Saturday, 21st September 2024

ಯುಗಾದಿ ಸಂಭ್ರಮದಲ್ಲಿ ಮೈಮರೆಯದಿರಿ

ಇಡೀ ವಿಶ್ವವನ್ನು ಕಾಡುತ್ತಿರುವ ಕರೋನಾ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ಕಳೆದ ವರ್ಷವೂ ಇದೇ ಯುಗಾದಿ ಸಮಯದಲ್ಲಿ
ಕರೋನಾ ಲಾಕ್‌ಡೌನ್ ಅನ್ನು ಸರಕಾರ ಹೇರಿತ್ತು.

ಲಾಕ್‌ಡೌನ್ ಎನ್ನುತ್ತಿದ್ದಂತೆ, ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿದ್ದ ಅನೇಕರು, ತಮ್ಮ ಊರ ದಾರಿ ಹಿಡಿದರು. ಈ ರೀತಿ ನಗರಗಳಿಂದ ಹಳ್ಳಿಗಳಿಗೆ ಹೋಗಲು ಶುರು ಮಾಡಿದ್ದರಿಂದಲೇ, ರಾಜ್ಯದ ಹಳ್ಳಿಗಳಲ್ಲಿ ಕರೋನಾ ಹೆಚ್ಚಾಗಲು ಕಾರಣ ಎನ್ನುವ
ಆರೋಪವಿದೆ.

ಇದೀಗ ಕರೋನಾ ಎರಡನೇ ಅಲೆ ಹೆಚ್ಚುತ್ತಿರುವ ಸಮಯದಲ್ಲಿಯೂ ಇದೇ ರೀತಿ ಬೆಂಗಳೂರಿನಿಂದ ಅನೇಕರು ತಮ್ಮಊರುಗಳತ್ತ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಲಾಕ್‌ಡೌನ್ ಆದರೆ ದುಡಿಮೆಗೆ ಸಮಸ್ಯೆಯಾಗಲಿದೆ ಎನ್ನುವ ಕಾರಣಕ್ಕೆ ಈ ರೀತಿ ವಲಸೆ ಹೆಚ್ಚಾಗುತ್ತಿದೆ. ಆದರೆ ಈ ರೀತಿ ಹೋಗುವಾಗ ಸಾಮಾಜಿಕ ಅಂತರ, ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸದೇ ಇರುವುದು ಸೋಂಕು ಹೆಚ್ಚಾಗಲು ಕಾರಣ.

ರಾಜ್ಯ ಸರಕಾರ ಈಗಾಗಲೇ ರಾತ್ರಿ ಕರ್ಫ್ಯೂವನ್ನು ಜಾರಿಗೊಳಿಸಿದೆ. ಲಾಕ್‌ಡೌನ್ ಹೇರುವ ವಿಷಯದಲ್ಲಿ ಯಾವುದೇ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳದೇ ಇರಲು ಪ್ರಮುಖ ಕಾರಣ ಉಪಚುನಾವಣೆ. ಉಪಚುನಾವಣೆ ಬಳಿಕ ಕಠಿಣ ಕ್ರಮ ಕೈಗೊಳ್ಳುವ ಸುಳಿವನ್ನು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದಾರೆ.

ರಾಜ್ಯ ಸರಕಾರ ಹಾಗೂ ಸಾರ್ವಜನಿಕರು ಕರೋನಾ ಎರಡನೇ ಅಲೆಯ ಹೆಚ್ಚುತ್ತಿರುವ ಈ ಅವಧಿಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಆಡಳಿತ ನಡೆಸುವವರು ಕರೋನಾ ಮಾರ್ಗಸೂಚಿಗಳನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬಳಸಿಕೊಳ್ಳಬಾರದು. ಜನರು ಸಹ ಸರಕಾರದ ಮಾರ್ಗಸೂಚಿಗಳೊಂದಿಗೆ ಕರೋನಾ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಹಿಸಬೇಕು. ಈ ರೀತಿಯ ಸಂಘಟಿತ ಹೋರಾಟ ದಿಂದ ಮಾತ್ರ ನೂತನ ವರ್ಷದಲ್ಲಿ ಕರೋನಾ ವಿರುದ್ಧ ಗೆಲ್ಲುವು ದಕ್ಕೆ ಸಾಧ್ಯ.