41 ವರ್ಷದ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತದ ರಾಷ್ಟ್ರ ಕ್ರೀಡೆ ಹಾಕಿಗೆ ಕಂಚಿನ ಪದಕ ಸಿಕ್ಕಿದೆ. ಇನ್ನು ಮಹಿಳೆಯರ ವಿಭಾಗದಲ್ಲಿಯೂ, ವಿರೋಚಿತವಾಗಿ ಸೋತು ನಾಲ್ಕನೇ ಸ್ಥಾನದಲ್ಲಿದೆ. ಈ ಸಂಭ್ರಮದ ಸಮಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಅವರ ಹೆಸರಿನಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಎಂದು ಮರುನಾಮಕರಣ ಮಾಡಿದ್ದಾರೆ.
ಈ ನಿರ್ಧಾರದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಈ ನಿರ್ಣಯವನ್ನು ರಾಜಕೀಯಗೊಳಿಸುತ್ತಿದ್ದು, ಕೇಸರಿಕರಣ, ಆರ್‌ಎಸ್‌ಎಸ್ ಅಜೆಂಡಾ ಎಂದು ಟೀಕಿಸು ತ್ತಿದ್ದಾರೆ. ಆದರೆ ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿಯಲ್ಲಿ ಸಾಧನೆ ಮಾಡಿರುವ ಸಮಯದಲ್ಲಿ ಈ ರೀತಿಯ ಘೋಷಣೆ ಮಾಡಿರುವುದು ಸಾಧನೆಗೆ ಸಂದ ಗೌರವ. ರಾಷ್ಟ್ರೀಯ ಕ್ರೀಡೆ ಯಾಗಿರುವ ಹಾಕಿಗೆ ಇನ್ನಷ್ಟು ಯುವಕರು ಹೋಗುವ ಹಾಗೂ ಕ್ರಿಕೆಟ್‌ಗೆ ಸಿಗುವಷ್ಟೇ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಇದೊಂದು ಉತ್ತಮ ನಿರ್ಣಯವಾಗಿದೆ.
ಇನ್ನು ಕೇಂದ್ರ ಸರಕಾರ ತೆಗೆದುಕೊಂಡಿರುವ ಈ ನಿರ್ಣಯವನ್ನು ಕಾಂಗ್ರೆಸ್‌ನವರು ವಿರೋಧಿಸುತ್ತಿದ್ದಾರೆ. ಈ ರೀತಿಯ ವಿರೋಧ ಮಾಡುವ ಮೊದಲು, ಧ್ಯಾನ್ ಚಂದ್ ಅವರು ಯಾವುದೇ ಪಕ್ಷ, ಸಿದ್ಧಾಂತಕ್ಕೆ ಸೀಮಿತವಾಗಿರ ಲಿಲ್ಲ. ಭಾರತದ ಹಾಕಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ, ದಂತಕಥೆಯಾಗಿರುವ ಧ್ಯಾನ್ ಚಂದ್ ಅವರು ಒಂದು ಸಿದ್ಧಾಂತಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ರಾಜೀವ್ ಗಾಂಧಿ ಅವರು ಯುವಕರಿಗೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ನೀಡಿರಬಹುದು. ಆದ್ದ ರಿಂದ ಆ ಕಾಲಘಟ್ಟಕ್ಕೆ ತಕ್ಕಂತೆ ಅವರ ಹೆಸರಲ್ಲಿ ಖೇಲ್ ರತ್ನ ಪ್ರಶಸ್ತಿಯನ್ನು ಆರಂಭಿಸಿರಬಹುದು.
ಆದರೀಗ ಸಾರ್ವಜನಿಕರ ಒತ್ತಡಕ್ಕೆ ಮಣಿದು ಹಾಗೂ ಒಲಿಂಪಿಕ್’ನಲ್ಲಿ ಹಾಕಿ ತಂಡ ಮಾಡಿರುವ ಐತಿಹಾಸಿಕ ಸಾಧನೆಯ ಈ ಸಮಯದಲ್ಲಿ ಕೇಂದ್ರ ಸರಕಾರ ಈ ಗೌರವ ಸಲ್ಲಿಸಿದೆ. ಆದ್ದರಿಂದ ಇದನ್ನು ವಿರೋಧಿಸುವ ಬದಲು ಸ್ವಾಗತಿಸುವುದು ಉತ್ತಮ. ಏಕೆಂದರೆ ಭಾರತದ ಹಾಕಿ ಇತಿಹಾಸದಲ್ಲಿ ಧ್ಯಾನ್ ಚಂದ್ ಅವರು ಜಾತಿ, ಪ್ರದೇಶ, ರಾಜಕೀಯ ಮೀರಿ ಬೆಳೆದವರು. ಆದ್ದರಿಂದ ಈ ನಿರ್ಣಯವನ್ನು ರಾಜಕೀಯ ಮೀರಿ ಸಾಧನೆಗೆ ನೀಡಿರುವ ಗೌರವವನ್ನು ಪಕ್ಷಾತೀಯವಾಗಿ ಸ್ವಾಗತಿಸಬೇಕಿದೆ.