Saturday, 23rd November 2024

ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್: ಕೊಹ್ಲಿ ಹಿಂದಿಕ್ಕಿದ ಬಾಬರ್ ಆಜಂ

ದುಬೈ: ಐಸಿಸಿ(ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಬಿಡುಗಡೆ ಮಾಡಿರುವ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಅಗ್ರಸ್ಥಾನಕ್ಕೇರಿದ್ದಾರೆ.

ಆಜಂ, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಮತ್ತು ಕೊನೆಯ ಪಂದ್ಯದಲ್ಲಿ 94 ರನ್ ಗಳಿಸಿದ್ದರು. ಈ ಮೂಲಕ ಒಟ್ಟು ರೇಟಿಂಗ್ ಅಂಕಗಳನ್ನು 865ಕ್ಕೆ ಏರಿಸಿದ್ದಾರೆ. ವಿರಾಟ್ ಕೊಹ್ಲಿ ಅವರಿಗಿಂತಲೂ ಎಂಟು ರೇಟಿಂಗ್ ಪಾಯಿಂಟ್‌ಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇದರೊಂದಿಗೆ ಕೊಹ್ಲಿಯ ನಂ.1 ಅಧಿಪತ್ಯಕ್ಕೆ ಪಾಕಿಸ್ತಾನದ ಬಾಬರ್ ಆಜಂ ಇತಿಶ್ರೀ ಹಾಡಿದ್ದಾರೆ. ಕೊಹ್ಲಿ 1,258 ದಿನಗಳಿಂದ ಅಗ್ರಸ್ಥಾನದಲ್ಲಿ ವಿರಾಜಮಾನರಾಗಿದ್ದರು. ನಂ.1 ಸ್ಥಾನ ಆಲಂಕರಿಸಿದ ಪಾಕಿಸ್ತಾನದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೂ ಆಜಂ ಪಾತ್ರವಾಗಿದ್ದಾರೆ.

ಈ ಹಿಂದೆ ಜಹೀರ್ ಅಬ್ಬಾಸ್ (1983-84), ಜಾವೇದ್ ಮಿಯಾಂದಾದ್ (1988-89) ಮತ್ತು ಮೊಹಮ್ಮದ್ ಯೂಸುಫ್ (2003) ಏಕದಿನದಲ್ಲಿ ಅಗ್ರಸ್ಥಾನ ಆಲಂಕರಿಸಿದ್ದರು. ಎಡಗೈ ಆರಂಭಿಕ ಫರ್ಕ್ರ್ ಜಮಾನ್ ಐದು ಸ್ಥಾನಗಳ ನೆಗೆತ ಕಂಡು ಜೀವನಶ್ರೇಷ್ಠ 7ನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಜಮಾನ್ 194 ರನ್ ಗಳಿಸಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ