Friday, 13th December 2024

ಮಾದಕ ವಸ್ತುಗಳ ತಡೆ ಪ್ರತಿಯೊಬ್ಬರ ಪಾತ್ರವೂ ಮುಖ್ಯ

ಕರ್ನಾಟಕ ಅಗಾಗ್ಗೆ ಕಂಡುಬರುತ್ತಿರುವ ಮಾದಕ ವಸ್ತುಗಳ ಮಾರಾಟದ ಪಿಡುಗು ರಾಜ್ಯಕ್ಕೆ ಕಳಂಕವಾಗಿದೆ. ಇಂದು ಮಾದಕ ವಸ್ತುಗಳ ಬಳಕೆ ವಿರೋಧಿ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿನ ಮಾದಕ ವಸ್ತುಗಳ ಬಳಕೆ ಹಾಗೂ ತಡೆ ಬಗ್ಗೆ ನಡೆಯುತ್ತಿರುವ ಬೆಳವಣಿಗೆ ಅವಲೋಕಿಸುವುದು ಮುಖ್ಯವೆನಿಸುತ್ತದೆ. ಸ್ಯಾಂಡಲ್‌ವುಡ್‌ನ ನಟ – ನಟಿಯರು ಮಾದಕ ವಸ್ತು ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಚಲನ
ಸೃಷ್ಟಿಯಾಯಿತು. ಕೆಲವು ನಟ-ನಟಿಯರನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು.

ಚಿತ್ರರಂಗದ ನಟ – ನಟಿಯರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಈ ಪ್ರಕರಣ ಮಹತ್ವ ಪಡೆಯಿತು. ರಾಜ್ಯದ ಪೊಲೀಸರು ಸುಮ್ಮನಾದರು ಎಂದು ಭಾವಿಸ ಲಾಗಿತ್ತು. ಆದರೆ ಪೊಲೀಸರು ನಡೆಸಿರುವ ಕಾರ್ಯಾಚರಣೆ ಶ್ಲಾಘನೀಯ. ರಾಜ್ಯದ ಪೊಲೀಸರು 2020ರಿಂದ 2021 ಜೂನ್‌ವರೆಗೆ 59, 23, 1006  ರು.ಮೊತ್ತದ ಡ್ರಗ್ಸ್‌ನ್ನು ವಶಪಡಿಸಿಕೊಂಡಿದ್ದಾರೆ.

2020ರಲ್ಲಿ 4066 ಪ್ರಕರಣ ದಾಖಲಿಸಲಾಗಿದ್ದು, 5021 ಜನರನ್ನು ಎಂಡಿ ಪಿಎಸ್ ಆಕ್ಟ್ ಅಡಿ ಬಂಧಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಡ್ರಗ್ಸ್ ನಾಶಪಡಿಸುವ ಕಾರ್ಯ ನಡೆಸಲಾಗುತ್ತಿದ್ದು, ರಾಜ್ಯದ ಪೊಲೀಸರ ಕಾರ್ಯಕ್ಕೆ ಸರಕಾರದಿಂದ ಶ್ಲಾಘನೆಯೂ ವ್ಯಕ್ತವಾಗಿದೆ. ಸದ್ದಿಲ್ಲದೆ ರಾಜ್ಯದಲ್ಲಿ ನಡಯುತ್ತಿದ್ದ ಮಾದಕ ವಸ್ತುಗಳ ಮಾರಾಟ ತಡೆಯುವಲ್ಲಿ ಪೊಲೀಸರ ಕಾರ್ಯ ಉತ್ತಮವಾಗಿದೆಯಾದರೂ, ಮಾದಕ ವಸ್ತಗಳ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರ
ಪಾತ್ರ ಬಹುಮುಖ್ಯ.