Sunday, 22nd December 2024

ಜನತಾ ಕರ್ಫ್ಯೂ ಯಶಸ್ವಿಗೊಳಿಸಿ

ದೇಶದಲ್ಲಿ ಎರಡನೇ ಅಲೆ ಭಾರಿ ವೇಗವಾಗಿ ಹಬ್ಬುತ್ತಿದೆ. ಈ ಸೋಂಕನ್ನು ನಿಯಂತ್ರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು
ಹಲವು ರೀತಿಯ ಕ್ರಮವಹಿಸುತ್ತಿವೆ. ಇದೀಗ ಕರ್ನಾಟಕದಲ್ಲಿ ಮುಂದಿನ 14 ದಿನಗಳ ಕಾಲ ಜನತಾ ಕರ್ಫ್ಯೂ ಹೆಸರಲ್ಲಿ ಲಾಕ್‌ ಡೌನ್ ಹೇರಲಾಗಿದೆ.

ಈ ಲಾಕ್‌ಡೌನ್‌ನಿಂದ ಕರೋನಾವನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗದಿದ್ದರೂ, ಸೋಂಕಿನ ಸರಪಳಿ ಬ್ರೇಕ್ ಮಾಡ ಬಹುದು. ಇದರೊಂದಿಗೆ ರಾಜ್ಯದಲ್ಲಿ ಎದ್ದಿರುವ ಬೆಡ್ ಸಮಸ್ಯೆ, ವೆಂಟಿಲೇಟರ್ ಸಮಸ್ಯೆ ಹಾಗೂ ಔಷಧದ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಸರಕಾರಕ್ಕೆ ಇದೊಂದು ಉತ್ತಮ ಅವಕಾಶ.

ಆದ್ದರಿಂದ ಸರಕಾರ ಕೇವಲ ಜನತಾ ಕರ್ಫ್ಯೂ ಹೆಸರಲ್ಲಿ ಸೋಂಕನ್ನು ನಿಯಂತ್ರಿಸುವುದಕ್ಕೆ ಅಷ್ಟೇ ಸೀಮಿತಗೊಳಿಸದೇ, ಅಗತ್ಯ ಬೆಡ್ ಸೇರಿದಂತೆ ಇನ್ನಿತರೆ ಆರೋಗ್ಯ ಸೇವೆಗಳ ತಯಾರಿ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ಲಾಕ್‌ಡೌನ್ ತೆರವಾದ ಬಳಿಕವೂ ಸೋಂಕು ಹೆಚ್ಚಾದರೆ ಸರಕಾರಕ್ಕೆ ಸಮಸ್ಯೆಯಾಗುವುದಿಲ್ಲ.

ಇನ್ನು ಸೋಂಕು ನಿಯಂತ್ರಿಸುವುದು ಕೇವಲ ಸರಕಾರದ ಕೆಲಸವಲ್ಲ. ಜನರು ಸಹ ಈಸಂಕಷ್ಟದ ಸಮಯದಲ್ಲಿ ಎಲ್ಲವನ್ನು ಸರಕಾರದಿಂದಲೇ ನಿರೀಕ್ಷೆ ಮಾಡದೇ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ತಯಾರಿಯನ್ನು ಮಾಡಿಕೊಳ್ಳ ಬೇಕು. ಇದರೊಂದಿಗೆ ಈ ಲಾಕ್‌ಡೌನ್ ಸಮಯದಲ್ಲಿ ಅನಾವಶ್ಯಕವಾಗಿ ಮನೆಯಿಂದ ಆಚೆ ಹೋಗುವ ಬದಲು, ಅಗತ್ಯವಿರುವ ಸಾಮಗ್ರಿಗಳನ್ನು ಒಂದೇ ಬಾರಿಗೆ ತಂದಿಟ್ಟುಕೊಂಡು ಮನೆಯಲ್ಲಿಯೇ ಇರುವುದು ವಾಸಿ.

ಕಳೆದ ಬಾರಿಯ ಲಾಕ್‌ಡೌನ್ ಕೆಲವರು ಬೇಕಾಬಿಟ್ಟಿ ಓಡಾಡಿದ್ದರಿಂದ. ಪೊಲೀಸರು ಅನಿವಾರ್ಯವಾಗಿ ಲಾಠಿ ಹಿಡಿಯ ಬೇಕಾಯಿತು. ಈಬಾರಿಯ ಕರೋನಾ ಗಂಭೀರತೆ ಬಹುತೇಕರಿಗೆ ತಿಳಿಇದೆ. ಇಷ್ಟು ಅದೆಲ್ಲೋ ಸತ್ತರಂತೆ ಕೇಳುತ್ತಿದ್ದ ಸುದ್ದಿ, ಇದೀಗ ನಮ್ಮ ಮನೆ, ನೆರೆಮನೆಯಲ್ಲಿ ಕರೋನಾಕ್ಕೆ ಬಲಿಯಾಗುತ್ತಿದ್ದಾರೆ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಆದ್ದರಿಂದ ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರಕಾರ ಜಾರಿಗೊಳಿಸಿರುವ ಜನತಾ ಕರ್ಫ್ಯೂ ಯಶಸ್ವಿಗೊಳಿಸಿ.