Sunday, 22nd December 2024

ಯುವ ನಾಯಕತ್ವ ಗುರುತಿಸಲು ಸಕಾಲ

ಕರ್ನಾಟಕದಲ್ಲಿ ಕಳೆದ ಐದು ದಶಕದಿಂದ ಬಿಜೆಪಿಯನ್ನು ಕಟ್ಟಿ ಬೆಳಸಿದ್ದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಯಡಿಯೂರಪ್ಪ ಹೇಳಿದ್ದರೂ, ಮುಂದಿನ ಚುನಾವಣೆ ವೇಳೆಗೆ ಅವರಿಗೆ ರಾಜ್ಯಾದ್ಯಂತ ಪ್ರವಾಸ ಮಾಡಲು ವಯಸ್ಸು ಸಹಕರಿಸು ವುದೇ ಎನ್ನುವ ಪ್ರಶ್ನೆಯಿದೆ.

ಆದರೆ ಬಿಜೆಪಿಯ ಆರಂಭದ ದಿನದಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರು ಈಗ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದು ಬಿಜೆಪಿ ವರಿಷ್ಠರಿಗೆ ಎರಡನೇ ಹಂತದ ನಾಯಕತ್ವಕ್ಕೆ ಬಿಜೆಪಿಯ ಹಿಡಿತ ನೀಡುವ ಸಮಯ ಬಂದಾಗಿದೆ. ಯಡಿಯೂರಪ್ಪ ಅವರ ಬಳಿಕ ಯಾರು ಈ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಬಹುದು ಎನ್ನುವ ಗೊಂದಲವಿದೆ. ಆದರೆ ಚುನಾವಣೆಗೆ ಇನ್ನು ಒಂದೂವರೆ ವರ್ಷ ಅವಕಾಶ ಇರುವಾಗ, ಪ್ರಯೋಗ ಮಾಡುವ ಕಾರ್ಯಕ್ಕೆ ವರಿಷ್ಠರು ಮುಂದಾಗ ಬಹುದು.

ಈ ಬಾರಿಯ ಮುಖ್ಯಮಂತ್ರಿ ಆಯ್ಕೆ ವೇಳೆ, ಮುಂದಿನ ಒಂದೂವರೆ ವರ್ಷಕ್ಕೆ ಯೋಚಿಸದೇ ದೀರ್ಘಾವಧಿ ಯೋಜನೆಯೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಆದ್ದರಿಂದ ಬಿಜೆಪಿ ವರಿಷ್ಠರು ಈ ಬಾರಿ ಯುವಕರಿಗೆ ಮಣೆ ಹಾಕುವ ಲೆಕ್ಕಾಚಾರದಲ್ಲಿದೆ. ಕೇವಲ ಮುಖ್ಯಮಂತ್ರಿ ಆಯ್ಕೆ ಮಾತ್ರವಲ್ಲದೇ, ಸಂಪುಟ ರಚನೆಯಲ್ಲಿಯೂ ಯುವಕರಿಗೆ ಆದ್ಯತೆ ನೀಡುವ ಮೂಲಕ ಮುಂದಿನ ಚುನಾವಣೆ ಹಾಗೂ ಪಕ್ಷ ಸಂಘಟನೆಗೆ ಇದು ಅನುಕೂಲವಾಗಲಿದೆ ಎನ್ನುವುದು ವರಿಷ್ಠರ ಲೆಕ್ಕಾಚಾರವಾಗಿದೆ. ಆದರೆ ಈ ಎಲ್ಲ ಲೆಕ್ಕಾಚಾರದ ನಡುವೆ, ಬಿಜೆಪಿಯಲ್ಲಿ ಉದ್ಭವಿಸಬಹುದಾದ ಗೊಂದಲಗಳನ್ನು ತಡೆಯುವ ನಿಟ್ಟಿನಲ್ಲಿ ತಯಾರಿ ನಡೆಸಿ ಕೊಳ್ಳಬೇಕಿದೆ.