ಕಾರವಾರ: ತಾಲೂಕಿನ ಶೇಜವಾಡದ ಸಭಾಂಗಣವೊಂದರಲ್ಲಿ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸಿ, ಬಂದಿದ್ದವರನ್ನೆಲ್ಲ ಸಭಾಂಗಣದಿಂದ ಹೊರ ಕಳುಹಿಸಿದರು.
ಮಾಂಗಲ್ಯ ಧಾರಣೆ ನಡೆದು, ಆರತಕ್ಷತೆ ನಡೆಯುತ್ತಿದ್ದ ವೇಳೆ ಸಭಾಂಗಣಕ್ಕೆ ಪೊಲೀಸರೊಂದಿಗೆ ಅಧಿಕಾರಿಗಳು ಭೇಟಿ ನೀಡಿದರು. ಈ ಸಂದರ್ಭ 50ಕ್ಕಿಂತ ಹೆಚ್ಚು ಜನರು ಸೇರಿದ್ದ ಕಾರಣ, ನಿಗದಿತ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಹೊರ ಹೋಗುವಂತೆ ಮೈಕ್ ನಲ್ಲಿ ಸೂಚಿಸಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ಮದುವೆಗೆ ಆಗಮಿಸಿದ್ದ ಕೆಲವರು ಉಡುಗೊರೆಯೂ ನೀಡದೇ, ಊಟ ವನ್ನೂ ಮಾಡದೆ ಭಯದಲ್ಲಿ ಸಭಾಂಗಣದಿಂದ ಹೊರ ಹೋಗಿದ್ದಾರೆ.
ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡು ಉಡುಗೊರೆ ನೀಡಲು ಹಾಗೂ ಊಟಕ್ಕೆ ಅವಕಾಶ ನೀಡಲಾಯಿತು. ಬಳಿಕ ಸರದಿ ಸಾಲಿನಲ್ಲಿ ಉಡುಗೊರೆ ನೀಡಿ, ಕೆಲವರು ಊಟ ಮಾಡಿ ತೆರಳಿದರು.
ಮದುವೆಗೆ ಬಂದವರಿಗೂ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸುವಿಕೆ ಹಾಗೂ ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯ ಗೊಳಿಸಲಾಗಿತ್ತು.