ಮುಂಬೈ: ‘ಹ್ಯಾಟ್ರಿಕ್’ ಜಯದ ಸಂಭ್ರಮ ಆಚರಿಸಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಇದುವರೆಗೆ ಮೂರು ಪಂದ್ಯಗಳನ್ನು ಆಡಿರುವ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ತಂಡವು ಒಂದರಲ್ಲಿ ಜಯಿಸಿ, ಎರಡರಲ್ಲಿ ಸೋತಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳನ್ನು ಮಣಿಸಿರುವ ವಿರಾಟ್ ಬಳಗವು ಭರ್ತಿ ಆತ್ಮವಿಶ್ವಾಸದಲ್ಲಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ತಮಗೆ ನೀಡಿರುವ ದುಬಾರಿ ಮೌಲ್ಯಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮೂರು ಪಂದ್ಯಗಳಿಂದ 176 ರನ್ ಗಳಿಸಿದ್ದಾರೆ. ಅದರಲ್ಲಿ ಎರಡು ಅರ್ಧಶತಕಗಳಿವೆ.
ಎಬಿ ಡಿವಿಲಿಯರ್ಸ್ ‘ಆಪದ್ಭಾಂಧವ’ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 125 ರನ್‌ಗಳಿವೆ. ಇವರಿಬ್ಬರಿಂದಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಆನೆಬಲ ಲಭಿಸಿದೆ.
ಆರಂಭಿಕ ಜೋಡಿ ನಾಯಕ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ತಮ್ಮ ನೈಜ ಆಟಕ್ಕೆ ಮರಳಿದರೆ, ಬೌಲರ್‌ಗಳಿಗೆ ಮತ್ತಷ್ಟು ಕಠಿಣ ಸವಾಲು ಒಡ್ಡಬಹುದು. ಕೈಲ್ ಜೆಮಿಸನ್, ವಾಷಿಂಗ್ಟನ್ ಸುಂದರ್ ತಮ್ಮ ಆಲ್‌ರೌಂಡ್ ಆಟ, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್ ಉತ್ತಮ ಲಯದಲ್ಲಿರುವುದು ತಂಡದ ಬೌಲಿಂಗ್ ವಿಭಾಗವನ್ನು ಹೆಚ್ಚು ಬಲಿಷ್ಠಗೊಳಿಸಿದೆ. ಆರ್‌ಸಿಬಿಯನ್ನು ಕಟ್ಟಿಹಾಕಲು ಸಂಜು ಸ್ಯಾಮ್ಸನ್ ಬಳಗವು ವಿಶೇಷ ತಂತ್ರಗಾರಿಕೆ ರೂಪಿಸುವ ಒತ್ತಡದಲ್ಲಿದೆ.
ಜೋಸ್ ಬಟ್ಲರ್ ಉತ್ತಮವಾಗಿ ಆಡುತ್ತಿದ್ದಾರೆ. ಸಂಜು ಮೊದಲ ಪಂದ್ಯದಲ್ಲಿ ಶತಕ ಹೊಡೆದಿದ್ದರು. ಅದರೆ ನಂತರದ ಎರಡು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಮಂಕಾಗಿತ್ತು.
ಮಧ್ಯಮವೇಗಿಗಳಾದ ಜಯದೇವ್ ಉನದ್ಕತ್, ಕ್ರಿಸ್ ಮೊರಿಸ್ ಅವರ ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸಂಜು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಚೇತನ್ ಸಕಾರಿಯಾ ಮಿಂಚುತ್ತಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30ರಿಂದ