Friday, 13th December 2024

ಬಹು ನಾಯಕತ್ವಕ್ಕೆ ಒತ್ತು, ದಂಡ ನಾಯಕನಿಗೆ ಕುತ್ತು ?

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಕರ್ನಾಟಕದಲ್ಲಿ ಪಕ್ಷದ ಶಕ್ತಿ ಕುಸಿಯದಂತೆ ನೋಡಿಕೊಳ್ಳಲು ಬಿಜೆಪಿ ವರಿಷ್ಠರು ಯಾವ ಮಟ್ಟಿನ ಎಚ್ಚರಿಕೆ ವಹಿಸಿದ್ದಾರೆ ಎಂಬುದಕ್ಕೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯೇ ಸಾಕ್ಷಿ. ಈ ಪುನರ್ ರಚನೆಯ ಸಂದರ್ಭದಲ್ಲಿ ಕರ್ನಾಟಕದ ನಾಲ್ಕು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ ವರಿಷ್ಠರು ಒಂದು
ಸಂದೇಶವನ್ನು ರವಾನಿಸಿದ್ದಾರೆ.

ಅದೆಂದರೆ, ಕರ್ನಾಟಕದಲ್ಲಿ ಇನ್ನು ಮುಂದೆ ಪಕ್ಷವನ್ನು ಒಬ್ಬ ದಂಡನಾಯಕ ಮುಂದುವರಿಸುವುದಿಲ್ಲ ಎಂಬುದು. ಅರ್ಥಾತ್, ಸಾಮೂಹಿಕ ನಾಯಕತ್ವದಡಿ ಪಕ್ಷ
ಮುಂದುವರಿಯಬೇಕು ಎಂಬುದು ವರಿಷ್ಠರ ಬಯಕೆ. ಅಂದ ಹಾಗೆ ಕರ್ನಾಟಕದ ನೆಲೆಯಲ್ಲಿ ಬಿಜೆಪಿಗೆ ಅಧಿಕಾರದ ಸವಿ ಉಣ್ಣಿಸಿದವರು ಯಡಿಯೂರಪ್ಪ. 2006ರಲ್ಲಿ ಅವರು ಕುಮಾರಸ್ವಾಮಿ ಅವರ ಜತೆ ಕೈಜೋಡಿಸಿ ಜೆಡಿಎಸ್ – ಬಿಜೆಪಿ ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಂಡರು. 2008ರಲ್ಲಿ ಪುನಃ ಬಿಜೆಪಿ ಅಽಕಾರ ಹಿಡಿಯಲು ಯಡಿಯೂರಪ್ಪ ಅವರೇ ಮುಖ್ಯ ಕಾರಣ.

ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರಿಸದೆ ಕುಮಾರಸ್ವಾಮಿ ವಚನದ್ರೋಹ ಮಾಡಿದರು ಎಂದು ಅಬ್ಬರಿಸಿ, ಬೊಬ್ಬಿರಿದ ಯಡಿಯೂರಪ್ಪ ಚುನಾವಣೆಗೆ
ಹೋದಾಗ ರಾಜ್ಯದ ಮತದಾರರು ಅವರ ಕೈ ಹಿಡಿದರು. ಅಂದಿನ ಬಿಜೆಪಿ ಗೆಲುವಿಗೆ ಗಣಿ ರೆಡ್ಡಿಗಳ ಕೊಡುಗೆಯೂ ಇತ್ತೆಂಬುದು ನಿಜ. ಆದರೆ ಪಕ್ಷದ ಮುಂಚೂಣಿ ಯಲ್ಲಿ ಯಡಿಯೂರಪ್ಪ ಇದ್ದುದರಿಂದ ಬಿಜೆಪಿ ನೂರಾ ಹತ್ತರಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಇದಾದ ನಂತರ ೨೦೧೮ರಲ್ಲಿ ಬಿಜೆಪಿ ಅತ್ಯಂತ ದೊಡ್ಡ
ಶಕ್ತಿಯಾಗಿ ಹೊರಹೊಮ್ಮಿದರೂ, ಕಾಂಗ್ರೆಸ್ ನಾಯಕರ ತ್ವರಿತ ನಡೆ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬರುವಂತೆ ಮಾಡಿತು.

ಆದರೆ ಹಗಲು – ರಾತ್ರಿ ಶ್ರಮಿಸಿದ ಯಡಿಯೂರಪ್ಪ ಮೈತ್ರಿಕೂಟ ಸರಕಾರದಲ್ಲಿದ್ದ ಒಡಕಿನ ಲಾಭ ಪಡೆದರು. ಆ ಸರಕಾರವನ್ನುರುಳಿಸಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದರು. ಇಂಥ ಎಲ್ಲ ಕಾರಣಗಳಿಗಾಗಿ ಈ ಅವಧಿ ಪೂರ್ಣಗೊಳ್ಳುವವರೆಗೆ ತಾವು ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಿಡಬೇಕು ಎಂದು ಯಡಿಯೂರಪ್ಪ ವರಿಷ್ಠರಿಗೆ ಸಿಗ್ನಲ್ ರವಾನಿಸುತ್ತಲೇ ಇದ್ದಾರೆ. ಒಂದು ವೇಳೆ ಬಲವಂತವಾಗಿ ತಮ್ಮನ್ನು ಇಳಿಸಿದರೆ ರಾಜ್ಯದ ಲಿಂಗಾಯತ ವರ್ಗ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತದೆ. ಅದು ತಿರುಗಿ ಬೀಳುತ್ತದೆ ಎಂಬುದಕ್ಕೆ ಟೆಸ್ಟ್ ಡೋಸ್‌ನ ಅಗತ್ಯವೇನಿಲ್ಲ.

೨೦೧೩ರ ಚುನಾವಣೆಯಲ್ಲಿ ತಾವು ಕೆಜೆಪಿಗೆ ಹೋದ ಪರಿಣಾಮವಾಗಿ ಬಿಜೆಪಿ ಹೀನಾಯ ಸೋಲುಂಡಿತ್ತು ಎಂಬ ಮೆಸೇಜನ್ನೂ ಅವರು ವರಿಷ್ಠರಿಗೆ ನೆನಪಿಸುತ್ತಲೇ ಇzರೆ. ಅಂದ ಹಾಗೆ ಯಡಿಯೂರಪ್ಪ ಅವರ ಸಿಗ್ನಲ್ ಅನ್ನು ಬಿಜೆಪಿ ಹೈಕಮಾಂಡ್‌ನ ರಾಡಾರ್‌ಗಳು ಗ್ರಹಿಸಿಲ್ಲ ಎಂದಲ್ಲ. ಆದರೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಆಗಲೇಬೇಕು ಎಂಬ ವಿಷಯದಲ್ಲಿ ವರಿಷ್ಠರ ಧೋರಣೆ ಬದಲಾದಂತಿಲ್ಲ. ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಸಿ.ಪಿ. ಯೋಗೀಶ್ವರ್ ಅವರಲ್ಲಿ ಈಗಲೂ ಕಾಣುತ್ತಿರುವ ಆತ್ಮವಿಶ್ವಾಸ ಅದಕ್ಕೆ ಸಾಕ್ಷಿ. ತಂದೆ ಆನೆ ಅಂಬಾರಿ ಹೊತ್ತಿದೆ ಅಂತ ಮರಿಯಾನೆಗೆ ಅಂಬಾರಿ ಹೊರಿಸಲು ಸಾಧ್ಯವಿಲ್ಲ ಎಂಬ ಯೋಗೀಶ್ವರ್ ಮಾತು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ಗುರಿಯಾಗಿಸಿಕೊಂಡಿತ್ತು.

ಇದೇ ರೀತಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ಬಳಿ ಇರುವ ಬ್ರಹ್ಮಾಸವನ್ನು ಪ್ರಯೋಗಿಸಿದರೆ ನೀವು ಮಠ ಬಿಟ್ಟು ಓಡಿ ಹೋಗುತ್ತೀರಿ. ಅಂಥ ಕರ್ಮ ಕಾಂಡ ನಡೆದಿದೆ ಅಂತ ಕೆಲ ಮಠಾಧಿಪತಿಗಳನ್ನು ಎಚ್ಚರಿಸಿದರು. ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿರುವ ಕಾರಣಕ್ಕಾಗಿ ಈ ಮಠಾಧೀಶರನ್ನು ಯತ್ನಾಳ್ ಎಚ್ಚರಿಸಿದರು ಎಂಬುದು ರಹಸ್ಯವೇನಲ್ಲ. ಇದರರ್ಥ ಏನೆಂದರೆ ಯಡಿಯೂರಪ್ಪ ಅವರನ್ನು ಅಲುಗಾಡಿಸುವ ದಾಖಲೆಗಳು ಯೋಗೀಶ್ವರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರಿಬ್ಬರ ಬಳಿಯೂ ಇದೆ. ಈ ದಾಖಲೆಗಳ ಸ್ವರೂಪ ಬೇರೆ, ಬೇರೆ ಇರಬಹುದು.

ಆದರೆ ಅವು ಅಂತಿಮವಾಗಿ ಯಡಿಯೂರಪ್ಪ ಅವರ ಶಿರಸ್ಸನ್ನು ಗುರಿಯಾಗಿರಿಸಿಕೊಂಡೇ ಪ್ರಯೋಗವಾಗಲಿವೆ. ಹಾಗಂತ ಇದು ಯಾವ ದಾಖಲೆ ಎಂಬುದು ಬಿಜೆಪಿ ಹೈಕಮಾಂಡ್‌ಗೆ ಗೊತ್ತಿಲ್ಲ ಅಂತಲ್ಲ, ಯಾಕೆಂದರೆ ಯೋಗೀಶ್ವರ್ ಮತ್ತು ಯತ್ನಾಳ್ ಈ ದಾಖಲೆಗಳನ್ನು ವರಿಷ್ಠರ ಮುಂದೆ ಮಂಡಿಸಿ ಹಲ ದಿನಗಳೇ ಕಳೆದುಹೋಗಿವೆ. ಒಂದು ವೇಳೆ ಅವರು ಇಂಥ ಕೆಲಸ ಮಾಡದೆ ಹೋಗಿದ್ದರೆ ಇಷ್ಟೊತ್ತಿಗಾಗಲೇ ಬಲಿಪಶುಗಳಾಗಿರುತ್ತಿದ್ದರು. ಆದರೆ ಅರುಣ್ ಸಿಂಗ್
ಕರ್ನಾಟಕಕ್ಕೆ ಬಂದು ಹೋಗಿ ಇಷ್ಟು ದಿನ ಕಳೆದರೂ ಈ ಇಬ್ಬರು ನಾಯಕರ ಮೇಲೆ ಯಾವ ಶಿಸ್ತುಕ್ರಮವೂ ಆಗಿಲ್ಲ. ಯೋಗೀಶ್ವರ್ ಅವರನ್ನು ಸಂಪುಟದಿಂದ ಕಿತ್ತು ಹಾಕಿ ಅಂತ ಯಡಿಯೂರಪ್ಪ ಬೆಂಬಲಿಗರು ಹೌಹಾರಿ, ಕಿರುಚಾಡಿದರೂ ಇದುವರೆಗೆ ಕ್ರಮದ ಮಾತೇ ಇಲ್ಲ.

ಯತ್ನಾಳ್ ವಿರುದ್ಧ ಕ್ರಮವಾಗಲಿ ಎಂದು ಇದೇ ಬೆಂಬಲಿಗರು ವರಿಷ್ಠರಿಗೆ ದೂರಿನ ಕಂತೆ ರವಾನಿಸಿದರೂ ಪ್ರಯೋಜನವಾಗಿಲ್ಲ.ಅರ್ಥಾತ್, ಈ ಇಬ್ಬರ ಕೈಲೂ
ಬ್ರಹ್ಮಾಸ್ತ್ರಗಳಿರುವುದು ನಿಜ. ಇದನ್ನು ಟುಸ್ ಎನ್ನಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಆದರೆ ಇದರಿಂದ ಯಡಿಯೂರಪ್ಪ ಅವರ ಮೇಲೆ ಮುಗಿಬೀಳುವುದು,
ಇನ್ಯಾವುದೋ ತನಿಖೆಯ ಜಾಲದಲ್ಲಿ ಸಿಕ್ಕಿಬೀಳುವಂತೆ ಮಾಡಿ ಯಡಿಯೂರಪ್ಪ ಅವರನ್ನಿಳಿಸುವುದು ಸುಲಭ. ಆದರೆ ಇಳಿಸುವುದು ಎಷ್ಟು ಸುಲಭವೋ? ಅದನ್ನು
ದಕ್ಕಿಸಿಕೊಳ್ಳುವುದು ಅಷ್ಟೇ ಕಷ್ಟ. ಹೀಗಾಗಿ ಯಡಿಯೂರಪ್ಪ ಇಳಿಯಲೂ ಬೇಕು,ಪಕ್ಷಕ್ಕೆ ಡ್ಯಾಮೇಜೂ ಆಗಬಾರದು ಎಂಬುದು ವರಿಷ್ಠರ ನಿಲುವು.

ಇದೇ ಕಾರಣಕ್ಕಾಗಿ ಕರ್ನಾಟಕದಲ್ಲಿ ಇನ್ನು ಮುಂದೆ ಪಕ್ಷ ದಂಡನಾಯಕನ ಕೈ ಕೆಳಗಿರಬಾರದು, ಬದಲಿಗೆ ಸಾಮೂಹಿಕ ನೇತೃತ್ವದಲ್ಲಿ ಮುಂದುವರಿಯಬೇಕು ಎಂದವರು ಬಯಸಿದ್ದಾರೆ. ಕೇಂದ್ರ ಸಚಿವ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ರಾಜ್ಯಕ್ಕೆ ಸಿಕ್ಕ ಪ್ರಾತಿನಿಧ್ಯದ ಸ್ವರೂಪವೇ ಅದಕ್ಕೆ ಸಾಕ್ಷಿ. ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ, ಲಿಂಗಾಯತ ಸಮುದಾಯದ ಭಗವಂತ ಖೂಬಾ, ದಲಿತರಲ್ಲಿ ಎಡಗೈ ಸಮುದಾಯದ ಎ.ನಾರಾಯಣ ಸ್ವಾಮಿ ಮತ್ತು ರಾಜೀವ್ ಚಂದ್ರಶೇಖರ್ ಅವರಿಗೆ ಅವಕಾಶ ನೀಡಲಾಗಿದೆ. ಅಲ್ಲಿಗೆ ಈಗಾಗಲೇ ಇರುವ ಪ್ರಹ್ಲಾದ ಜೋಶಿ ಸೇರಿದರೆ ಮುಂಬೈ – ಕರ್ನಾಟಕ, ಹೈದ್ರಾಬಾದ್ –
ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಹಳೆ ಮೈಸೂರು ಭಾಗಗಳಿಗೆ ಪ್ರಾತಿನಿಧ್ಯ ನೀಡಿದಂತಾಗಿದೆ.

ಹೀಗೆ ಮಾಡುವ ಮೂಲಕ ಸಾಮೂಹಿಕ ನಾಯಕತ್ವಕ್ಕೆ ಒತ್ತು ನೀಡುವುದು, ಏಕವ್ಯಕ್ತಿಯ ಅಡಿ ನಿಲ್ಲುವ ದುಃಸ್ಥಿತಿ ನಿವಾರಿಸುವುದು ವರಿಷ್ಠರ ಉದ್ದೇಶ ಎಂಬುದು ಸ್ಪಷ್ಟ. ಇದು ಕೂಡಾ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡುವ ಮುನ್ಸೂಚನೆ ಎಂಬುದು ನಿಸ್ಸಂದೇಹ.