Saturday, 26th October 2024

ಜನರಲ್ಲಿ ಜಾಗೃತಿ ಮೂಡಿಸುವ 75 ರ ವೃದ್ದ

ಕೊಟ್ಟೂರು: ಯಮಧರ್ಮನ ಪಾಶ ಗೆದ್ದ ಕರೋನಾ ವೈರಸ್ ಗೆ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ, ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ದೇಶವನ್ನು ತಲ್ಲಣಗೊಳಿಸಿರುವ ಈ ಮಹಾ ಪಿಡುಗನ್ನು ಹಿಮ್ಮೆಟ್ಟಿಸುವ ಕೆಲಸ
ನಮ್ಮದಾಗಲಿ ಎಂದು 75 ವರ್ಷದ ಸಣ್ಣ ತಿನಿಸು ಮಾರಾಟ ಮಾಡುವ ಬಡ ವ್ಯಾಪಾರಿ ಗೋವಿಂದ ರಾಜ ಶೆಟ್ಟಿ ( ಅಜ್ಜ) ಸಾರ್ವ ಜನಿಕರಲ್ಲಿ ಕರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಪಟ್ಟಣದ ಉದ್ದಗಲಕ್ಕೂ ಬಗೆಬಗೆಯ ತಿಂಡಿ ತಿನಿಸುಗಳ ಚೀಲಗಳನ್ನು ಗೋವಿಂದರಾಜ ಶೆಟ್ಟಿ ಅವರಂತೆ ವಯಸ್ಸಾಗಿರುವ ತುಕ್ಕು ಹಿಡಿದ ಸೈಕಲಿನೊಂದಿಗೆ ನೇತಾಕಿಕೊಂಡು ವ್ಯಾಪಾರ ಮಾಡುತ್ತಲೇ 20ರು. ಮಾಸ್ಕ್‌ಗೋಸ್ಕರ ಕಷ್ಟಪಟ್ಟು ದುಡಿದ ಹಣವನ್ನು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ 100-200 ದಂಡ ಕಟ್ಟುವುದು ವ್ಯರ್ಥ ಎಂದು ತಮ್ಮ ಬಳಿ ವ್ಯಾಪಾರ ಮಾಡಲು ಬರುವ ಜನರಿಗೆ ಮನವಿ ಮಾಡುವುದರ ಮೂಲಕ ಕಿವಿಮಾತು ಹೇಳುತ್ತಿದ್ದಾರೆ.

ಗೋವಿಂದರಾಜ ಶೆಟ್ಟಿ ಮೂಲತಃ ಕೋಲಾರ ಜಿಲ್ಲೆಯ ಗೌರಿಬಿದನೂರಿನವರು ಕುಟುಂಬ ಸಮೇತರಾಗಿ 1995 ರಲ್ಲಿ ಕೊಟ್ಟೂರು ಪಟ್ಟಣಕ್ಕೆ ಮದುವೆ ಶುಭ ಸಮಾರಂಭಗಳಿಗೆ ವಿಧವಿಧ ಅಡುಗೆ ಮಾಡುವುದರ ಮೂಲಕ ಇಲ್ಲಿನ ಜನರ ಪ್ರೀತಿ ವಿಶ್ವಾಸ ಗಳಿಸಿ ಕೊಂಡವರು ಕಾಲಕ್ರಮೇಣ ತಾನು ಕಷ್ಟಪಟ್ಟು ದುಡಿದ ಹಣವು ಮಕ್ಕಳ ದುರಾಸೆಗೆ ತುತ್ತಾಗಿ ಹೋಯಿತು ಎಂದು ತಮ್ಮ
ನೋವನ್ನು ಮುಚ್ಚಿಟ್ಟುಕೊಂಡು ಕಿರು ನಗೆ ಬೀರಿದರು.

ಕಳೆದ ವರ್ಷ 2020ರಲ್ಲಿ ದೇಶದಲ್ಲಿನ ಕೂಲಿ ಕಾರ್ಮಿಕರ, ರೈತರ, ಬೀದಿ ಬದಿ ಸಣ್ಣ ಪುಟ್ಟ ವ್ಯಾಪಾರಿಗಳು, ಶ್ರಮಿಕರ ಜೀವ ಹಿಂಡಿದ ಈ ವೈರಾಣು ದೇಶದ ಆರ್ಥಿಕತೆಗೆ ಕೊಳ್ಳಿ ಇಟ್ಟಿದೆ ಸೋಂಕಿನಿಂದ ನಾವು ಸತ್ತರೆ ಸರ್ಕಾರಕ್ಕೆ ಅಂಕೆ ಮಾತ್ರ ನಮ್ಮ ಕುಟುಂಬಕ್ಕೆ ನಾವೇ ಸರಕಾರ ವಿದ್ದಂತೆ ದಯವಿಟ್ಟು ರೋಗದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರ ಜತೆಗೆ
ಜಾಗೃತಿಯಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳೋಣ ಎಂದು ತಿಂಡಿಗಳನ್ನು ನೀಡುವುದ ಜತೆಗೆ ಸಾರ್ವಜನಿಕರಿಗೆ ನಿಷ್ಕಲ್ಮಶವಾದ ನುಡಿಗಳ ಸಲಹೆ ನೀಡುತ್ತಾರೆ.

ಪಟ್ಟಣದಲ್ಲಿನ ಪ್ರತಿ ಗಲ್ಲಿಗಲ್ಲಿಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮಸಾಲ ಮಂಡಕ್ಕಿ ಶೆಟ್ರು ಎಂದರೆ ಸಾಕು ಅವರ ಕೋಡ್ಬಳೆ, ಚಕ್ಕುಲಿ, ಮದ್ದೂರು ಒಡೆ, ಶಂಕರ ಪಳ್ಳು ಘಮಘಮಿಸುವ ಮಸಾಲ ಮಂಡಕ್ಕಿ ರುಚಿಯನ್ನು ಸವಿದವರು ಓ ನಮ್ಮ ಶೆಟ್ರು ಎನ್ನುವ ಹಾಗೆ ಊರಿನ ಪ್ರತಿಯೊಬ್ಬರಿಗೂ ಚಿರಪರಿಚಿತ ಗೋವಿಂದರಾಜ ಶೆಟ್ರು.

ಈಗ ಲಾಕ್‌ಡೌನ್ ಆಗಿದೆ ನಿಗದಿತ ಸಮಯದಲ್ಲಿ ನಿಮಗೆ ವ್ಯಾಪಾರ ಆಗುತ್ತಾ ಎಂದು ಪತ್ರಿಕೆಯ ಪ್ರಶ್ನೆಗೆ ನನ್ನದು ಚಿಲ್ಲರೆ ವ್ಯಾಪಾರ ನಾನು ಹಾಕಿರುವ ಬಂಡವಾಳಕ್ಕೆ 50ರಿಂದ ನೂರು ರುಪಾಯಿ ಸಿಕ್ಕರೆ ಸಾಕು ಜೀವನ ನಡೆದುಬಿಡುತ್ತೆ ಆದರೆ ರಾಜ್ಯದಲ್ಲಿನ ಲಕ್ಷಾಂತರ ಜನರು ದಿನಗೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿರುವವರ ಗತಿಯೇನು ನಾವು ಪರಿಸರಕ್ಕೆ ಕೊಟ್ಟ ಕೊಡುಗೆ ಯ ಫಲದಂತೆ ಇಂದು ಪ್ರಕೃತಿಯ ಇಚ್ಛೆಯಂತೆ ಪ್ರತಿಫಲ ಪಡೆದುಕೊಳ್ಳುತ್ತಿದ್ದೇವೆ.

ಭಗವಂತನ ಅನುಗ್ರಹದಿಂದ ಈ ಕಷ್ಟ ಆದಷ್ಟು ಬೇಗ ದೂರವಾದರೆ ಸಾಕು ಎಂದರು.