Thursday, 19th September 2024

ನಾಲ್ಕು ದಿನಗಳ ಏಕೈಕ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ

ಬ್ರಿಸ್ಟಲ್: ಭಾರತದ ಮಹಿಳಾ ಕ್ರಿಕೆಟ್‌ ತಂಡದ ಸ್ನೇಹ ರಾಣಾ ಹಾಗೂ ತಾನಿಯಾ ಭಾಟಿಯಾ 9ನೇ ವಿಕೆಟ್ ಗೆ ಮುರಿಯದ ಜೊತೆ ಯಾಟದಲ್ಲಿ ಸೇರಿಸಿದ 104 ರನ್ ಜೊತೆಯಾಟದ ನೆರವಿನಿಂದ ಭಾರತ, ತಂಡ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ನಾಲ್ಕು ದಿನಗಳ ಏಕೈಕ ಟೆಸ್ಟ್ ಪಂದ್ಯವನ್ನು ಡ್ರಾ ಗೊಳಿಸಿದೆ.

ಪ್ರಥಮ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಆಕರ್ಷಕ 96 ರನ್ ಗಳಿಸಿದ್ದ ಶೆಫಾಲಿ ವರ್ಮಾ ಎರಡನೇ ಇನಿಂಗ್ಸ್ ನಲ್ಲೂ ಪ್ರಬುದ್ಧ ಆಟವಾಡಿ 63 ರನ್ ಗಳ ಕೊಡುಗೆ ನೀಡಿದ್ದರು. ಚೊಚ್ಚಲ ಟೆಸ್ಟ್ ನ ಎರಡೂ ಇನಿಂಗ್ಸ್ ಗಳಲ್ಲಿ ಅರ್ಧಶತಕಗಳನ್ನು ಬಾರಿಸಿದ್ದಅತ್ಯಂತ ಕಿರಿಯ ಹಾಗೂ ಒಟ್ಟಾರೆ ನಾಲ್ಕನೇ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಫಾಲೋಆನ್ ಗೆ ಸಿಲುಕಿ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತವು ನಾಲ್ಕನೇ ಹಾಗೂ ಅಂತಿಮ ದಿನವಾದ ಶನಿವಾರ ಪಂದ್ಯವು ಡ್ರಾನಲ್ಲಿ ಕೊನೆಗೊಳ್ಳುವ ಮೊದಲು 121 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿತು. ಭಾರತದ ಪರ 2ನೇ ಇನಿಂಗ್ಸ್ ನಲ್ಲಿ ದೀಪ್ತಿ ಶರ್ಮಾ ಅಗ್ರ ಸರದಿಯಲ್ಲಿ 54 ರನ್ ಗಳಿಸಿದರು. ಸ್ನೇಹ ರಾಣಾ(80)ಗರಿಷ್ಠ ಸ್ಕೋರ್ ಗಳಿಸಿದರು. ಶಿಖಾ ಪಾಂಡೆ ಹಾಗೂ ಭಾಟಿಯಾ ಅವರೊಂದಿಗೆ ಜೊತೆಯಾಟ ನಡೆಸಿದ ಸ್ನೇಹ ಇಂಗ್ಲೆಂಡ್ ಬೌಲರ್ ಗಳನ್ನು ನಿರಾಸೆಗೊಳಿಸಿದರು. ಶೆಫಾಲಿ ವರ್ಮಾ(63) ಸತತ ಎರಡನೇ ಅರ್ಧಶತಕವನ್ನು ಸಿಡಿಸಿದರು.

ತಾನಿಯಾ ಭಾಟಿಯಾ(44) ಹಾಗೂ ಪೂನಂ ರಾವತ್(39)ಎರಡಂಕೆಯ ಸ್ಕೋರ್ ಗಳಿಸಿದರು. ಇಂಗ್ಲೆಂಡ್ನ ಸೋಫಿ ಎಕ್ಲೆಸ್ಟೋನ್ (4-118)ಯಶಸ್ವಿ ಬೌಲರ್ ಎನಿಸಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 396 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಉತ್ತರವಾಗಿ ಭಾರತವು ಮೊದಲ ಇನಿಂಗ್ಸ್ ನಲ್ಲಿ 231 ರನ್ ಗಳಿಸಿ ಆಲೌಟಾಯಿತು. ಇಂಗ್ಲೆಂಡ್ ತಂಡ ಭಾರತಕ್ಕೆ ಫಾಲೋ ಆನ್ ವಿಧಿಸಿತು.

ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಶೆಫಾಲಿ ವರ್ಮಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

 

Leave a Reply

Your email address will not be published. Required fields are marked *