ವಿಭಿನ್ನ ಶೀರ್ಷಿಕೆಯ ಬಾಡಿಗಾಡ್ ಮಾನವ ಸಂಬಂಧಗಳ ಕಥೆ ಹೇಳಲು ಬರುತ್ತಿದೆ. ಪ್ರಭು ಶ್ರೀನಿವಾಸ್ ನಿರ್ದೇಶಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ
ಮಠ ಗುರುಪ್ರಸಾದ್ ನಟಿಸುತ್ತಿದ್ದಾರೆ.
ನಿರ್ದೇಶನದ ಮೂಲಕ ಪ್ರಸಿದ್ಧಿ ಪಡೆದಿರುವ ಗುರುಪ್ರಸಾದ್, ನಟನೆಗೂ ಸೈ ಅನಿಸಿಕೊಂಡವರು. ಲಾಕ್ ಡೌನ್ ಸಮಯದಲ್ಲಿ ಖಾಲಿ ಕುಳಿತಿದ್ದ ನನಗೆ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಅರವತ್ತರ ಆಸುಪಾಸಿನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ತನಕ ಪತ್ರಕರ್ತ ಹಾಗೂ ನಿರ್ದೇಶಕನಾಗಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ನನಗೆ ಇದು ವಿಭಿನ್ನ ಪಾತ್ರ. ಮಗ- ಮಗಳು ವಿದೇಶದಲ್ಲಿ ನೆಲೆಸಿರುತ್ತಾರೆ.
ಇಳಿವಯಸ್ಸಿನಲ್ಲಿ ಹಿರಿಯರಿಗೆ ಮಕ್ಕಳ ಆಸರೆ ಎಷ್ಟು ಮುಖ್ಯ ಎನ್ನುವುದನ್ನು ನಿರ್ದೇಶಕರು ಈ ಪಾತ್ರದ ಮೂಲಕ ಹೇಳಹೊರಟಿದ್ದಾರೆ. ಪ್ರೇಕ್ಷಕರ ಮೆಚ್ಚುಗೆಗೂ ಬಾಡಿಗಾಡ್ ಪಾತ್ರವಾಗಲಿದೆ ಎಂದರು ಗುರುಪ್ರಸಾದ್. ಗಣಪ, ಕರಿಯ ೨, ಡಾಲಿ ಚಿತ್ರಗಳನ್ನು ನಿರ್ದೇಶಿಸಿರುವ ಪ್ರಭು ಶ್ರೀನಿವಾಸ್ ಬಾಡಿಗಾಡ್ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿ ದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಮಾನವ ತನ್ನ ಸಂಬಂಧಗಳನ್ನೇ ಮರೆಯುತ್ತಿದ್ದಾನೆ.
ಅದನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸುವ ಪ್ರಯತ್ನವಾಗಿ, ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಪ್ರಮೋಷನಲ್ ಹಾಡಿನ ಶೂಟಿಂಗ್ ಬಿಟ್ಟು ಬಾಕಿ ಚಿತ್ರೀಕರಣ ಮುಕ್ತಾಯವಾಗಿದೆ. ಸೆಪ್ಟೆಂಬರ್ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ಲಾನ್ ಇದೆ ಎಂದು ಹೇಳುತ್ತಾರೆ ನಿರ್ದೇಶಕರು. ಮುಗ್ಧ ಯುವಕನ ಪಾತ್ರಕ್ಕಾಗಿ ಸಾಕಷ್ಟು ಕಲಾವಿದರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದರಂತೆ. ಆದರೆ ಅನಿರೀಕ್ಷಿತ ಭೇಟಿಯಾದ ಮನೋಜ್ ಅವರು ಈ ಪಾತ್ರಕ್ಕೆ ಸರಿಹೊಂದುತ್ತಾರೆ ಎಂದು ಕೊಂಡು ಮನೋಜ್ ಅವರನ್ನು ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿರುವುದಾಗಿ ತಿಳಿಸಿದ ನಿರ್ದೇಶಕರು, ಮನೋಜ್ ಅವರ ಸಹಜ ಅಭಿನಯ ನೋಡುಗರ ಮನದಲ್ಲೇ ಉಳಿಯುತ್ತದೆ ಎನ್ನುತ್ತಾರೆ.
ಸೆಂಟಿಮೆಂಟ್ ಸ್ಟೋರಿಯ ಜತೆಗೆ, ಕಾಮಿಡಿಯ ಕಥಾಹಂದರ ಹೊಂದಿರುವ ಬಾಡಿಗಾಡ್ಗೆ ಇವನೇ ಬೊಂಬೆ ಆಡ್ಸೋನು ಎಂಬ ಅಡಿಬರಹವಿದೆ.