Monday, 25th November 2024

ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ: ಕೆ.ಟಿ.ಶಾಂತಕುಮಾರ್

ತಿಪಟೂರು : ಸಾರ್ವಜನಿಕ ಆಸ್ಪತ್ರೆಗೆ ಹಳ್ಳಿಗಳಿಂದ ಬಂದು ಚಿಕಿತ್ಸೆಗೆ ದಾಖಲಾಗುವ ಕರೋನ ರೋಗಿಗಳಿಂದ ಬೆಡ್ ಒದಗಿಸಲು ಹಣ ಪಡೆಯುತ್ತಿರುವ ಬಗ್ಗೆ ಕೆಲವರಿಂದ ಮಾಹಿತಿ ಲಭ್ಯವಾಗಿದ್ದು ವೈಧ್ಯಾಧಿಕಾರಿಗಳು ಕೂಡಲೇ ಈ ನಿಟ್ಟಿನಲ್ಲಿ ಗಮನ ಹರಿಸಿ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆಗ್ರಹಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಗೆ ಆಂಬುಲೆನ್ಸ್ ಸೇವೆ ಸಮರ್ಪಿಸುತ್ತಿದ್ದ ಸಮಯದಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದ ೪೦ ವರ್ಷದ ಮಹಿಳೆಯೊಬ್ಬರು ಸಾವಿಗೀಡಾದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಮಹಿಳೆಯ ಅಣ್ಣ ಕಿರಣ್ ಎಂಬುವವರು ವೈದ್ಯರು ಆಕ್ಸಿಜನ್ ಸೌಲಭ್ಯ ಒದಗಿಸಿದ್ದರೂ ಸೂಕ್ತ ನಿರ್ವಹಣೆ ಕೊರತೆಯಿಂದ ತಮ್ಮ ಸಹೋದರಿ ಸಾವಿಗೀಡಾದರು ಎಂದು ಆಪಾದಿಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಬೇಕು, ವೈದ್ಯರು ಕೋವಿಡ್ ಹಬ್ಬುತ್ತಿರುವ ಈ ಸಮಯದಲ್ಲಿ ಹೆಚ್ಚಿನ ಮುತುವರ್ಜಿ ಹಾಗೂ ಕಾಳಜಿಯಿಂದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಒದಗಿಸಬೇಕು ಎಂದರು.

ತಾವು ಸಾರ್ವಜನಿಕ ಆಸ್ಪತ್ರೆಗೆ ಈಗಾಗಲೇ ಎರಡು ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಒದಗಿಸಿದ್ದು ಸಧ್ಯದಲ್ಲೇ ಇನ್ನೂ ಎರಡು ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ನೀಡುತ್ತೇನೆ. ಇದಲ್ಲದೇ ಹಲವಾರು ದಾನಿಗಳು ಹಾಗೂ ಸಂಘಸಂಸ್ಥೆಗಳಿಂದ ಆಸ್ಪತ್ರೆಗೆ ನೆರವಿನ ಮಹಾಪೂರವೇ ಹರಿದುಬಂದಿದ್ದು ಇವುಗಳನ್ನು ಹಾಗೂ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೋವಿಡ್ ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ನೀಡಿ ಜನರ ಪ್ರಾಣ ಉಳಿಸುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.

***

ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಹಾಗೂ ಪ್ರಾಣ ಹಾನಿ ಹೆಚ್ಚುತ್ತಿರುವ ಬಗ್ಗೆ ಶಾಸಕರು, ಅಧಿಕಾರಿಗಳು ಗಮನ ಹರಿಸಿ ಸಾವಿನ ಸಂಖ್ಯೆ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
ಕೆ.ಟಿ.ಶಾಂತಕುಮಾರ್, ಕಾಂಗ್ರೆಸ್ ಮುಖಂಡರು, ತಿಪಟೂರು.