Tuesday, 26th November 2024

ಶ್ರಮಜೀವಿಗಳಿಗೆ ಸಾಥ್ ನೀಡಿದ ಸ್ನೇಹರ್ಷಿ

ಸ್ನೇಹರ್ಷಿ ಟೈಟಲ್‌ನಲ್ಲೇ ಪಂಚಿಂಗ್ ಇದೆ. ಕೇಳಲು ಹಿತವಾಗಿದೆ. ಈ ಚಿತ್ರದ ಮೂಲಕ ನವ ನಟ ಕಿರಣ್ ನಾರಾಯಣ್ ಚಿತ್ರ ರಂಗಕ್ಕೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ.

ಸ್ನೇಹರ್ಷಿ ಅಂದಾಕ್ಷಣ ಇದು, ಸಾಧಕನ ಕಥೆ ಎಂದು ಅನ್ನಿಸಬಹುದು, ಆದರೆ ಖಂಡಿತಾ ಅಲ್ಲ. ಬದಲಾಗಿ ಇದು ಶ್ರಮಜೀವಿಗಳ ಕುರಿತಾದ ಸಿನಿಮಾವಾಗಿದೆ. ನಮ್ಮ ನಡುವೆಯೇ ಇದ್ದು, ಬದುಕಿಗಾಗಿ ಹೋರಾಡುತ್ತಿರುವ ಶ್ರಮಿಕರ ಕಥೆಯಾಗಿದೆ. ನೈಜ ಘಟನೆ ಯಾಧಾರಿತ ಚಿತ್ರ ಎಂಬುದು ಸ್ನೇಹಷಿಯ ಮತ್ತೊಂದು ವಿಶೇಷ.

ಕಿರಣ್ ನಾರಾಯಣ್ ಮೂಲತಃ ರಂಗಭೂಮಿಯ ಕಲಾವಿದ, ನಟನೆಯೇ ಬದುಕು ಎಂದುಕೊಂಡಿದ್ದ, ಕಿರಣ್‌ಗೆ ಬಾಲ್ಯದಿಂದಲೂ ಸಿನಿಮಾರಂಗಕ್ಕೆ ಬರಬೇಕು ಎಂಬ ತುಡಿತವಿತ್ತು. ಆದರೆ ಅದಕ್ಕೆ ಅಗತ್ಯ ವೇದಿಕೆ ಸಿಕ್ಕಿರಲಿಲ್ಲ. ಒಳ್ಳೆಯ ಕಥೆಯ ಮೂಲಕವೇ
ಭರ್ಜರಿಯಾಗಿ ಎಂಟ್ರಿಕೊಡಬೇಕು ಎಂಬ ಹಂಬಲವಂತು ಇತ್ತು. ಆ ಹೊತ್ತಿನಲ್ಲೇ ಅದ್ಭುತ ಕಥೆ ಹೊಳೆದಿದ್ದು, ಅದರ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.

ಕಣ್ಣಮುಂದೆ ನಡೆದ ಘಟನೆ
ಕಿರಣ್ ಒಳ್ಳೆಯ ಕಥೆ ಹುಡುಕಾಟದಲ್ಲಿರುವಾಗಲೇ ಕಣ್ಣಮುಂದೆ ನೈಜ ಘಟನೆಯೊಂದು ನಡೆದಿದೆ. ಈ ಘಟನೆ ಅವರನ್ನು ಬಿಡದೆ ಕಾಡಿದೆ. ಆ ಘಟನೆಯನ್ನೇ ಇಟ್ಟುಕೊಂಡು ಕಥೆ ಹೆಣೆದು ಸಿನಿಮಾ ರೂಪದಲ್ಲಿ ತೆರೆಗೆ ತರಬಾರದೇಕೆ ಎಂದು ಯೋಚಿಸಿದ್ದಾರೆ. ಈ ಬಗ್ಗೆ ತಮ್ಮ ಸ್ನೇಹಿತರ ಬಳಿ ಚರ್ಚಿಸಿದ್ದಾರೆ. ಅಂತು ಅಂದುಕೊಂಡಂತೆ ಒಳ್ಳೆಯ ಕಥೆ ಹೆಣೆದಿದ್ದಾರೆ. ಈಗ ಚಿತ್ರೀಕರಣವನ್ನು ಮುಗಿಸಿದ್ದು, ತೆರೆಗೆ ತರಲು ಸಜ್ಜಾಗಿದ್ದಾರೆ. ರಂಗಭೂಮಿಯ ಹಿನ್ನಲೆ ಇರುವ ಕಿರಣ್ ನಟನೆಯ ಜತೆಗೆ, ನಿದೇಶನದ ಜವಾಬ್ದಾರಿ ಯನ್ನು ಹೊತ್ತುಕೊಂಡಿದ್ದಾರೆ. ಹಾಗಾಗಿ ಚಿತ್ರ ಬಿಡುಗಡೆಗೂ ಮುನ್ನವೇ ಸ್ನೇಹರ್ಷಿ ಕುತೂಹಲ ಮೂಡಿಸಿದೆ.

ನಮ್ಮ ನಡುವಿನ ಶ್ರಮಿಕರು

ನಮ್ಮ ನಡುವೆ ಇರುವ ಶ್ರಮಿಕರು ಇಂದಿನ ಆಧುನಿಕ ಯುಗದಲ್ಲಿ ಬದುಕುಕಟ್ಟಿಕೊಳ್ಳಲು ಹೇಗೆ ಚಡಪಡಿಸುತ್ತಿದ್ದಾರೆ. ಅದಕ್ಕಾಗಿ ಹೇಗೆಲ್ಲ ಶ್ರಮಿಸುತ್ತಿದ್ದಾರೆ ಎಂಬುದೇ ಚಿತ್ರದ ಒನ್‌ಲೈನ್ ಸ್ಟೋರಿ. ಇವೆರೆಲ್ಲರು ನಮ್ಮ ನಡುವೆಯೇ ಇದ್ದಾರೆ. ನಾವೆಲ್ಲರೂ ದಿನ ನಿತ್ಯದ ಜೀವನದಲ್ಲಿ ಇವರನ್ನು ಸಂದಿಸುತ್ತಿರುತ್ತೇವೆ. ಇವರನ್ನು ಕಂಡು ಕೆಲವರು ಮರುಕಪಟ್ಟರೆ ಮತ್ತೆ ಕೆಲವರು ದರ್ಪ ತೋರುತ್ತಾರೆ. ಇದೆಲ್ಲವೂ ಚಿತ್ರದ ಕಥೆಯಲ್ಲಿದೆ. ಇದರ ಜತೆಗೆ ಶ್ರಮಿಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ದೂರದ ಮುಂಬೈ ನಲ್ಲೂ ದೊಡ್ಡ ಚಳುವಳಿಯೂ ನಡೆಯಿತು. ಅದು ಯಾಕೆ ಹೇಗೆ ಎಂಬ ಅಂಶವು ಚಿತ್ರದ ಕಥೆಯಲ್ಲಿ ಅಡಕವಾಗಿದೆ.

ಮಿಲಿಯನ್ ವೀಕ್ಷಣೆ ಕಂಡ ತಮಟೆ ಹಾಡು
ಸ್ನೇಹರ್ಷಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ, ಇದರ ಜತೆಗೆ ಸಿನಿಮಾದ ಹಾಡು ಕೂಡ ಬಿಡುಗಡೆಯಾಗಿದ್ದು, ತಮಟೆಯ ಹಾಡು ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. ಈ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ ಕಿರಣ್. ಬೆಂಗಳೂರು ರಾಮ ನಗರ, ಕುದುರೆಮುಖ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕರೋನಾ ಕಳೆದ ನಂತರ ಚಿತ್ರ ತೆರೆಗೆ ತರಲು ಸಿದ್ಧತೆ ನಡೆಸಿದೆ.