊಡೆಮುರುಗನ ಜತೆ ಕುರಿಪ್ರತಾಪ್ ಜತೆಯಾಗಿದ್ದಾರೆ. ಅಂದಮೇಲೆ ಚಿತ್ರದಲ್ಲಿ ಬರಪೂರ ಕಾಮಿಡಿ ಇರುವುದು ಖಚಿತ ಎಂದಾಯಿತು. ಮುರುಗನ ಜತೆ ಜತೆಗೆ ಪ್ರತಾಪ್ ಸಾಗುತ್ತಾರೆ. ಪಂಚಿಂಗ್ ಡೈಲಾಗ್ ಹೊಡೆದು ನಗಿಸುತ್ತಾರೆ. ಇವರೊಂದಿಗೆ ಹಿರಿಯ ನಟ ದತ್ತಣ್ಣ, ಗೋವಿಂದೇ ಗೌಡ, ಮೋಹನ್ ಜುನೇಜಾ, ಮತ್ತಿತರರು ನಟಿಸಿದ್ದಾರೆ. ಮುರುಗನಿಗೆ ಜತೆಯಾಗಿ ಪಲ್ಲವಿ ಗೌಡ ಬಣ್ಣಹಚ್ಚಿದ್ದಾರೆ. ಹಾಡೊಂದರಲ್ಲಿ ಲೂಸ್ ಮಾದ ಖ್ಯಾತಿಯ ಯೋಗಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾಗಳ ಬಗ್ಗೆ ಅಪಾರ ಪ್ರೀತಿ ಇರುವ ನಿರ್ಮಾಪಕ ಕೆ.ರವಿಕುಮಾರ್ ಈ ಹಿಂದೆ ಪ್ರಿಯಾಂಕಾ ಉಪೇಂದ್ರ ನಟನೆಯ ಮಮ್ಮಿ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಈಗ ಕೊಡೆ ಮುರುಗನ ನಿರ್ಮಾಣದ ಜವಾಬ್ಧಾರಿಯನ್ನು ನಿಭಾಯಿಸಿದ್ದಾರೆ.
ಧಾರಾವಾಹಿ ನಿರ್ದೇಶನದ ಅನುಭವವಿರುವ ನನಗೆ ನವಿರಾದ ಪ್ರೇಮಕಥೆಯ ಚಿತ್ರವನ್ನು ನಿರ್ದೇಶನ ಮಾಡಬೇಕು ಎಂಬ ಆಸೆ ಇತ್ತು. ಆದರೆ ಚಿತ್ರರಂಗದಲ್ಲಿ ಅನುಭವ ಕೇಳುತ್ತಾರೆ. ಅದಕ್ಕಾಗಿ ಮೊದಲು ಕಿರುಚಿತ್ರ ನಿರ್ಮಾಣ ಮಾಡೋಣ ಎಂದು ಅಂದುಕೊಂಡೆವು. ಅದಾಗಲೇ ರೆಡಿಯಾಗಿದ್ದ ಮುರುಗನ ಕಥೆ ಕೇಳಿ ನಿರ್ಮಾಪಕರು ಮೆಚ್ಚಿದರು. ಬಂಡವಾಳ ಹೂಡಲು ಒಪ್ಪಿದರು, ಅಂತು ಕೊಡೆಮುರುಗ ಅಂದುಕೊಂಡಂತೆ ಮೂಡಿಬಂದಿದೆ. ಇಲ್ಲಿ ನಾನು ನಿರ್ದೇಶಕನ ಪಾತ್ರದಲ್ಲಿಯೇ ಬಣ್ಣಹಚ್ಚಿದ್ದೇನೆ. ನೆಚ್ಚಿಕೊಂಡು ಬಂದ ನಾಕನನ್ನು ವಂಚಿಸುವ ಪಾತ್ರವದು.