ಕರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ ದೇಶದಲ್ಲಿ ನಿಧಾನವಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಈಗಾಗಲೇ ಆಗಸ್ಟ್ ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಏಮ್ಸ್ ತಜ್ಞರು ಹೇಳಿದ್ದಾರೆ. ಈ ಎಲ್ಲ ಆತಂಕದ ನಡುವೆ ದೇಶ ಸಂಪೂರ್ಣ ಅನ್‌ಲಾಕ್ ಆಗಿದೆ.
ಸರಕಾರ ಆರ್ಥಿಕ, ಸಾಮಾಜಿಕ ಒತ್ತಡವನ್ನು ಗಮನದಲ್ಲಿರಿಸಿಕೊಂಡು ಅನ್‌ಲಾಕ್ ಮಾಡಿ ದ್ದರೂ, ಅನವಶ್ಯಕ ವಾಗಿ ಓಡಾಡಬೇಡಿ ಎನ್ನುವ ಸತತ ಎಚ್ಚರಿಕೆಯನ್ನು ನೀಡುತ್ತಲೇ ಇದೆ. ಹೀಗಿದ್ದರೂ ಜನರು ಮಾತ್ರ ಕರೋನಾವೇ ಇಲ್ಲ ಎನ್ನುವ ರೀತಿ ಓಡಾಡುತ್ತಿದ್ದಾರೆ. ನಗರಗಳಲ್ಲಿ ದಂಡಕ್ಕೆ ಹೆದರಿ ಮಾಸ್ಕ್‌ಗಳನ್ನು ಧರಿಸು ತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಮಾಸ್ಕ್ ಅನ್ನು ಬಳಸುತ್ತಿಲ್ಲ. ಇದರಿಂದ ಸೋಂಕು ಪುನಃ ಹಬ್ಬುವ ಆತಂಕವನ್ನು ತಳ್ಳಿಹಾಕುವಂತಿಲ್ಲ. ಇನ್ನು ಎರಡನೇ ಅಲೆ ಉತ್ತುಂಗಕ್ಕೆ ಹೋದಾಗ ಕರೋನಾ ಲಸಿಕೆಯನ್ನು ಪಡೆಯಲು ಇದ್ದ ಉತ್ಸಾಹ, ಗ್ರಾಮೀಣ ಭಾಗದ ಜನರಲ್ಲಿ ಈಗ ಉಳಿದಿಲ್ಲ. ಮೊದಲಿಗೆ ಇದ್ದ ಆತುರ ಈಗ ಕಾಣಿಸುತ್ತಿಲ್ಲ ಎಂದು ಅನೇಕ ವೈದ್ಯರು ಹೇಳಿದ್ದಾರೆ.
ಆದರೆ ಈಗಾಗಲೇ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿರುವುದರಿಂದ, ಶಾಲೆ, ಕಾಲೇಜು, ಚಿತ್ರಮಂದಿರ ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಎಲ್ಲದರ ನಡುವೆ, ಮುಂಗಾರು ಶುರುವಾಗಿರುವುದರಿಂದ, ಅನಾರೋಗ್ಯ ಸಮಸ್ಯೆ ಸಹಜವಾಗಿಯೇ ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜನರು ಸರಕಾರ ಅವಕಾಶ ನೀಡಿದೆ ಎಂದು ತಿರುಗಾಡಲು ಮುಂದಾದರೆ, ಇನ್ನಷ್ಟು ಸಮಸ್ಯೆ ಎದುರಿಸುವುದು ಖಚಿತ.
ಕರೋನಾ ಸೋಂಕು ಮಕ್ಕಳಿಗೆ ಹೆಚ್ಚು ಸಮಸ್ಯೆ ಮಾಡುವುದಿಲ್ಲ ಎಂದು ತಜ್ಞರು ಹೇಳಿದ್ದರೂ ಲಸಿಕೆ ಸಿಗುವ ತನಕ, ಎಚ್ಚರಿಕೆ ಇಂದ ಇರುವುದು ಸೂಕ್ತ. ಮೂರನೇ ಅಲೆ ನಿಯಂತ್ರಣಕ್ಕೆ ಸರಕಾರದ ಪಾತ್ರಕ್ಕಿಂತ ಹೆಚ್ಚಾಗಿ ಜನರ ಪಾತ್ರವಿದೆ ಎನ್ನುವುದನ್ನು ಮರೆಯಬಾರದು.