ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ನನಗೂ ಮತ್ತು ವಿವಿಯನ್ ರಿಚರ್ಡ್ಸ್‌ಗೂ ಅಫೇರ್ ಇತ್ತು. ನಾನು ಕೆಲವೇ ದಿನಗಳಲ್ಲಿ ಬಸುರಿ ಆದೆ. ಆದರೆ ಅಷ್ಟರೊಳಗೆ ರಿಚರ್ಡ್ಸ್ ತಮ್ಮ ದೇಶಕ್ಕೆ ಮರಳಿದ್ದರು. ನನಗೆ ಒಂದು ಸಲ ದಿಗಿಲಾಯಿತು. ಮದುವೆ ಯಾಗದೇ ಮಕ್ಕಳಾ ಗುವುದನ್ನು ಈ ಸಮಾಜ ಸಹಿಸುವುದಿಲ್ಲ.
ಜನ ನನ್ನನ್ನು ಏನಂತ ಭಾವಿಸಬಹುದು? ನನ್ನ ಸಿನಿಮಾ ವೃತ್ತಿಗೆ ಇದು ಮಾರಕವಾಗಬಹುದಲ್ಲವೇ? ಇದೇ ನನ್ನ ಜೀವನಕ್ಕೆ ಮುಳುವಾಗಬಹುದಲ್ಲವೇ?
ನನ್ನ ಗರ್ಭದಲ್ಲಿರುವ ಪಿಂಡವನ್ನು ಇಟ್ಟುಕೊಳ್ಳಬೇಕಾ ಅಥವಾ ಗರ್ಭಪಾತ ಮಾಡಿಸಿಕೊಳ್ಳಬೇಕಾ?ಏ ನನ್ನ ಮುಂದೆ ಸಾವಿರಾರು ಯೋಚನೆಗಳು. ಯಾವುದಕ್ಕೂ
ಉತ್ತರ ಸಿಗುತ್ತಿಲ್ಲ. ನಾನು ಈ ವಿಷಯವನ್ನು ಬಹಿರಂಗಪಡಿಸುವಂತಿರಲಿಲ್ಲ. ಕಾರಣ ಯಾರಾದರೂ ಈ ವಿಷಯವನ್ನು ಬಹಿರಂಗಪಡಿಸಿದರೆ, ಅದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ, ನನ್ನ ಮಾನ ಹರಾಜು ಆಗುವ ಸಾಧ್ಯತೆಯಿತ್ತು ಎಂದು ನನಗೆ ಅನಿಸಿತು.
ಹೀಗಾಗಿ ನಾನು ಈ ವಿಷಯವನ್ನು ಅನೇಕರ ಜತೆ ಚರ್ಚಿಸಲಿಲ್ಲ. ನಾನು ಹಿಂದಿ ಸಿನಿಮಾಗಳಲ್ಲಿ ನಟಿಸಿ ತಕ್ಕ ಮಟ್ಟಿಗೆ ಪ್ರಸಿದ್ಧಳಾಗಿದ್ದೆ. ವಿವಿಯನ್ ರಿಚರ್ಡ್ಸ್ ಅವರಂತೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರ. ನಮ್ಮಿಬ್ಬರ ಜನಪ್ರಿಯತೆಯಿಂದ ಈ ಸುದ್ದಿ ದೊಡ್ಡ ಸುದ್ದಿಯಾಗುವುದರಲ್ಲಿ ಅನುಮಾನವೇ ಇರಲಿಲ್ಲ. ನನ್ನ ಅನೇಕ ಆತ್ಮೀಯರು, ಹಿತೈಷಿಗಳು ಮನೆಗೆ ಬಂದು, ‘ಬೇಡ, ಗರ್ಭಪಾತ ಮಾಡಿಸಿಕೋ. ಯಾಕೋ ನಮ ಗಂತೂ ಭಯವಾಗುತ್ತಿದೆ. ನಾಳೆ ರಿಚರ್ಡ್ಸ್ ಈ ಮಗು ತನ್ನದಲ್ಲ ಎಂದು ಹೇಳಿದರೆ? ಅದಕ್ಕಿಂತ ಮುಖ್ಯವಾಗಿ, ನಾಳೆಯಿಂದ ಈ ಸಮಾಜ ನಿನ್ನನ್ನು ನೋಡುವ ರೀತಿಯೇ ಬದಲಾಗಬಹುದು.
ಯೋಚಿಸು.. ಗರ್ಭಪಾತ ಮಾಡಿಸಿಕೋ.’ ಎಂದು ಸಲಹೆ ನೀಡಿದರು. ನಾನು ಎಲ್ಲರ ಮಾತುಗಳನ್ನು ಸುಮ್ಮನೆ ಕೇಳಿಸಿಕೊಂಡೆ. ಅವರು ಹೇಳಿದ ಯಾವ ಮಾತುಗಳೂ ಸುಳ್ಳಾಗಿರಲಿಲ್ಲ. ಆದರೆ ನನ್ನ ಅಂತರಂಗ ಬೇರೆಯ ದನ್ನೇ ಹೇಳುತ್ತಿತ್ತು. ನಾನು ಗರ್ಭವತಿಯಾಗಿದ್ದೇನೆ, ತಾಯಿಯಾಗುವುದು ಯಾವುದೇ ಹೆಣ್ಣಿಗೆ ಅತ್ಯಂತ ಸಂಭ್ರಮದ ಸಂಗತಿ, ನನ್ನ ಗರ್ಭದೊಳಗೆ ಒಂದು ಜೀವವಿದೆ, ಅದನ್ನು ನಾನು ಪೋಷಿಸಬೇಕು, ಅದನ್ನು ಸಾಯಿಸಬಾರದು, ಮದುವೆಯಾಗದೇ ನಾನು ಗರ್ಭವತಿಯಾಗಿರಬಹುದು, ಅದು ತಪ್ಪಾಗಿರಬಹುದು. ಆದರೆ ಹೊಟ್ಟೆಯಲ್ಲಿರುವ ಮಗುವಿಗೆ ಇವೆಲ್ಲಾ ಗೊತ್ತಿಲ್ಲ. ತಾನು ಮಾಡದ ತಪ್ಪಿಗೆ ಯಾಕೆ ಆ ಮಗುವನ್ನು ಸಾಯಿಸ ಬೇಕು.. ಎಂದೆಲ್ಲಾ ಅನಿಸಲಾರಂಭಿಸಿತು.
ಅದೇನೇ ಬರಲಿ, ನಾನು ಎದುರಿಸುತ್ತೇನೆ, ಜನ ನನ್ನನ್ನು ಕಳಂಕಿತೆ ಎಂದು ಹೇಳಬಹುದು, ಪರವಾಗಿಲ್ಲ, ಏನೇ ಬರಲಿ, ಎದುರಿಸುತ್ತೇನೆ ಎಂದು ನಿರ್ಧರಿಸಿದೆ. ಯಾವ ಕಾರಣಕ್ಕೂ ಗರ್ಭಪಾತ ಮಾಡಿಸಿಕೊಳ್ಳಬಾರದು ಎಂಬ ದೃಢ ಸಂಕಲ್ಪ ಮಾಡಿದೆ. ಇಲ್ಲಿ ಇನ್ನೊಂದು ಅಂಶವಿದೆ. ಅದೇನೆಂದರೆ, ನಾನು ನನ್ನ ಹೊಟ್ಟೆ ಯಲ್ಲಿರುವ ಮಗುವನ್ನು ಇಟ್ಟುಕೊಳ್ಳಬೇಕೋ, ಬೇಡವೋ ಎಂದು ನಿರ್ಧರಿಸುವುದು ನನ್ನದೊಂದೇ ಹೊಣೆಯಲ್ಲ. ಈ ವಿಷಯದಲ್ಲಿ ರಿಚರ್ಡ್ಸ್ ನಿರ್ಧಾರವೂ ಮುಖ್ಯ, ಎಷ್ಟೆಂದರೂ ಅವರು ಮಗುವಿನ ತಂದೆ, ಅವರ ಮಾತನೂ ಕೇಳಬೇಕು ಎಂದು ನನಗೆ ಅನಿಸಿತು.
ಅದಾಗಿ ಒಂದು ವಾರದ ನಂತರ, ನಾನು ಸಾಕಷ್ಟು ಯೋಚಿಸಿ, ಒಂದು ದಿನ ರಿಚರ್ಡ್ಸ್‌ಗೆ ಫೋನ್ ಮಾಡಿ, ಬಹಳ ಹೊತ್ತು ಮಾತಾಡಿದೆ. ನನ್ನ ತಲೆಯಲ್ಲಿರುವ ಪ್ರಶ್ನೆ, ದುಗುಡಗಳನ್ನೆಲ್ಲಾ ಅವರ ಜತೆ ಹಂಚಿಕೊಂಡೆ. ’ನಾನು ನಿಮ್ಮಿಂದಾಗಿ ಗರ್ಭವತಿಯಾಗಿದ್ದೇನೆ. ನಾನು ನಿಮ್ಮ ಮಗುವನ್ನು ಇಟ್ಟುಕೊಳ್ಳುವುದರಿಂದ ನಿಮಗೆ ಅಭ್ಯಂತರ ಇದೆಯಾ? ಈ ವಿಷಯದಲ್ಲಿ ನಾನು ನಿಮ್ಮ ನಿರ್ಧಾರವೇ ಅತ್ಯಂತ ಮಹತ್ವದ್ದೆಂದು ಭಾವಿಸಿದ್ದೇನೆ’ ಎಂದೆ. ನನಗೆ ದುಗುಡವಿತ್ತು. ರಿಚರ್ಡ್ಸ್ ಏನು ಹೇಳಬಹುದು ಎಂಬ ಬಗ್ಗೆ ಧಾವಂತ, ಕುತೂಹಲವಿತ್ತು.
ಆದರೆ ನಾನು ಗರ್ಭವತಿಯಾಗಿದ್ದಕ್ಕೆ ರಿಚರ್ಡ್ಸ್ ಬಹಳ ಸಂತಸಪಟ್ಟರು, ಸಂಭ್ರಮಪಟ್ಟರು. ’ಯಾವ ಕಾರಣಕ್ಕೂ ಗರ್ಭಪಾತ ಮಾಡಿಸಿಕೊಳ್ಳಬೇಡ. ಈ ಮಗುವನ್ನು ಪ್ರೀತಿಯಿಂದ ಸಾಕೋಣ’ ಎಂದು ಉದ್ಗರಿಸಿದರು. ನನಗೆ ಬಹಳ ಸಮಾಧಾನವಾಯಿತು. ಯಾಕೆಂದರೆ, ರಿಚರ್ಡ್ಸ್‌ಗೆ ಮದುವೆಯಾಗಿತ್ತು, ಅವರಿಗೆ ಅವರದ್ದೇ ಆದ ಸಂಸಾರ ಇತ್ತು, ಮಕ್ಕಳಿದ್ದರು. ಆದರೂ ಅವರು ನನ್ನ ಮಗುವಿಗೆ ತಂದೆಯಾಗಲು ಹಿಂದೇಟು ಹಾಕದಿರುವುದು ನನ್ನಲ್ಲಿ ವಿಶ್ವಾಸ ಮೂಡಿಸಿತು.
ರಿಚರ್ಡ್ಸ್ ಬಹಳ ಬ್ಯುಸಿ ಮನುಷ್ಯ. ಅವರು ಒಂದು ವಾರ ಒಂದೇ ಕಡೆ ಇರುತ್ತಿರಲಿಲ್ಲ. ಜಗತ್ತೆಲ್ಲಾ ಸುತ್ತುತ್ತಿದ್ದರು. ಅವರು ಕ್ರಿಕೆಟ್ ವೃತ್ತಿಯ ಉತ್ತುಂಗದಲ್ಲಿದ್ದರು. ಹೀಗಾಗಿ ನನಗೆ ಬೇಕಾದಾಗ, ಅವರು ಸಿಗುತ್ತಿರಲಿಲ್ಲ. ಅಲ್ಲದೇ ನಾವಿಬ್ಬರೂ ಸಾಕಷ್ಟು ಭೌಗೋಳಿಕ ದೂರದಲ್ಲಿದ್ದೇವೆ.
ನಮ್ಮಿಬ್ಬರ ನಡುವೆ ಸ್ಮರಣೀಯವಾದ ಅನೇಕ ಘಟನೆ, ನೆನಪುಗಳಿವೆ. ಹಲವು ಕಹಿ ಅನುಭವಗಳಿವೆ. ಆದರೆ ಜೀವನ ಅನೇಕ ಪಾಠಗಳನ್ನು ಕಲಿಸಿದೆ. ಈ ಎಲ್ಲಾ ಘಟನೆಗಳಿಂದ ನಾನು ಗಟ್ಟಿಯಾಗಿದ್ದೇನೆ. ಹಾಗಂತ ಬರೆಯುತ್ತಾರೆ ನಟಿ ನೀನಾ ಗುಪ್ತಾ. ಇತ್ತೀಚೆಗೆ ನಾನು ಹಿಂದಿ ನಟಿ ನೀನಾ ಗುಪ್ತಾ ಬರೆದ ಆತ್ಮಕತೆ
’ಸಛ್ ಕಹೂನ್ ತೋಹ್’ ಓದಿ ಮುಗಿಸಿದೆ. ಇಂಥ ಅನೇಕ ಕರುಳು ಉಬ್ಬಿ ಬರುವ ಕತೆಗಳಿವೆ.
ಎಲ್ಲೋ ಕಂಡ ಮುಖ
ಬ್ರಿಟನ್ ಪ್ರಧಾನಿಯಾಗಿದ್ದ ಟೋನಿ ಬ್ಲೇರ್ ಅವರ ಬಗ್ಗೆ ಸೈಮನ್ ಜಂಕಿನ್ಸ್ ಬರೆದ ಅನೇಕ ಅಂಕಣಗಳನ್ನು ನಾನು ಓದಿದ್ದೇನೆ. ಬ್ಲೇರ್ ಅವರ ಒಂದು ವಿಶಿಷ್ಟ ಗುಣವೆಂದರೆ, ಅವರು ಒಮ್ಮೆ ನಿಮ್ಮನ್ನು ನೋಡಿದರೆ, ಎಂದೆಂದೂ ಮರೆಯುವುದಿಲ್ಲವಂತೆ. ಈ ಸಂಗತಿಯನ್ನು ಜಂಕಿನ್ಸ್ ಕೂಡ ಒಂದೆರಡು ಸಲ ಪ್ರಸ್ತಾಪಿಸಿದ್ದರು. ಬ್ಲೇರ್ ಒಬ್ಬ ಅದ್ಭುತ face reader ಎಂದು ಅವರು ಬರೆದಿದ್ದರು.
ಇದೇ ಮಾತನ್ನು ’ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯ ಸಂಪಾದಕರಾಗಿದ್ದ ವೀರ್ ಸಾಂಘವಿ ತಮ್ಮ ಇತ್ತೀಚಿನ ಆತ್ಮಕತೆ A Rude Life ನಲ್ಲಿ ಪ್ರಸ್ತಾಪಿಸಿದ್ದಾರೆ. ಕೆಲವು ವರ್ಷಗಳ ಹಿಂದೆ, ’ಹಿಂದೂಸ್ತಾನ್ ಟೈಮ್ಸ್ ಸಮಿಟ್’ ಕಾರ್ಯಕ್ರಮಕ್ಕೆ ಬ್ರಿಟನ್ ಮಾಜಿ ಪ್ರಧಾನಿ ಬ್ಲೇರ್ ಅವರನ್ನು ಆಗಮಿಸಿದ್ದರಂತೆ. ಆಗ ವೀರ
ಸಾಂಘವಿ ಅವರನ್ನು ಭೇಟಿ ಮಾಡಿದಾಗ, ’ನಾನು ನಿಮ್ಮನ್ನು ಈ ಮೊದಲು ಭೇಟಿ ಮಾಡಿದ್ದೇನೆ’ ಎಂದು ಬ್ಲೇರ್ ಹೇಳಿದರಂತೆ. ಅದಕ್ಕೆ ಸಾಂಘವಿ, ’ ಇಲ್ಲ, ನಾನು ನಿಮ್ಮ ಭೇಟಿ ಮಾಡಿದ ಸಾಧ್ಯತೆ ಇಲ್ಲ’ ಎಂದು ಹೇಳಿದರಂತೆ. ಆದರೂ, ಬ್ಲೇರ್ ’ಇಲ್ಲ, ನಾನು ನಿಮ್ಮನ್ನು ಈ ಮೊದಲು ಭೇಟಿ ಮಾಡಿದ್ದೇನೇ, ನನಗೆ ನಿಮ್ಮ
ಮುಖ ಚೆನ್ನಾಗಿ ನೆನಪಿದೆ’ ಎಂದು ಹೇಳಿದರಂತೆ.
ಅಷ್ಟಾದರೂ ಸಾಂಘವಿ, ’ಇಲ್ಲ ನನಗೆ ನೆನಪಾಗುತ್ತಿಲ್ಲ’ ಎಂದು ಹೇಳಿದರಂತೆ. ’ನನಗೆ ನೆನಪಿದೆ, ನಿಮ್ಮನ್ನು ಭೇಟಿ ಮಾಡಿದ್ದೇನೆ, ನೀವು ನೆನಪಿಸಿಕೊಳ್ಳಿ’ ಎಂದು ಹೇಳಿದರಂತೆ.ಆಗ ಸಾಂಘವಿ, ’ನಾನು ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ಜತೆ ಮಾಧ್ಯಮ ನಿಯೋಗದಲ್ಲಿ, ಲಂಡನ್‌ನಲ್ಲಿರುವ ನಿಮ್ಮ ಅಧಿಕೃತ ನಿವಾಸ ೧೦, ಡೌವ್ನಿಂಗ್ ಸ್ಟ್ರೀಟ್ ಗೆ ಬಂದಿದ್ದೆ. ಆಗ ನಾನು ನಿಮಗೆ ಒಂದು ಪ್ರಶ್ನೆ ಕೇಳಿದ್ದೆ. ಅದು ಅಂಥ ಮಹತ್ವದ ಪ್ರಶ್ನೆಯೇನೂ ಆಗಿರಲಿಲ್ಲ’ ಎಂದು ಹೇಳಿದರಂತೆ.
ಆಗ ತಟ್ಟನೆ ಬ್ಲೇರ್, ’ಯೆಸ್, ನೋಡಿ ನಾನು ನಿಮ್ಮನ್ನು ಅಲ್ಲಿಯೇ ನೋಡಿದ್ದು, ನನಗೆ ಚೆನ್ನಾಗಿ ನೆನಪಿದೆ’ ಎಂದು ಹೇಳಿದರಂತೆ.
ಬ್ಲೇರ್ ಅವರೊಂದಿಗಿನ ಈ ಸಂಭಾಷಣೆ ಸಾಂಘವಿ ಅವರಿಗೆ ತುಸು ವಿಲಕ್ಷಣ ಎಂದೆನಿಸಿತಂತೆ. ಬ್ರಿಟನ್ ಪ್ರಧಾನಿ ತಮ್ಮ ನೆನಪಿನಶಕ್ತಿ ಬಗ್ಗೆ ಅನಗತ್ಯ ಪ್ರಚಾರ ತೆಗೆದುಕೊಳ್ಳಲು ಈ ಸಣ್ಣ ನಾಟಕ ಆಡಿರಬಹುದು ಎಂದು ಭಾವಿಸಿದರಂತೆ. ಕೆಲ ದಿನಗಳ ನಂತರ, ಈ ಪ್ರಸಂಗವನ್ನು ಬ್ಲೇರ್ ಅವರ ಸಂಪುಟದಲ್ಲಿದ ಜಾಕ್ ಸ್ಟ್ರಾ ಮತ್ತು ಅವರ ಮತ್ತೊಬ್ಬ ಸಹೋದ್ಯೋಗಿ ಮುಂದೆ ಸಾಂಘವಿ ಹೇಳಿದರಂತೆ. ಆಗ ಅವರಿಬ್ಬರೂ, ’ಇಲ್ಲ.. ಇಲ್ಲ.. ಅದು ನಿಜ.
ಬ್ಲೇರ್ ಒಂದು ಸಲ ಒಬ್ಬರನ್ನು ನೋಡಿದರೆ, ಜೀವನದಲ್ಲೇ ಮರೆಯುವುದಿಲ್ಲ. ಅನೇಕರಿಗೆ ಅವರ ಈ ಗುಣ ಆಶ್ಚರ್ಯವನ್ನು ಹುಟ್ಟಿಸಿದೆ’ ಎಂದು ಹೇಳಿದರಂತೆ. ಬ್ರಿಟನ್‌ನ ಪ್ರಧಾನಿ ಭಾರತದ ಪತ್ರಕರ್ತರೊಬ್ಬರ ಮುಖವನ್ನು ನೆನಪಿಟ್ಟುಕೊಳ್ಳಬೇಕಿಲ್ಲ. ಆದರೆ ಬ್ಲೇರ್ ಅವರನ್ನೂ ನೆನಪಿಟ್ಟುಕೊಂಡಿದ್ದರು. ಆದರೆ ಸಾಂಘವಿಗೇ ಅದು ಮರೆತು ಹೋಗಿತ್ತು. ಕೆಲವು ಸಲ, ನಾವು ಹಲವರನ್ನು ಭೇಟಿ ಮಾಡಿರುತ್ತೇವೆ. ಆದರೆ ಅವರಿಗೆ ಅದು ನೆನಪಿರುವುದೇ ಇಲ್ಲ. ಭೇಟಿ ಮಾಡಿದವರನ್ನೇ ಮೇಲಿಂದ ಮೇಲೆ ಪರಿಚಯ ಮಾಡಿಕೊಂಡರೂ, ಅವರಿಗೆ ನೆನಪಿರುವುದಿಲ್ಲ. ಅಂಥವರ ಬಗ್ಗೆ ನಮಗೆ ಒಳ್ಳೆಯ ಅಭಿಪ್ರಾಯ ಮೂಡಲು ಹೇಗೆ ಸಾಧ್ಯ?
ಅನುಪಯುಕ್ತ ಮಾಹಿತಿ
ನನ್ನ ಓದುಗ ಸ್ನೇಹಿತರೊಬ್ಬರಿದ್ದಾರೆ. ಅವರ ಹೆಸರು ಕಿಟ್ಟನಹಳ್ಳಿ ರಾಮಚಂದ್ರ. ಅವರು ವಿಚಿತ್ರ ಮಾಹಿತಿಯ ಕಣಜ. ’ಯಾವ ಮಾಹಿತಿಯೂ ಅನುಪಯುಕ್ತವಲ್ಲ ಎಂಬ ಮಾತಿದೆ. ಆದರೆ ನನ್ನಲ್ಲಿರುವ ಮಾಹಿತಿ ಹೇಗಿವೆಯೆಂದರೆ, ಅದರಿಂದ ಯಾರಿಗೂ ಪ್ರಯೋಜನವಿಲ್ಲ’ ಎಂದು ಅವರೇ ನಗುತ್ತಾ ಹೇಳುವುದನ್ನು ಕೇಳಿದ್ದೇನೆ.
ಇತ್ತೀಚೆಗೆ ರಾಮಚಂದ್ರ ಅವರು ಸಿಕ್ಕಾಗ, ’ಯಾವ ಹೊಸ ಮಾಹಿತಿಯನ್ನು ಇಟ್ಟಿದ್ದೀರಿ?’ ಎಂದು ಕೇಳಿದೆ. ಅದಕ್ಕೆ ಅವರು ಹೇಳಿದರು – ಕ್ಯಾಲಿಫೋರ್ನಿಯಾದ ಲಿವರ್ ಮೋರ್‌ನಲ್ಲಿರುವ ಆರನೇ ಫ್ಲೋರ್ ಸ್ಟೇಷನ್‌ನಲ್ಲಿ ಒಂದು ಲೈಟ್ ಬಲ್ಬ್ ಇದೆ. ಅದು ೧೯೦೧ ರಿಂದ ಸತತವಾಗಿ ಉರಿಯುತ್ತಲೇ ಇದೆ.’
ಇಲ್ಲಿ ಊರುಗೋಲನ್ನು ಹಿಡಿಯಬಾರದು!
ನೀವು ಜಪಾನಿಗೆ ಹೋಗುವಾಗ ಒಂದು ಸಂಗತಿ ತಿಳಿದಿರಬೇಕು. ಅದೇನೆಂದರೆ, ನೀವು ಮಾತ್ರೆ ಅಥವಾ ಔಷಧಗಳನ್ನು ಹಾಗೆ ಒಯ್ಯುವಂತಿಲ್ಲ. ನಿಮಗೆ ಅವುಗಳ ಅಗತ್ಯವಿರಬಹುದು. ಅದಿಲ್ಲದೇ ಬದುಕು ಅಸಹನೀಯವಾಗಬಹುದು. ನಿತ್ಯವೂ ಅವನ್ನು ಸೇವಿಸಬಹುದು. ಭಾರತದ ವೈದ್ಯರು ಕೊಟ್ಟ ಪ್ರಿಸ್ಕ್ರಿಪ್ಷನ್ ಇರಬಹುದು. ಜಪಾನಿನ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಮುಂದೆ ನೀವು ತಂದ ಮಾತ್ರೆ ಮತ್ತು ಔಷಧಗಳ ವಿವರಗಳನ್ನು ನೀಡಬೇಕು. ಅದಕ್ಕೆ ಅವರು ಪರವಾ ನಗಿ ಕೊಡುತ್ತಾರೆ. ಅದನ್ನು ನಿಮ್ಮ ಜತೆಯಲ್ಲಿ ಇಟ್ಟುಕೊಂಡಿರಬೇಕು.
ಇಲ್ಲದಿದ್ದರೆ ನಿಮ್ಮನ್ನು ತಪಾಸಣೆ ಮಾಡಿದಾಗ, ಅನುಮತಿ ಪತ್ರ ಇರದಿದ್ದರೆ ನಿಮಗೆ ದಂಡ ಗ್ಯಾರಂಟಿ. ಸ್ಪೇನ್‌ನಲ್ಲಿ ಒಂದು ವಿಚಿತ್ರ ಕಾನೂನಿದೆ. ಅದೇನೆಂದರೆ,
ಹೆದ್ದಾರಿಯಲ್ಲಿ ನೂರಕ್ಕಿಂತ ಹೆಚ್ಚು ಕಿಮೀ ವೇಗದಲ್ಲಿ ಕಾರನ್ನು ಓಡಿಸುವಾಗ, ನೀವು ಕಾರಿನ ಸ್ಟಿಯರಿಂಗ್ ಮೇಲೆ ಎರಡೂ ಕೈಗಳನ್ನು ಗಟ್ಟಿಯಾಗಿ ಇಟ್ಟುಕೊಂಡಿರ ಬೇಕು ಅಥವಾ ಹಿಡಿದಿರಬೇಕು. ಒಂದೇ ಕೈಯಲ್ಲಿ ಸ್ಟಿಯರಿಂಗ್ ಹಿಡಿದಿದ್ದು ರಸ್ತೆ ಪಕ್ಕದ ಕೆಮರಾದಲ್ಲಿ ಸೆರೆಯಾದರೆ, ಪೊಲೀಸು ಮಾಮ ಮುಂದೆ ನಿಮ್ಮ ಆತಿಥ್ಯಕ್ಕೆ ನಿಂತಿರುತ್ತಾನೆ ! ಕೆಲವರು ಡ್ರೈವ್ ಮಾಡುವಾಗ ಒಂದು ಕೈಯನ್ನು ಕಿಟಕಿ ಮೇಲೆ ಇಟ್ಟಿರುತ್ತಾರೆ ಹಾಗೂ ಇನ್ನೊಂದು ಕೈಯನ್ನು ಸ್ಟಿಯರಿಂಗ್ ಮೇಲಿಟ್ಟಿರುತ್ತಾರೆ. ಇದರಿಂದ ವೇಗವಾಗಿ ಚಲಿಸುವ ಕಾರಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವುದು ಕಷ್ಟ. ಈ ಕಾರಣದಿಂದ ಈ ಕಾನೂನು.
ಗ್ರೀಸಿನ ಅಕ್ರೋಪ್ಲಿಸ್ ಮ್ಯೂಸಿಯಮ್ಮಿಗೆ ನಿಮ್ಮ ಸ್ನೇಹಿತೆಯೋ ಅಥವಾ ಪತ್ನಿಯ ಜತೆಗೆ ಹೋಗುವಾಗ ಅವಳು ಹೈ ಹೀಲ್ಡ್ ಚಪ್ಪಲಿ ಧರಿಸಿದ್ದರೆ, ದಂಡ ತೆರಲು ಸಿದ್ಧರಾಗಿರಿ. ಹೈ ಹೀಲ್ಡ್ ಅಥವಾ ಪಾಯಿಂಟೆಡ್ ಚಪ್ಪಲಿ, ಷೂ ಧರಿಸುವುದರಿಂದ ಅಲ್ಲಿನ ಐತಿಹಾಸಿಕ ತಾಣದಲ್ಲಿರುವ ಸ್ಮಾರಕಗಳಿಗೆ, ನೆಲದ ಮೇಲಿರುವ
ಶಾಸನಗಳಿಗೆ ಧಕ್ಕೆ ಆಗಬಹುದೆಂಬ ಕಾರಣಕ್ಕಾಗಿ ಈ ಎಚ್ಚರವಹಿ ಸಲಾಗಿದೆ. ಕೆಲವು ತಾಣಗಳಲ್ಲಿ ವಯಸ್ಸಾದವರು ಊರುಗೋಲನ್ನು ಹಿಡಿದು ಹೋಗುವುದನ್ನು ಸಹ ನಿಷೇಧಿಸಲಾಗಿದೆ.
ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಾನೂನುಗಳಿರುತ್ತವೆ. ಅದು ನಮಗೆ ವಿಚಿತ್ರವೆನಿಸಬಹುದು, ಆದರೆ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಜಾರಿಗೆ ತಂದಿರುತ್ತಾರೆ. ಈ ಸಂಗತಿಯನ್ನು ಅರಿಯದೇ ಹೋದರೆ, ನಾವು ವೃಥಾ ಮುಜುಗರ ಅನುಭವಿಸಬೇಕಾಗುತ್ತದೆ ಇಲ್ಲವೇ ತೊಂದರೆಗೆ ಸಿಲುಕ ಬೇಕಾಗುತ್ತದೆ. ಈ ಕಾರಣದಿಂದ ಮೊದಲೇ ಇವನ್ನು ತಿಳಿದಿರುವುದು ಒಳ್ಳೆಯದು.
ಚುನಾವಣೆಯಲ್ಲಿ ಗೆಲ್ಲುವುದು
ನೀವು ಮಾಣಿಕರಾವ್ ಹೊದಲ್ಯಾ ಗಾವಿತ್ ಎಂಬುವವರ ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಇವರು ಡಾ.ಮನಮೋಹನ ಸಿಂಗ್ ಅವರ ಸರಕಾರದಲ್ಲಿ ಗೃಹ ಖಾತೆ ರಾಜ್ಯ ಸಚಿವರಾಗಿದ್ದರು. ಇವರು ಮಂತ್ರಿಯಾಗಿದ್ದುದು ಯಾರಿಗೂ ಗೊತ್ತಿರಲಿಲ್ಲ. ಇವರು 1981 ರಿಂದ 2014 ರವರೆಗೆ ಮಹಾರಾಷ್ಟದ ನಂದೂರ್ ಬಾರ್ ಲೋಕಸಭಾ ಕ್ಷೇತ್ರದಿಂದ ಸತತ ಒಂಬತ್ತು ಬಾರಿ ಆಯ್ಕೆಯಾಗಿದ್ದರು. ಆ ರಾಜ್ಯದಿಂದ ಲೋಕಸಭೆಗೆ ಅತಿ ಹೆಚ್ಚು ಸಲ ಆಯ್ಕೆಯಾದ ದಾಖಲೆ ಇನ್ನೂ ಅವರ ಹೆಸರಿನಲ್ಲಿಯೇ ಇದೆ.
ಕಾಂಗ್ರೆಸ್ಸಿನ ನಿಷ್ಠಾವಂತ ಸದಸ್ಯರಾಗಿದ್ದ ಗಾವಿತ್ ಅವರ ವಿರುದ್ಧ ಎಂಥ ಘಟಾನುಘಟಿ ಅಭ್ಯರ್ಥಿ ನಿಲ್ಲಿಸಿದರೂ ಅವರು ಸೋತು ಹೋಗುತ್ತಿದ್ದರು. ಪ್ರಾಥಮಿಕ ತರಗತಿ ತನಕ ಓದಿದ್ದ ಗಾವಿತ್ ಆರಿಸಿ ಬರುತ್ತಿದ್ದುದೇ ಅನೇಕರಿಗೆ ವಿಸ್ಮಯವಾಗಿತ್ತು. ನಾನು ಅವರನ್ನು ಪ್ರಧಾನ ಮಂತ್ರಿ ಅವರ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ದಲ್ಲಿ ಭೇಟಿಯಾಗಿದ್ದೆ. ಅದು ಅವರ ಮೊದಲ ವಿದೇಶ ಪ್ರವಾಸವಾಗಿತ್ತು. ಪಾಪ ಅವರಿಗೆ ಏನೇನೂ ಗೊತ್ತಿರಲಿಲ್ಲ.
ನಿರುಪದ್ರವಿ ಎಂಬ ಪದಕ್ಕೆ ಜೀವಂತ ನಿದರ್ಶನದಂತಿದ್ದ ಗಾವಿತ್, ಹಣವನ್ನು ಖರ್ಚು ಮಾಡದೇ ಆರಿಸಿ ಬರುತ್ತಿದ್ದರು. ಅವರಲ್ಲಿ ಯಾವ ಗುಣಗಳನ್ನು ನೋಡಿ ಅವರ ಕ್ಷೇತ್ರದ ಮತದಾರರು ಆರಿಸಿ ತರುತ್ತಿದ್ದರೋ ಆ ದೇವರೇ ಬಲ್ಲ ! ನಂದನ್ ನಿಲೇಕಣಿ ಅವರಿಗಿಂತ ಯೋಗ್ಯ ಅಭ್ಯರ್ಥಿ ಬೇಕಾ? ಭಾರತದ ಐಟಿ ಕ್ಷೇತ್ರದ ಪಿತಾಮಹರಲ್ಲಿ ಅವರೂ ಒಬ್ಬರು. ಅವರು ಲೋಕಸಭೆಯಲ್ಲಿರಬೇಕಿತ್ತು. ಅವರಿಗೆ ಎಲ್ಲಾ ಅರ್ಹತೆ ಳಿದ್ದವು. ಅವರು ಆರಿಸಿ ಹೋಗಿದ್ದರೆ, ನಿಶ್ಚಿತವಾಗಿಯೂ
ಅವರಿಂದ ಗಣನೀಯ ಯೋಗದಾನವನ್ನು ನಿರೀಕ್ಷಿಸಬಹುದಾಗಿತ್ತು.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅವರು ಅನಂತ ಕುಮಾರ ವಿರುದ್ಧ ನಿಲ್ಲದೇ ಬೇರೆ ಕ್ಷೇತ್ರ ಆಯ್ದುಕೊಳ್ಳಬೇಕಿತ್ತು. ಅವರು ಎಡವಿದ್ದು ಅಲ್ಲಿಯೇ. ಅವರು ತಮ್ಮ ಜೀವನದಲ್ಲಿ ಸಾಧಿಸಿದ ಅನುಭವ, ಸಾಧನೆ ಅವರಿಗೆ ಗೆಲ್ಲಲು ಸಹಕಾರಿಯಾಗಲಿಲ್ಲ. ಅವರು ಅನಂತಕುಮಾರ ಅವರ ವಿರುದ್ಧ ಸೋತು ಹೋದರು. ಅಲ್ಲಿಗೆ ಅವರ ರಾಜಕೀಯ ವಾಂಛೆಯೂ ಮುಗಿದು ಹೋಯಿತು.
ಚುನಾವಣೆಯಲ್ಲಿ ಗೆಲ್ಲುವುದು ಅಂದರೆ ಅಷ್ಟು ಸುಲಭವಾ ? ನಮ್ಮ ಯೋಗ್ಯತೆ, ಶೈಕ್ಷಣಿಕ ಅರ್ಹತೆ, ಪ್ರಾಮಾಣಿಕತೆಯೇ ಬೇರೆ, ಚುನಾವಣಾ ರಂಗದಲ್ಲಿ ಪರಿಗಣಿತವಾಗುವ ಸಂಗತಿಗಳೇ ಬೇರೆ. ಅಂಪೈರ್ ಹೇಗೆ ಉತ್ತಮ ಕ್ರೀಡಾಪಟು ಆಗಲು ಸಾಧ್ಯ ವಿಲ್ಲವೋ, ರಾಜಕೀಯ ಪಂಡಿತನಾದವನು ಚುನಾವಣೆಯನ್ನು
ಗೆಲ್ಲುವುದೂ ಸಾಧ್ಯವಿಲ್ಲ. ಅದೇ ಬೇರೆ ಇದೆ ಬೇರೆ. ರಾಜಕೀಯ ಪಂಡಿತನಿಗೆ ರಾಜಕೀಯ ಕ್ಷೇತ್ರದ ಬಗ್ಗೆ ಆಳವಾದ ಜ್ನಾನವಿರಬಹುದು. ಚುನಾವಣಾ ಗೆಲ್ಲಲು ಅದು ಮಾನದಂಡವಲ್ಲ. ರಾಜಕೀಯದ ಬಗ್ಗೆ ಗೊತ್ತಿರುವುದು ಆರಿಸಿ ಬರುವುದಕ್ಕೆ ಯಾವ ವಿಧದಲ್ಲೂ ನೆರವಾಗುವುದಿಲ್ಲ.