Friday, 20th September 2024

ಪ್ರವಾಹ ನಿರ್ವಹಣೆ ಮುನ್ನೆಚ್ಚರಿಕೆ ಇರಲಿ

ಕರೋನಾ ಎರಡನೇ ಅಲೆಯಿಂದ ಹೊರ ಬಂದಿರುವ ಕರ್ನಾಟಕಕ್ಕೆ ಇದೀಗ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಸವಾಲು ಎದುರಾಗಿದೆ. ಸದ್ಯಕ್ಕೆ ಆರಂಭಿಕ ಪರಿಸ್ಥಿತಿಯಲ್ಲಿರುವ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ, ಮುಂಜಾಗ್ರತ ಕ್ರಮವಾಗಿ ಸರಕಾರ ಈಗಾಗಲೇ ವಿವಿಧ ಹಂತದಲ್ಲಿ ಸಭೆಗಳನ್ನು ನಡೆಸಿ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಸಂಬಂಧ ಚರ್ಚೆ ನಡೆಸಿದೆ.

ಪ್ರತಿವರ್ಷ ಈ ರೀತಿ ಸಾಲು ಸಾಲು ಸಭೆಗಳನ್ನು ಸರಕಾರ ನಡೆಸುತ್ತದೆ, ಆರ್ಥಿಕ ಇಲಾಖೆಯಿಂದ ಜಿಲ್ಲಾಧಿ ಕಾರಿಗಳ ಖಾತೆಗೂ ಇಂತಿಷ್ಟು ಕೋಟಿ ಎಂದು ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಪ್ರತಿಬಾರಿಯೂ, ಸರಕಾರ ತಗೆದುಕೊಳ್ಳುವ ಹಲವು ನಿರ್ಣಯಗಳು ಕೇವಲ ಸಭೆಗೆ ಸೀಮಿತವಾಗಿರುತ್ತದೆ ಹೊರತು, ಪ್ರವಾಹ ಪೀಡಿತರಿಗೆ ಪೂರ್ಣ ಪ್ರಮಾಣದಲ್ಲಿ ಸಿಗುವುದಿಲ್ಲ ಎನ್ನುವ ಆರೋಪ ಕೇಳಿಬರುವುದು ಸಹಜ. ಆದ್ದರಿಂದ ಸಭೆಯ ನಿರ್ಣಯಗಳು ಪೇಪರ್‌ಗೆ ಸೀಮಿತವಾಗದೇ, ಪ್ರಾಯೋಗಿಕವಾಗಿ ಜಾರಿಗೆ ತರುವಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕಿದೆ.

ಇನ್ನು ಈ ಬಾರಿ ಕರೋನಾ ಎನ್ನುವ ಮಹಾಮಾರಿಯ ಆತಂಕವಿರುವುದರಿಂದ ಪ್ರವಾಹ ಕಾಣಿಸಿಕೊಂಡು ಆಘಾತ ಸೃಷ್ಟಿಸುವ ಮೊದಲೇ, ಇದಕ್ಕೆ ಅಗತ್ಯ ಮುನ್ನೆಚ್ಚರಿಕಾ ತಯಾರಿಯನ್ನು ಮಾಡಬೇಕಿದೆ. ಪುನರ್‌ವಸತಿ ಕೇಂದ್ರಗಳಲ್ಲಿ ಹಾಗೂ ತಾತ್ಕಾಲಿಕ ಕೇಂದ್ರಗಳಲ್ಲಿ ಕರೋನಾ ಮಾರ್ಗಸೂಚಿ ಹಾಗೂ ಸಾಮಾಜಿಕ ಅಂತರಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಪ್ರವಾಹ ನಿಯಂತ್ರಣಕ್ಕಿಂತ ದೊಡ್ಡ ಆಪತ್ತು ಕರೋನಾ ಸೋಂಕಿನಿಂದ ಆಗುವ ಸಾಧ್ಯತೆಯಿದೆ.

ಆದ್ದರಿಂದ ಸರಕಾರ ಹಾಗೂ ಆಡಳಿತ ವರ್ಗ ಈಗಿನಿಂದಲೇ, ಸಂಭವನೀಯ ಪ್ರವಾಹ ಪೀಡಿತ ಜಿಲ್ಲೆಗಳ ಬಗ್ಗೆ ಎಚ್ಚರವಹಿಸಬೇಕು. ಜಾನುವಾರುಗಳಿಗೆ ಮೇವು ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು ಹಾಗೂ ಸರಕಾರ ಪ್ರವಾಹದಿಂದ ಸಮಸ್ಯೆಗೆ ಒಳಗಾಗುವ ಜನರಿಗೆ ಸರಕಾರ ನೀಡುವ ಪರಿಹಾರ ಜನರ ಕೈಗೆ ಸೇರುವಂತೆ ನೋಡಿಕೊಳ್ಳಬೇಕಿದೆ.