ನವದೆಹಲಿ: ಜಯಂತ್ ಚೌಧರಿ ಅವರು ರಾಷ್ಟ್ರೀಯ ಲೋಕ ದಳದ (ಆರ್ಎಲ್ಡಿ) ನೂತನ ರಾಷ್ಟ್ರಾಧ್ಯಕ್ಷರಾಗಿ ಮಂಗಳವಾರ ನೇಮಕಗೊಂಡಿರುವುದಾಗಿ ಪಕ್ಷದ ಪ್ರಕಟಣೆ ತಿಳಿಸಿದೆ.
ಪಕ್ಷದ ಅಧ್ಯಕ್ಷ ಮತ್ತು ಜಯಂತ್ ಅವರ ತಂದೆ ಅಜಿತ್ ಸಿಂಗ್ ಅವರು ಮೇ 6ರಂದು ಕೋವಿಡ್-19ನಿಂದ ಮೃತಪಟ್ಟರು. ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಕೇಂದ್ರ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಪಕ್ಷದ ಉಪಾಧ್ಯಕ್ಷರಾಗಿದ್ದ 42 ವರ್ಷ ವಯಸ್ಸಿನ ಜಯಂತ್ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ತ್ರಿಲೋಕ್ ತ್ಯಾಗಿ ಅವರು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಜಯಂತ್ ಹೆಸರು ಪ್ರಸ್ತಾಪಿಸಿದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುನ್ಶಿರಾಮ್ ಪಾಲ್ ಪ್ರಸ್ತಾವನೆ ಅನುಮೋದಿಸಿದರು.