Sunday, 5th January 2025

ಕೈಲಾಗದು ಎಂದು ಹೇಳಲೇಬೇಡಿ

ಮಲ್ಲಪ್ಪ. ಸಿ. ಖೊದ್ನಾಪೂರ

ಈ ಕೆಲಸ ನನ್ನಿಂದ ಆಗುತ್ತದೆ ಎಂಬ ಭಾವದಿಂದ ಮುಂದುವರಿಯಬೇಕು. ಆಗ ಎಂತಹ ಕಠಿಣ ಕಾರ್ಯವಾದರೂ ಸಂಪನ್ನ ಗೊಳ್ಳುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೈಲ್ ಮೇನಾರ್ಡ್ ಕಿಲಿಮಂಜಾರೋ ಹತ್ತಿದ ಸಾಧನೆ.

ಜೀವನದಲ್ಲಿ ಬಂದೆರಗುವ ಪ್ರತಿಯೊಂದು ಸಮಸ್ಯೆ ಅಥವಾ ಅಡ್ಡಿ-ಅಡಚಣೆಗಳು ನಮ್ಮನ್ನು ಪರಿಕ್ಷೀಸಲು ಬರುತ್ತವೆ. ಅವೆಲ್ಲವು ಗಳನ್ನು ನಾವು ದೃಢವಾದ ಮನಸ್ಸಿನಿಂದ, ಸಮರ್ಥವಾಗಿ ಎದುರಿಸಬಲ್ಲೆನೆಂಬ ಆತ್ಮವಿಶ್ವಾಸದಿಂದ ಮುನ್ನಡೆದರೆ ಒಳ್ಳೆಯ ಅವಕಾಶಗಳು ತಾನಾಗಿಯೇ ಬರುತ್ತವೆ’ ಎಂದು ನೆಪೋಲಿಯನ್ ಹಿಲ್ ಹೇಳಿರುವುದು ಸತ್ಯವಾದ ಮಾತು.

ಬಹುತೇಕ ಜನರು ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ, ನನಗೆ ಯಾರೂ ಮಾರ್ಗ  ದರ್ಶನ ಮಾಡುವುದಿಲ್ಲ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದೇನೆ, ಇಂಗ್ಲೀಷ್ ಕಠಿಣವಾಗುತ್ತಿದೆ, ಅದು ನನಗೆ ಸಾಧ್ಯವಿಲ್ಲ, ನನ್ನಿಂದ ಆಗದು ಎಂಬ ನೆಪಗಳನ್ನೊಡ್ಡಿ ಕೊಂಡು ಕುಳಿತಿರುವುದನ್ನು ನಮ್ಮ ಸುತ್ತ ನೋಡಿರಬಹುದು. ಇಂತಹ ನಕಾರಾತ್ಮಕ ಮನೋಭಾವಗಳು ಅಧೈರ್ಯಗೊಳಿಸಿ ಯಾವುದೇ ಪ್ರಯತ್ನಕ್ಕೆ ಅಣಿಗೊಳಿಸದೆ ನಮ್ಮನ್ನು ನಿರಾಶಾವಾದಿಯನ್ನಾಗಿ ಮಾಡುತ್ತವೆ ಮತ್ತು ಸಾಧನೆಗೆ ಅಡ್ಡಿಯಾಗುತ್ತವೆ. ನಮ್ಮೊಳಗೆ ಏನಿದೆ ಎನ್ನುವುದು ಮುಖ್ಯ.

ನಾವು ಗುರಿ ಮುಟ್ಟಲು ಕಾರಣವಾಗುವ ಸಂಗತಿಯೆಂದರೆ ನಮ್ಮ ಮನೋ ಭಾವ. ಯಾವನು ಬದುಕಿನಲ್ಲಿ ಆಶಾವಾದಿಯಾಗಿ ಮತ್ತು ಧನಾತ್ಮಕವಾಗಿ ಯೋಚಿಸುವವನೋ ಅವನು ಸದಾ ಯಸಸ್ಸಿನ ಮೇಟ್ಟಿಲೇರುತ್ತಾನೆ.

ಕೈಲ್ ಮೇನಾರ್ಡ್ ಯಶೋಗಾಥೆ
ಸದೃಢನಾಗಿದ್ದ ಒಬ್ಬ ವ್ಯಕ್ತಿ ತನ್ನ ಎರಡು ಕೈ ಹಾಗೂ ಕಾಲುಗಳನ್ನು ಕಳೆದುಕೊಂಡ. ಆದರೆ ಆತ ತನ್ನ ಹುಮ್ಮಸ್ಸು, ಉತ್ಸಾಹ, ಏನನ್ನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ, ಸ್ಪರ್ಧಾ ಮನೋಭಾವ ಮತ್ತು ಸಮಸ್ಯೆಗಳನ್ನು ಸವಾಲನ್ನಾಗಿ ಸ್ವೀಕರಿಸಿ, ಅದನ್ನು ಎದುರಿಸಬಲ್ಲೆನೆಂಬ ಆತ್ಮವಿಶ್ವಾಸ ಇವೇ ಆತನನ್ನು ಕಾಪಾಡಿತು.

ಬೆಟ್ಟ-ಗುಡ್ಡ ಹತ್ತುವುದು ಮತ್ತು ಇನ್ನಿತರ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ತನ್ನಲ್ಲಿರುವ ಶಕ್ತಿ-ಸಾಮರ್ಥ್ಯಗಳನ್ನು ಒರೆಗಲ್ಲಿಗೆ
ಹಚ್ಚುತ್ತಿದ್ದ. ಹಲವು ಸಾಹಸ ಕ್ರೀಡಾಸ್ಪರ್ಧೆಯಲ್ಲಿ ಧನಾತ್ಮವಾಗಿ ಭಾಗವಹಿಸಿ ದೈಹಿಕವಾಗಿ ಸರಿಯಿದ್ದವರನ್ನು ಮೀರಿಸುವಂತೆ
ಸಾಧನೆ ತೋರುತ್ತಿದ್ದನು. 20000 ಅಡಿ ಎತ್ತರದ ಕಿಲಿಮಂಜಾರೋ ಎಂಬ ಪರ್ವತವನ್ನು ಯಾವುದೇ ವಿಶೇಷ ಉಪಕರಣ ಮತ್ತು ಯಾರ ಸಹಾಯವಿಲ್ಲದೇ ಏಕಾಂಗಿಯಾಗಿ ಪರ್ವತಾರೋಹಣ ಮಾಡಿದ್ದು ಇವರ ಸಾಧನೆಗೆ ಹಿಡಿದ ಕೈಗನ್ನಡಿ.

ಕಿಲಿಮಂಜಾರೋ ಎಂಬ ಪರ್ವತವನ್ನು ಏರಿದ ಮೊದಲ ಕಾಲಿಲ್ಲದ ವ್ಯಕ್ತಿ ಯೆಂಬ ದಾಖಲೆ ಮಾಡಿ ಹೆಗ್ಗಳಿಕೆಗೆ ಪಾತ್ರನಾಗಿದ್ದಾರೆ. ನನ್ನಿಂದ ಈ ಕೆಲಸ ಸಾಧ್ಯವಿಲ್ಲ, ಬಹಳ ಕಠಿಣವಾಗಿದೆ ಮತ್ತು ಇದು ನಮ್ಮಂಥವರಿಗೆ ಅಸಾಧ್ಯ ವೆಂಬ ಸದಾ ನಕಾರಾತ್ಮಕ ಅಂಶ ಗಳೊಂದಿಗೆ ವೃಥಾ ಕಾಲಹರಣ ಮಾಡು ವವರಿಗೆ ಉತ್ತಮ ಸ್ಫೂರ್ತಿ ಮತ್ತು ಪ್ರೇರಣೆಯೆಂದರೆ ಅವರೇ ಕೈಲ್ ಮೇನಾರ್ಡ್‌ ರವರು.

ಕಾರ್ಯದಲ್ಲಿ ಶ್ರದ್ಧೆ, ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ, ಸಕಾರಾತ್ಮಕ ಚಿಂತನೆ ಮತ್ತು ಸಾಧಿಸಿಯೇ ತೀರುತ್ತೇನೆಂಬ ಅಚಲ ನಂಬಿಕೆಯೇ ಇವರ ಯಶಸ್ಸಿನ ರಹಸ್ಯ. ಇವರು ಜನಸಾಮಾನ್ಯರಿಗೆ ಯಾವಾಗಲೂ ಹೇಳುವುದಿಷ್ಟೇ ‘ಪರಿಶ್ರಮ ವಹಿಸಿ ದುಡಿಯುವ ಮನಸ್ಸು, ನನ್ನಲ್ಲಿರುವ ಶಕ್ತಿ-ಸಾಮರ್ಥ್ಯದ ಬಗ್ಗೆ ಅರಿವು, ಇದು ನನ್ನಿಂದ ಮಾತ್ರ ಸಾಧ್ಯ, ನಾನು ಮಾಡಬಲ್ಲೆ, ಹಿಡಿದ ಕಾರ್ಯವ ಬಿಡದೇ ಸಾಧಿಸಿಯೇ ಸಿದ್ದ’. ಇವರು ಮೋಟಿವೇಶನಲ್ ಸ್ಪೀಕರ್ ಮತ್ತು ಲೇಖಕರೂ ಆಗಿದ್ದು, ಜನರಿಗೆ ಸ್ಫೂರ್ತಿ ತುಂಬು ಭಾಷಣ ನೀಡುತ್ತಾ, ಪುಸ್ತಕಗಳನ್ನು ಬರೆಯುತ್ತಾ, ಇನ್ನಷ್ಟು ಜನರಿಗೆ ಆತ್ಮವಿಶ್ವಾಸ ತುಂಬಿದ್ದಾರೆ.

ಆದ್ದರಿಂದ ನಮ್ಮ ಮನೋಭಾವವು ಸಕಾರಾತ್ಮಕವಾಗಿದ್ದರೆ ಮುಂದಿನ ದಾರಿ ಹೊಳೆಯುತ್ತದೆ. ಯೋಚನಾ ಸರಣಿಯು
ನಕಾರಾತ್ಮಕವಾಗಿದ್ದರೆ ಅದು ನಮ್ಮ ಜೀವನವನ್ನು ಸೀಮಿತಗೊಳಿಸುತ್ತದೆ. ನಾವು ಮಾಡಬೇಕಾದ ಕೆಲಸ-ಕಾರ್ಯಗಳು ಮನಸ್ಸಿನ
ಸ್ಥಿತಿ, ದೃಷ್ಟಿಕೋನ ಮತ್ತು ಕಾರ್ಯದ ನೆರವೇರಿಕೆಯಲ್ಲಿನ ಆಲೋಚನೆ ಮತ್ತು ಮನೋಭಾವದಿಂದ ನಿರ್ಧಾರವಾಗುತ್ತದೆ.
ನಾವೆಲ್ಲರೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರೆ, ಸಕಾರಾತ್ಮಕ ಚಿಂತನೆಯನ್ನು
ಬೆಳೆಸಿಕೊಂಡು ಆ ಕಾರ್ಯದ ನೆರವೇರಿಕೆಯ ಬಗ್ಗೆ ಸದಾ ಆಲೋಚಿಸುತ್ತಾ ಏಕಾಗ್ರತೆ, ಶ್ರದ್ಧೆ, ನಿಷ್ಠೆ, ಸಮಚಿತ್ತ, ಸತತ ಅಧ್ಯಯನ,
ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ, ಕಾರ್ಯತತ್ಪರತೆ ಮತ್ತು ಆತ್ಮಸ್ಥೈರ್ಯದೊಂದಿಗೆ ಮುನ್ನಡೆದರೆ ಜಯ ನಮ್ಮದಾಗು ತ್ತದೆ.

Leave a Reply

Your email address will not be published. Required fields are marked *