Saturday, 21st September 2024

ಸಂಕಷ್ಟದ ನಡುವೆಯೂ ಸಾಧನೆ ಹಾದಿಯಲ್ಲಿ ಭಾರತ

ಕಳೆದ ಬಾರಿ ಕರೋನಾ ಸಂಕಷ್ಟದ ನಡುವೆಯೂ ಭಾರತ ತೋರಿದ ಸಾಧನೆಗೆ ಇದೀಗ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತವು ಆರ್ಥಿಕತೆ ಬೆಳವಣಿಗೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸುವ ನಿರೀಕ್ಷೆಹೊಂದಿರುವುದಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಉಪ ಪ್ರಧಾನ ಆರ್ಥಿಕ ತಜ್ಞ ಪೆಟ್ನಾ ಕೊಯೆವಾ ಬ್ರೂಕ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2020ರ ಕರೋನಾ ಲಾಕ್‌ಡೌನ್‌ನಿಂದ ಕುಸಿದಿದ್ದ ಭಾರತದ ಆರ್ಥಿಕತೆ ತ್ವರಿತವಾಗಿ ಏರಿಕೆ ಆಗಬೇಕಾದರೆ ಶೇ.12.5ರ ವೇಗದಲ್ಲಿ ಆರ್ಥಿಕ ಪ್ರಗತಿ ಸಾಗಬೇಕು. ಇದನ್ನು ಭಾರತ ಖಂಡಿತವಾಗಿ ಸಾಧಿಸಲಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಭಾರತದ ಬಗ್ಗೆ ಇತರ ರಾಷ್ಟ್ರಗಳು ಈ ರೀತಿ ಉತ್ತಮ ಅಭಿಪ್ರಾಯ ಹೊಂದಿರುವುದು ಭಾರತದ ಉತ್ತಮ ಆಡಳಿತಕ್ಕೆ ಸಂದ ಗೌರವ. ಭಾರತವು
2021ರಲ್ಲಿ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿರುವ ಆರ್ಥಿಕತೆಯಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ತನ್ನ ಇತ್ತೀಚಿನ ವರದಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ.

ಅದೇ ರೀತಿ ಭಾರತದ ಆರ್ಥಿಕ ಬೆಳವಣಿಗೆ ಚೀನಾವನ್ನೂ ಮೀರಿಸಲಿರುವುದಾಗಿ ತಿಳಿಸಲಾಗಿದೆ. ಒಟ್ಟಾರೆ ಭಾರತವು ಅನೇಕ ಸಂಕಷ್ಟಗಳನ್ನು ಮೀರಿ ಆರ್ಥಿಕತೆಯ ಪ್ರಗತಿಯಲ್ಲಿ ಸುಧಾರಣೆ ಕಂಡಿರುವುದು ಶ್ಲಾಘನೀಯ. ಇದೀಗ ಮತ್ತೊಮ್ಮೆ ಕರೋನಾ ಎರಡನೆ ಅಲೆಯು ದೇಶದಲ್ಲಿ ಸಂಕಷ್ಟವನ್ನು ತಂದೊಡ್ಡಿದೆ. ಇದರಿಂದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಆದರೂ ಆರ್ಥಿಕ ಪ್ರಗತಿಗೆ ಭಾರತವು ಕೈಗೊಂಡಿರುವ ಕ್ರಮಗಳ ಬಗ್ಗೆ ಇತರ ದೇಶಗಳಿಂದ ಮೆಚ್ಚುಗೆ ವ್ಯಕ್ತವಾಗು ತ್ತಿರುವುದು ಭಾರತದ ಸಾಧನೆಗೆ ಸಾಕ್ಷಿ.