ಶಶಾಂಕ್ ಮುದೂರಿ
ರಾಮಪ್ಪ ಎಂಬಾತ ಓರ್ವ ಶಿಲ್ಪಿ. ಇಂದಿನ ತೆಲಂಗಾಣದ ವಾರಂಗಲ್ ಬಳಿಯ ಪಾಲಂಪೇಟೆ ಹಳ್ಳಿಯಲ್ಲಿ ಈತ ಒಂದು ರುದ್ರೇಶ್ವರ ದೇಗುಲ ನಿರ್ಮಾಣ ಮಾಡಿದ್ದ.
ಹದಿಮೂರನೆಯ ಶತಮಾನದಲ್ಲಿ ಆ ಪ್ರದೇಶವನ್ನು ಆಳುತ್ತಿದ್ದ ಕಾಕತೀಯ ಮಾಂಡಲಿಕರ ಅಭಿಲಾಷೆಯಂತೆ, ಆ ಹಳ್ಳಿಯ ಹೊರ ವಲಯದಲ್ಲಿನ ವಿಶಾಲ ಪ್ರದೇಶದಲ್ಲಿ ರುದ್ರೇಶ್ವರ ದೇಗುಲದ ಜತೆಯಲ್ಲೇ ಇನ್ನೂ ಎರಡು ಪ್ರಮುಖ ದೇಗುಲಗಳು ನಿರ್ಮಾಣಗೊಂಡವು.
ಆ ದೇಗುಲದ ಸೌಂದರ್ಯವನ್ನು ಕಂಡೋ ಅಥವಾ ರಾಮಪ್ಪ ಎಂಬ ಆ ಶಿಲ್ಪಿ ಗಳಿಸಿದ ಜನಪ್ರಿಯತೆಯಿಂದಲೋ ಆ ದೇಗುಲ ಸಂಕೀರ್ಣವನ್ನು ‘ರಾಮಪ್ಪ ದೇವಾಲಯ’ ಎಂದು ಕರೆಯತೊಡಗಿದರು! ಮಾಂಡಲಿಕ ಅಥವ ಯಜಮಾನರ ಹೆಸರನ್ನು ತೊರೆದು, ಮುಖ್ಯ ದೇವತೆಯ ಹೆಸರನ್ನು ಸಹ ಹೇಳದೆ, ಶಿಲ್ಪಿಯ ಹೆಸರಿನಿಂದಲೇ ದೇಗುಲವೊಂದನ್ನು ಹೆಸರಿಸಿರುವ ಅಪರೂಪದ ಉದಾಹರಣೆ ಇದು.
ಇತಿಹಾಸ : ಕಾಕತೀಯ ಅರಸನಾದ ಗಣಪತಿ ದೇವನ ಕಾಲದಲ್ಲಿ (ಸಾ.ಶ.1213) ರೇಚರ‍್ಲ ರುದ್ರ ರೆಡ್ಡಿ ಎಂಬಾತ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ. ಆತನ ಅಣತಿಯಂತೆ ರಾಮಪ್ಪನು ಪಾಲಂಪೇಟೆಯಲ್ಲಿ ಶಿವಾಲಯವೊಂದನ್ನು ನಿರ್ಮಾಣ ಮಾಡಲು ತೊಡಗಿದ. ದೇಗುಲವು ವಿಶಾಲವಾಗಿದ್ದುದರಿಂದ, ಹತ್ತಾರು ವರ್ಷಗಳ ಕಾಲ ಅಲ್ಲಿ ಶಿಲಾ ಕೃತಿಗಳ ನಿರ್ಮಣ ನಡೆಯಿತು, ಮೂರು ಪ್ರಮುಖ ದೇಗುಲಗಳ ನಿರ್ಮಾಣವಾಯಿತು, ಎಲ್ಲೆಡೆ ಕಲ್ಲುಗಳ ಕೆತ್ತನೆ ನಡೆಯಿತು. ರೇಚರ‍್ಲ ರುದ್ರ ರೆಡ್ಡಿಯ ಉತ್ತರಾಧಿಕಾರಿಗಳು ನಿರ್ಮಾಣ ಕಾರ್ಯವನ್ನು ಮುಂದುವರಿಸಿದರು. ಇಲ್ಲಿನ ಪ್ರಧಾನ ದೇಗುಲ ರುದ್ರೇಶ್ವರ ಎಂದು ಹೆಸರಾಗಿದ್ದು, ಇತರ ಎರಡು ದೇಗುಲಗಳ ಅವಶೇಷಗಳು ಮಾತ್ರ ಇಂದು ಉಳಿದುಕೊಂಡಿವೆ.
ನಕ್ಷತ್ರಾಕಾರದ ಜಗತಿ
ಸುಮಾರು ಆರು ಅಡಿ ಎತ್ತರದ ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಾಣಗೊಂಡಿರುವ ರುದ್ರೇಶ್ವರ ದೇವಾಲಯವು, ಚಾಲುಕ್ಯೋತ್ತರ ಶೈಲಿಯಲ್ಲಿ ರೂಪು ಗೊಂಡಿದೆ. ಈ ದೇಗುಲ ನಿರ್ಮಾಣ ಕಾಲದಲ್ಲಿ ಅದಾಗಲೇ ಬೇಲೂರಿನ ಚೆನ್ನಕೇಶವ ದೇಗುಲ ನಿರ್ಮಾಣಗೊಂಡು ಸುಮಾರು 100 ವರ್ಷ ಕಳೆದಿತ್ತು. ನಕ್ಷತ್ರಾ ಕಾರದ ಜಗತಿಯು ಹೊಯ್ಸಳ ವಾಸ್ತು ಶೈಲಿಯಲ್ಲಿ ಪ್ರಧಾನವಾಗಿ ಕಂಡು ಬರುವ ಶಿಲಾನಿರ್ಮಿತಿ. ಈ ದೇಗುಲದ ಮೇಲೆ ಹೊಯ್ಸಳ ಶಿಲ್ಪ ಶೈಲಿಯ ಪ್ರಭಾವ ಆಗಿರಲೇ ಬೇಕು. ಕೆಂಪು ಕಲ್ಲಿನಲ್ಲಿ ನಿರ್ಮಾಣಗೊಂಡ ಈ ದೇಗುಲದಲ್ಲಿ, ಕಪ್ಪು ಶಿಲೆಯ ವಿವಿಧ ಕೆತ್ತನೆಗಳು ಗಮನ ಸೆಳೆಯುತ್ತವೆ.
ಸಾಲಭಂಜಿಕೆ: ಈ ದೇಗುಲದಲ್ಲಿರುವ ಕಪ್ಪು ಶಿಲೆಯ ಸಾಲಭಂಜಿಕೆ ವಿಗ್ರಹಗಳು ವಿಶೇಷ ಗಮನ ಸೆಳೆಯುತ್ತವೆ. ಉದ್ದನೆಯ ದೇಹ, ಬಳುಕುವ ನೃತ್ಯ ಭಂಗಿ ಮತ್ತು ಹೊಳೆಯುವ ಮೈ ಹೊಂದಿರುವ ಈ ಸಾಲಭಂಜಿಕೆ ವಿಗ್ರಹಗಳು ಕಾಕತೀಯ ಶೈಲಿಯ ಶಿಲ್ಪಕಲೆಯ ಎದ್ದು ಕಾಣುವ ಶೈಲಿ ಎನಿಸಿದೆ.
ರಾಮಪ್ಪ ದೇಗುಲ ಸಂಕೀರ್ಣವು ನಂತರದ ಶತಮಾನಗಳಲ್ಲಿ ಸಾಕಷ್ಟು ಹಾನಿಗೆ ಒಳಗಾಗಿವೆ. ಇದಕ್ಕೆ ಯುದ್ಧ, ಭೂಕಂಪಗಳು ಪ್ರಮುಖ ಕಾರಣ. ದೇಗುಲದ ಪ್ರಾಂಗಣದಲ್ಲಿ ಭಗ್ನ ಶಿಲ್ಪಗಳ, ಕಂಬಗಳ ರಾಶಿಯನ್ನು ಸಾಲಾಗಿ ಜೋಡಿಸಿಟ್ಟಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿ ರುದ್ರೇಶ್ವರ ದೇಗುಲವನ್ನು ಜೀರ್ಣೋದ್ಧಾರ ಗೊಳಿಸಲಾಯಿತು, ಶಿಥಿಲಗೊಂಡ ಛಾವಣಿಗೆ ಆಧಾರವನ್ನು ನಿರ್ಮಿಸಲಾಯಿತು, ದೇಗುಲದ ಒಳಗೆ ನೀರು ಸೋರದಂತೆ ಮೇಲ್ಭಾಗದಲ್ಲಿ ಸುರಿಕೆ ಗಾರೆ ಹಾಕಿಸ ಲಾಯಿತು. ಇಂದು ಭಾರತೀಯ ಸರ್ವೇಕ್ಷಣಾ ಇಲಾಖೆಯ ಸುಪರ್ದಿನಲ್ಲಿರುವ ಈ ದೇಗುಲವು, ತೆಲಂಗಾಣ ರಾಜ್ಯದ ಕೆಲವೇ ಐತಿಹಾಸಿಕ ದೇಗುಲಗಳಲ್ಲಿ
ಒಂದು ಎನಿಸಿದೆ.
25 ಜುಲೈ 2021ರಂದು ಈ ದೇಗುಲವನ್ನು ವಿಶ್ವ ಪರಂಪರೆಯ ತಾಣ ಎಂದು ಗುರುತಿಸಲಾಗಿದ್ದು, ಅದರಿಂದಾಗಿ ಈ ಹದಿಮೂರನೆಯ ಶತಮಾನದ ಈ ಶಿಲಾನಿರ್ಮಿತಿಯು ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಪ್ರತಿ ಶಿವರಾತ್ರಿಯ ದಿನ ಇಲ್ಲಿ ನಡೆಯುವ ವಿಶೇಷ ಪೂಜೆಗೆ ಸುತ್ತಲಿನ ಸಾವಿರಾರು ಭಕ್ತರು ಆಗಮಿಸು ವುದು ವಿಶೇಷ ಎನಿಸಿದೆ.