ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ನಾವು ಸದಾ ಬಯಸುವುದು ಶಾಂತಿ , ನೆಮ್ಮದಿಯನ್ನು. ಅದೆಲ್ಲಿ ಸಿಗುತ್ತದೋ ಅಲ್ಲಿಗೆ ನಾವು ಸದಾ ಹೋಗಲಿಚ್ಚಿಸು ತ್ತೇವೆ. ಯಾವುದೇ ಕಿರಿಕಿರಿಯಿಲ್ಲದ ಪ್ರಶಾಂತವಾದ ಸ್ಥಳಗಳಿಗೆ ಮೊದಲ ಪ್ರಾಶಸ್ತ್ಯ ಅಂತಹ ಹಲವು ಸ್ಥಳಗಳು ನಮ್ಮ ಸುತ್ತಮುತ್ತಲೇ ಇವೆ. ಮನಸಿಗೆ ಆನಂದವನ್ನು, ನೆಮ್ಮದಿಯನ್ನು ಅಲ್ಲಿನ ಭೇಟಿ ಕೊಟ್ಟಾಗ ಪ್ರಯಾಣ ಅರ್ಥಪೂರ್ಣ.
ಇದು ಪ್ರವಾಸಿ ಕ್ಷೇತ್ರವೂ ಹೌದು, ಆಸ್ತಿಕರಿಗೆ ಭಕ್ತಿಯ ತಾಣವೂ ಹೌದು. ಮನತಣಿಸುವ ಪ್ರಕೃತಿ ದೃಶ್ಯ, ಮನಸ್ಸಿಗೆ ಆನಂದ ಇಲ್ಲಿನ
ವಿಶೇಷತೆ. ಅದೇ ಹನುಮಗಿರಿ. ಇಲ್ಲಿಗೆ ಒಂದು ಬಾರಿ ಭೇಟಿ ನೀಡಬೇಕೆಂಬ ಆಸೆಗೆ ಅವಕಾಶ ಸಿಕ್ಕಿದು ಸುದೀರ್ಘ ಲಾಕ್ ಡೌನ್ ಬಳಿಕ.
ಪುತ್ತೂರು, ಸುಳ್ಯಕ್ಕೆ ಹತ್ತಿರವೇ ಇರುವ ಹನುಮಗಿರಿಗೆ ಹೋಗಲೇಬೇಕೆಂದು ಆಗಾಗ ಅನಿಸುತಿತ್ತು. ಯಾವಾಗ ಎಂಬ ಪ್ರಶ್ನೆಗೆ ಉತ್ತರವಾಗಿ ನನ್ನ ತಂಗಿಯೇ ಹನುಮಗಿರಿಗೆ ಹೋಗುವ ಆಹ್ವಾನವನ್ನು ನೀಡಿದ್ದಳು. ‘ಇವತ್ತು 3 ಗಂಟೆಗೆ ಹನುಮಗಿರಿಗೆ ಹೋಗ ಬೇಕು ಅಂತ ಪ್ಲಾನ್ ಮಾಡಿದ್ದೇವೆ. ನೀವು ಬರುತ್ತೀರಾ’ ಅಂತ.
ನಮ್ಮೂರಿನ ಹತ್ತಿರವೇ ಇರುವ ಹನುಮಗಿರಿಗೆ ಲಾಕ್ಡೌನ್ ಕಾರಣದಿಂದ ಹೋಗಲಾಗಿರಲಿಲ್ಲ. ಈಗ ಅದಾಗದೇ ಸಿಕ್ಕ ಅವಕಾಶ ಬಿಡಲುಂಟೇ? ಮಾತು ಬೇಡ, ಏನೂ ಬೇಡ ಬರಿಯ ಮೌನ. ಆಂಜನೇಯನ ಎದುರು ಸುಮ್ಮನೆ ಒಂದು ಹದಿನೈದು ನಿಮಿಷ ನಿರ್ಮಲ ಮನಸಿನಿಂದ ಕುಳಿತು ಬಂದರೆ ಸಾಕು. ಒಂದು ದೊಡ್ಡ ರಿಲೀಫ್. ಪ್ರಕೃತಿಯ ಸುಂದರ ಹಸಿರು ಪರಿಸರದಲ್ಲಿ ಕೋದಂಡ ರಾಮ ಹಾಗೂ ಪಂಚಮುಖಿ ಆಂಜನೇಯ ಭಕ್ತರಿಗೆ ಅಭಯ ನೀಡುತ್ತಾ ನೆಲೆಸಿದ್ದಾರೆ.
ತಮ್ಮತ್ತ ಭಕ್ತರನ್ನು ಕರೆಯುತ್ತಿದ್ದಾರೆ ಎಂಬಂತೆ ಮನಸಿಗನಿಸುತ್ತದೆ. ಏನೇ ಸಮಸ್ಯೆಗಳಿದ್ದರೂ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಭರವಸೆ ರಾಮ ಹಾಗೂ ಹನುಮಂತನಿಂದ ದೊರೆಯುತ್ತದೆ.
ಹೂಗಿಡ ಹುಲ್ಲು ಹಾಸು
ಹನುಮಗಿರಿಯಲ್ಲಿ ಯಾವುದೇ ಗೋಡೆ ಚಾವಣಿಗಳ ಹಂಗಿಲ್ಲದೆ ಕೋದಂಡರಾಮ ಹಾಗೂ ಆಂಜನೇಯರು ನೆಲೆ ನಿಂತಿದ್ದಾರೆ. ಭಕ್ತರಿಗೆ ಮುಕ್ತ ಪ್ರವೇಶ. ಪ್ರವೇಶ ದ್ವಾರವನ್ನು ಪ್ರವೇಶಿಸುತ್ತಿದ್ದಂತೆಯೇ, ವಿವಿಧ ಹೂಗಿಡಗಳೊಂದಿಗೆ ಹಸಿರಿನ ಹುಲ್ಲುಹಾಸು ಗಮನ ಸೆಳೆಯುತ್ತದೆ. ದೇವಾಲಯದ ಒಳಹೊಕ್ಕಂತೆಯೇ ಮೊದಲು ಕಾಣುವುದು ಮನಸೆಳೆಯುವ ರಾಮಾಯಣ ಕಥಾ ನಿರೂ ಪಣಾ ಶಿಲ್ಪ ದೃಶ್ಯಗಳು.
ಜತೆಗೆ ಇಲ್ಲಿ ಸಸ್ಯೋದ್ಯಾನ, ಸಂಜೀವಿನಿ ಔಷಧೀಯ ಸಸ್ಯಗಳ ವನವಿದೆ. ಕೋದಂಡರಾಮನ ಬಳಿ ಹೋಗುವ ದಾರಿಯುದ್ದಕ್ಕೂ ಆಂಜನೇಯ ಥೀಮ್ ಪಾರ್ಕ್ ಇದೆ. ರಾಮಾಯಣ ಹಾಗೂ ಆಂಜನೇಯ ಥೀಮ್ ಪಾರ್ಕ್ ಮಕ್ಕಳಿಗೆ ಕಥೆಯನ್ನು ಸುಲಭವಾಗಿ ಅರ್ಥೈಸುವಂತಿವೆ. ಮಕ್ಕಳ ಆಟಕ್ಕೆ ವಿವಿಧ ಸೌಲಭ್ಯ ಗಳಿವೆ. ಗೋಶಾಲೆ, ವಿಶಾಲವಾದ ಬಾವಿ, ಯಜ್ಞ ಶಾಲೆಗಳೂ ಇಲ್ಲಿನ ಪ್ರಮುಖ ಆಕರ್ಷಣೆ.
ಇಲ್ಲಿಲ್ಲ ಸೀತೆ
ಇಲ್ಲಿರುವ 11 ಅಡಿ ಎತ್ತರವಾಗಿರುವ ಆಂಜನೇಯ ಮೂರ್ತಿಯನ್ನು ಕಾರ್ಕಳದ ಉತ್ತಮ ಗುಣಮಟ್ಟದ ಶಿಲೆಯಿಂದ ಕೆತ್ತಲಾಗಿದೆ. ಆಂಜನೇಯನ ಪಂಚಮುಖಗಳು ದಕ್ಷಿಣಕ್ಕೆ ನರಸಿಂಹ, ಉತ್ತರಕ್ಕೆ ವರಾಹ, ಊರ್ಧ್ವಮುಖಕ್ಕೆ ಹಯಗ್ರೀವ, ಪಶ್ಚಿಮಕ್ಕೆ ಗರುಡ ನನ್ನು ಸೂಚಿಸುತ್ತವೆ. ಇಲ್ಲಿರುವ ಕೋಡಂಡರಾಮನ ವಿಗ್ರಹದ ಎತ್ತರ 22 ಅಡಿ. ಹೊಯ್ಸಳ ಶೈಲಿಯಲ್ಲಿ ಕೋದಂಡರಾಮನ ವಿಗ್ರಹವಿದೆ. ಹನುಮಂತನಿರುವಲ್ಲಿ ರಾಮನಿದ್ದೇ ಇದ್ದಾನೆ ಎಂಬಂತೆ ಇಲ್ಲಿ ಕೋದಂಡರಾಮನ ವಿಗ್ರಹ ಪ್ರತಿಷ್ಠಾಪನೆಯಾಗಿದೆ.
ಇವರಿಬ್ಬರಿದ್ದರೂ ಸೀತಾಮಾತೆ ಮಾತ್ರ ಇಲ್ಲಿ ಕಾಣಸಿಗಳು. ಆದರೆ ಸುತ್ತಲಿನ ಹಸಿರು ಪರಿಸರದಲ್ಲಿ ಆಕೆ ಕಾಣುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ಇಲ್ಲಿನ ಆಂಜನೇಯನಿಗೆ ವೀಳ್ಯದೆಲೆಯ ಮಾಲೆ ಬಹು ಪ್ರೀತಿ. ವಡಾ ಮಾಲೆಯ ಹರಕೆಯೂ ಇಲ್ಲಿನ ವಿಶೇಷತೆ. ಪ್ರಕೃತಿಯ ಶಿಶುವಾದ ವೀಳ್ಯದೆಲೆಯನ್ನು ಮೆಚ್ಚುವ ಆಂಜನೇಯ, ಇಲ್ಲಿನ ಪ್ರಕೃತಿ ಸೌಂದರ್ಯದ ಆರಾಧಕನೂ
ಹೌದು. ಇಲ್ಲಿಗೆ ಭೇಟಿ ನೀಡುವುದೆಂದರೆ, ಸುತ್ತಲೂ ಹರಡಿರುವ ಕಾಡು, ಬೆಟ್ಟ, ಇಲ್ಲಿನ ವನ ಎಲ್ಲವನ್ನೂ ಆರಾಧಿಸಿದಂತೆ,
ಪ್ರಕೃತಿಗೆ ನಮಿಸಿದಂತೆಯೇ ಸರಿ.
ಹನುಮಗಿರಿಗೆ ಹೋಗಬೇಕೆಂದರೆ ಪುತ್ತೂರಿಗೆ ಅಥವಾ ಸುಳ್ಯದ ಮೂಲಕ ಬಸ್ ಅಥವಾ ಸ್ವಂತ ವಾಹನದಲ್ಲಿ ಹೋಗಬಹುದು. ಪುತ್ತೂರಿನಿಂದ 25 ಕಿಮೀ ದೂರದಲ್ಲಿದೆ ಈ ಪ್ರಾಕೃತಿಕ ಸೌಂದರ್ಯದ ತಾಣ.