Sunday, 5th January 2025

ವೈದ್ಯಕೀಯ ಕ್ಷೇತ್ರದ ಸುರಕ್ಷತೆಗೆ ಸರಕಾರಗಳ ಅಭಯ

ಪ್ರತಿಯೊಬ್ಬ ಮನುಷ್ಯನಿಗೂ ವೈದ್ಯಕೀಯ ಕ್ಷೇತ್ರದ ಮಹತ್ವ ಅರಿವಾಗುವಂತೆ ಮಾಡಿದೆ ಈ ಕರೋನಾ ಸಂದರ್ಭ. ಆದ್ದರಿಂದ ಪ್ರಸ್ತುತ ಸಾಲಿನ ವೈದ್ಯರ ದಿನಾ ಚರಣೆ ಸಂದರ್ಭದಲ್ಲಿ ವೈದ್ಯರನ್ನು ಸೈನಿಕರಂತೆ ಕಾಣಲಾಗುತ್ತಿದೆ. ಕರೋನಾ ಹೋರಾಟದಲ್ಲಿ ಮಡಿದ ಹುತಾತ್ಮರ ನೆನಪಿನಲ್ಲಿ ಸ್ಮಾರಕ ನಿರ್ಮಿಸುವ ಪ್ರಯತ್ನ ಗಳೂ ಆರಂಭಗೊಂಡಿವೆ. ಆದರೆ ವೈದ್ಯಕೀಯ ಕ್ಷೇತ್ರ ಸಂತಸದ ಬದಲಾಗಿ ಹಲವು ರೀತಿಯ ಆತಂಕಗಳನ್ನು ಎದುರಿಸುತ್ತಿದೆ.

ಇದಕ್ಕೆ ಕಾರಣ ಒತ್ತಡದ ದುಡಿಮೆ, ವೈದ್ಯರ ಸಾವುಗಳು ಹಾಗೂ ವೈದ್ಯರ ಮೇಲೆ ಹಲ್ಲೆ ಪ್ರಯತ್ನಗಳು. ಇಂಥದೊಂದು ಬೆಳವಣಿಗೆಯಿಂದ ವೈದ್ಯಕೀಯ ಸಂಕಷ್ಟಕ್ಕೆ
ಸಿಲುಕಿಸಿದೆ. ಆದ್ದರಿಂದ ವೈದ್ಯಕೀಯ ಕ್ಷೇತ್ರದ ಸುರಕ್ಷತೆಗಾಗಿ ಹಲವು ಬೇಡಿಕೆಗಳು ವ್ಯಕ್ತವಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದ ವಿಚಾರ ವೈದ್ಯರ ಮೇಲಿನ ಹಲ್ಲೆಗಳ ತಡೆ. ಭಾರತದಂಥ ದೇಶದಲ್ಲಿ ವೈದ್ಯರ ಮೇಲೆ ಹಲ್ಲೆಯಂಥ ಪ್ರಯತ್ನಗಳು ಹೆಚ್ಚುತ್ತಿರುವುದೇ ಇತ್ತೀಚೆಗೆ. ಏಕೆಂದರೆ ಭಾರತದಲ್ಲಿ ವೈದ್ಯರನ್ನು ದೇವರರಂತೆ ಗೌರವಿಸಲಾಗುತ್ತದೆ. ಇದಕ್ಕೆ ಕಾರಣ ವೈದ್ಯಕೀಯ ಕ್ಷೇತ್ರದ ಮೂಲ ಆಶಯವೇ ಸೇವೆಯಾಗಿರುವುದು. ಈ ಕಾರಣದಿಂದಾಗಿಯೇ ವೈದ್ಯರ ಮೇಲಿನ ಹಲ್ಲೆಗಳನ್ನು ಗಂಭೀರ ಪ್ರಕರಣವನ್ನಾಗಿ ಭಾವಿಸಲಾಗುತ್ತದೆ.

೨೦೨೧ನೇ ಸಾಲಿನ ವೈದ್ಯರ ದಿನಾಚರಣೆ ಸಂದರ್ಭದಲ್ಲಿ ವೈದ್ಯರ ಮೇಲಿನ ಹಲ್ಲೆ ತಡೆ ಬಗ್ಗೆ ಕೂಗು ಕೇಳಿಬಂದಿದೆ. ಆದರೆ ಈಗಾಗಲೇ ಕೇಂದ್ರ ಸರಕಾರ ವೈದ್ಯರ ಮೇಲಿನ ಹಲ್ಲೆ ತಡೆಗಾಗಿ ಕೆಲವು ರೂಪುರೇಷೆಗಳನ್ನು ರಚಿಸಿದ್ದು, ಅನುಷ್ಠಾನಕ್ಕಾಗಿ ಪ್ರಯತ್ನಗಳು ಮುಂದುವರಿದಿದೆ. ಕರ್ನಾಟಕ ರಾಜ್ಯವೂ ಕರೋನಾ ಸಾಂಕ್ರಾಮಿಕದ ವೇಳೆ ಆರೋಗ್ಯ ಕಾರ್ಯಕರ್ತರು, ವೈದ್ಯರು ಹಾಗೂ ಆಸ್ತಿ ರಕ್ಷಣೆಗಾಗಿ ಸೂಕ್ತ ಕ್ರಮಕ್ಕೆ ಮುಂದಾಗಿದೆ. ೨೦೨೦ರ ಏಪ್ರಿಲ್ ೨೨ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿ ಸಾಂಕ್ರಾಮಿಕ ರೋಗಗಳ ಕಾಯಿದೆ ೧೮೯೭ಕ್ಕೆ ತಿದ್ದುಪಡಿ ಮೂಲಕ ಹೊಸ ಸುಗ್ರೀವಾಜ್ಞೆ ಪ್ರಸ್ತಾಪಕ್ಕೆ ಅನುಮೋದನೆ ನೀಡಿತ್ತು. ರಾಷ್ಟ್ರಪತಿ ಅಂಕಿತ ಹಾಕಿದ್ದು ರಾಜ್ಯದಲ್ಲಿಯೂ ಸುಗ್ರೀವಾಜ್ಞೆ ಮೂಲಕ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ವೈದ್ಯರ ರಕ್ಷಣೆಗಾಗಿ ಸರಕಾರಗಳಿಂದ ಸದಾ ಉತ್ತಮ ಸ್ಪಂದನೆ ದೊರೆಯುತ್ತಿದೆ.

Leave a Reply

Your email address will not be published. Required fields are marked *