Saturday, 21st September 2024

ಜನರೇ ಗಮನಿಸಿ

ದೇಶದಲ್ಲಿ ಕೇವಲ 24ಗಂಟೆ ಅಂತರದಲ್ಲಿ ಕರೋನಾ ಸೋಂಕಿನಿಂದಾಗಿ 1027ಮಂದಿ ಮೃತಪಟ್ಟಿದ್ದಾರೆ ಎಂಬುದು ಸಾಮಾನ್ಯ ಸಂಗತಿಯಲ್ಲ. ಕಳೆದ ಐದು ತಿಂಗಳಿಗೆ ಹೋಲಿಸಿದಾಗ ಇದೀಗ ತೀವ್ರತೆ ಹೆಚ್ಚಾಗಿರುವುದು ಕಂಡುಬರುತ್ತಿದೆ.

ದೇಶದಲ್ಲಿ ಕರೋನಾ ಸೋಂಕಿನ ಎರಡನೆ ಹಂತದ ಅಲೆ ಸೃಷ್ಟಿಸುತ್ತಿರುವ ಅವಾಂತರವನ್ನು ಗಮನಿಸಿದರೆ, ಇದೊಂದು ತೀರಾ ಸಂದಿಗ್ಧತೆಯ ಸಮಯ ಅನಿಸುತ್ತದೆ. ತನ್ನ ವ್ಯಾಪಕತೆ ಹಾಗೂ ಭೀಕರತೆಯಿಂದಾಗಿ ಮಹಾಮಾರಿ ಎಂಬುದಾಗಿ ಕರೆಯಿಸಿಕೊಂಡಿ ದ್ದಂಥ ಈ ಸೋಂಕು ಮತ್ತೊಮ್ಮೆ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದೆ.

ನಿಯಂತ್ರಣದಲ್ಲಿ ಜನರ ಪಾಲ್ಗೊಳ್ಳುವಿಕೆಯೂ ಮುಖ್ಯ ಎಂಬುದನ್ನು ಮರೆಯುವಂತಿಲ್ಲ. ಒಟ್ಟು ಪ್ರಕರಣಗಳು ಹಾಗೂ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಭಾರತವು ಈಗಾಗಲೇ ಬ್ರೆಜಿಲನ್ನು ಮೀರಿಸಿ ದ್ವಿತೀಯ ಸ್ಥಾನದಲ್ಲಿದೆ ಎಂಬುದು ಆಘಾತಕಾರಿ ಸಂಗತಿ. ಇದು ದೇಶದ ಒಟ್ಟಾರೆ ಸ್ಥಿತಿಯಾದರೆ, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸಗಢ, ಕರ್ನಾಟಕ, ಕೇರಳ ಸೇರಿದಂತೆ ದೇಶದ ಹತ್ತು
ರಾಜ್ಯಗಳಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ.

ಇಂಥ ಸ್ಥಿತಿಯಲ್ಲೂ ಇನ್ನೂ ಲಾಕ್‌ಡೌನ್ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ವಿಷಾದನೀಯ ಸಂಗತಿ. ಭಾರತದ ಸ್ಥಿತಿ ಇಷ್ಟೊಂದು ಚಿಂತಾಜನಕವಾಗಿರುವ ವೇಳೆಯಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆ ಕರೋನಾ ಅಂತ್ಯ ಕಾಲ ಬಹಳಷ್ಟು ದೂರವಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗಾದರೆ ಭಾರತದ ಸ್ಥಿತಿ ಏನು? ಜನವರಿಯಿಂದ ೮೦ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್-19 ಲಸಿಕೆಗಳನ್ನು ಪೂರೈಸಿದ ದೇಶಕ್ಕೆ ಇದೀಗ ಜಾಗತಿಕವಾಗಿ ದ್ವಿತೀಯ ಸ್ಥಾನಕ್ಕೆ ತಲುಪಿದ್ದಾದರೂ ಹೇಗೆ? ಎಂಬುದನ್ನು ಗಮನಿಸಿದರೆ
ಕರೋನಾ ನಿಯಂತ್ರಣಕ್ಕಾಗಿ ಸರಕಾರಗಳು ಸೂಚನೆಗಳನ್ನು ಘೋಷಿಸಿದರೂ ಕೆಲವು ಸ್ಥಳಗಳು ಜನ ದಟ್ಟಣಿಯಿಂದ ತುಂಬಿ ಹೋಗಿವೆ.

ಇದುವೆ ಮತ್ತಷ್ಟು ಅಪಾಯಕ್ಕೆ ಆಹ್ವಾನ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ. ಒಟ್ಟಾರೆ ಜನತೆ ಸ್ವಯಂ ನಿಯಂತ್ರಣಕ್ಕೆ ಮುಂದಾಗದ ಹೊರತು ಸೋಂಕಿನ ಹರಡುವಿಕೆ ತಡೆಗಟ್ಟುವುದು ಅಸಾಧ್ಯ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತಿದೆ.